ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಹುಟ್ಟುಹಬ್ಬದ ಅಂಗವಾಗಿ ಯುವರತ್ನ ಹಾಗೂ ಜೇಮ್ಸ್ ಚಿತ್ರ ತಂಡಗಳು ಡೈಲಾಗ್ ಟೀಸರ್ ಹಾಗೂ ಮೋಷನ್ ಪೋಸ್ಟ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಗಳು ಉಡುಗೊರೆ ನೀಡಿವೆ. ಅಲ್ಲದೆ ಅಭಿಮಾನಿಗಳು ಸೇರಿ ಗ್ರ್ಯಾಂಡ್ ಆಗಿ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗದಿದ್ದರೂ ತಮ್ಮ ನೆಚ್ಚಿನ ನಟನಿಗೆ ಶುಭಾಶಯ ತಿಳಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ.
ಡೈಲಾಗ್ ಟೀಸರ್ ಹಾಗೂ ಮೋಷನ್ ಪೋಸ್ಟರ್ ಮಾತ್ರವಲ್ಲದೆ ಪುನೀತ್ ರಾಜ್‍ಕುಮಾರ್, ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗಿನ ಪ್ರಾಜೆಕ್ಟ್ ಕುರಿತು ಮಾತನಾಡಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಈ ಕುರಿತು ಇಂಗ್ಲಿಷ್ ಪತ್ರಿಕೆಯೊಂದರ ಸಂದರ್ಶನದಲ್ಲಿ ಪುನೀತ್ ರಾಜ್‍ಕುಮಾರ್ ಮಾಹಿತಿ ಬಹಿರಂಗಪಡಿಸಿದ್ದು, ಈ ಹಿಂದೆ ನನ್ನ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್ ನಲ್ಲಿ ಸಿನಿಮಾ ಮಾಡುವ ಕುರಿತು ಮಾತುಕತೆಯಾಗಿತ್ತು. ಚಿತ್ರಕ್ಕೆ ‘ಆಹ್ವಾನ’ ಎಂಬ ಟೈಟಲ್ ಕೂಡ ಫಿಕ್ಸ್ ಆಗಿತ್ತು. ಆದರೆ ಆಹ್ವಾನ ಸಿನಿಮಾ ಪ್ರಾರಂಭದಲ್ಲೇ ನಿಂತು ಹೋಯಿತು. ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಲಿಲ್ಲ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಶಾಂತ್ ನೀಲ್ ಜೊತೆ ಮುಂದೆ ಸಿನಿಮಾ ಮಾಡುವ ಕುರಿತು ತಿಳಿಸಿದ ಅವರು, ಕೆಜಿಎಫ್ ನಿರ್ದೇಶಕರ ಜೊತೆ ಈಗಾಗಲೆ ಸಿನಿಮಾ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ನಿಂತು ಹೋಗಿದೆ. ಮುಂದೆ ಅವಕಾಶ ಸಿಕ್ಕರೆ ಖಂಡಿತ ಒಟ್ಟಾಗಿ ಕೆಲಸ ಮಾಡುತ್ತೇವೆ. ಅಲ್ಲದೆ ಈಗ ಯಾವ ನಟ ತಾನೇ ಅವರ ಜೊತೆ ಕೆಲಸ ಮಾಡಲು ಬಯಸುವುದಿಲ್ಲ ಹೇಳಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಯಾವಾಗ ಕಾಲ ಕೂಡಿಬರುತ್ತದೆಯೋ ಆಗ ಸಿನಿಮಾ ಮಾಡುತ್ತೇವೆ ಎಂದು ಅಪ್ಪು ಹೇಳಿದ್ದಾರೆ. ಹೀಗಾಗಿ ಕೆಜಿಎಫ್-2 ನಂತರ ಪ್ರಶಾಂತ್ ನೀಲ್, ಪವರ್ ಸ್ಟಾರ್ ಗೆ ಆ್ಯಕ್ಷನ್ ಕಟ್ ಹೇಳುತ್ತಾರಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.
ಕೆಜಿಎಫ್ ಸಿನಿಮಾದ ಭರ್ಜರಿ ಜಯದ ಬಳಿಕ ಪ್ರಶಾಂತ್ ನೀಲ್ ಸದ್ಯ ಭಾರತದ ಬಹುಬೇಡಿಕೆಯ ನಿರ್ದೇಶಕರಾಗಿ ಹೊರ ಹೊಮ್ಮಿದ್ದು, ಇವರ ಜೊತೆ ಕೆಲಸ ಮಾಡಲು ಅನೇಕ ಸ್ಟಾರ್ ನಾಯಕರು ಕಾಯುತ್ತಿದ್ದಾರೆ. ಸದ್ಯ ಕೆಜಿಎಫ್-2 ಸಿನಿಮಾದಲ್ಲಿ ಬ್ಯುಸಿಯಾಗಿರುವ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಅಲ್ಲದೆ ಪ್ರಶಾಂತ್ ನೀಲ್ ತೆಲುಗು ಸ್ಟಾರ್ಸ್ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನುವ ಸುದ್ದಿ ಸಹ ಕೇಳಿ ಬರುತ್ತಿದೆ. ಇದೆಲ್ಲದರ ಮದ್ಯೆ ಪವರ್ ಸ್ಟಾರ್ ಹೇಳಿಕೆ ಅಚ್ಚರಿ ಮೂಡಿಸಿದೆ.