ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಈ ನಾಡು ಕಂಡ ಯಶಸ್ವಿ ನಾಯಕ ನಟ, ಕನ್ನಡಿಗರ ಕಣ್ಮಣಿ, ಯುವ ನಟ ಪುನೀತ್ ರಾಜ್‍ಕುಮಾರ್ ಅವರ ನಿಧನ ಬರಸಿಡಿಲು ಬಡಿದಂತಾಗಿದೆ. ಪವರ್ ಸ್ಟಾರ್ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಈ ನಾಡು ಕಂಡ ಯಶಸ್ವಿ ನಾಯಕ ನಟ, ಕನ್ನಡಿಗರ ಕಣ್ಮಣಿ, ಯುವ ನಟ ಪುನೀತ್ ರಾಜ್‍ಕುಮಾರ್ ಅವರ ನಿಧನ ಬರಸಿಡಿಲು ಬಡಿದಂತಾಗಿದೆ ಎಂದು ಮುಜರಾಯಿ, ವಕ್ಫ್ ಹಜ್ ಸಚಿವರಾದ ಶಶಿಕಲಾ ಜೊಲ್ಲೆಯವರು ದುಖಃ ವ್ಯಕ್ತಪಡಿಸಿದ್ದಾರೆ.
Advertisement
Advertisement
ಪುನೀತ್ ಅವರ ನಿಧನದ ಸುದ್ದಿ ಮನಸ್ಸಿಗೆ ತೀವ್ರ ದುಖಃವುಂಟಾಗುತ್ತಿದೆ. ಡಾಕ್ಟರ್ ರಾಜಕುಮಾರ್ ಅವರ ಪುತ್ರರಾಗಿದ್ದರೂ ಯಾವುದೇ ಅಹಂ ಇಲ್ಲದೇ ಎಲ್ಲರ ಪ್ರೀತಿಯ ಅಪ್ಪು ಆಗಿ ನಾಡಿಗಷ್ಟೆ ಅಲ್ಲ ವಿಶ್ವದ ಕನ್ನಡಿಗರು ಹಾಗೂ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಈ ದಿನ ಕರ್ನಾಟಕದ ಪಾಲಿಗೆ ಕರಾಳ ದಿನ. ಕನ್ನಡ ಭಾಷೆ, ನೆಲ, ಜಲದ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಎಲ್ಲರ ಮನಗಳಲ್ಲಿ ನೆಲೆಸಿರುವ ಅಪ್ಪು ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ, ಅಭಿಮಾನಿಗಳಿಗೆ ಆ ದೇವರು ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವರು ಸಂತಾಪದಲ್ಲಿ ತಿಳಿಸಿದ್ದಾರೆ.
Advertisement
Advertisement
ಕಂಬನಿ ಮಿಡಿದ ಸಚಿವ ಕೆ.ಎಸ್. ಈಶ್ವರಪ್ಪ: ಕನ್ನಡ ಚಿತ್ರ ರಂಗದ ಖ್ಯಾತ ಚಿತ್ರನಟ ಯುವರತ್ನ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ದುಃಖವಾಗಿದೆ. ಪುನೀತ್ ಅವರ ನಿಧನದ ಈ ದಿನ ಕೇವಲ ಚಿತ್ರರಂಗದ ಪಾಲಿಗೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗ ಮತ್ತು ಕರ್ನಾಟಕದ ಪಾಲಿಗೆ ಕರಾಳ ದಿನ. ಕನ್ನಡ ಭಾಷೆ, ನೆಲ, ಜಲದ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಎಲ್ಲರ ಮನಗಳಲ್ಲಿ ನೆಲೆಸಿರುವ ಅಪ್ಪು ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ, ಅಭಿಮಾನಿಗಳಿಗೆ ಆ ದೇವರು ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಎಂದು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ ರವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಕಂಬನಿ ಮಿಡಿದ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ: ಆಡಿಸಿಯೇ ನೋಡು, ಬೀಳಿಸಿಯೇ ನೋಡು, ಎಂದೂ ಸೋಲದು, ಸೋತು ತಲೆಯಾ ಬಾಗದು ಎಂದು ಹೇಳುತ್ತಲೇ ನಮ್ಮನ್ನೆಲ್ಲಾ ಅಗಲಿದ ಪುನೀತ್ ರಾಜ್ ಕುಮಾರ್ ಅವರು ನಮ್ಮ ಗಂಧದ ಗುಡಿಯ ನಿಜವಾದ ರಾಜರತ್ನ ಎಂದು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಕಂಬನಿ ಮಿಡಿದಿದ್ದಾರೆ.
ಪವರ್ ಸ್ಟಾರ್ ಆಗಿದ್ದರೂ ಯಾವುದೇ ಗರ್ವವಿಲ್ಲದೇ ಎಲ್ಲರೊಂದಿಗೆ ಬೆರೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ತಂದೆ ಡಾ.ರಾಜ್ ಕುಮಾರ್ ಅವರಂತೆಯೆ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಪುನೀತ್, ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಅವರ ಅಭಿನಯ ಜನ ಮಾನಸದಲ್ಲಿ ಅಚ್ಚಳಿಯದೇ ನಿಂತಿದೆ. ನಾಯಕ ನಟನಾಗಿ ಅನೇಕ ಚಿತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದ ಪುನೀತ್ ಅವರ ಮೃತ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಅಪ್ಪು ಅಕಾಲಿಕ ನಿಧನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ: ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶ್ರೀ ಕಾಗೇರಿ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಪುನೀತ್ ರಾಜ್ ಕುಮಾರ್ ತಮ್ಮದೇ ಆದ ಛಾಪು ಮೂಡಿಸಿದ್ದರು. ತಾವು ನಿರ್ವಹಿಸುತ್ತಿದ್ದ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಅವರ ಅಕಾಲಿಕ ನಿಧನ ನಿಜಕ್ಕೂ ದುರ್ದೈವ, ಬಹುಮುಖ ಪ್ರತಿಭೆಯ ಅದ್ಭುತ ನಟನ ಬದುಕು ಅರ್ಧಕ್ಕೇ ನಿಂತಿದ್ದು ನಿಜಕ್ಕೂ ದುರಾದೃಷ್ಟಕರ ಎಂದು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಪುನೀತ್ ನಿಧನಕ್ಕೆ ಮಾಜಿ ಸಿಎಂ ಶೆಟ್ಟರ್ ಸಂತಾಪ: ಡಾ.ರಾಜ್‍ಕುಮಾರ ಅವರ ಕಿರಿಯ ಪುತ್ರರಾಗಿ ಆ ಮೇರು ನಟನ ಸರಳ,ಸಜ್ಜನಿಕೆಯನ್ನು ತಮ್ಮ ಬದುಕಿನಲ್ಲಿಯೂ ಅಳವಡಿಸಿಕೊಂಡಿದ್ದರು.ಅಪಾರ ಜನಪ್ರಿಯತೆ ಹೊಂದಿದ್ದರೂ ಕೂಡ ಎಳ್ಳಷ್ಟೂ ಅಹಂಕಾರವನ್ನು ಹೊಂದಿರಲಿಲ್ಲ. ಸಮಾಜ ಸೇವಾ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ಆದರ್ಶವಾಗಿದ್ದರು. ನಟ ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಅಕಾಲಿಕವಾಗಿರುವುದು ಕನ್ನಡ ನಾಡಿಗೆ ತುಂಬಲಾರದ ಹಾನಿಯಾಗಿದೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕುಟುಂಬ ಮತ್ತು ಅಭಿಮಾನಿಗಳಿಗೆ ಬರಲಿ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಸಂತಾಪ ವ್ಯಕ್ತಪಡಿಸಿದ್ದಾರೆ