ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಟಾಲಿವುಡ್ ನಟ ನಾಗಾರ್ಜುನ ಅವರು ಪುನೀತ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ನಾಗಾರ್ಜುನ, ಪುನೀತ್ ರಾಜ್‍ಕುಮಾರ್ ಅವರ ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿದ್ದಾರೆ. ಪುನೀತ್ ಅವರ ಪತ್ನಿಗೆ ಸಾಂತ್ವನ ಹೇಳಿ, ಪುನೀತ್ ಅವರ ಜೊತೆಗೆ ಇರುವ ಒಡನಾಟವನ್ನು ನೆನೆದು ಭಾವುಕರಾಗಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೃದಯ ಒಡೆದು ಹೋಗುವ ವಿಚಾರವಾಗಿದೆ. ಪುನೀತ್ ಅವರು ನಮ್ಮನ್ನು ಬಿಟ್ಟು ಹೋಗಿರುವುದು ನಿಜವಾಗಿಯೂ ಹೀಗೆ ಆಗಿದ್ಯಾ ಎಂದು ಅನಿಸುತ್ತದೆ. ಇಲ್ಲೇ ಇದ್ದಾರೆ ಎಂದು ಅನ್ನಿಸುತ್ತಿದೆ. ಏನು ಮಾತನಾಡಲಿ ಎಂದು ನನಗೆ ಗೊತ್ತಾಗ್ತಾ ಇಲ್ಲ. ನಾನು ಇಲ್ಲಿ ಬಂದಾಗ ಶಿವಣ್ಣ ಅವರ ಹತ್ರ ಈ ಕುರಿತಾಗಿ ಏನು ಮಾತನಾಡಲಿ ಎಂದು ನನಗೆ ಗೊತ್ತಾಗಲಿಲ್ಲ ಎಂದು ದುಃಖತಪ್ತರಾಗಿದ್ದಾರೆ. ಇದನ್ನೂ ಓದಿ: ಪಂಜಾಬ್ ಲೋಕ್ ಕಾಂಗ್ರೆಸ್ -ಅಮರಿಂದರ್ ಸಿಂಗ್ ಹೊಸ ಪಕ್ಷ
ಪುನೀತ್ ಅವರ ಬಗ್ಗೆ ಪ್ರತಿಯೊಬ್ಬರು ಒಳ್ಳೆಯ ಮನುಷ್ಯ ಎಂದು ಹೇಳುತ್ತಾರೆ. ಎಷ್ಟೊಂದು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ನಾಲ್ಕು ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿದ್ದರು, ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಸ್ಕೂಲ್, ಅನಾಥಾಶ್ರಮ ನಡೆಸುತ್ತಿದ್ದರು. ಇಂತಹವರಿಗೆ ಹೀಗೆ ಆಗಿದ್ದು ನಿಜಕ್ಕೂ ಶಾಕಿಂಗ್ ವಿಚಾರವಾಗಿದೆ. ಅವರಿಗೆ ಯಾಕೆ ಹೀಗೆ ಆಯ್ತು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ನನಗೆ ಈಗಲೂ ಅವರು ಕುಟುಂಬಕ್ಕೆ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ಧಾರೆ.