ಅಪ್ಪು ಅಗಲಿಕೆ ಬಗ್ಗೆ ಶಿವಣ್ಣ ಸುದೀಪ್‍ಗೆ ಹೇಳಿದ್ದೇನು?

Public TV
3 Min Read
kichcha

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ನಿಧನಕ್ಕೆ ನಾಡಿನ ಖ್ಯಾತ ನಟ-ನಟಿಯರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ತಾವು ಕಂಡಂತೆ ಅಪ್ಪು, ನಟನೊಂದಿಗಿನ ಒಡನಾಟವನ್ನೂ ಸ್ಮರಿಸಿದ್ದಾರೆ. ನಟ ಸುದೀಪ್, ಬಾಲ್ಯದಿಂದಲೂ ನಾನೊಬ್ಬ ಸ್ಟಾರ್ ನಟನನ್ನು ನೋಡಿದ್ದೇನೆ. ಹುಟ್ಟುತ್ತಲೇ ಸ್ಟಾರ್ ಆಗಿದ್ದ ಅಪ್ಪು. ಇಂದು ಆತನಿಲ್ಲದಿರುವುದು ಭರಿಸಲಾಗದ ಶೂನ್ಯ ಎಂದು ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.

PUNEET RAJKUMAR

ಸುದೀಪ್ ಟ್ವೀಟ್‍ನಲ್ಲೇನಿದೆ..?;

ಅದು ಬಾಲ್ಯಜೀವನದ ಪಯಣ. ನಾನು ಅಪ್ಪುನನ್ನು ಮೊದಲು ಭೇಟಿಯಾಗಿದ್ದು ಶಿವಮೊಗ್ಗದಲ್ಲಿ. ಆಗಲೇ ಅಪ್ಪು ಸ್ಟಾರ್ ಆಗಿದ್ದರು. ಬಾಲನಟನಾಗಿ ಅಭಿನಯಿಸಿದ್ದ “ಭಾಗ್ಯವಂತರು” ಸಿನಿಮಾ ಹಿಟ್ ಆಗಿದ್ದ ಸಂಭ್ರಮಕ್ಕೆ ಪುನೀತ್ ಪ್ರವಾಸ ಕೈಗೊಂಡಿದ್ದರು. ಆಗ ಸಿನಿಮಾರಂಗದಲ್ಲಿ ನಮ್ಮ ತಂದೆಯ ಹೆಸರೂ ಚಿರಪರಿಚಿತ. ಈ ವೇಳೆ ಪುನೀತ್‍ರನ್ನು ಪೋಸ್ಟರ್ ಬಿಡುಗಡೆ ಮಾಡಲು ಮನೆಗೆ ಕರೆತರಲಾಗಿತ್ತು. ಅದೇ ಮೊದಲು ನಾನು ಅವರನ್ನು ಭೇಟಿಯಾಗಿದ್ದು. ಆ ವೇಳೆ ನನ್ನ ಆಟಿಕೆಗಳನ್ನು ಕಂಡ ಪುನೀತ್‍ಗೆ ಬಹಳ ಕುತೂಹಲ ಮೂಡಿತ್ತು. ಇದನ್ನೂ ಓದಿ: ಮೂರು ವಾರಗಳ ಹಿಂದೆ ಅಪ್ಪು ಜೊತೆ ಮಾತನಾಡಿದ್ದೆ: ರಮ್ಯಾ

PUNEET RAJKUMAR

ನಾವಿಬ್ಬರೂ (ಪುನೀತ್-ಸುದೀಪ್) ಆಟವಾಡುತ್ತಿದ್ದಾಗ ಮಹಿಳೆಯೊಬ್ಬರು ತಟ್ಟೆಯಲ್ಲಿ ಊಟ ಹಾಕಿಕೊಂಡು ಪುನೀತ್ ತಿನ್ನಿಸಲು ಓಡಿಬಂದ ಪ್ರಸಂಗ ನನಗೀಗಲೂ ನೆನಪಿದೆ. ಆತನನ್ನು ನೋಡಿ ಅವರು ತುಂಬಾ ಭಾವುಕರಾದರು. ಈ ಚಿತ್ರಣವನ್ನು ಕಂಡು ನಾನು ಕೂತು ಭಾವುಕನಾಗಿದ್ದೆ.

PUNEET

ಆ ದಿನ ನೆರೆಹೊರೆಯವರು, ಮಕ್ಕಳೆಲ್ಲ ನಮ್ಮ ಮನೆಯಲ್ಲಿ ದಂಡುದಂಡಾಗಿ ನೆರೆದಿದ್ದರು. ಬೇರೆ ಮಕ್ಕಳಿದ್ದಾರೆಂದಲ್ಲ, ಚಿತ್ರರಂಗದ ದಂತಕಥೆ ಡಾ. ರಾಜ್‍ಕುಮಾರ್ ಅವರ ಪುತ್ರ ಬಾಲಕ ಸ್ಟಾರ್ ಪುನೀತ್ ಬಂದಿದ್ದಾರೆಂಬ ಕಾರಣಕ್ಕೆ ಹೆಚ್ಚಿನ ಮಂದಿ ಅಂದು ಮನೆಯಲ್ಲಿ ನೆರೆದಿದ್ದರು.

ಅದಾದ ಬಳಿಕ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ಕಾರಣ ನಾವಿಬ್ಬರೂ ಹಲವು ಬಾರಿ ಭೇಟಿಯಾಗಿದ್ದೇವೆ. ಪುನೀತ್ ನನಗೆ ಸ್ನೇಹಿತ ಮಾತ್ರವಲ್ಲ, ಅತ್ಯುತ್ತಮ ಸ್ಪರ್ಧಿಯೂ ಹೌದು. ಅಪ್ಪು ಒಬ್ಬ ಅದ್ಭುತ ನಟ, ಡ್ಯಾನ್ಸರ್, ಫೈಟರ್, ಅತ್ಯುತ್ತಮ ವ್ಯಕ್ತಿ ಕೂಡ ಹೌದು. ನನ್ನ ನಟನೆಯನ್ನೂ ಉತ್ತಮಗೊಳಿಸಿಕೊಳ್ಳುವ ಉದ್ದೇಶದಿಂದ ಪುನೀತ್ ಅವರ ನಟನಾ ಸ್ಪರ್ಧೆಯನ್ನು ನಾನು ಸಂತೋಷದಿಂದಲೇ ಸ್ವೀಕರಿಸಿದ್ದೆ. ಅಂತಹ ಅದ್ಭುತ ನಟನ ಪರಂಪರೆಯಲ್ಲಿ ಜೊತೆಗಾರನಾಗಿ ಗುರುತಿಸಿಕೊಂಡಿದ್ದಕ್ಕೆ ನನಗೆ ಹೆಮ್ಮೆಯಿದೆ ಎಂದು ನಟ ಕಿಚ್ಚ ಸುದೀಪ್ ಅವರು ಪುನೀತ್ ಅವರೊಂದಿಗೆ ಕಳೆದ ಮಧುರ ಕ್ಷಣಗಳನ್ನು ಸ್ಮರಿಸಿದ್ದಾರೆ.

SUDEEP

ಚಿತ್ರರಂಗ ಇಂದು ಅಪೂರ್ಣವಾಗಿದೆ. ಕತ್ತಲಾವರಿಸಿದೆ. ಕಾಲ ನಿಜಕ್ಕೂ ಕ್ರೂರಿ. ಈ ನೆಲ ದುಃಖದಿಂದ ಆವರಿಸಿದೆ. ಪ್ರಕೃತಿಯೇ ದುಃಖಿಸುತ್ತಿರುವಂತೆ ನಿನ್ನೆಯ ಸಂದರ್ಭ ಭಾಸವಾಯಿತು. ಮಂಕಾದ ದಿನವದು. ಕಾರ್ಮೋಡ ಕವಿದಂತಹ ಅನುಭವ. ನಾನು ಬೆಂಗಳೂರಿಗೆ ಬಂದ ತಕ್ಷಣ ಪುನೀತ್‍ನನ್ನು ಇರಿಸಿದ್ದ ಜಾಗಕ್ಕೆ ತಕ್ಷಣ ಹೊರಟೆ. ನನ್ನ ಉಸಿರಿನ ಏರಿಳಿತ ಹೆಚ್ಚಾಗಿತ್ತು. ಆ ಸಂದರ್ಭ ವಾಸ್ತವವಾಗಿದ್ದರೂ ಅದನ್ನು ಅರಗಿಸಿಕೊಳ್ಳಲು ನನ್ನಿಂದಾಗಲಿಲ್ಲ.

ಅಪ್ಪು ಮಲಗಿರುವುದನ್ನು ಕಂಡು ಎಲ್ಲರೆದೆಯ ಮೇಲೆ ಪರ್ವತವೇ ಬಿದ್ದಂತೆ ಭಾಸವಾಯಿತು. ಯಾಕೆ.. ಹೇಗೆ!!!! ಎಂಬಂತಹ ಹಲವು ಪ್ರಶ್ನೆಗಳು, ಮಾತುಗಳು ಹೊರಡುತ್ತಿದ್ದವು. ನಾನು ಸರಿಯಾಗಿ ಉಸಿರಾಡಲು ಸಾಧ್ಯವಾಗದೇ ಹೋದದ್ದು ಅದೇ ಮೊದಲು. ನನ್ನ ಸಹದ್ಯೋಗಿ, ಗೆಳೆಯ, ಬಾರದ ಲೋಕಕ್ಕೆ ಹೋಗಿದ್ದಾನೆ. ಆ ಸ್ಥಿತಿಯಲ್ಲಿ ಆತನನ್ನು ಹೆಚ್ಚು ಸಮಯ ನನ್ನಿಂದ ನೋಡಲಾಗಲಿಲ್ಲ. ಆ ನೋಟ ನನ್ನನ್ನು ಕೊಲ್ಲುತ್ತಿತ್ತು.

PUNEET

ಆ ವೇಳೆ ಶಿವಣ್ಣನ ಕಡೆಗೆ ನೋಡಿದೆ. ಆಗ ಶಿವಣ್ಣ ನನ್ನೊಂದಿಗೆ ಹೇಳಿದ, “ಅಪ್ಪು ನನಗಿಂತ 13 ವರ್ಷ ಚಿಕ್ಕವನು. ನನ್ನ ತೋಳುಗಳಲ್ಲಿ ಆತನನ್ನು ಎತ್ತಿ ಆಡಿಸಿದ್ದೇನೆ. ನಾನು ಇಲ್ಲಿಯವರೆಗೂ ಆತನನ್ನು ನೋಡಿಕೊಂಡು ಬಂದಿದ್ದೇನೆ. ಈಗ ನಾನು ಇನ್ಯಾರನ್ನು ನೋಡಲು ಸಾಧ್ಯ…!. ಇದನ್ನೂ ಓದಿ: ಇಂದಲ್ಲ, ನಾಳೆ ಪುನೀತ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

ಶಿವಣ್ಣನ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ಎಲ್ಲರೂ ದಿಗ್ಭ್ರಾಂತರಾಗಿದ್ದಾರೆ, ನೊಂದಿದ್ದಾರೆ, ಛಿದ್ರರಾಗಿದ್ದಾರೆ. ಇದನ್ನು ಸ್ವೀಕರಿಸಲು ಎಲ್ಲರಿಗೂ ಬಹುಕಾಲ ಬೇಕಾಗುತ್ತದೆ. ಖಾಲಿತನ ನಮ್ಮನ್ನು ಆವರಿಸಿದೆ. ಅಪ್ಪುವಿನ ಜಾಗವನ್ನು ಯಾರಿಂದಲೂ ತುಂಬಲಾಗುವುದಿಲ್ಲ. ಒಬ್ಬ ಮಹಾನ್ ವ್ಯಕ್ತಿಗೆ ಸೇರಿದ ಜಾಗವದು. “ಪುನೀತ್”,,,, ನನ್ನ ಪ್ರೀತಿ “ಅಪ್ಪು”. ಶಾಂತನಾಗಿ ಹೋಗು, ಚಿರಶಕ್ತಿ ದೊರೆಕಲಿ ನನ್ನ ಸ್ನೇಹಿತನೇ.

Share This Article
Leave a Comment

Leave a Reply

Your email address will not be published. Required fields are marked *