HealthKarnatakaLatestMain Post

ಆರೋಗ್ಯವಾಗಿದ್ದರೂ ಹೃದಯ ಸ್ತಂಭನ ಯಾಕೆ ಆಗುತ್ತೆ? – ಎಲ್ಲ ಪ್ರಶ್ನೆಗಳಿಗೆ ಡಾ. ಮಂಜುನಾಥ್ ಉತ್ತರ

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಹಠಾತ್ ನಿಧನ ನಂತರ ಹೃದಯಾಘಾತ ಮತ್ತು ಹೃದಯ ಸ್ತಂಭನ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಹೃದಯಾಘಾತದ ಬಗ್ಗೆ ವೈದ್ಯರು ಸಾಕಷ್ಟು ವಿಶ್ಲೇಷಣೆ ಮಾಡುತ್ತಿದ್ದಾರೆ. ಈ ಕುರಿತು ಜಯದೇವ ಹೃದ್ರೋಗ ಆಸ್ಪತ್ರೆಯ ಡಾ. ಸಿ.ಎನ್.ಮಂಜುನಾಥ್ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಡಾ. ಸಿ.ಎನ್.ಮಂಜುನಾಥ್ ಅವರು ಹೇಳಿದ್ದೇನು..?
ಪುನೀತ್ ರಾಜ್‍ಕುಮಾರ್ ಅವರು ಒಳ್ಳೆಯ ಆರೋಗ್ಯ ಕಾಪಾಡಿಕೊಂಡಿದ್ದರು. ದೈಹಿಕ ಫಿಟ್‍ನೆಸ್ ಕೂಡ ಚೆನ್ನಾಗಿತ್ತು. ಜೀವನಶೈಲಿ, ಆಹಾರ ಪದ್ಧತಿ ಉತ್ತಮವಾಗಿತ್ತು. ಅವರಿಗೆ ಹೀಗಾಗಿದ್ದು ಶಾಕ್ ಎನಿಸುತ್ತಿದೆ. ಇದನ್ನೂ ಓದಿ: ಪುನೀತ್ ನಿಧನ- ಶೀಘ್ರವೇ ಜಿಮ್, ಫಿಟ್‌ನೆಸ್‌ ಸೆಂಟರ್‌ಗಳಿಗೆ ಗೈಡ್ ಲೈನ್ಸ್

ದೇಶದಲ್ಲಿ ಸಾವಿರಾರು ಜನರಿಗೆ ಹೃದಯಾಘಾತವಾಗುತ್ತೆ. ಅವರಲ್ಲಿ ಶೇ. 99 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗುತ್ತಾರೆ. ಆದರೆ ಪುನೀತ್ ಅವರಿಗೆ ಆ ಅವಕಾಶ ಸಿಗಲಿಲ್ಲ. ಅದು ಬಹಳ ನೋವಿನ ಸಂಗತಿ.

ಕೆಲವರಿಗೆ ಹೃದಯಾಘಾತ ಆದ ಸಂದರ್ಭದಲ್ಲಿ ಕೆಲವೇ ನಿಮಿಷಗಳಲ್ಲಿ ಹೃದಯದ ಬಡಿತ ನಿಂತು ಹೋಗುತ್ತೆ. ಸಾಮಾನ್ಯವಾಗಿ ಎಲ್ಲರಿಗೂ ಒಂದು ನಿಮಿಷದಲ್ಲಿ 70-80 ಬಾರಿ ಹೃದಯ ಬಡಿದುಕೊಳ್ಳುತ್ತೆ. ಸ್ವಲ್ಪ ಗಾಬರಿಯಾದರೆ 90-95 ಬಾರಿ ಬಡಿದುಕೊಳ್ಳಬಹುದು. ಹಠಾತ್ ಹೃದಯಾಘಾತ ಆದಾಗ ಕೆಲವರಿಗೆ 300, 400, 500 ತನಕವೂ ಹೃದಯ ಬಡಿದುಕೊಳ್ಳುತ್ತೆ. ಆಗ ಹೃದಯ ಅಲುಗಾಡುತ್ತೆ. ಹೃದಯದಿಂದ ಹೊರಗಡೆ ರಕ್ತವೇ ಬರುವುದಿಲ್ಲ. ಅದನ್ನು ನಾವು ವೈದ್ಯಕೀಯ ಪರಿಭಾಷೆಯಲ್ಲಿ ‘ವೆಂಟ್ರಿಕ್ಯುಲರ್ ಫಿಬ್ರಿಲೇಷನ್’ ಅಂತ ಕರೆಯುತ್ತೇವೆ. ಆಗ ಹೃದಯದ ಬಡಿತ ನಿಂತು ಹೋದಾಗ ‘ಡಿಸಿ ಶಾಕ್’ ಎಂಬ ಉಪಕರಣವನ್ನು ಎದೆಯ ಮೇಲಿಟ್ಟು ಶಾಕ್ ಕೊಟ್ಟರೆ, ಹೃದಯ ಮತ್ತೆ ಚಲನೆ ಆರಂಭಿಸುತ್ತೆ. ಅದಕ್ಕಾಗಿ ರೋಗಿ ತುರ್ತು ನಿಗಾ ಘಟಕದಲ್ಲೇ ಇರಬೇಕು. ಇದನ್ನೂ ಓದಿ: ನನಗೆ ಇಂಡಸ್ಟ್ರಿಯಲ್ಲಿ ಮೊದಲು ಕರೆ ಮಾಡಿದ ಸ್ಟಾರ್ ನಟ ಪುನೀತ್: ವಸಿಷ್ಠ ಸಿಂಹ

ಕೆಲವರಿಗೆ ಆಸ್ಪತ್ರೆಗೆ ಹೋಗುವಷ್ಟು ಸಮಯ ಕೂಡ ಇರುವುದಿಲ್ಲ. ಶೇ. 5ರಷ್ಟು ಮಂದಿಗೆ ಹೃದಯಾಘಾತವಾದ ಕೆಲವೇ ನಿಮಿಷಗಳಲ್ಲಿ (5-10 ನಿಮಿಷ) ಹೃದಯದ ಬಡಿತವೇ ನಿಂತು ಹೋಗುತ್ತೆ. ಹೃದಯದೊಳಗಡೆಯೂ ಕರೆಂಟ್ ಇದೆ. ಅದು ಆಫ್ ಆಗಿಬಿಡುತ್ತೆ. ಇದನ್ನೇ ನಾವು ದಿಢೀರ್ ಕಾರ್ಡಿಯಾಕ್ ಅರೆಸ್ಟ್(ಹೃದಯ ಸ್ತಂಭನ) ಎನ್ನುತ್ತೇವೆ. ಪುನೀತ್ ರಾಜ್‍ಕುಮಾರ್ ಅವರಿಗೆ ಹೃದಯಾಘಾತವಾಗಿರುವುದು ನಿಜ. ಆಸ್ಪತ್ರೆಗೆ ಬರುವಷ್ಟರಲ್ಲಿ ಅವರ ಹೃದಯದ ಬಡಿತ ನಿಂತು ಹೋಗಿತ್ತು, ಜೀವ ಇರಲಿಲ್ಲ.

ಎಷ್ಟೋ ಮಂದಿ ಹೃದಯಾಘಾತವಾಗಿ ನಮ್ಮ ಆಸ್ಪತ್ರೆಗೆ ದಾಖಲಾದಾಗ ಆಂಜಿಯೋಪ್ಲಾಸ್ಟಿಯಂತಹ ಸೂಕ್ತ ಚಿಕಿತ್ಸೆ ನೀಡುತ್ತೇವೆ. ಅವರು ನಮ್ಮೊಟ್ಟಿಗೆ ಚೆನ್ನಾಗಿಯೇ ಮಾತನಾಡಿರುತ್ತಾರೆ. ಇನ್ನೆರಡು ಮೂರು ದಿನದಲ್ಲಿ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಕೂಡ ಹೇಳಿರುತ್ತೇವೆ. ಇದಾದ ನಂತರ ಒಂದೆರಡು ನಿಮಿಷ ನಾವು ಕೊಠಡಿಗೆ ಹೋಗಿ ಬರುವಷ್ಟರಲ್ಲಿ ಮತ್ತೆ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿರುತ್ತಾರೆ. ಇದನ್ನು ನಾವು “ಎಲೆಕ್ಟ್ರಿಕಲ್ ಇನ್‍ಸ್ಟೆಬಿಲಿಟಿ” ಎಂದು ಕರೆಯುತ್ತೇವೆ.

ಹೃದಯ ರಕ್ತನಾಳದಿಂದ ಹೃದಯಕ್ಕೆ ರಕ್ತ ಸರಬರಾಜಾಗುತ್ತಿರುತ್ತೆ. ಹೃದಯಾಘಾತವಾದಾಗ ರಕ್ತನಾಳ ಶೇ. 100 ರಷ್ಟು ಬ್ಲಾಕ್ ಆಗಿರಬೇಕು. ಶೇ. 60-70ರಷ್ಟು ಬ್ಲಾಕ್ ಆದಾಗ ಹೃದಯಾಘಾತವಾಗುವುದಿಲ್ಲ. ಆದರೆ ನಡೆಯುವಾಗ, ಊಟ ಮಾಡಿ ಎತ್ತರ ಪ್ರದೇಶದಲ್ಲಿ ಓಡಾಡುವಾಗ ಎದೆಯುರಿ, ಎದೆ ನೋವು ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಗಂಟಲು, ದವಡೆಯಲ್ಲಿ ನೋವು ಬರಬಹುದು. ಅದು ಹೃದಯಾಘಾತದ ಮುನ್ಸೂಚನೆ. ಆದರೆ ಎಲ್ಲರಿಗೂ ಈ ಮುನ್ಸೂಚನೆ ಸಿಗುವುದಿಲ್ಲ. ಶೇ. 10, 30, 50 ಹೀಗೆ.. ಕ್ರಮೇಣ ರಕ್ತನಾಳಗಳು ಬ್ಲಾಕ್ ಆಗುತ್ತಾ ಹೋದಾಗ ಹೃದಯಾಘಾತಕ್ಕೂ ಮುನ್ನ 3 ವಾರ ಅಥವಾ 3, 6 ತಿಂಗಳ ಅವಧಿಯಲ್ಲಿ ಈ ಮೇಲಿನ ಲಕ್ಷಣಗಳು ಕಾಣಿಸಿಕೊಂಡು ಮುನ್ಸೂಚನೆ ಸಿಗುತ್ತದೆ.

ಕೆಲವರಿಗೆ ಹೃದಯಾಘಾತ ಆಗುವ 2 ನಿಮಿಷ ಮುಂಚೆಯೂ ಚೆನ್ನಾಗಿರುತ್ತಾರೆ. ಆಗ ರಕ್ತನಾಳ ಬ್ಲಾಕೇಜ್ ಆಗಿರುವುದಿಲ್ಲ. ಆದರೆ ರಕ್ತನಾಳದ ಒಳಗಡೆ ಕೊಲೆಸ್ಟ್ರಾಲ್ ಅಲ್ಸರ್ಸ್ ಅಂತ ಇರುತ್ತದೆ. ಅದು ಒಡೆದು ಹೋದರೆ, ಶೇ. 0 ಬ್ಲಾಕೇಜ್ ಇರುವುದು ಶೇ. 100 ಆಗಿಬಿಡುತ್ತದೆ. ಅದು ಯುವಕರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಡಾ. ಸಿ.ಎನ್.ಮಂಜುನಾಥ್ ಹೇಳುತ್ತಾರೆ.

Leave a Reply

Your email address will not be published. Required fields are marked *

Back to top button