– ಅಪ್ಪು ಜೊತೆ ಯಾರೆಲ್ಲ ಆಸ್ಪತ್ರೆಗೆ ಬಂದಿದ್ರು..?
– ಕೊಂಚವೂ ಸೂಚನೆ ಇಲ್ದೆ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು ಯಾಕೆ?
– ರಾಜ್‍ಕುಮಾರ್‍ಗೂ ಹೀಗೆ ಆಗಿತ್ತು
ಬೆಂಗಳೂರು: ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಟ ಪುನೀತ್ ರಾಜ್‍ಕುಮಾರ್ ಅವರು ಊಹೆಗೂ ನಿಲುಕದಂತೆ ಕೊನೆಯುಸಿರೆಳೆದಿದ್ದು ಎಲ್ಲರಲ್ಲೂ ದಿಗ್ಭ್ರಮೆ ಮೂಡಿಸಿದೆ. ಪುನೀತ್ ಎಂದಿನಂತೆ ಶುಕ್ರವಾರ ಬೆಳಿಗ್ಗೆ ವರ್ಕೌಟ್ ಮಾಡಿದ್ದಾರೆ. ಯಾಕೋ ಸ್ವಲ್ಪ ವೀಕ್ ಆಗಿದ್ದೇನೆ ಎಂದೆನಿಸಿ ತಮ್ಮ ಕುಟುಂಬದ ವೈದ್ಯರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅಪ್ಪು ಆರೋಗ್ಯ ಹೇಗಿತ್ತು, ಮುಂದೇನಾಗಿರಬಹುದು, ಅವರ ಆರೋಗ್ಯ ಕಾಳಜಿ ಎಷ್ಟರಮಟ್ಟಿಗಿತ್ತು ಎಂಬ ಬಗ್ಗೆ ಫ್ಯಾಮಿಲಿ ವೈದ್ಯರಾದ ಡಾ. ರಮಣ ರಾವ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Advertisement
Advertisement
ಅಪ್ಪು ಕೊನೆ ಕ್ಷಣಗಳ ಬಗ್ಗೆ ವೈದ್ಯರು ಹೆಳಿದ್ದು ಹೀಗೆ:
Advertisement
ನಿನ್ನೆ ಬೆಳಗ್ಗೆ ಅಪ್ಪು ಮತ್ತು ಅಶ್ವಿನಿ ಒಟ್ಟಿಗೆ ನಮ್ಮ ಕ್ಲಿನಿಕ್‍ಗೆ ಬಂದರು. ನಾನು ಅಪ್ಪುನನ್ನು ಕ್ಲಿನಿಕ್ ಒಳಗಡೆ ಕರೆದುಕೊಂಡು ವಿಚಾರಿಸಿದೆ. ಆಗ ಅಪ್ಪು, “ನಾನು ಈಗ ತಾನೆ ವರ್ಕೌಟ್ ಮುಗಿಸಿದ್ದೇನೆ, ಬಾಕ್ಸಿಂಗ್ ರೌಂಡ್ ಮುಗಿಸಿದ್ದೇನೆ, ಸ್ಟೀಮ್ ಕೂಡ ತೆಗೆದುಕೊಂಡಿದ್ದೇನೆ. ಆದರೆ ನನಗೆ ಯಾಕೊ ವೀಕ್‍ನೆಸ್ ಅನ್ನಿಸುತ್ತಿದೆ” ಎಂದು ಹೇಳಿದರು. ಅಪ್ಪು ಯಾವತ್ತೂ ನಾನು ವೀಕ್ ಆಗಿದ್ದೇನೆ ಎಂದು ಹೇಳಿರಲಿಲ್ಲ. ಮೊದಲ ಬಾರಿಗೆ ನಿನ್ನೆ ಹಾಗೆ ಹೇಳಿದರು. ಇದನ್ನೂ ಓದಿ: ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ನಟ ಬಾಲಣ್ಣ, ಪ್ರಭುದೇವ್
Advertisement
ತಕ್ಷಣ ನಾನು ಅಪ್ಪುವನ್ನು ಪರೀಕ್ಷೆಗೊಳಪಡಿಸಿದಾಗ ತುಂಬಾ ಬೆವರುತ್ತಿದ್ದರು. ಅಪ್ಪು ಯಾಕಿಷ್ಟು ಬೆವರುತ್ತಿದ್ದೀಯಾ ಎಂದು ನಾನು ಕೇಳಿದೆ. ಅದಕ್ಕೆ ಅಪ್ಪು, ನಾನು ಈಗ ತಾನೆ ಜಿಮ್ ಮುಗಿಸಿ ನೇರವಾಗಿ ಕ್ಲಿನಿಕ್‍ಗೆ ಬಂದಿದ್ದೇನೆ. ಹೀಗಾಗಿ ಬೆವರುವುದು ಸಾಮಾನ್ಯ ಎಂದು ಹೇಳಿದರು. ಅದೇಕೊ ನನಗೆ ಅನುಮಾನ ಮೂಡಿತು. ತಕ್ಷಣ ಇಸಿಜಿ ಮಾಡಿಸುವಂತೆ ಸಲಹೆ ನೀಡಿದೆ. ಇಸಿಜಿಯಲ್ಲಿ ಸ್ಟ್ರೇಯ್ನ್ (ದಣಿಯುವುದು) ಬರುತ್ತಿತ್ತು, ಆದರೆ ಹೃದಯಾಘಾತವಾಗಿರಲಿಲ್ಲ. ಒಂದೆರಡು ನಿಮಿಷದಲ್ಲಿ ಪರೀಕ್ಷೆ ಮುಗಿಸಿ ಕೂಡಲೇ ಆಸ್ಪತ್ರೆಗೆ ಹೋಗುವಂತೆ ತಿಳಿಸಿದೆ. ತಕ್ಷಣ ನಾವು ವಿಕ್ರಂ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ತಂಡವನ್ನು ಸಿದ್ಧಗೊಳಿಸಿದ್ದೆವು. ಪುನೀತ್ ಆಸ್ಪತ್ರೆ ತಲುಪಿದ ಕೂಡಲೇ ವೈದ್ಯರ ತಂಡ ಸೂಕ್ತ ಚಿಕಿತ್ಸೆಗೆ ಮುಂದಾಗಿತ್ತು.
ಇದು ಹೃದಯಾಘಾತದಂತೆ ಕಾಣುತ್ತಿಲ್ಲ. ಹೃದಯಾಘಾತವಾಗಿದ್ದರೆ ನೋವಿರುತ್ತೆ, ಕೆಲವು ಲಕ್ಷಣಗಳಿರುತ್ತವೆ. ಇಸಿಜಿಯಲ್ಲಿ ಹೃದಯಕ್ಕೆ ಸಂಬಂಧಿಸಿದ ಬದಲಾವಣೆಗಳ ಬಗ್ಗೆ ಗೊತ್ತಾಗುತ್ತೆ. ನನ್ನ ಪ್ರಕಾರ ಇದು ಕಾರ್ಡಿಯಾಕ್ ಅರೆಸ್ಟ್ (ಹೃದಯದ ಬಡಿತವೇ ನಿಲ್ಲುವುದು). ಈ ಸಮಸ್ಯೆ ಎದುರಾದರೆ ಅವರನ್ನು ಬದುಕುಳಿಸುವುದು ತುಂಬಾ ಕಷ್ಟ. ಅಪ್ಪುಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಇದನ್ನೂ ಓದಿ: ಆಯಸ್ಸಲ್ಲಿ 10 ವರ್ಷ ಅಪ್ಪುಗೆ ಕೊಟ್ಟು ನನ್ನ ಆ ರೀತಿ ಮಾಡಿದ್ರೆ ಚೆನ್ನಾಗಿರ್ತಿತ್ತು: ಸೋಮಶೇಖರ್ ರೆಡ್ಡಿ ಕಣ್ಣೀರು
ಅಪ್ಪು ಸಾಮಾನ್ಯ ವ್ಯಕ್ತಿಯಲ್ಲ. ದೇಹ ದಂಡನೆ, ವ್ಯಾಯಾಮ, ಆರೋಗ್ಯ ಕಾಳಜಿ ಜಾಸ್ತಿಯೇ ಇತ್ತು. ಆರೋಗ್ಯದ ವಿಚಾರದಲ್ಲಿ ಅವರೆಂದೂ ನಿರ್ಲಕ್ಷ್ಯ ತೋರಿದವರಲ್ಲ. ಅವರಿಗೆ ಇಂತಹ ಸಮಸ್ಯೆ ಇರಬಹುದು ಎಂದು ಶಂಕಿಸಲೂ ಆಗುತ್ತಿರಲಿಲ್ಲ, ಅಷ್ಟು ಆರೋಗ್ಯವಾಗಿದ್ದರು. ಆದರೆ ಈ ಸಮಸ್ಯೆ ದಿಢೀರ್ ಅಂತ ಎದುರಾಗಿದೆ.
ನಮ್ಮ ಕ್ಲಿನಿಕ್‍ನಲ್ಲಿ ಅವರು ಕುಸಿದು ಬಿದ್ದಿಲ್ಲ. ಇಸಿಜಿಯಲ್ಲಿ ಪರೀಕ್ಷಿಸಿದಾಗ ಹೃದಯದ ಬಡಿತ ಸರಿಯಾಗಿಯೇ ದಾಖಲಾಗಿದೆ. ಪರೀಕ್ಷೆ ನಂತರ ಆತ ನಡೆಯಲು ಕಷ್ಟಪಡುತ್ತಿದ್ದ, ಆಗ ಕಾರಿನಲ್ಲಿ ಕರೆದುಕೊಂಡು ಹೋಗಲು ಸಹಾಯ ಮಾಡಿ ಎಂದು ಸಲಹೆ ನೀಡಿದ್ದೆ. ನನ್ನೊಂದಿಗೆ ಚೆನ್ನಾಗಿಯೇ ಮಾತನಾಡಿದ್ದ. ಆದರೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಆತನ ಆರೋಗ್ಯದಲ್ಲಿ ತೊಂದರೆಗಳು ಎದುರಾಗುವ ಸೂಚನೆಗಳು ಕಂಡಿದ್ದವು.
ತಂದೆ ಡಾ. ರಾಜ್‍ಕುಮಾರ್‍ಗೆ ಆದಂತೆಯೇ ಅಪ್ಪುಗೂ ಆಗಿದೆ. ರಾಜ್‍ಕುಮಾರ್ ಅವರು ಸೋಫಾ ಮೇಲೆ ಕುಳಿತು ಚೆನ್ನಾಗಿಯೇ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ ಅವರಿಗೂ ಕಾರ್ಡಿಯಾಕ್ ಅರೆಸ್ಟ್ ಆಗಿ ಮೃತಪಟ್ಟರು. ಅವರಿಗೆ ತೊಂದರೆ ಆಗಿರುವುದನ್ನು ತಿಳಿಯುತ್ತಿದ್ದಂತೆ ಮನೆಗೆ ತೆರಳಿ ಚಿಕಿತ್ಸೆ ನೀಡಿದೆವು. ಆದರೆ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ವೈದ್ಯ ರಮಣ ರಾವ್ ನೆನಪಿಸಿಕೊಂಡರು.