ಪುಣೆ: 3 ವರ್ಷದ ಬಾಲಕನ ಮೇಲೆ ಟ್ಯೂಷನ್ ಶಿಕ್ಷಕಿ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ಪುಣೆಯಲ್ಲಿ ನಡೆದಿದೆ.
ಶಿಕ್ಷಕಿ ಮಗುವಿಗೆ ಹೇಗೆ ಥಳಿಸಿದ್ದಾಳೆಂದರೆ ಘಟನೆ ನಡೆದು ಮೂರು ದಿನಗಳಾದ್ರೂ ಮಗುವಿನ ಮುಖದಲ್ಲಿ ಊತ ಇಳಿದಿಲ್ಲ. ಸೆಪ್ಟೆಂಬರ್ 11ರಂದು ಇಲ್ಲಿನ ಪಿಂಪಲ್ ಸೌದಾನಗರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಧವಾರ ರಾತ್ರಿ ಪೊಲೀಸರು ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಮಗುವಿನ ಪೋಷಕರ ದೂರಿನನ್ವರ ಪೊಲೀಸರು ಶಿಕ್ಷಕಿ ಭಾಗ್ಯಶ್ರೀ ಪಿಳ್ಳೈನನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 324 ಹಾಗೂ 2015ರ ಬಾಲನ್ಯಾಯ ಕಾಯ್ದೆಯ ಸೆಕ್ಷನ್ 75ರಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement
ಆರೋಪಿ ಶಿಕ್ಷಕಿ ಭಾಗ್ಯಶ್ರೀ ಪಿಳ್ಳೈ ವಾಸವಿರುವ ಸೌದಾನಗರ್ ಪ್ರದೇಶದಲ್ಲೇ ಮಗುವಿನ ಪೋಷಕರು ವಾಸವಿದ್ದಾರೆ. ಬಾಲಕನ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ತಮ್ಮ ಮಗ ಚೆನ್ನಾಗಿ ಓದಲೆಂದು ಶಿಕ್ಷಕಿಯ ಬಳಿ ಟ್ಯೂಷನ್‍ಗೆ ಕಳಿಸುತ್ತಿದ್ದರು.
Advertisement
ಸೋಮವಾರದಂದು ಬಾಲಕ ಭಾಗ್ಯಶ್ರೀ ಅವರ ಮನೆಗೆ ಹೋಗಿದ್ದ. ಪೋಷಕರು ಮನೆಗೆ ಹಿಂದಿರುಗಿದ ನಂತರ ಮಗುವಿನ ಮುಖ ತುಂಬಾ ಊದಿಕೊಂಡಿರುವುದನ್ನ ನೋಡಿದ್ದರು. ಈ ಬಗ್ಗೆ ಬಾಲಕನನ್ನು ಕೇಳಿದಾಗ ತನ್ನ ಶಿಕ್ಷಕಿ ಮರದ ಸ್ಕೇಲ್‍ನಿಂದ ಕೈ, ಬೆನ್ನು ಹಾಗೂ ತಲೆಗೆ ಹೊಡೆದಿದ್ದಾಗಿ ಹೇಳಿದ್ದಾನೆ ಎಂದು ಸಾಂಗ್ವಿ ಪೊಲೀಸ್ ಠಾಣೆಯ ಹಿರಿಯ ಇನ್‍ಸ್ಪೆಕ್ಟರ್ ಅಜಯ್ ಚಾಂದ್‍ಖೇಡೇ ಹೇಳಿದ್ದಾರೆ.
Advertisement
ಮಗುವಿನ ಪರಿಸ್ಥಿತಿ ನೋಡಿ ಪೋಷಕರು ಶಿಕ್ಷಕಿ ವಿರುದ್ಧ ದೂರು ದಾಖಲಿಸಲು ಸಾಂಗ್ವಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದ್ರೆ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಸಸೂನ್ ಆಸ್ಪತ್ರೆಗೆ ಕಳಿಸಿದ್ರು ಎಂದು ಪೋಷಕರು ಹೇಳಿದ್ದಾರೆ.
ಟ್ಯೂಷನ್ ಟೀಚರ್ ಮಗುವಿನ ಚಿಕಿತ್ಸೆಗೆ ಹಣ ಕೊಡಲು ಒಪ್ಪಿದ್ದರಿಂದ ಪೋಷಕರು ಪ್ರಕರಣ ದಾಖಲಿಸಬೇಕೋ ಬೇಡವೋ ಎಂಬ ಬಗ್ಗೆ ದ್ವಂದ್ವದಲ್ಲಿದ್ದರು. ಆದ್ರೆ ಬುಧವಾರದಂದು ಪ್ರಕರಣ ದಾಖಲಿಸಲು ತೀರ್ಮಾನಿಸಿದ್ರು. ಅವರು ನಮ್ಮ ಬಳಿ ಬಂದ ಕೂಡಲೇ ಪ್ರಕರಣ ದಾಖಲಿಸಿದ್ದೇವೆ. ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿದ್ದೇವೆ ಎಂದು ಅಜಯ್ ಹೇಳಿದ್ದಾರೆ.
ದೂರು ಸ್ವೀಕರಿಸಿದ ನಂತರ ಆರೋಪಿ ಶಿಕ್ಷಕಿ ಭಾಗ್ಯಶ್ರೀಯನ್ನು ಪೊಲೀಸರು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಒಂದು ದಿನ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.