ಮುಂಬೈ: ಪುಣೆಯಲ್ಲಿ ಪೋರ್ಶೆ ಕಾರು ಅಪಘಾತವೆಸಗಿದ (Pune Porsche Car Crash) ಆರೋಪದ ಮೇಲೆ ಬಂಧನಕ್ಕೊಳಗಾದ ಅಪ್ರಾಪ್ತ ಬಾಲಕನ ಪೋಷಕರನ್ನು ಪುಣೆಯ ಕೋರ್ಟ್ ಸಾಕ್ಷ್ಯ ನಾಶಪಡಿಸಿದ ಪ್ರಕರಣದಲ್ಲಿ ಜೂ.5ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಮೇ 19 ರಂದು ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದ ಕಾರು ಅಪಘಾತದಲ್ಲಿ ಇಬ್ಬರು ಇಂಜಿನಿಯರ್‌ಗಳು ಸಾವಿಗೀಡಾಗಿದ್ದರು. ಈ ಪ್ರಕರಣದಲ್ಲಿ ಕಾರು ಚಲಾಯಿಸುತ್ತಿದ್ದ ಅಪ್ರಾಪ್ತನ ವೈದ್ಯಕೀಯ ಪರೀಕ್ಷೆ ವೇಳೆ ರಕ್ತದ ಮಾದರಿಯನ್ನು ಬದಲಾಯಿಸಿ, ಬಾಲಕನ ತಾಯಿಯ ರಕ್ತವನ್ನು ಇರಿಸಿದ್ದು ಸಾಭೀತಾದ ಬಳಿಕ ಬಾಲಕನ ತಾಯಿ ಶಿವಾನಿ ಅಗರ್ವಾಲ್‍ನನ್ನು ಜೂ.1ರಂದು ಬಂಧಿಸಲಾಗಿತ್ತು.
ಸಾಕ್ಷ್ಯ ನಾಶ ಆರೋಪದಲ್ಲಿ ಈ ಹಿಂದೆ ಬಂಧಿತನಾಗಿದ್ದ ಬಾಲಕನ ತಂದೆ ವಿಶಾಲ್ ಅಗರವಾಲ್‍ನನ್ನು ಹಾಗೂ ಆತನ ಪತ್ನಿಯನ್ನು ಪೊಲೀಸರು ಮಹಾರಾಷ್ಟ್ರದ ಪುಣೆಯ ನ್ಯಾಯಾಲಯದ (Pune Court) ಮುಂದೆ ಇಂದು (ಭಾನುವಾರ) ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯ ಜೂ.5 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಮೇ 19 ರಂದು ಮುಂಜಾನೆ 3:30ರ ಸುಮಾರಿಗೆ ಕುಡಿದ ಅಮಲಿನಲ್ಲಿ ಅಪ್ರಾಪ್ತ ಆರೋಪಿಯು ತನ್ನ ಐಷಾರಾಮಿ ಪೋರ್ಶೆ ಕಾರಿನಿಂದ ಇಬ್ಬರ ಹತ್ಯೆಗೆ ಕಾರಣವಾದನು. ಆರಂಭದಲ್ಲಿ ಆರೋಪಿ ಮದ್ಯ ಸೇವಿಸಿಲ್ಲ ಎನ್ನಲಾಗಿತ್ತು. ಸಿಸಿಟಿವಿ ದೃಶ್ಯಾವಳಿಯಲ್ಲಿ ಆತ ತನ್ನ ಸ್ನೇಹಿತರೊಂದಿಗೆ ಬಾರ್‌ನಲ್ಲಿ ಮದ್ಯ ಸೇವಿಸುತ್ತಿರುವುದು ಕಂಡುಬಂದಿತ್ತು.
ಈ ಪ್ರಕರಣದಲ್ಲಿ ಆರೋಪಿಯ ಅಜ್ಜ ಮತ್ತು ತಂದೆ ಮತ್ತು ಇಬ್ಬರು ವೈದ್ಯರು ಸೇರಿದಂತೆ ಒಟ್ಟು 9 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಇವರಲ್ಲಿ ಪಬ್ ಮಾಲೀಕರು, ಇಬ್ಬರು ವ್ಯವಸ್ಥಾಪಕರು ಮತ್ತು ಇಬ್ಬರು ಸಿಬ್ಬಂದಿ ಸೇರಿದ್ದಾರೆ. ಅವರನ್ನು ಕೋಜಿ ರೆಸ್ಟೋರೆಂಟ್‍ನ ಮಾಲೀಕ ಪ್ರಹ್ಲಾದ್, ಅವರ ಮ್ಯಾನೇಜರ್ ಸಚಿನ್ ಕಾಟ್ಕರ್, ಬ್ಲಾಕ್ ಕ್ಲಬ್ ಹೋಟೆಲ್ ಮ್ಯಾನೇಜರ್ ಸಂದೀಪ್ ಸಾಂಗ್ಲೆ ಮತ್ತು ಅವರ ಸಿಬ್ಬಂದಿ ಜಯೇಶ್ ಬೋಂಕರ್ ಮತ್ತು ನಿತೇಶ್ ಶೇವಾನಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಅಪ್ರಾಪ್ತ ಆರೋಪಿಗಳಿಗೆ ಮದ್ಯ ನೀಡಿದ ಆರೋಪ ಹೊತ್ತಿದ್ದಾರೆ.