ಮುಂಬೈ: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪುಣೆಯ ನಾಯ್ಡು ಆಸ್ಪತ್ರೆಯ ದಾದಿಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಆಸ್ಪತ್ರೆಯ ಸಿಬ್ಬಂದಿ ಮಾಡಿದ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಶುಕ್ರವಾರ ಸಂಜೆ ಪ್ರಧಾನಿ ಕಚೇರಿಯಿಂದ ನರ್ಸ್ ಛಾಯ ಜಗ್ತಾಪ್ ಅವರಿಗೆ ಕರೆ ಬಂದಿದೆ ಎಂದು ಪುಣೆ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಹೇಳಿದ್ದಾರೆ. ಕರೆ ಮಾಡಿ ಮರಾಠಿಯಲ್ಲಿ ಮಾತನಾಡಿದ ಮೋದಿ ಅವರು, ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದಾರೆ. ನಂತರ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಛಾಯ ಜಗ್ತಾಪ್ ಅವರು ತಮ್ಮ ಸುರಕ್ಷತೆ ಮತ್ತು ಕುಟುಂಬದ ಭಯವನ್ನು ಹೇಗೆ ನಿವಾರಿಸುತ್ತಿದ್ದಾರೆ ಎಂದು ಮೋದಿ ಅವರು ಕೇಳಿದ್ದಾರೆ.
Advertisement
Advertisement
ಇದಕ್ಕೆ ಉತ್ತರಿಸಿದ ಛಾಯ ಅವರು, ನನ್ನ ಕುಟುಂಬದ ಬಗ್ಗೆ ನನಗೆ ಕಾಳಜಿ ಇದೆ. ಆದರೆ ನಾನು ಕೆಲಸ ಮಾಡಬೇಕು. ಈ ಪರಿಸ್ಥಿತಿಯಲ್ಲಿ ನಾವು ರೋಗಿಗಳಿಗೆ ಸೇವೆ ಸಲ್ಲಿಸಬೇಕಾಗಿದೆ. ನಾನು ಅದನ್ನು ನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ. ನಂತರ ಪ್ರಧಾನಿ ಅವರು ಆಸ್ಪತ್ರೆಗೆ ಬರುವ ರೋಗಿಗಳು ಭಯಭೀತರಾಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಛಾಯ ಹೌದು ಕೆಲವರು ತುಂಬಾ ಭಯಪಡುತ್ತಾರೆ. ನಾವು ಅವರೊಂದಿಗೆ ಮಾತನಾಡಿ ಧೈರ್ಯ ತುಂಬುತ್ತೇವೆ ಎಂದು ತಿಳಿಸಿದ್ದಾರೆ.
Advertisement
Advertisement
ನಾವು ರೋಗಿಗಳಿಗೆ ಸಕಾರಾತ್ಮಕ ಸ್ಥೈರ್ಯವನ್ನು ತುಂಬುತ್ತೇವೆ. ಈಗಾಗಲೇ ನಮ್ಮ ಆಸ್ಪತ್ರೆಯಿಂದ ಏಳು ಕೊರೊನಾ ರೋಗಿಗಳು ಪೂರ್ತಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಛಾಯ ಅವರು ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮೋದಿ ಅವರು, ಕೊರೊನಾ ವೈರಸ್ ವಿರುದ್ಧ ನಿರಂತರ ಹೋರಾಡುತ್ತಿರುವ ನಿಮ್ಮಂತಹ ವೈದ್ಯಕೀಯ ಸಿಬ್ಬಂದಿಗೆ ಏನಾದರೂ ಹೇಳ ಬಯಸುತ್ತೀರಾ ಎಂದು ಕೇಳಿದ್ದಾರೆ.
ಆಗ ಛಾಯ ಅವರು, ಭಯಪಡುವ ಅಗತ್ಯವಿಲ್ಲ. ನಾವು ಈ ರೋಗವನ್ನು ಓಡಿಸಬೇಕು ಮತ್ತು ನಮ್ಮ ದೇಶವನ್ನು ಗೆಲ್ಲುವಂತೆ ಮಾಡಬೇಕು. ಇದು ಆಸ್ಪತ್ರೆಗಳು ಮತ್ತು ಅಲ್ಲಿನ ಸಿಬ್ಬಂದಿ ವರ್ಗದವರ ಧ್ಯೇಯ ವಾಕ್ಯವಾಗಿರಬೇಕು ಎಂದು ಸಂದೇಶ ನೀಡಿದ್ದಾರೆ. ಛಾಯ ಅವರು ಈ ಮಾತನ್ನು ಹೇಳುತ್ತಿದ್ದಂತೆ ಖುಷಿಯಾದ ಮೋದಿ ಅವರು, ಛಾಯ ಅವರ ಭಕ್ತಿ ಮತ್ತು ಸೇವೆಗೆ ಅಭಿನಂದಿಸಿದ್ದಾರೆ.
ನಿಮ್ಮಂತೆಯೇ ಲಕ್ಷಾಂತರ ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯರು ಇದೀಗ ದೇಶದ ವಿವಿಧ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ನೀವು ಎಲ್ಲರೂ ನಿಜವಾದ ತಪಸ್ವಿಗಳು. ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ನಿಮ್ಮ ಅನುಭವಗಳನ್ನು ಕೇಳಿ ನನಗೆ ಸಂತೋಷವಾಗಿದೆ ಎಂದು ಮೋದಿ ಹರ್ಷ ವ್ಯಕ್ತಪಡಸಿದ್ದಾರೆ.
ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ ಆದರೆ ನೀವು ರಾಷ್ಟ್ರದಾದ್ಯಂತ ಸೇವೆ ಸಲ್ಲಿಸುತ್ತಿದ್ದೀರಿ. ನಾವು ನಿಮಗೆ ಕೃತಜ್ಞರಾಗಿರಬೇಕು. ನಿಮ್ಮಂತಹ ಪ್ರಧಾನ ಮಂತ್ರಿಯನ್ನು ಪಡೆಯಲು ದೇಶವು ಅದೃಷ್ಟ ಮಾಡಿದೆ ಎಂದು ಛಾಯ ಅವರು ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಾಯ್ಡು ಆಸ್ಪತ್ರೆ ಪುಣೆಯಲ್ಲಿ ಅಧಿಕ ಕೊರೊನಾ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ.