ಬೆಳಗಾವಿ(ಚಿಕ್ಕೋಡಿ): ಪುಣೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ಮಂಡ್ಯ ಜಿಲ್ಲೆಯ ಮಹಿಳೆಯ ಅಂತ್ಯಸಂಸ್ಕಾರ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಪುಣೆಯಲ್ಲಿ ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಂಡ್ಯ ಜಿಲ್ಲೆಯ ಮುದ್ದೂರು ತಾಲೂಕಿನ ತೈಲೂರು ಗ್ರಾಮದ ನಿವಾಸಿ ಸೌಮ್ಯ ಟಿ.ಎ ಎರಡು ದಿನಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ದೇಹವನ್ನು ಆಕೆಯ ಪತಿ ಶರತ್ ತನ್ನೂರಿಗೆ ತೆಗೆದುಕೊಂದು ಬರಲು ಮಂಡ್ಯ ಜಿಲ್ಲಾಡಳಿತಕ್ಕೆ ಅನುಮತಿ ಕೇಳಿದ್ದಾರೆ. ಆದರೆ ಮೃತ ಸೌಮ್ಯಾಳನ್ನು ಕೊರೊನಾ ವೈರಸ್ ಟೆಸ್ಟ್ ಗೆ ಒಳಪಡಿಸದ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೂ ಪತಿ ಶರತ್ ಪತ್ನಿ ಮೃತದೇಹವನ್ನು ಕರ್ನಾಟಕ ಮಹಾರಾಷ್ಟ್ರ ಗಡಿಯವರೆಗೆ ತೆಗೆದುಕೊಂಡು ಬಂದಿದ್ದರು.
Advertisement
Advertisement
ಮಂಡ್ಯ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆ ಗಡಿಯಲ್ಲೂ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಇದರಿಂದ ಭಾನುವಾರ ಪತಿ ಶರತ್, ಮಗಳು ಯುಕ್ತಾ(5) ಹಾಗೂ ನಿವೃತ್ತ ಪಿಎಸ್‍ಐ ತಂದೆ ಅಪ್ಪಯ್ಯ ಆಕಡೆ ಪುನಃ ಪುಣೆಗೂ ಹೋಗಲು ಆಗದೆ ಸುಮಾರು 24 ಘಂಟೆಗಳ ಕಾಲ ರಾಜ್ಯ ಪ್ರವೇಶ ಅನುಮತಿಗಾಗಿ ಕಾದು ಕುಳಿತ್ತಿದ್ದರು. ಘಟನೆಯ ಸಂಪೂರ್ಣ ಮಾಹಿತಿ ತಿಳಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಿಲಿಂಗಣ್ಣವರ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರ ನೆರವಿಗೆ ನಿಂತಿರು.
Advertisement
ರಾತ್ರಿ 12 ಘಂಟೆಗೆ ಸ್ವತಃ ಅಧಿಕಾರಿಗಳು ಕುಟುಂಬಸ್ಥರ ಜೊತೆ ಸೇರಿ ಚೆಕ್‍ಪೋಸ್ಟ್ ಬಳಿಯ ಸರ್ಕಾರಿ ಗೋಮಾಳದಿಂದ ಕಟ್ಟಿಗೆ ವ್ಯವಸ್ಥೆ ಮಾಡಿ, ಧೂದಗಂಗಾ ನದಿ ದಡದಲ್ಲಿ ಮೃತ ಸೌಮ್ಯರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಕುಟುಂಬಸ್ಥರ ಜೊತೆ ಸೇರಿ ಸೌಮ್ಯ ಆತ್ಮಕ್ಕೆ ಮೋಕ್ಷ ಕೊಡುವ ಕೆಲಸವನ್ನು ಮಾಡಿದ್ದಾರೆ. ಕುಟುಂಬಸ್ಥರ ಕಷ್ಟದ ಸಮಯದಲ್ಲಿ ಮಾನವೀಯತೆ ಮೆರೆದ ಅಧಿಕಾರಿಗಳ ಕಾರ್ಯವೈಖರಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.