ಮುಂಬೈ: ಮಹಾರಾಷ್ಟ್ರದ (Maharashtra) ಪುಣೆ (Pune) ಜಿಲ್ಲೆಯ ಬವ್‌ಧಾನ್ ಪ್ರದೇಶದಲ್ಲಿ 67 ವರ್ಷದ ವ್ಯಕ್ತಿಯೊಬ್ಬರಿಗೆ ಝಿಕಾ ವೈರಸ್ (Zika Virus) ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸೋಂಕಿತ ವ್ಯಕ್ತಿ ನಾಸಿಕ್ ನಿವಾಸಿಯಾಗಿದ್ದು, ನವೆಂಬರ್ 6 ರಂದು ಪುಣೆಗೆ ಬಂದಿದ್ದರು. ರೋಗಿಯು ನವೆಂಬರ್ 16 ರಂದು ಜ್ವರ, ಕೆಮ್ಮು, ಕೀಲು ನೋವು ಮತ್ತು ಆಯಾಸದಿಂದ ಜಹಾಂಗೀರ್ ಆಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್ 18 ರಂದು ಖಾಸಗಿ ಪ್ರಯೋಗಾಲಯದಲ್ಲಿ ಅವರಿಗೆ ಝಿಕಾ ವೈರಸ್ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – ಅಬ್ಬರದ ಪ್ರಚಾರಕ್ಕೆ ತೆರೆ
ಈ ಹಿಂದೆ ಅಕ್ಟೋಬರ್ 22 ರಂದು ಅವರು ಸೂರತ್‌ಗೆ ಪ್ರಯಾಣ ಬೆಳೆಸಿದ್ದರು. ನವೆಂಬರ್ 30 ರಂದು, ಆತನಿಗೆ ಝಿಕಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಸದ್ಯ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಭವಿಷ್ಯದಲ್ಲಿ ಏಕಾಏಕಿ ಹರಡುವುದನ್ನು ತಗ್ಗಿಸಲು ಪುಣೆ ನಗರದಾದ್ಯಂತ ಝಿಕಾ ವೈರಸ್‌ನ ಕೀಟಶಾಸ್ತ್ರೀಯ ಸಮೀಕ್ಷೆಗೆ ಅಧಿಕಾರಿಗಳು ಆದೇಶಿಸಿದ್ದಾರೆ. ನಗರದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ದೃಢಪಟ್ಟ ಮೂರನೇ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕಿಗೆ ಸೋಂಕು ತಗುಲಿತ್ತು. ಇದಕ್ಕೂ ಮೊದಲು, ಕಳೆದ ವರ್ಷ ಜುಲೈನಲ್ಲಿ ಪುಣೆಯಲ್ಲಿ ಮೊದಲ ರೋಗಿ ಪತ್ತೆಯಾಗಿದ್ದರು. ಇದನ್ನೂ ಓದಿ: TMC ನಾಯಕನ ಮನೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ – ರಾಜಕೀಯ ಕೆಸರೆರಚಾಟಕ್ಕೆ ಗ್ರಾಸವಾದ ಘಟನೆ
1947 ರಲ್ಲಿ ಉಗಾಂಡಾದ ಕೋತಿಯಲ್ಲಿ ಮೊದಲ ಬಾರಿಗೆ ಝಿಕಾ ವೈರಸ್ ಪತ್ತೆಯಾಯಿತು. 2007 ರಲ್ಲಿ ಮೈಕ್ರೋನೇಷಿಯಾದಲ್ಲೂ ಸೋಂಕು ದೃಢಪಟ್ಟಿತ್ತು. 2015 ರಲ್ಲಿ ಲ್ಯಾಟಿನ್ ಅಮೆರಿಕಾದಲ್ಲಿ ಸೋಂಕು ಪತ್ತೆಯಾಗಿತ್ತು.