LatestNational

ಟೀ ಚೆಲ್ಲಿದ್ದಕ್ಕೆ ಚೂರಿಯಿಂದ ಇರಿದು ಕೊಂದೇ ಬಿಟ್ಟ!

ಪುಣೆ: ಅಚಾನಕ್ಕಾಗಿ ವ್ಯಕ್ತಿ ಮೇಲೆ ಟೀ ಬಿದ್ದಿದ್ದಕ್ಕೆ 19 ವರ್ಷದ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆಯೊಂದು ಪುಣೆ ವಿಶ್ವವಿದ್ಯಾಲಯದ ಸಮೀಪ ನಡೆದಿದೆ.

ಮೃತ ದುರ್ದೈವಿ ಯುವಕನನ್ನು ಅಕ್ತರ್ ಖಾನ್ ಎಂಬುವುದಾಗಿ ಗುರುತಿಸಲಾಗಿದೆ. ಘಟನೆಯಿಂದ ಅಕ್ತರ್ ಗೆಳೆಯ 21 ವರ್ಷದ ಕರೀಂ ಸೈಯದ್ ಎಂಬಾತನ ಕೈ ಹಾಗೂ ಎದೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇನ್ನು ಘಟನೆ ಸಂಬಂಧಿಸಿದಂತೆ ಮತ್ತೋರ್ವ ಗೆಳೆಯ ಅಮ್ಜಿತ್ ನಡಾಫ್ ದೂರು ದಾಖಲಿಸಿದ್ದು, ಚತುಶ್ರ್ರಿಂಗಿ ಪೊಲೀಸರು ಐಪಿಸಿ ಸೆಕ್ಷನ್ 302(ಕೊಲೆ) ಹಾಗೂ 307(ಕೊಲೆಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

`ಮನೆಗೆ ವಾಪಾಸ್ಸಾಗೋ ಮೊದಲು ನಾವು ಮೂವರು ಗೆಳೆಯರು ಟೀ ಕುಡಿಯಲೆಂದು ಹೋಗಿದ್ದೆವು. ಅಂತೆಯೇ ಟೀ ಸ್ಟಾಲ್ ನಲ್ಲಿ ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ಆಟೋ-ರಿಕ್ಷಾದಿಂದಿಳಿದ ವ್ಯಕ್ತಿ ನೇರವಾಗಿ ಅದೇ ಟೀ ಸ್ಟಾಲ್ ಗೆ ಬಂದ್ರು. ಇದೇ ವೇಳೆ ಗೆಳೆಯ ಅಕ್ತರ್ ಕೈಲಿದ್ದ ಗ್ಲಾಸ್ ನಿಂದ ಅಚಾನಕ್ ಆಗಿ ಟೀ ಚೆಲ್ಲಿತ್ತು. ಇದು ಆ ವ್ಯಕ್ತಿಯ ಬಟ್ಟೆಯ ಮೇಲೆ ಬಿತ್ತು. ಇದರಿಂದ ಕೋಪಗೊಂಡ ಆತ ಬೈಯಲು ಶುರು ಮಾಡಿದ. ಆದ್ರೆ ಅಕ್ತರ್ ಕ್ಷಮಿಸುವಂತೆ ಪರಿಪರಿಯಾಗಿ ಬೇಡಿಕೊಂಡರೂ ಸುಮ್ಮನಾಗದ ವ್ಯಕ್ತಿ ಹರಿತವಾದ ಚೂರಿಯಿಂದ ಅಕ್ತರ್ ಗೆ ಇರಿದಿದ್ದಾನೆ. ಈ ವೇಳೆ ನಾನು ಅಲ್ಲಿಂದ ಓಡಿ ಪಾರಾಗಿದ್ದು, ಅಕ್ತರ್ ಹಾಗೂ ಗೆಳೆಯ ಕರೀಂಗೆ ಗಂಭೀರ ಗಾಯಗಳಾಗಿದೆ’ ಅಂತ ನಡಾಫ್ ಘಟನೆಯ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾನೆ.

ಮೃತ ಯುವಕ ನಿರುದ್ಯೋಗಿಯಾಗಿದ್ದು, ಘಟನೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುವುದು. ಅಲ್ಲದೇ ಆರೋಪಿಯನ್ನು ಕೂಡ ಈ ಮೂಲಕ ಶೀಘ್ರವೇ ಪತ್ತೆ ಹಚ್ಚಲಾಗುವುದು ಅಂತ ಚತುಶ್ರ್ರಿಂಗಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ದನ್ಯಾನಂದ್ ಧೋಮ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *