ಪುಣೆ: ಪೋರ್ಶೆ ಕಾರು (Porsche Car Aciident) ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ವೈದ್ಯರನ್ನು ಪುಣೆ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಸಾಸೂನ್ ಆಸ್ಪತ್ರೆಯ ಡಾ. ಶ್ರೀಹರಿ ಹಾರ್ಲರ್ ಮತ್ತು ಡಾ. ಅಜಯ್ ತಾವ್ರೆ ಬಂಧಿತರು. ಡಾ. ಅಜಯ್ ತಾವ್ರೆ, ಸಸೂನ್ ಆಸ್ಪತ್ರೆಯಲ್ಲಿ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ಮುಖ್ಯಸ್ಥನಾದರೆ, ಡಾ. ಶ್ರೀಹರಿ ಹರ್ಲೋಲ್ ಅವರು ತುರ್ತು ವಿಭಾಗದಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿ.
ಪುಣೆಯ ಸಸೂನ್ ಆಸ್ಪತ್ರೆಯ ವೈದ್ಯರು ಅಪ್ರಾಪ್ತರ ರಕ್ತದ ಮಾದರಿ ವರದಿ ತಿರುಚಿರುವ ಆರೋಪ ಕೇಳಿ ಬಂದಿತ್ತು. ಅಪಘಾತಕ್ಕೆ ಕಾರಣನಾದ ಅಪ್ರಾಪ್ತನನ್ನು ವೈದ್ಯಕೀಯ ಪರೀಕ್ಷೆಗಾಗಿ ಪುಣೆಯ ಸಸೂನ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಆತನ ಕುಟುಂಬಸ್ಥರು ವೈದ್ಯರಿಗೆ ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಇಬ್ಬರ ಸುದೀರ್ಘ ವಿಚಾರಣೆಯ ನಂತರ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೇ 19 ರಂದು ಮುಂಜಾನೆ 3:30 ರ ಸುಮಾರಿಗೆ ಕುಡಿದ ಅಮಲಿನಲ್ಲಿ ಅಪ್ರಾಪ್ತ ಆರೋಪಿಯು ತನ್ನ ಐಷಾರಾಮಿ ಪೋರ್ಶೆ ಕಾರಿನಿಂದ ಇಬ್ಬರ ಹತ್ಯೆಗೆ ಕಾರಣವಾದನು. ಆರಂಭದಲ್ಲಿ ಆರೋಪಿ ಮದ್ಯ ಸೇವಿಸಿಲ್ಲ ಎಂದು ತಿಳಿದು ಬಂದಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಆತ ತನ್ನ ಸ್ನೇಹಿತರೊಂದಿಗೆ ಬಾರ್‌ನಲ್ಲಿ ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಪ್ರಕರಣ- ಆರೋಪಿ ಅಪ್ರಾಪ್ತನ ಅಜ್ಜ ಅರೆಸ್ಟ್
ಈ ಪ್ರಕರಣದಲ್ಲಿ ಆರೋಪಿಯ ಅಜ್ಜ ಮತ್ತು ತಂದೆ ಮತ್ತು ಇಬ್ಬರು ವೈದ್ಯರು ಸೇರಿದಂತೆ ಒಟ್ಟು 9 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಇವರಲ್ಲಿ ಪಬ್ ಮಾಲೀಕರು, ಇಬ್ಬರು ವ್ಯವಸ್ಥಾಪಕರು ಮತ್ತು ಇಬ್ಬರು ಸಿಬ್ಬಂದಿ ಸೇರಿದ್ದಾರೆ. ಅವರನ್ನು ಕೋಜಿ ರೆಸ್ಟೋರೆಂಟ್‌ನ ಮಾಲೀಕ ಪ್ರಹ್ಲಾದ್, ಅವರ ಮ್ಯಾನೇಜರ್ ಸಚಿನ್ ಕಾಟ್ಕರ್, ಬ್ಲಾಕ್ ಕ್ಲಬ್ ಹೋಟೆಲ್ ಮ್ಯಾನೇಜರ್ ಸಂದೀಪ್ ಸಾಂಗ್ಲೆ ಮತ್ತು ಅವರ ಸಿಬ್ಬಂದಿ ಜಯೇಶ್ ಬೋಂಕರ್ ಮತ್ತು ನಿತೇಶ್ ಶೇವಾನಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಅಪ್ರಾಪ್ತ ಆರೋಪಿಗಳಿಗೆ ಮದ್ಯ ಬಡಿಸಿದ ಆರೋಪ ಹೊತ್ತಿದ್ದಾರೆ.