ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತ್ನಾ ಪುಣೆ ಅತ್ಯಾಚಾರ ಆರೋಪಿ? – ಪೊಲೀಸರಿಂದ ಡ್ರೋನ್‌ ಬಳಸಿ ಹುಡುಕಾಟ

Public TV
1 Min Read
Pune Bus Rape Accused Hiding In Sugarcane Field Cops To Use Drones Sources

ಪುಣೆ: ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲೇ ನಿಲ್ಲಿಸಿದ್ದ ಸಾರಿಗೆ ಬಸ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ (Pune Rape case) ಎಸಗಿದ್ದ ಆರೋಪಿ ದತ್ತಾತ್ರಯ ರಾಮದಾಸ್ ಗಡೆ ತನ್ನ ಊರಿನ ವಿಶಾಲವಾದ ಕಬ್ಬಿನ ಗದ್ದೆಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ವಿಶಾಲವಾದ ಪ್ರದೇಶದಲ್ಲಿ ಸುಮಾರು 10 ಅಡಿ ಎತ್ತರದಲ್ಲಿ ಬೆಳೆದ ಕಬ್ಬಿನ ಗದ್ದೆಯಲ್ಲಿ ಆರೋಪಿ ಅಡಗಿರುವ ಶಂಕೆ ಇದೆ. ಆತನನ್ನು ಪತ್ತೆ ಮಾಡಲು ಪೊಲೀಸರು ದ್ರೋನ್ (Drone) ಹಾಗೂ ಸ್ನಿಫರ್ ಡಾಗ್‌ ಬಳಸುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ಕೃಷಿ ಪ್ರದೇಶದಲ್ಲಿ ಹುಡುಕುವುದು ಕಷ್ಟಕರವಾಗಿದೆ. ಅದಕ್ಕಾಗಿ ಡ್ರೋಣ್‌ ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ತರಕಾರಿಗಳನ್ನು ಸಾಗಿಸುತ್ತಿದ್ದ ಟ್ರಕ್‌ನಲ್ಲಿ ಅಡಗಿಕೊಂಡು ತನ್ನ ಊರಿಗೆ ತಲುಪಿದ್ದಾನೆ. ಅಲ್ಲಿ ಅವನು ತನ್ನ ಬಟ್ಟೆ ಮತ್ತು ಬೂಟುಗಳನ್ನು ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದಾನೆ. ಅವನನ್ನು ಪತ್ತೆಹಚ್ಚಲು ಅಪರಾಧ ವಿಭಾಗದ 8 ಮಂದಿ ಪೊಲೀಸರು ಸೇರಿದಂತೆ 13 ವಿಶೇಷ ತಂಡಗಳನ್ನು ರಚಿಸಲಾಗಿದೆ. ಆತನ ಕುಟುಂಬದ ಸದಸ್ಯರು ಮತ್ತು ಪರಿಚಿತರನ್ನು ವಿಚಾರಿಸಲಾಗಿದೆ. ಆತನ ಸುಳಿವು ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ 5:45 ರಿಂದ ಬೆಳಿಗ್ಗೆ 6 ಗಂಟೆಯ ನಡುವೆ ಅತ್ಯಾಚಾರ ನಡೆದಿದೆ. ಸತಾರಾ ಜಿಲ್ಲೆಯ ತನ್ನ ಊರಿಗೆ ತೆರಳಲು ಬಸ್‌ಗೆ ಕಾಯುತ್ತಿದ್ದಾಗ, ಆರೋಪಿ ತನ್ನನ್ನು ‘ದೀದಿ’ ಕರೆದು ಮಾತಾಡಿಸಿದ್ದಾನೆ. ಬಳಿಕ ಮೂಲೆಯಲ್ಲಿ ನಿಂತಿದ್ದ ಬಸ್‌ ಒಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ದತ್ತಾತ್ರಯ ರಾಮದಾಸ್ ಗಡೆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಪುಣೆ ಮತ್ತು ನೆರೆಯ ಅಹಲ್ಯಾನಗರ ಜಿಲ್ಲೆಯಲ್ಲಿ ಕನಿಷ್ಠ ಆರು ಕಳ್ಳತನ, ದರೋಡೆ ಮತ್ತು ಸರಗಳ್ಳತನದ ಆರೋಪ ಆತನ ಮೇಲಿದೆ. 2019ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article