ಪುಣೆ: ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಏಳು ಚಿನ್ನದ ಪದಕ ಗೆದ್ದಿದ್ದ 21 ವರ್ಷದ ಈಜುಪಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಸಾಹಿಲ್ ಜೋಶಿ(21) ಅತ್ಮಹತ್ಯೆ ಮಾಡಿಕೊಂಡ ಈಜುಪಟು. ಕೋಥ್ರೂಡ್ ಪ್ರದೇಶದ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪೋಷಕರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಸೀಲಿಂಗ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಹಿಲ್ ತಂದೆ ತನ್ನ ಮಗನಿಗೆ ಆಫೀಸ್‍ನಿಂದ ಕರೆ ಮಾಡಿದ್ದಾರೆ ಸಾಕಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸದ ಹಿನ್ನೆಲೆಯಲ್ಲಿ ತಂದೆ ಮನೆಗೆ ಬಂದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ರೀತಿಯ ಡೆತ್ ನೋಟ್ ಸಿಕಿಲ್ಲ. ಯಾವುದೋ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಎಂಬಿಬಿಎಸ್ ಓದುತ್ತಿದ್ದ ಜೋಶಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಆದ್ದರಿಂದ ನಾವು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಜೋಶಿ ಅವರ ಕೋಚ್ ಮನೋಜ್ ಎರಾಂಡೆ, ಜೋಶಿ ಅತ್ಯಂತ ಪ್ರತಿಭಾವಂತ ಈಜುಗಾರನಾಗಿದ್ದ. ಅವನು ರಾಷ್ಟ್ರೀಯ ಮಟ್ಟದಲ್ಲಿ 9 ಸ್ಪರ್ಧೆಗಳಲ್ಲಿ ಭಾಗವಹಿಸಿ 7 ಚಿನ್ನದ ಪದಕ ಗೆದ್ದಿದ್ದಾನೆ. ಅವನ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ ಎಂದು ಹೇಳಿದ್ದಾರೆ.