ಪ್ರತಿದಿನ ಖಾಲಿ ದೋಸೆ, ಸೆಟ್ ದೋಸೆ, ಮಸಾಲೆ ದೋಸೆ ತಿಂದು ಬೋರಾಗಿದ್ಯಾ? ಹಾಗಿದ್ರೆ ಇವತ್ತಿನ ನಮ್ಮ ರೆಸಿಪಿಯಲ್ಲಿ ಆರೋಗ್ಯಕರ ಕುಂಬಳಕಾಯಿ ದೋಸೆ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಕುಂಬಳಕಾಯಿ ಸೇವನೆಯಿಂದ ಅನೇಕ ಆರೋಗ್ಯ ಲಾಭಗಳಿವೆ. ಈ ದೋಸೆ ಮಾಡಲು ಬಲು ಸುಲಭ. ಹಾಗಿದ್ರೆ ತಡ ಯಾಕೆ? ನೀವೂ ಕೂಡ ನಿಮ್ಮ ಮನೆಯಲ್ಲಿ ಈ ದೋಸೆಯನ್ನೊಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಕುಂಬಳಕಾಯಿ – 500 ಗ್ರಾಂ
ಅಕ್ಕಿ – ಒಂದು ಕಪ್
ತೆಂಗಿನ ತುರಿ – ಒಂದು ಕಪ್
ಶುಂಠಿ – ಸಣ್ಣ ತುಂಡು
ಕರಿಬೇವು – 4 ಎಲೆ
ಒಣಮೆಣಸಿನಕಾಯಿ -2ರಿಂದ 3
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
* ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಮೂರು ಗಂಟೆಗಳ ಕಾಲ ನೆನೆಸಿಡಿ.
* ಈಗ ನೆನೆಸಿಟ್ಟ ಅಕ್ಕಿಯನ್ನು ಮಿಕ್ಸರ್ ಜಾರಿಗೆ ಹಾಕಿಕೊಂಡು ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿ ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಿ.
* ಬಳಿಕ ಅದೇ ಜಾರಿಗೆ ಹೆಚ್ಚಿದ ಕುಂಬಳಕಾಯಿ, ತೆಂಗಿನ ತುರಿ, ಶುಂಠಿ, ಕರಿಬೇವು, ಒಣಮೆಣಸಿನಕಾಯಿ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ.
* ನಂತರ ಅಕ್ಕಿಹಿಟ್ಟಿಗೆ ಈ ಮಿಶ್ರಣವನ್ನು ಹಾಕಿಕೊಂಡು, ಅಗತ್ಯಕ್ಕೆ ತಕ್ಕಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಈಗ ದೋಸೆ ತವಾ ಕಾಯಲು ಇಟ್ಟು ಬಿಸಿಯಾದ ಬಳಿಕ ದೋಸೆ ಹಾಕಿ ಮುಚ್ಚಿಟ್ಟು ಬೇಯಿಸಿಕೊಳ್ಳಿ.
* ಬಳಿಕ ಮುಚ್ಚಳ ತೆಗೆದು ದೋಸೆ ಮೇಲೆ ಸ್ವಲ್ಪ ತುಪ್ಪ ಸವರಿಕೊಳ್ಳಿ.
* ಈಗ ಗರಿಗರಿಯಾದ ಕುಂಬಳಕಾಯಿ ದೋಸೆ ಸವಿಯಲು ಸಿದ್ಧ.