– ಸುಕೇಶ್ ಡಿಎಚ್
ನಮ್ಮ ಊರಿನ ಕಡೆ ಒಂದು ಮಾತಿದೆ ಅದೃಷ್ಟ ರಾಜ್ಯ ಆಳು ಅಂದರೆ ಬುದ್ಧಿ ದನ ಮೇಯಿಸು ಅಂತಿತ್ತಂತೆ. ರಾಹುಲ್ ಗಾಂಧಿ ಮಾಡಿಕೊಳ್ಳುವ ಎಡವಟ್ಟುಗಳನ್ನ ನೋಡಿದಾಗಲೆಲ್ಲಾ ಯಾಕೋ ಈ ಮಾತು ನನಗೆ ಪದೇ ಪದೇ ನೆನಪಾಗುತ್ತೆ. ಎಲ್ಲವು ಇದ್ದು ಏನೂ ಇಲ್ಲದ ಸ್ಥಿತಿ ರಾಹುಲ್ ಗಾಂಧಿಯದು. ವಂಶ ಪಾರಂಪರ್ಯ ಅಧಿಕಾರವನ್ನು ಹುಟ್ಟಿನಿಂದಲೇ ಪಡೆದ ನಾಯಕನಿಗೆ ಈಗ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಆದರೆ ಅದನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಇನ್ನು ಅಸಮರ್ಥ ಅನ್ನಿಸಿಕೊಳ್ಳುತ್ತಿದ್ದಾರೆ ಕಾಂಗ್ರೆಸ್ಸಿಗರ ಪಾಲಿನ ಯುವರಾಜ.
Advertisement
ಯಾರು ಏನೇ ಹೇಳಲಿ ರಾಜಕೀಯ ಆರೋಪ ಪ್ರತ್ಯಾರೋಪಗಳು ಏನೇ ಇರಲಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರ ಸಾವು ಖಂಡಿತ ಸಾಮಾನ್ಯ ಸಾವಲ್ಲ. ದೇಶದ ಹಿತಕ್ಕಾಗಿ ತಗೆದುಕೊಂಡ ತೀರ್ಮಾನಗಳೇ ಅವರನ್ನ ಸಾವಿನ ದವಡೆಗೆ ನೂಕಿದ್ದು ಇತಿಹಾಸ. ದೇಶಕ್ಕಾಗಿ ಪ್ರಾಣ ಬಿಟ್ಟ ಹುತಾತ್ಮರ ಸಾಲಿನಲ್ಲಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಹೆಸರು ಅಜರಾಮರ. ಇಂದಿರಾ ಗಾಂಧಿಯವರಿಗೆ ಬ್ಲೂ ಸ್ಟಾರ್ ಆಪರೇಷನ್ ಮಾಡಿ ಅಂತ ಯಾರು ಹೇಳಿದ್ದು? ಗುರುದ್ವಾರದ ಮೇಲೆ ಸೈನ್ಯ ನುಗ್ಗಿಸಿ ಅಂದಿದ್ಯಾರು? ಅವರು ಮಾಡಿದ ತಪ್ಪಿಗೆ ಸಿಖ್ ಸಮುದಾಯದವರು ಅವರನ್ನು ಕೊಂದರು ಎಂದರೆ ಅದಕ್ಕಿಂತ ಅವಿವೇಕದ ಮಾತು ಇನ್ನೊಂದು ಇರಲಾರದು. ಶ್ರೀಲಂಕಾದ ಎಲ್‍ಟಿಟಿಇ ಸಮಸ್ಯೆಗೂ ಭಾರತಕ್ಕೂ ಏನು ಸಂಬಂಧ? ಅಲ್ಲಿಗೆ ಸೈನ್ಯ ಕಳುಹಿಸುವ ಉಸಾಬರಿ ರಾಜೀವ್ ಗಾಂಧಿಗೆ ಯಾಕೆ ಬೇಕಿತ್ತು? ಎಲ್‍ಟಿಟಿಇ ಸೇಡಿಗೆ ರಾಜೀವ್ ಬಲಿಯಾದರು ಅಷ್ಟೇ ಅಂತ ರಾಜೀವ್ ಗಾಂಧಿಯವರ ಸಾವನ್ನ ಕೇವಲ ಎಲ್‍ಟಿಟಿಇ ಸೇಡಿಗೆ ಸೀಮಿತಗೊಳಿಸಿದರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ಅಂದಿನ ಕಾಲಘಟ್ಟಕ್ಕೆ ತಕ್ಕಂತೆ ಇಂದಿರಾ ಇರಬಹುದು, ರಾಜೀವ್ ಇರಬಹುದು ತಮ್ಮದೇ ಆದ ತೀರ್ಮಾನವನ್ನ ಕೈಗೊಂಡಿದ್ದರು. ಅದೇ ಕಾರಣಕ್ಕಾಗಿ ಇಬ್ಬರು ಬಲಿಯಾಗಬೇಕಾಯಿತು. ಇಬ್ಬರು ನಾಯಕರ ಬಲಿದಾನವನ್ನೆ ಕಾಂಗ್ರೆಸ್ ಸಾಕಷ್ಟು ವರ್ಷಗಳಿಂದ ರಾಜಕೀಯವಾಗಿ ಬಳಸಿಕೊಂಡು ಲಾಭವನ್ನು ಪಡೆದಿದೆ.
Advertisement
Today as we remember our 40 CRPF martyrs in the #PulwamaAttack , let us ask:
1. Who benefitted the most from the attack?
2. What is the outcome of the inquiry into the attack?
3. Who in the BJP Govt has yet been held accountable for the security lapses that allowed the attack? pic.twitter.com/KZLbdOkLK5
— Rahul Gandhi (@RahulGandhi) February 14, 2020
Advertisement
ಅಂತಹ ಅಜ್ಜಿಯ ಮೊಮ್ಮಗ, ಅಂತಹ ತಂದೆಯ ಮಗ ದೇಶದ ಸೈನಿಕರ ಬಲಿದಾನದಿಂದ ಯಾರಿಗೆ ಹೆಚ್ಚು ಲಾಭವಾಗಿದೆ ಅಂತ ಕೇಳ್ತಾರೆ ಅಂದರೆ ಅವರ ಮಾನಸಿಕ ಸ್ಥಿತಿ ಎಂತದ್ದು ಎಂಬ ಅನುಮಾನ ಖಂಡಿತ ಮೂಡುತ್ತದೆ. ಇಂದಿರಾ ಗಾಂಧಿ ಸಾವಿನಿಂದ ಯಾರಿಗೆ ಹೆಚ್ಚು ಲಾಭವಾಯ್ತು? ರಾಜೀವ್ ಗಾಂಧಿ ಸಾವಿನಿಂದ ಯಾರಿಗೆ ಹೆಚ್ಚು ಲಾಭವಾಯ್ತು ಅಂತ ಕೇಳೋದು ಎಷ್ಟು ಮೂರ್ಖತನವೋ ರಾಹುಲ್ ಗಾಂಧಿ ಕೇಳಿದ ಪ್ರಶ್ನೆಯೂ ಅಷ್ಟೇ ಮೂರ್ಖತನದ್ದು ಅನ್ನೋದರಲ್ಲಿ ಅನುಮಾನವೇ ಇಲ್ಲ.
Advertisement
ಇನ್ನು ದೇಶದಲ್ಲಿ ಭಯೋತ್ಪಾದಕ ದಾಳಿ ಹೊಸತೇನೂ ಅಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉರಿ ದಾಳಿ, ಪುಲ್ವಾಮ ದಾಳಿಗಳ ಮೂಲಕ ಭಯೋತ್ಪಾದಕರು ಸೈನ್ಯವನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ ಘಟನೆಗಳು ನಡೆದವು. ಸಹಜವಾಗಿಯೆ ಸೈನ್ಯ ಪ್ರತಿಕಾರವನ್ನು ತಗೆದುಕೊಂಡಿದೆ. ಆದರೆ ಈ ದಾಳಿ ನಡೆದಿದೆ ಎಂದರೆ ಸಹಜವಾಗಿಯೇ ದೇಶದ ಗುಪ್ತಚರ ಇಲಾಖೆಯ ವೈಫಲ್ಯವು ಕಾರಣವಾಗಿದೆ.
ವಿಪಕ್ಷಗಳು ಸಹಜವಾಗಿಯೆ ಇದನ್ನ ಟೀಕಿಸುವುದು ಮೊದಲಿನಿಂದಲು ನಡೆದಿದೆ. ಆದರೆ 2019ರ ಫೆಬ್ರವರಿ 14 ದಾಳಿ ಮಾತ್ರ ಅತ್ಯಂತ ಕೆಟ್ಟ ರೀತಿಯಲ್ಲಿ ರಾಜಕೀಯ ತಿರುವು ಪಡೆದುಕೊಂಡಿತು. ಅದಕ್ಕೆ ಕಾರಣವಾಗಿದ್ದು ಚುನಾವಣೆ ಹೊಸ್ತಿಲಲ್ಲಿ ಈ ದಾಳಿ ಆಯ್ತು ಅನ್ನೋದು. ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸಹಾ ಭಾರತೀಯ ಸೈನ್ಯದ ಪ್ರತಿಕಾರವನ್ನೆ ಪ್ರಚಾರಕ್ಕೆ ಬಳಸಿಕೊಂಡು ಲಾಭ ಪಡೆಯಿತು. ಇಡಿ ದಾಳಿಯನ್ನೇ ಮೊದಲಿನಿಂದಲೂ ರಾಜಕೀಯ ದೃಷ್ಟಿಯಿಂದ ನೋಡಿದ ಬಿಜೆಪಿಯ ರಾಜಕೀಯ ಎದುರಾಳಿಗಳು ಗುಪ್ತಚರ ಇಲಾಖೆ ವೈಫಲ್ಯವನ್ನ ಖಂಡಿಸುವ ಜೋಷ್ ನಲ್ಲಿ ಹಿಗ್ಗಾಮುಗ್ಗಾ ನಾಲಿಗೆ ಹರಿಬಿಟ್ಟು 2019 ರ ಲೋಕಸಭಾ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಿಸಿಕೊಂಡವು.
ಎಡಪಂಥೀಯರ ಎಡಬಿಡಂಗಿತನ ಒಂದು ಕಡೆ ಇರಲಿ. ರಾಹುಲ್ ಗಾಂಧಿ ಕೇಳಿದ ಆ ಎರಡು ಪ್ರಶ್ನೆಗಳು ಸರಿಯಾಗೆ ಇವೆ. ಪುಲ್ವಾಮ ದಾಳಿಯ ಬಗ್ಗೆ ನಡೆಸಿದ ತನಿಖೆಯ ಅಂಶಗಳೇನು? ಪುಲ್ವಾಮ ಭದ್ರತ ಲೋಪಕ್ಕೆ ಯಾರನ್ನ ಹೊಣೆಗಾರರನ್ನಾಗಿ ಮಾಡಿದೆ ಎಂದು ಕೇಳಿದ್ದು ಖಂಡಿತವಾಗಿಯು ಸರಿ ಇದೆ. ಉತ್ತರ ಕೊಡಬೇಕಾದ್ದು ಕೇಂದ್ರ ಸರ್ಕಾರದ ಕರ್ತವ್ಯ. ಆದರೆ ಪುಲ್ವಾಮ ದಾಳಿಯಿಂದ ಯಾರಿಗೆ ಹೆಚ್ಚು ಲಾಭವಾಗಿದೆ ಅನ್ನೋ ಪ್ರಶ್ನೆ ಅವರ ರಾಜಕೀಯ ದೃಷ್ಟಿಯಲ್ಲಿ ಸರಿ ಇರಬಹುದು. ಆದರೆ ವೀರ ಸೈನಿಕರ ಬಲಿದಾನ ಲಾಭ ನಷ್ಟದ ಲೆಕ್ಕಾಚಾರದ ಪ್ರಶ್ನೆ ಆಗಲ್ಲ. ಅದು ದೇಶಕ್ಕಾದ ನಷ್ಟ, ಅದನ್ನು ತುಂಬಲು ಸಾಧ್ಯವಿಲ್ಲ. ಆದರೆ ಅದಕ್ಕೆ ಕಾರಣವಾದವರನ್ನು ಮಟ್ಟ ಹಾಕಿ ಸೈನಿಕರ ವೀರ ಮರಣಕ್ಕೊಂದು ಸಲ್ಯೂಟ್ ಮಾಡಲಷ್ಟೇ ಸಾಧ್ಯ.
ಬಹುಶಃ ರಾಹುಲ್ ಗಾಂಧಿಯ ಬೆನ್ನಿಗೆ ಸಮರ್ಪಕವಾದ ಥಿಂಕ್ ಟ್ಯಾಂಕ್ ಇಲ್ಲದಿರುವುದರ ಪರಿಣಾಮ ಈ ಪ್ರಶ್ನೆ ಉದ್ಭವಿಸಿರಬಹುದು. ಆದರೆ ಇದರಿಂದ ಕಾಂಗ್ರೆಸ್ ಗೆ ಮತ್ತಷ್ಟು ನಷ್ಟವಾಗಬಹುದು, ಆದರೆ ದೇಶಕ್ಕಂತೂ ಯಾವ ಲಾಭವಿಲ್ಲ ಅನ್ನೋದು ಅಷ್ಟೇ ಸತ್ಯ.