ಮಂಡ್ಯ: ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ವೀರಯೋಧ ಎಚ್ ಗುರು ಅವರ ಕುಟುಂಬದವರನ್ನು ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ ಭೇಟಿ ಮಾಡಿ ಸಾಂತ್ವನ ಹೇಳಿದೆ. ಇದೇ ವೇಳೆ ಭಾನುವಾರದ ಚಿತ್ರಮಂದಿರದ ಕಲೆಕ್ಷನ್ ಮೊತ್ತದ ಹಣವನ್ನು ಗುರು ಅವರ ಕುಟುಂಬಕ್ಕೆ ಚೆಕ್ ಮೂಲಕ ನೀಡಿದೆ.
ಚಿತ್ರದ ಪ್ರಮುಖ ನಟರಾದ ತಬಲಾ ನಾಣಿ, ಅಪೂರ್ವಶ್ರೀ, ಸಂಜನಾ ಆನಂದ್, ನಿರ್ದೇಶಕ ಕುಮಾರ್, ನಿರ್ಮಾಪಕರಾದ ಡಾ.ಡಿ.ಎಸ್.ಮಂಜುನಾಥ್ ಹಾಗೂ ಕಾರ್ಯಕಾರಿ ನಿರ್ಮಾಪಕ ಶ್ರೀನಿವಾಸ್ ಅವರು ಗುರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
Advertisement
Advertisement
ಈ ವೇಳೆ ಮಾತನಾಡಿದ ಹಿರಿಯ ನಟ ತಬಲ ನಾಣಿ ಅವರು, ದೇಶ ಕಾಯುವವರು ದೇವರು ಎಂಬ ಭಾವನೆ ನಮ್ಮದು. ಗುರು ಅವರ ಅಂತಿಮ ದರ್ಶನ ಪಡೆಯಲು ಕೂಡ ಅಂದು ಆಗಮಿಸಿದ್ದೇವು. ಆದರೆ ಆ ವೇಳೆ ಕುಟುಂಬಸ್ಥರನ್ನು ಮಾತನಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂದು ಇಡೀ ತಂಡ ಭೇಟಿ ನೀಡಿ ಸಾಂತ್ವನ ಹೇಳಿದ್ದೇವೆ. ಅದಕ್ಕಿಂತ ನಮ್ಮಿಂದ ಹೆಚ್ಚೇನು ಮಾಡಲು ಸಾಧ್ಯ, ನಮ್ಮ ತಂಡದಿಂದ ಕಿರು ಸಹಾಯವನ್ನು ಕುಟುಂಬಸ್ಥರಿಗೆ ನೀಡಿದ್ದೇವೆ ಎಂದರು.
Advertisement
ಬಳಿಕ ಮಾತನಾಡಿದ ನಟಿ ಅಪೂರ್ವ ಶ್ರೀ ಅವರು, ಸಾವು ಎಲ್ಲರಿಗೂ ಬರುತ್ತದೆ. ಆದರೆ ಇಡೀ ದೇಶವೇ ನೆನೆಯುವಂತಹ ರೀತಿಯಲ್ಲಿ ಗುರು ಅವರ ಸಾವಿನ ಘಟನೆ ನಡೆದಿದೆ. ಪ್ರತಿಕ್ಷಣಾ ನಮ್ಮನ್ನು ಕಾಯುವ ಯೋಧರಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಸಿಗಬೇಕು. ಇನ್ನು ಮುಂದಾದರು ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿ ಭಾವುಕರಾದರು.
Advertisement
ನಿರ್ಮಾಪಕ ಮಂಜುನಾಥ್ ಅವರು ಮಾತನಾಡಿ, ನಮ್ಮ ಸಿನಿಮಾ ಬಿಡುಗಡೆಯ ದಿನವೇ ದುರಂತ ನಡೆದಿತ್ತು. ನಮಗೆ ತೀರ ನೋವು ತಂದಿತ್ತು. ನಾನು ಸೈನ್ಯಕ್ಕೆ ಸೇರಲು ಹೋಗಿ ಫೇಲ್ ಆಗಿ ವಾಪಸ್ ಬಂದೆ. ಸಿನಿಮಾದಲ್ಲಿ ಸೈನಿಕರ ಬಗ್ಗೆ ಹೇಳಲು ಯತ್ನಿಸಿದ್ದೆ. ನನ್ನ ಹಿಂದಿನ ಸಿನಿಮಾ ಸಂಯುಕ್ತ 2 ಸಿನಿಮಾ ಕೂಡ ಯೋಧರ ಹಿನ್ನೆಲೆಯಲ್ಲಿ ಆಯ್ಕೆ ಮಾಡಿಕೊಂಡಿದ್ದೆ. ಅಂದು ಕೂಡ ಸಿನಿಮಾದಲ್ಲಿ ಬಂದ ಸ್ವಲ್ಪ ಹಣವನ್ನು ಯೋಧರಿಗೆ ನೀಡಿದ್ದೆ. ಅದೇ ರೀತಿ ಇಂದು ಕೂಡ ಮಾಡಿದ್ದೇನೆ. ಯೋಧರ ಬೆಂಬಲಕ್ಕೆ ನಿಲ್ಲುವ ನಮ್ಮ ಕಾರ್ಯ ಮುಂದುವರಿಯುತ್ತದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv