ದೇಶ ಕಾಯುವ ಜೊತೆ ಗುರು ನಮ್ಮ ಮನೆಯನ್ನು ಕಾಯುತ್ತಿದ್ದ – ತಾಯಿ ಚಿಕ್ಕತಾಯಮ್ಮ

Public TV
2 Min Read
mnd guru samadhi 1

– ಗುರು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ
– ಸೊಸೆ ಬೆಂಗಳೂರಿನಲ್ಲಿದ್ದಾಳೆ, ಮನೆಯಲ್ಲಿ ಇಲ್ಲ

ಮಂಡ್ಯ: ಇಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು 40 ಮಂದಿ ವೀರಯೋಧರು ಹುತಾತ್ಮರಾಗಿದ್ದರು. ಇವರಲ್ಲಿ ಮಂಡ್ಯ ಜಿಲ್ಲೆಯ ಕೆ.ಎಂ ದೊಡ್ಡಿಯಲ್ಲಿರುವ ಸಿಆರ್​ಪಿಎಫ್ ಯೋಧ ಗುರು ಕೂಡ ಒಬ್ಬರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗುರು ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

ಪೂಜೆ ವೇಳೆ ಗುರು ಅವರ ತಾಯಿ ಚಿಕ್ಕತಾಯಮ್ಮ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ಘಟನೆಯಿಂದ ನನಗೆ ತುಂಬಾ ಸಂಕಟವಾಗುತ್ತೆ. ನನ್ನ ಮಗ ಈಗ ಹಿಂತಿರುಗಿ ಬರುವುದಿಲ್ಲ. ಇಂದು ಇಲ್ಲಿ ಪೂಜೆ ಇಟ್ಟುಕೊಂಡಿದ್ದೇವೆ. ನನ್ನ ಸೊಸೆ ಕಲಾವತಿ ಆಕೆ ತನ್ನ ಅಪ್ಪನ ಮನೆಯಲ್ಲಿದ್ದು, ನಮ್ಮ ಮನೆಗೆ ಬರುತ್ತಿಲ್ಲ. ಹಣದ ವಿಚಾರದಲ್ಲಿ ನಾವೇನು ಜಗಳವಾಡಿಲ್ಲ. ಇಬ್ಬರು ಮನೆಯಲ್ಲಿ ಕುಳಿತುಕೊಂಡು ಹಣವನ್ನು ಹಂಚಿಕೊಂಡಿದ್ದೇವೆ ಹೊರತು ಯಾವುದೇ ಜಗಳವಾಡಿಲ್ಲ. ಬೇಡದಿರುವ ವಿಚಾರದ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ. ಎಷ್ಟೇ ಹಣ ಇದ್ದರೂ ಮಗ ಇದ್ದ ಹಾಗೇ ಇರುವುದಿಲ್ಲ. ನನ್ನ ಮಗ ಬದುಕಿದ್ದರೆ ಅದರ ಹತ್ತರಷ್ಟು ಹಣ ಸಂಪಾದಿಸುತ್ತಿದ್ದನು ಎಂದು ಹೇಳಿದರು. ಇದನ್ನೂ ಓದಿ: ಭಾರತಕ್ಕಿಂದು ಕರಾಳ ದಿನ – ಪುಲ್ವಾಮಾ ದಾಳಿಗೆ 1 ವರ್ಷ

mnd guru samadhi 1 e1581661739840

15 ದಿನಗಳ ಹಿಂದೆ ನನ್ನ ಸೊಸೆ ಕರೆ ಮಾಡಿ ಏನೂ ಕಾರ್ಯಕ್ರಮ ಮಾಡಬೇಕು ಎಂದು ಕೇಳಿದ್ದಳು. ಆಗ ನಾನು, ನಮ್ಮ ಹುಡುಗರು ಏನು ಮಾಡಬೇಕು ಎಂದುಕೊಂಡಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದೆ. ನನ್ನ ಸೊಸೆ ಕಲಾವತಿ ಪೂಜೆ ಸಲ್ಲಿಸಲು ಬರುತ್ತಾಳೋ ಇಲ್ಲವೋ ಗೊತ್ತಿಲ್ಲ. ನಮ್ಮ ಸೊಸೆ ಈಗ ಜೊತೆಯಲ್ಲಿಲ್ಲ. ನನ್ನ ಮಗನ ಸಾವಿನ ಬಳಿಕ ಕಲಾವತಿ ಬೆಂಗಳೂರಿಗೆ ಹೋದಳು. ಮಂಡ್ಯಕ್ಕೆ ಬರುತ್ತಾಳೆ ಎಂದು ಎಲ್ಲರೂ ಹೇಳುತ್ತಾರೆ, ಆದರೆ ಅವರು ನಮ್ಮ ಮನೆಗೆ ಬರುವುದಿಲ್ಲ. ಆಕೆ ಜೊತೆ ನಮ್ಮ ಸಂಪರ್ಕದಲ್ಲಿ ಇಲ್ಲ. ಆದರೆ ನಾವೇನು ಜಗಳವಾಡಿಲ್ಲ ಎಂದರು. ಇದನ್ನೂ ಓದಿ: ಪುಲ್ವಾಮಾ ಕೇಸ್ – ಎನ್‍ಐಎ ತನಿಖೆ ಎಲ್ಲಿಯವರೆಗೆ ಬಂದಿದೆ? ‘ಕೀ’ ಯಿಂದ ಕೇಸ್ ಓಪನ್ ಆದ ರೋಚಕ ಕಥೆ ಓದಿ

mnd guru samadhi 2 e1581661760120

ನಾವು ನಮ್ಮ ಸೊಸೆ ಈಗ ಜೊತೆಯಲ್ಲಿ ಇಲ್ಲ. ನನ್ನ ಮಗ ಇದ್ದಾಗ ಸೊಸೆಯನ್ನು ಮಗಳಂತೆ ನೋಡಿಕೊಂಡಿದ್ದೆ. ನನ್ನ ಮಗ ಗುರು ನಮ್ಮಲ್ಲಿ ಏನೇ ಜಗಳವಾದರೂ ಅದನ್ನು ಸರಿಪಡಿಸುತ್ತಿದ್ದನು. ದೇಶ ಕಾಯುವ ಜೊತೆ ನಮ್ಮ ಮನೆಯನ್ನೂ ಗುರು ಕಾಯುತ್ತಿದ್ದನು. ಈಗ ಅವನು ದೇಶದ ಮಗನಾಗಿದ್ದಾನೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಎಂಬ ಹೆಮ್ಮೆ ನಮಗಿದೆ. ಗುರು ಹುತಾತ್ಮನಾದಾಗ ಸಾವಿರಾರು ಜನ ನಮಗೆ ಸಾಂತ್ವಾನ ಹೇಳಿದ್ದರು. ಅವರೆಲ್ಲರಿಗೂ ನನ್ನ ಧನ್ಯವಾದ ಎಂದು ಚಿಕ್ಕತಾಯಮ್ಮ ಮಗನನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *