– ಬೂದು ಪಟ್ಟಿಯಲ್ಲೇ ಮುಂದುವರಿಯಲಿದೆ ಪಾಕ್
– ಎಫ್‍ಎಟಿಎಫ್ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ
– ಪಾಕ್ ಮನವಿಯನ್ನು ಪುರಸ್ಕರಿಸದ ಇತರ ದೇಶಗಳು
ಪ್ಯಾರಿಸ್: ಪುಲ್ವಾಮಾ ದಾಳಿ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಮಾನ ಹರಾಜಾಗಿದ್ದು, ಈಗ ಮತ್ತೊಮ್ಮೆ ಹರಾಜಾಗಿದೆ. ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಮ ಕ್ರಿಯಾ ಪಡೆ(ಎಫ್‍ಎಟಿಎಫ್) ಪಾಕಿಸ್ತಾನವನ್ನು ಅಕ್ಟೋಬರ್ ವರೆಗೂ ಬೂದು ಪಟ್ಟಿಯಲ್ಲೇ(ಗ್ರೇ ಲಿಸ್ಟ್) ಮುಂದುವರಿಸಲು ನಿರ್ಧರಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸುವ ಭಾರತದ ಪ್ರಯತ್ನಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ.
ಪುಲ್ವಾಮಾ ದಾಳಿಯಾದ ನಂತರ ಪಾಕಿಸ್ತಾನವನ್ನು ಯಾವುದೇ ಕಾರಣಕ್ಕೂ ಗ್ರೇ ಪಟ್ಟಿಯಿಂದ ಹೊರಗಡೆ ಇಡಬಾರದು ಎಂದು ಭಾರತ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಫ್ರಾನ್ಸ್ ಸಹ ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲೇ ಇರಿಸುವಂತೆ ಎಫ್‍ಎಟಿಎಫ್ ಮೇಲೆ ಒತ್ತಡ ಹಾಕಿತ್ತು.
Advertisement
Advertisement
ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಜಾಸ್ತಿಯಾದ ಹಿನ್ನೆಲೆಯಲ್ಲಿ ಎಫ್‍ಎಟಿಎಫ್ ಪಾಕಿಸ್ತಾನವನ್ನು ಮುಂದಿನ ಅಕ್ಟೋಬರ್ ವರೆಗೆ ಗ್ರೇ ಪಟ್ಟಿಯಲ್ಲಿ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಗ್ರೇ ಪಟ್ಟಿಯಿಂದ ಹೊರಗೆ ಬರಲು ಪಾಕಿಸ್ತಾನ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಮನವಿ ಮಾಡಿತ್ತು. ಆದರೆ ಪಾಕ್ ಮನವಿಯನ್ನು ಇತರೇ ರಾಷ್ಟ್ರಗಳು ಗಂಭೀರವಾಗಿ ಸ್ವೀಕರಿಸಿರಲಿಲ್ಲ.
Advertisement
1989ರಲ್ಲಿ ಎಫ್‍ಎಟಿಎಫ್ ಸ್ಥಾಪಿಸಲಾಗಿದ್ದು, ಉಗ್ರರಿಗೆ ಹಣಕಾಸು ಪೂರೈಕೆ ತಡೆ, ಅಕ್ರಮ ಹಣ ವರ್ಗಾವಣೆ, ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆ ಬೆದರಿಕೆ ಒಡ್ಡುವ ಕೃತ್ಯಗಳನ್ನು ತಡೆಯುವ ಕೆಲಸವನ್ನು ಈ ಕ್ರಿಯಾಪಡೆ ಮಾಡುತ್ತದೆ.
Advertisement
ವಿಶ್ವದ ಒಟ್ಟು 38 ರಾಷ್ಟ್ರಗಳು ಎಫ್‍ಎಟಿಎಫ್ ಸದಸ್ಯ ರಾಷ್ಟ್ರಗಳಾಗಿವೆ. ತಾನು ನಿಗದಿಪಡಿಸಿದ ಕ್ರಮಗಳನ್ನು ಅನುಸರಿಸದೇ ಇದ್ದರೆ ಎಫ್‍ಎಟಿಎಫ್ ದೇಶಗಳನ್ನು ಗ್ರೇ ಅಥವಾ ಬ್ಲಾಕ್ ಲಿಸ್ಟ್ ಗೆ ಹಾಕುತ್ತದೆ. 2019ರ ಅಕ್ಟೋಬರ್ ಒಳಗಡೆ ಪಾಕಿಸ್ತಾನ ಎಫ್‍ಎಟಿಎಫ್ 27 ಬೇಡಿಕೆಯನ್ನು ಈಡೇರಿಸದೇ ಇದ್ದರೆ ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಏನಿದು ಗ್ರೇ ಲಿಸ್ಟ್?
ಫುಟ್ ಬಾಲ್ ಪಂದ್ಯಗಳಲ್ಲಿ ತಪ್ಪು ಮಾಡಿದ ಆಟಗಾರಿಗೆ ಹೇಗೆ ಹಳದಿ ಕಾರ್ಡ್ ನೀಡಿ ಎಚ್ಚರಿಕೆ ನೀಡುತ್ತಾರೋ ಅದೇ ರೀತಿಯಾಗಿ ರಾಷ್ಟ್ರವೊಂದಕ್ಕೆ ಮೊದಲ ಎಚ್ಚರಿಕೆ ನೀಡಲು ಈ ಪಟ್ಟಿಗೆ ಸೇರಿಸಲಾಗುತ್ತದೆ. ಗ್ರೇ ಪಟ್ಟಿಗೆ ಒಂದು ದೇಶ ಸೇರಿದರೆ ಅದಕ್ಕೆ ಹಲವು ಸಮಸ್ಯೆಗಳಾಗುತ್ತದೆ. ವಿವಿಧ ಹಣಕಾಸು ಸಂಸ್ಥೆಗಳು(ಐಎಂಎಫ್, ವಿಶ್ವಬ್ಯಾಂಕ್) ಸಾಲ ನೀಡಲು ಹಿಂದೇಟು ಹಾಕಬಹುದು. ಆರ್ಥಿಕ ನಿರ್ಬಂಧ ಹೇರಬಹುದು. ರಾಷ್ಟ್ರಗಳು ವ್ಯಾಪಾರವನ್ನು ಕಡಿತಗೊಳಿಸಬಹುದು. ರೇಟಿಂಗ್ ಏಜೆನ್ಸಿಗಳು ದೇಶಕ್ಕೆ ಕಡಿಮೆ ರೇಟಿಂಗ್ ಕೊಡಹುದು.
ಏನಿದು ಕಪ್ಪು ಪಟ್ಟಿ?
ಎಫ್‍ಎಟಿಎಫ್ ನಿಗದಿ ಪಡಿಸಿದ ಮಾನದಂಡಕ್ಕೆ ಅನುಗುಣವಾಗಿ ಕೆಲಸ ಮಾಡದೇ ಇದ್ದರೆ ಗ್ರೇ ಪಟ್ಟಿಯಲ್ಲಿರುವ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.
ಪಾಕಿಸ್ತಾನಕ್ಕೆ ಹೊಸದೆನಲ್ಲ:
ಕುತಂತ್ರಿ ಪಾಕಿಸ್ತಾನಕ್ಕೆ ಗ್ರೇ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೊಸದೆನಲ್ಲ. ಈ ಹಿಂದೆ 2012 ರಿಂದ 2015 ರವರೆಗೆ ಗ್ರೇ ಪಟ್ಟಿಯಲ್ಲಿತ್ತು. ಭಾರತದ ನಿರಂತರ ಒತ್ತಡದ ಬಳಿಕ 2018ರ ಜೂನ್ ಕೊನೆಯಲ್ಲಿ ಗ್ರೇ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಲಾಗಿತ್ತು. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಪಾಕಿಸ್ತಾನ ಸಿಲುಕಿದ್ದು ವಿಶ್ವದ ರಾಷ್ಟ್ರಗಳಿಂದ ಭಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿಗೆ ಬಂದಿದೆ. ಒಂದು ವೇಳೆ ಕಪ್ಪು ಪಟ್ಟಿಗೆ ಸೇರ್ಪಡೆಯಾದರೆ ಈಗಾಗಲೇ ವಿವಿಧ ರಾಷ್ಟ್ರಗಳಿಂದ ಸಾಲ ಮಾಡಿ ಪಾಕಿಸ್ತಾನದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಟ್ಟು ಡೋಲಾಯಮಾನವಾಗಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv