ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ

Public TV
3 Min Read
pulwama attack

– ಕೃತ್ಯ ನಡೆಯುವ 10 ದಿನದ ಮೊದಲು ಕಾರು ಖರೀದಿ
– ಕೀ, ಚಾಸಿ ನಂಬರಿನಿಂದ ಮಾಲೀಕ ಪತ್ತೆ
– 7 ಜನರಿಗೆ ಮಾರಾಟವಾಗಿ ಉಗ್ರನ ಕೈ ಸೇರಿತ್ತು ಕಾರು

ನವದೆಹಲಿ: ಪುಲ್ವಾಮಾದಲ್ಲಿ ಸಿಆರ್‌ಪಿಫ್ ಯೋಧರಿದ್ದ ಬಸ್ಸಿಗೆ ಗುದ್ದಿದ ಕಾರು ಯಾವುದು ಮತ್ತು ಆ ಕಾರಿನ ಮಾಲೀಕ ಯಾರು ಎನ್ನುವ ತನಿಖೆ ಒಂದು ‘ಕೀ’ ಯಿಂದ ಆರಂಭವಾಗಿದೆ.

ಹೌದು. ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಅಧಿಕಾರಿಗಳು ಸ್ಫೋಟಗೊಂಡ ಸ್ಥಳದಲ್ಲಿ ಸಿಕ್ಕಿದ ಒಂದು ‘ಕೀ’ ಇಟ್ಟುಕೊಂಡು ಕೃತ್ಯಕ್ಕೆ ಬಳಸಿದ ಕಾರು ಯಾವುದು ಮತ್ತು ಕಾರಿನ ಮಾಲೀಕ ಯಾರು ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

Pulwama terror attack kashmir

ಕೀ ಸಿಕ್ಕಿದ್ದು ಹೇಗೆ?
ಫೆ.14 ರಂದು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಲೇಥ್‍ಪುರಕ್ಕೆ ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮತ್ತು ಅಟೋಮೊಬೈಲ್ ತಜ್ಞರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಫೋಟದ ರಭಸಕ್ಕೆ ಸಿಆರ್‌ಪಿಫ್ ಬಸ್ ಸಂಪೂರ್ಣವಾಗಿ ಮುದ್ದೆಯಾಗಿ ಬಿದ್ದಿದ್ದರೆ ಕೃತ್ಯಕ್ಕೆ ಬಳಸಿದ ಕಾರು ಸಂಪೂರ್ಣವಾಗಿ ನಾಶವಾಗಿತ್ತು. ಭಾಗಗಳು ಎಲ್ಲೆಂದರಲ್ಲಿ ಬಿದ್ದಿತ್ತು. ಹೀಗಾಗಿ ತನಿಖೆಯ ಆರಂಭದ ದಿನದಲ್ಲಿ ಕಾರಿನ ಭಾಗಗಳನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿತ್ತು. ಕೊನೆಗೆ ಕಾರಿನ ಬಂಪರ್ ಮತ್ತು ನಂಬರ್ ಇರುವ ಶಾಕ್ ಅಬ್ಸರ್ಬರ್ ಸಿಕ್ಕಿದೆ. ಇದರ ಜೊತೆಯಲ್ಲಿ 25 ಲೀಟರಿನ ಕ್ಯಾನ್ ಸಿಕ್ಕಿದೆ. ತನಿಖಾಧಿಕಾರಿಗಳು ಈ ಕ್ಯಾನಿನಲ್ಲಿ 30 ಕೆಜಿ ಆರ್ ಡಿಎಕ್ಸ್ ಇಟ್ಟಿರಬಹುದು ಎಂದು ಶಂಕಿಸಿದ್ದಾರೆ.

ಸಿಕ್ಕಿದ ಭಾಗಗಳನ್ನು ಚೆಕ್ ಮಾಡಿದಾಗ ಕೊನೆಗೆ ಕೃತ್ಯಕ್ಕೆ ಬಳಸಿದ್ದು ಮಾರುತಿ ಕಂಪನಿಯ ಕಾರು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ನಂತರ ಎನ್‍ಐಎ ಅಧಿಕಾರಿಗಳು ಮಾರುತಿ ಎಂಜಿನಿಯರ್ ಗಳನ್ನು ಸ್ಥಳಕ್ಕೆ ಕರೆಸಿಕೊಂಡು ಮಾಹಿತಿ ಕಲೆ ಹಾಕಿದ್ದಾರೆ. ಸಿಕ್ಕಿದ ಭಾಗಗಳ ಮಾಹಿತಿಯನ್ನು ಕಲೆ ಹಾಕಿದಾಗ ಕಾರು 2011ರಲ್ಲಿ ಉತ್ಪಾದನೆಯಾಗಿದೆ ಎನ್ನುವ ವಿಚಾರ ಬೆಳಕಿಗೆ ಬರುತ್ತದೆ.

2011ರಲ್ಲಿ ಉತ್ಪಾದನೆಯಾದ ಕಾರಿನ ಮಾಲೀಕರನ್ನು ಪತ್ತೆ ಹಚ್ಚುವುದು ಹೇಗೆ? ಇದು ಬಹಳ ದೀರ್ಘ ಕೆಲಸ. ತನಿಖೆಗೆ ಬಹಳ ದಿನಗಳು ನಡೆಯಬಹುದು ಎನ್ನುವುದನ್ನು ಅರಿತ ಎನ್‍ಐಎ ತಂಡ ಏನು ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಹೊಳೆದಿದ್ದೆ ಮೆಟಲ್ ಡಿಟೆಕ್ಟರ್ ಸಾಧನ. ಸ್ಫೋಟದ ತೀವ್ರತೆಗೆ ಸೈನಿಕರ ದೇಹದ ಭಾಗಗಳೇ ಸುಮಾರು 100 ಮೀಟರ್ ದೂರಕ್ಕೆ ಚಿಮ್ಮಿತ್ತು. ಹೀಗಾಗಿ ಕಾರಿನ ಭಾಗಗಳು ಹಲವು ಕಡೆ ಚಿಮ್ಮಿರಬಹುದು ಎನ್ನುವ ಬಲವಾದ ನಂಬಿಕೆಯೊಂದಿಗೆ ಎನ್‍ಐಎ ಮೆಟಲ್ ಡಿಟೆಕ್ಟರ್ ಮೊರೆ ಹೋಯ್ತು.

c5blmgg terror attack in

ಮೆಟಲ್ ಡಿಟೆಕ್ಟರ್ ತಂದು 200 ಮೀಟರ್ ವ್ಯಾಪ್ತಿಯಲ್ಲಿ ಸ್ಕ್ಯಾನ್ ಮಾಡಲು ಮುಂದಾದಾಗ ಕಾರಿನ ಕೀ ಸಿಕ್ಕಿತು. ಇದಾದ ಬಳಿಕ ಕಾರಿನ ಚಾಸಿ ಪತ್ತೆಯಾಯಿತು. ಯಾವುದೇ ಚಾಸಿಯಲ್ಲಿ 19 ಸಂಖ್ಯೆಗಳು ಇರುತ್ತದೆ. ಈ ಚಾಸಿ ನಂಬರ್ ಮೂಲಕ ವೆಹಿಕಲ್ ಐಡಿಂಟಿಫಿಕೇಶನ್ ನಂಬರ್(ವಿಪಿಎನ್) ಪತ್ತೆ ಮಾಡಬಹುದು. ವಿಪಿಎನ್ 19 ಅಕ್ಷರಗಳಿಂದ ಕೂಡಿದ್ದು ಎಲ್ಲಾ ಕಾರುಗಳಿಗೆ ವಿಶಿಷ್ಟವಾಗಿ ನೀಡಲಾಗುತ್ತದೆ. ಈ ಎಲ್ಲ ಮಾಹಿತಿಗಳನ್ನು ಒಂದಕ್ಕೊಂದು ತಾಳೆ ಹಾಕಿದಾಗ ಈ ಕೃತ್ಯಕ್ಕೆ ಬಳಕೆ ಮಾಡಿದ್ದು ಇಕೋ ಕಾರು ಎನ್ನುವುದು ಖಚಿತವಾಗಿದೆ.

Sajjad Bhat main CRPF

ಕಾರು ಪತ್ತೆಯಾದ ನಂತರ ಮಾಲೀಕನನ್ನು ಪತ್ತೆ ಹಚ್ಚಲು ಎನ್‍ಐಎ ಮತ್ತಷ್ಟು ಶ್ರಮ ಪಟ್ಟಿದೆ. ಕಾರು ಎಲ್ಲಿಂದ ಮಾರಾಟವಾಗಿ ಇದರ ಮೊದಲ ಮಾಲೀಕರ ಮಾಹಿತಿಯನ್ನು ಕಲೆ ಹಾಕಿದಾಗ 2011 ರಲ್ಲಿ ಅನಂತ್‍ನಾಗ್‍ನಿಂದ ಜಲೀಲ್ ಅಹ್ಮದ್ ಹಕ್ಕಾನಿ ಅವರು ಈ ಕಾರನ್ನು ಮೊದಲು ಖರೀದಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ವಿಳಾಸದ ಆಧಾರದಲ್ಲಿ ಅವರನ್ನು ವಿಚಾರಿಸಿದಾಗ ನಾನು ಕಾರನ್ನು ಮಾರಾಟ ಮಾಡಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ಈ ಕಾರು 7 ಜನರಿಗೆ ಮಾರಾಟವಾಗಿ ಕೊನೆಯ ಬಾರಿ ಈ ವರ್ಷದ ಫೆ.4 ರಂದು ಅನಂತ್‍ನಾಗ್ ಜಿಲ್ಲೆಯ ಮುಕ್ಬುಲ್ ಬಟ್ ಮಗ ಸಜ್ಜದ್ ಬಟ್ ಖರೀದಿಸಿದ್ದ ವಿಚಾರ ಬೆಳಕಿಗೆ ಬರುತ್ತದೆ.

ಈ ಮಾಹಿತಿ ಸಿಕ್ಕಿದ ಕೂಡಲೇ ಎನ್‍ಐಎ ತಂಡ ಜಮ್ಮು ಕಾಶ್ಮೀರ  ಪೊಲೀಸರ ಸಹಾಯದಿಂದ ಅನಂತ್‍ನಾಗ್ ಜಿಲ್ಲೆಯ ಬಿಜ್‍ಬೆಹ್ರಾಕ್ಕೆ ತೆರಳಿ ಸಜ್ಜದ್ ಬಟ್‍ಗಾಗಿ ಶೋಧಿಸಿದೆ. ಈ ವೇಳೆ ಆತ ನಾಪತ್ತೆಯಾಗಿದ್ದ. ಅಲ್ಲಿಗೆ ಈ ಉಗ್ರರಿಗೆ ಈ ಕಾರು ಸೇರಿದ್ದು ಎನ್ನುವುದು ಖಚಿತವಾಗುತ್ತದೆ. ಶೋಪಿಯನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಸಜ್ಜದ್ ಸದ್ಯಕ್ಕೆ ಜೈಷ್-ಇ-ಮೊಹಮ್ಮದ್ ಸಂಘಟನೆಯ ಸೇರಿದ್ದಾನೆ. ಸಜ್ಜದ್ ಕೈಯಲ್ಲಿ ಬಂದೂಕು ಹಿಡಿದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕೃತ್ಯ ನಡೆಸಲೆಂದೇ 10 ದಿನದ ಹಿಂದೆ ಕಾರನ್ನು ಉಗ್ರರು ಖರೀದಿಸಿದ್ದಾರೆ ಎನ್ನುವ ಬಲವಾದ ಶಂಕೆಯನ್ನು ಎನ್‍ಐಎ ಹೊಂದಿದೆ.

NIA crpf

 

ಫೆ.24 ರಂದು ಉಗ್ರ ಆದಿಲ್ ದಾರ್ ಸ್ಫೋಟಕ ತುಂಬಿದ ಮಾರುತಿ ಇಕೋ ಕಾರನ್ನು ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಗುದ್ದಿದ ಪರಿಣಾಮ 40 ಮಂದಿ ಯೋಧರು ಹುತಾತ್ಮರಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *