ಬೆಂಗಳೂರು: ಮಕ್ಕಳ ಜೀವ ಸಂಜೀವಿನಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ಸರ್ಕಾರ ಚಾಲನೆ ನೀಡಲಾಗಿದೆ. ಮೊದಲ ಹಂತದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಜನವರಿ 19 ರಂದು ರಾಜ್ಯಾದ್ಯಂತ ನಡೆಯಲಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ಶ್ರೀರಾಮುಲು ಪಲ್ಸ್ ಪೋಲಿಯೋ 0-5 ವರ್ಷದ ಎಲ್ಲಾ ಮಕ್ಕಳಿಗೂ ಹಾಕಿಸಿ. ಯಾವುದೇ ಗಾಳಿ ಸುದ್ದಿಗೆ ಕಿವಿ ಕೊಡಬೇಡಿ ಎಂದು ಮನವಿ ಮಾಡಿದರು.
ಈ ಬಾರಿ ಸುಮಾರು 64,65,561 ಮಕ್ಕಳು ಲಸಿಕೆ ಹಾಕಿಸಿಕೊಳ್ಳಲಿದ್ದಾರೆ. ಲಸಿಕೆ ಹಾಕಲು 33,021 ಬೂತ್ ಗಳು, 46,620 ತಂಡಗಳು, 1,09,554 ಕಾರ್ಯಕರ್ತರನ್ನು ನಿಯೋಜನೆ ಮಾಡಲಾಗಿದೆ. 7,105 ಮೇಲ್ವಿಚಾರಕರು, 977 ಸಂಚಾರಿ ತಂಡಗಳು, 2,111 ಟ್ರಾನ್ಸಿಟ್ ತಂಡಗಳನ್ನು ರಚನೆ ಮಾಡಲಾಗಿದೆ. ರಾಜಾದ್ಯಂತ ಬೆಳಗ್ಗೆ 8 ರಿಂದ ಸಂಜೆ 5 ವರೆಗೆ ಲಸಿಕೆ ಹಾಕಲಾಗುತ್ತೆ. ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಲಸಿಕೆ ಹಾಕಲಿದ್ದಾರೆ.
ಬೀದರ್, ಕಲಬುರ್ಗಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ ವಿಜಯಪುರ, ಗದಗದಲ್ಲಿ ಹೆಚ್ಚು ಕೇಂದ್ರಗಳನ್ನು ರಚನೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ 104ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಸ್ಲಮ್, ಗುಡ್ಡಗಾಡು ಪ್ರದೇಶ ಮತ್ತು ಬುಡಕಟ್ಟು ಪ್ರದೇಶದಲ್ಲೂ ಈ ಬಾರಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಕ್ರಮವಹಿಸಲಾಗಿದೆ.
ಇದೇ ಮೊದಲ ಬಾರಿಗೆ ಲಸಿಕೆ ಹಾಕಿಸಲು ಮೊಬೈಲ್ ಆಪ್ ಜಾರಿಗೆ ತಂದಿದ್ದಾರೆ. “Nearby vaccination center Karnataka” ಆಪ್ ಡೌನ್ ಲೋಡ್ ಮಾಡಿಕೊಂಡು ಹತ್ತಿರದ ಲಸಿಕೆ ಕೇಂದ್ರದ ಮಾಹಿತಿ ಪಡೆದು ಮಕ್ಕಳಿಗೆ ಲಸಿಕೆ ಹಾಕಿಸಬಹುದಾಗಿದೆ.