ಕೊಪ್ಪಳ: ಮೌಲ್ಯಮಾಪನ(Valuation) ಸರಿಯಾಗಿ ಮಾಡದೇ ವಿದ್ಯಾರ್ಥಿಯ ಮನವಿಗೂ ಬೆಲೆ ನೀಡದ ಪಿಯು ಬೋರ್ಡ್(PU Board) ಈಗ ಕೋರ್ಟ್ ನೋಟಿಸ್‌ಗೆ ಎಚ್ಚೆತ್ತು ಹೆಚ್ಚುವರಿ ಅಂಕ ನೀಡಲು ಮುಂದಾಗಿದೆ.
ಗಂಗಾವತಿ ತಾಲೂಕಿನ ಶ್ರೀರಾಮನಗರ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿ ಚಂದ್ರಮ್ಮ ದ್ವಿತೀಯ ಪಿಯುಸಿ( Second PUC) ವಿಜ್ಞಾನ ಪರೀಕ್ಷೆ ಬರೆದಿದ್ದಳು. ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ವಿದ್ಯಾರ್ಥಿನಿಗೆ ಶಾಕ್ ಆಗಿತ್ತು. ಜೀವಶಾಸ್ತ್ರ ವಿಷಯದಲ್ಲಿ ಕೇವಲ 29 ಅಂಕ ಹಾಗೂ ಇಂಗ್ಲಿಷ್‌ನಲ್ಲಿ 40 ಅಂಕಗಳನ್ನು ನೀಡಿದ್ದರಿಂದ ಒಟ್ಟು ಶೇ. 65 ರಷ್ಟು ಫಲಿತಾಂಶ ಮಾತ್ರ ಬಂದಿತ್ತು.
Advertisement
Advertisement
ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ನಿವಾಸಿಯಾದ ಡಿ.ಸತ್ಯನಾರಾಯಣ ಅವರ ಪುತ್ರಿಯಾಗಿರುವ ಚಂದ್ರಮ್ಮ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.86, ಪಿಯು ಪ್ರಥಮ ವರ್ಷದಲ್ಲಿ ಶೇ. 98 ರಷ್ಟು ಅಂಕ ಪಡೆದಿದ್ದಳು. ದ್ವಿತೀಯ ಪಿಯುಸಿಯಲ್ಲಿ ಇಷ್ಟು ಕಡಿಮೆ ಅಂಕ ಬರಲು ಸಾಧ್ಯವೇ ಇಲ್ಲ ಎಂದು ತಿಳಿದು ಕಾಲೇಜಿನ ಉಪನ್ಯಾಸಕರು, ಪಾಲಕರು ಪಿಯು ಬೋರ್ಡ್‌ಗೆ ಶುಲ್ಕವನ್ನು ಭರಿಸಿ, ಉತ್ತರ ಪರೀಕ್ಷೆಯ ಪೋಟೋ ಕಾಪಿಯನ್ನು ತರಿಸಿಕೊಂಡಿದ್ದಾರೆ. ಪೋಟೊ ಕಾಪಿಯಲ್ಲಿ ಉತ್ತರ ಸರಿ ಇದ್ದರೂ ಅಂಕ ಸರಿಯಾಗಿ ನೀಡದೇ ಇರುವ ವಿಚಾರ ಗೊತ್ತಾಗಿದೆ. ಕೂಡಲೇ ವಿದ್ಯಾರ್ಥಿನಿ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾಳೆ.
Advertisement
ಮರು ಮೌಲ್ಯಮಾಪನದಲ್ಲಿ ಜೀವಶಾಸ್ತ್ರ ವಿಷಯಕ್ಕೆ ಮಾತ್ರ 27 ಅಂಕಗಳನ್ನು ಹೆಚ್ಚುವರಿಯಾಗಿ ನೀಡಿದ್ದಾರೆ. ಆದರೆ ಇಂಗ್ಲಿಷ್‌ವಿಷಯಕ್ಕೆ ಯಾವುದೇ ರೀತಿಯ ಅಂಕ ನೀಡಿರಲಿಲ್ಲ. ಪೋಟೋ ಕಾಪಿಯಲ್ಲಿ ಗಮನಿಸಿದಂತೆ ಇಂಗ್ಲಿಷ್ ವಿಷಯಕ್ಕೆ ಹೆಚ್ಚುವರಿಯಾಗಿ ಇನ್ನೂ 42 ಅಂಕಗಳನ್ನು ನೀಡಬೇಕಿತ್ತು. ಇದನ್ನೂ ಓದಿ: ಪಿಯು ಬೋರ್ಡ್ ಎಡವಟ್ಟು- ವಿದ್ಯಾರ್ಥಿನಿ ಪಾಸ್ ಆದ್ರೂ ಫೇಲ್
Advertisement
ಪಿಯು ಬೋರ್ಡ್ ಬೇಜವಾಬ್ದಾರಿಗೆ ಬೇಸತ್ತ ವಿದ್ಯಾರ್ಥಿನಿ ಸೆಪ್ಟೆಂಬರ್‌ನಲ್ಲಿ ಗಂಗಾವತಿ ಕೋರ್ಟ್(Gangavathi Court) ಮೊರೆ ಹೋಗಿದ್ದಳು. ಅರ್ಜಿ ಮಾನ್ಯವಾಗಿದ್ದು ಕೋರ್ಟ್ ಮೂಲಕ ನೋಟಿಸ್ ಹೋಗುತ್ತಿದ್ದಂತೆ ಪಿಯು ಬೋರ್ಡ್ ಸಿಬ್ಬಂದಿ ಈಗ ವಿದ್ಯಾರ್ಥಿನಿಯ ಪಾಲಕರಿಗೆ ಕರೆ ಮಾಡಿ ಹೆಚ್ಚುವರಿ 42 ಅಂಕಗಳನ್ನು ನೀಡುತ್ತೇವೆ. ಅರ್ಜಿಯನ್ನು ವಾಪಸ್ ಪಡೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಮೌಲ್ಯಮಾಪನದ ವೇಳೆ ತಪ್ಪಾದರೆ ಮಾನವ ದೋಷ ಎಂದು ಸಣ್ಣ ಸಮರ್ಥನೆ ನೀಡಬಹುದು. ಆದರೆ ಫೋಟೋ ಕಾಪಿ ತರಿಸಿ ತಪ್ಪಾಗಿದೆ ಹೆಚ್ಚುವರಿ ಅಂಕ ನೀಡಿ ಎಂದು ದಾಖಲೆಯೊಂದಿಗೆ ವಿವರಿಸಿದರೂ ಪಿಯು ಬೋರ್ಡ್ ಸಿಬ್ಬಂದಿ ಬೇಜವಾಬ್ದಾರಿ ತೋರಿಸಿದ್ದು ಎಷ್ಟು ಸರಿ? ವಿದ್ಯಾರ್ಥಿನಿಯ ಪೋಷಕರಿಗೆ ಕಾನೂನು ಜ್ಞಾನ ಇದ್ದ ಕಾರಣ ಕೋರ್ಟ್ ಮೊರೆ ಹೋಗಿದ್ದಾರೆ. ಕಾನೂನಿನ ಜ್ಞಾನ ಇಲ್ಲದೇ ಇದ್ದರೆ ಪಿಯು ಬೋರ್ಡ್ ಹೇಳಿದ್ದನ್ನೇ ಕೇಳಬೇಕಿತ್ತು. ಇಂದು ಕಾಲೇಜಿನಲ್ಲಿ ಸೀಟ್ ಪಡೆಯಲು ಅಂಕವೇ ಮಾನದಂಡ ಆಗಿರುವ ಕಾರಣ ಇನ್ನಾದರೂ ಈ ತಪ್ಪಿನಿಂದ ಎಚ್ಚೆತ್ತು ಪಿಯು ಬೋರ್ಡ್ ಸಿಬ್ಬಂದಿ ಅಂಕ ಕುರಿತ ಸಮಸ್ಯೆಗೆ ಸರಿಯಾಗಿ ಸ್ಪಂದಿಸುವುದನ್ನು ಕಲಿಯಬೇಕಿದೆ.