– ಕುಡುಕರ ಅಡ್ಡೆಯಾಗ್ತಿದೆ ಶಾಲಾ ಆವರಣ
ಯಾದಗಿರಿ: ಶಾಲಾ ವ್ಯಾಪ್ತಿಯಿಂದ 100 ಮೀ. ದೂರದಲ್ಲಿ ಮದ್ಯ, ಪಾನ್ ಮಸಾಲಾ, ತಂಬಾಕು ಮಾರಾಟ ಮಾಡಬೇಕು ಎಂಬ ನಿಯಮವಿದೆ. ಅಲ್ಲದೆ ಅನುಮತಿ ಇಲ್ಲದೆ ಮದ್ಯ ಮಾರಾಟ ಮಾಡುವುದು ಸಹ ಅಪರಾಧ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಇಂತಹ ನಿಯಮಗಳಿಗೆ ಯಾರೂ ಕೇರ್ ಮಾಡಲ್ಲ. ಈ ವಿಚಾರ ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಶಾಲೆ ಅಂದ್ರೆ ದೇಗುಲಕ್ಕೆ ಸಮಾನ. ಇಲ್ಲಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಬರುತ್ತಾರೆ. ಶಿಕ್ಷಕರು ದೇವರ ಸಮಾನರಾಗಿ ಮಕ್ಕಳಿಗೆ ಬೋಧಿಸ್ತಾರೆ. ಆದರೆ ಈಗ ಹಣಕ್ಕಾಗಿ ಸರ್ಕಾರಗಳು, ಜಿಲ್ಲಾಡಳಿತ ಯಾವ ಮಟ್ಟಕ್ಕೂ ಇಳಿಯುತ್ತವೆ ಅನ್ನೋದಕ್ಕೆ ಈ ಕಾರ್ಯಾಚರಣೆಯೇ ನಿದರ್ಶನವಾಗಿದೆ.
ಯಾದಗಿರಿಯಲ್ಲಿರೋ ಶಾಲಾ ಆವರಣ ಈಗ ಕುಡುಕರ ಅಡ್ಡೆಯಾಗುತ್ತಿದೆ. ಇಲ್ಲಿ ಯಾವುದೇ ಕಾನೂನನ್ನು ಲೆಕ್ಕಿಸದೇ, ಅಕ್ರಮ ಮದ್ಯ ಮಾರಾಟದ ದಂಧೆ ಜೋರಾಗಿಯೇ ನಡೆಯುತ್ತಿದೆ. ನಾರಾಯಣಪುರ ಠಾಣೆ ವ್ಯಾಪ್ತಿಗೆ ಬರುವ ಹೊರಹಟ್ಟಿ ಎಂಬಲ್ಲಿನ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಚಾಕ್ಲೇಟ್ ಮಾರೋ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಒಂದು ಕಡೆ ಶಾಲಾ ಮಕ್ಕಳಿಗೆ ಚಾಕ್ಲೇಟ್ ಮಾರಾಟ ಮಾಡಿ, ಮತ್ತೊಂದು ಕಡೆ ಎಣ್ಣೆ ಮಾರಾಟ ಮಾಡುತ್ತಿದ್ದಾರೆ.
ರಹಸ್ಯ ಕಾರ್ಯಾಚರಣೆ-1
ಸ್ಥಳ: ಶಾಲೆಯ ಬಳಿ
ಪ್ರತಿನಿಧಿ: ಕ್ವಾಟರ್ ಸಿಗುತ್ತಾ…?
ವ್ಯಾಪಾರಿ: ಇಲ್ಲ… ಯಾವುದೂ ಇಲ್ಲ… ಯಾವ ಊರು ನಿಮ್ದು..?
ಪ್ರತಿನಿಧಿ: ಸಿಗುತ್ತೆ ಅಂತ ಯಾರೋ ಅಂದ್ರು..
ವ್ಯಾಪಾರಿ: ಯಾವ ಊರು ನಿಮ್ಮದು..?
ಪ್ರತಿನಿಧಿ: ಇಲ್ಲಿ ಸಿಗುತ್ತೆ ಅಂತ ಹೇಳಿದ್ರು.. ನಾವು ಶಾಲೆಗೆ ಫೋಟೋ ತೆಗೆದುಕೊಳ್ಳಲು ಬಂದಿದ್ದೀವಿ…
ವ್ಯಾಪಾರಿ: ನಾವು ಕಳ್ಳತನದಿಂದ ಮಾರುತ್ತಿದ್ದೀವಿ.. ಅದಕ್ಕಾಗಿ ಕೇಳಿದ್ವಿ..
ವ್ಯಾಪಾರಿ: ಮಕ್ಕಳೇ ಹೋಗಿ ಹೋಗಿ ನೀವ್…. ನಾವ್ ಏನೋ ಮಾಡಕತ್ತೀವಿ..
ಪ್ರತಿನಿಧಿ: ಯಾವು ಯಾವು ಸಿಗುತ್ತೆ..?
ವ್ಯಾಪಾರಿ: ಹೈವಾರ್ಡ್ಸ್…. ಅದು ಬಿಟ್ಟರೆ ಮತ್ಯಾವುದೂ ಇಲ್ಲ…
ಡಿಸಿ ಮನೆ ಹಿಂದೆಯೇ ಕುಡುಕರ ಸಾಮ್ರಾಜ್ಯ!
ಯಾದಗಿರಿ ನಗರದ ಹೃದಯ ಭಾಗದಲ್ಲಿ ಮತ್ತು ಡಿಸಿ ಅವರ ಸರ್ಕಾರಿ ಮನೆಯಿಂದಿನ ಗಾಂಧಿನಗರದಲ್ಲಿ ರಾತ್ರಿಯಾದ್ರೆ ಸಾಕು ಮನೆಮನೆಯಲ್ಲಿ ಅಕ್ರಮ ಮದ್ಯ ಮಾರಾಟದ್ದೇ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ಇಲ್ಲಿ ಮಧ್ಯರಾತ್ರಿ ಹೋಗಿ ಮನೆ ಬಾಗಿಲು ಬಡಿದು ಎಣ್ಣೆ ಕೊಡಿ ಅಂದ್ರೆ ತಕ್ಷಣ ಕೊಡುತ್ತಾರೆ. ಕೇವಲ ಅಕ್ರಮ ಮದ್ಯ ಮಾತ್ರವಲ್ಲ ಬ್ಯಾನ್ ಆದ ಮತ್ತುಭರಿತ ಪದಾರ್ಥವಾದ ಸ್ಪಿರಿಟ್ ಮಿಥೇನಿಯಂ ಸಹ ಸಿಗುತ್ತದೆ.
ರಹಸ್ಯ ಕಾರ್ಯಾಚರಣೆ-02
ಸ್ಥಳ: ಗಾಂಧಿನಗರ, ಯಾದಗಿರಿ
ಪ್ರತಿನಿಧಿ: ಇದೇನು…?
ಮನೆಯವರು: ಕುಡಿಬೇಕು.. ಇದನ್ನಾ ನೆಕ್ಕಬೇಕು… ವಾಂತಿ ಬರಲ್ಲಾ ಚೆನ್ನಾಗಿರುತ್ತೆ ತಗೊಳ್ಳಿ.. ನಾನು ಸುಳ್ಳು ಹೇಳ್ತಿಲ್ಲ.. ಕುಡಿಯುವಾಗ ಇದನ್ನು ತಗೆದುಕೊಳ್ಳಬೇಕು ವಾಂತಿ ಬರಲ್ಲ…
ಪ್ರತಿನಿಧಿ: ಯಾವುದು ಇದೆ…?
ಮನೆಯವರು: ಓರಿಜಿನಲ್ ಚಾಯ್ಸ್, ಎಂಸಿ ರಮ್…
ಪ್ರತಿನಿಧಿ: ಅವರೆಡು ಬಿಟ್ಟು ಮತ್ಯಾವುದೂ ಇಲ್ವಾ..? ವಿಸ್ಕಿ ಇದೆಯಾ ನೋಡಿ..
ಮನೆಯವರು: ಇಲ್ಲ ಸರ್.. ಎಂಸಿ ರಮ್ ಮಾತ್ರ ಇದೆ…
ಪ್ರತಿನಿಧಿ: ಏನಿದೆ
ಮನೆಯವರು: ಎಂಸಿ ರಮ್
ಪ್ರತಿನಿಧಿ: ಏನೇನಿದೆ..?
ಮನೆಯವರು: ಏನು ಬೇಕು ಹೇಳಿ ನಮಗೆ ನಿದ್ದೆ ಬರುತ್ತಿದೆ.
ಪ್ರತಿನಿಧಿ: ವಿಸ್ಕಿ ಇದೆಯಾ ಅಂತ ಕೇಳ್ದೆ
ಮನೆಯವರು: ಐಬಿ ಇದೆ.. 230 ಆಗುತ್ತೆ
ಪ್ರತಿನಿಧಿ: ಅದನ್ನೇ ಕೊಡಿ..
ಈ ಅಕ್ರಮ ಮದ್ಯಮಾರಾಟ ದಂಧೆಗೆ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಇದೇ ಹೊರಹಟ್ಟಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಮೇಲೆ ದಾಳಿ ಮಾಡಿ, ಕೇಸು ದಾಖಲಿಸಿದ್ದ ಚಂದ್ರು ಮತ್ತು ಗೋವಿಂದ ಎಂಬ ಇಬ್ಬರು ಪೊಲೀಸ್ ಪೇದೆಗಳನ್ನು ಹಿರಿಯ ಅಧಿಕಾರಿಗಳು ರಾತ್ರೋರಾತ್ರಿ ಎತ್ತಂಗಡಿ ಮಾಡಿದ್ದಾರೆ. ಪೇದೆಗಳು ಹಿಡಿದು ತಂದಿದ್ದ ವಾಹನವನ್ನು ಸುಳ್ಳು ದಾಖಲೆ ಸೃಷ್ಟಿ ಮಾಡಿ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮದ್ಯ ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈಗ ಇಂತಹ ಅಕ್ರಮ ಮಾರಾಟದಿಂದ ಇನ್ನಷ್ಟು ಜನ ಯುವಕರು ದಾರಿ ತಪ್ಪುವುದು ಖಚಿತ. ಇದರ ನಡುವೆ ಇಂತಹ ಕಾನೂನು ಬಾಹಿರ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ ಸ್ವತಃ ಪೊಲೀಸ್ ಪೇದೆಗಳನ್ನು ಅವರ ಇಲಾಖೆ ಅಡಗಿಸಿದ್ರೆ ಜನಸಾಮಾನ್ಯರ ಪರಿಸ್ಥಿತಿ ಹೇಗೆ ಎಮದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.