ಜಗತ್ತಿನ ಮೇಲೆ ದೊಡ್ಡಣ್ಣ ಅಮೆರಿಕ ಸುಂಕದ ಸಮರವನ್ನು ಸಾರುತ್ತಿರುವ ಬೆನ್ನಲ್ಲೇ ಇತ್ತ ಭಾರತ ಹಾಗೂ ಚೀನಾದ ನಡುವಿನ ಹೊಸ ಸಂಬಂಧ ಬೆಳೆಯುವ ಆಶಾ ಭಾವನೆ ಮೂಡಿದೆ.
ಚೀನಾದ (China) ಟಿಯಾಂಜಿನ್‌ನಲ್ಲಿ ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಒಕ್ಕೂಟದ (SCO) ಶೃಂಗಸಭೆ ಜಾಗತಿಕ ರಾಜಕೀಯದ ಮಹತ್ವಪೂರ್ಣ ವೇದಿಕೆಯಾಗಿತ್ತು.ಈ ಶೃಂಗಸಭೆಯಲ್ಲಿ ಭಾರತ (India) ಮತ್ತು ಚೀನಾ ನಡುವೆ ನಡೆದ ದ್ವಿಪಕ್ಷೀಯ ಸಭೆ ವಿಶ್ವದ ಗಮನ ಸೆಳೆದಿದೆ.
ದ್ವಿಪಕ್ಷೀಯ ಸಭೆಗೂ ಮೊದಲು ಎರಡು ದೇಶಗಳು ಗಡಿಯಲ್ಲಿ ನಿಯೋಜನೆಗೊಂಡಿದ್ದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಕಳೆದ ವರ್ಷ ಈ ಪ್ರಕ್ರಿಯೆ ಆರಂಭಗೊಂಡಿತ್ತು. ನಂತರ ಅಜಿತ್ ದೋವಲ್, ಜೈಶಂಕರ್ ಚೀನಾಗೆ ಹೋಗಿದ್ದರು. ಚೀನಾದ ಅಧಿಕಾರಿಗಳು ಭಾರತಕ್ಕೆ ಬಂದಿದ್ದರು. ಎರಡೂ ಕಡೆ ಮತ್ತೆ ಸಂಬಂಧ ಸುಧಾರಣೆಯಾದ ಹಿನ್ನೆಲೆಯಲ್ಲಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ (Xi Jinping) ಮಹತ್ವದ ಮಾತುಕತೆ ನಡೆಸಿದರು. ಗಲ್ವಾನ್ ಕಣಿವೆ ಘರ್ಷಣೆಯ ನಂತರ 7 ವರ್ಷಗಳ ಬಳಿಕ ಪ್ರಧಾನಿ ಮೋದಿ ಚೀನಾಕ್ಕೆ ನೀಡಿದ್ದು ವಿಶೇಷವಾಗಿತ್ತು.
ಅಮೆರಿಕ ವಿಧಿಸಿರುವ ಸುಂಕಗಳು ಮತ್ತು ಚೀನಾದ ಅಸ್ಥಿರ ಸಂಬಂಧಗಳ ನಡುವೆಯೂ ಪ್ರಧಾನಿ ಮೋದಿ (Narendra Modi) ಮತ್ತು ಕ್ಸಿ ಜಿನ್‌ಪಿಂಗ್ 50 ನಿಮಿಷಗಳಿಗೂ ಹೆಚ್ಚು ಕಾಲ ದ್ವಿಪಕ್ಷೀಯ ಸಭೆ ನಡೆಸಿದರು.
ಶಾಂಘೈ ಸಹಕಾರ ಶೃಂಗಸಭೆ ಎಂದರೇನು?
ಶಾಂಘೈ ಸಹಕಾರ ಒಕ್ಕೂಟದ ಶೃಂಗಸಭೆಯನ್ನು 2001ರಲ್ಲಿ ಸ್ಥಾಪಿಸಲಾಯಿತು. ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಇರಾನ್ ಮತ್ತು ಮಧ್ಯ ಏಷ್ಯಾದ ದೇಶಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ. ಭಾರತವು 2017ರಲ್ಲಿ ಶಾಂಘೈ ಸಹಕಾರ ಶೃಂಗಸಭೆಯ ಸದಸ್ಯ ರಾಷ್ಟ್ರವಾಯಿತು. 2022-23 ರಲ್ಲಿ ಶಾಂಘೈ ಸಹಕಾರ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿತ್ತು.
ಗಡಿ ಸಂಘರ್ಷಕ್ಕೆ ಕಾರಣ ಏನು?
ಪೂರ್ವ ಲಡಾಖ್‌ನ ಪಾಂಗಾಂಗ್ ತ್ಸೊ ಸರೋವರದ ಉತ್ತರ ದಂಡೆಯಲ್ಲಿ 2020ರಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಮುಖಾಮುಖಿ ಸಂಘರ್ಷ ಆರಂಭವಾಗಿತ್ತು. ಭಾರತದ ಯೋಧರು ಗಸ್ತು ನಡೆಸುತ್ತಿದ್ದ ಸ್ಥಳಕ್ಕೆ ಹೋಗಲು ಸಾಧ್ಯವಾಗದಂತೆ ಚೀನೀಯರು ಬಂಕರ್ ನಿರ್ಮಿಸಿದ್ದರು. ಇಲ್ಲಿಂದ ಸ್ವಲ್ಪ ಉತ್ತರಕ್ಕಿರುವ, ಗಲ್ವನ್ ಕಣಿವೆ ಪ್ರದೇಶದಲ್ಲಿ ಭಾರತವು ತನ್ನ ಭೂಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡುತ್ತಿದೆ ಮತ್ತು ಅಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸುತ್ತಿದೆ ಎಂಬುದು ಚೀನಾದ ಆರೋಪವಾಗಿತ್ತು. ಇಲ್ಲಿಂದ ಚೀನಾ ಹಾಗೂ ಭಾರತದ ನಡುವೆ ಗಡಿ ವಿವಾದ ಪ್ರಾರಂಭವಾಯಿತು.
ಭಾರತಕ್ಕೆ ಚೀನಾದ ನಡುವಿನ ಸಂಬಂಧ ಏಕೆ ಮುಖ್ಯ?
ಭಾರತದ ಸರಕು ಪೂರೈಕೆ ವ್ಯವಸ್ಥೆಯ ಮೇಲೆ ಚೀನಾ ಹಿಡಿತ ಸಾಧಿಸಬಹುದು. ಗಡಿ ವಿವಾದ ಸೇರಿದಂತೆ ಉಭಯ ರಾಷ್ಟ್ರಗಳ ನಡುವೆ ಯಾವುದೇ ಬಿಕ್ಕಟ್ಟು ಉದ್ಭವವಾದರೆ ಭಾರತದ ಮೇಲೆ ಒತ್ತಡ ಹೇರುವುದಕ್ಕೆ ಇದನ್ನೇ ಮೂಲ ತಂತ್ರವಾಗಿಸಬಹುದು. ರಫ್ತಿನ ಮೇಲೆ ಚೀನಾ ನಿರ್ಬಂಧ ಹೇರಿದರೆ ಅದು ಭಾರತದ ಅರ್ಥವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಈ ಹಿಂದೆ ವಾಹನಗಳ ತಯಾರಿಕೆಗೆ ಪ್ರಮುಖವಾಗಿ ಬೇಕಾಗಿದ್ದ ಖನಿಜ ಲೋಹಗಳ ಮೇಲೆ ಚೀನಾ ನಿರ್ಬಂಧ ಹೇರಿತ್ತು. ಇದು ಭಾರತದ ವಾಹನ ಉದ್ಯಮದ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಬಹಳ ಮುಖ್ಯವಾಗಿದೆ.
ಭಾರತ ಹಾಗೂ ಚೀನಾ ವಿಶ್ವದ ಅತ್ಯಂತ ಜನಸಂಖ್ಯೆಯುಳ್ಳ ರಾಷ್ಟ್ರಗಳಾಗಿರುವುದರ ಜೊತೆಗೆ ಆರ್ಥಿಕ ಹಾಗೂ ಸೇನಾ ಶಕ್ತಿಯ ವಿಚಾರದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಭಾವಶಾಲಿ ರಾಷ್ಟ್ರಗಳಾಗಿವೆ. ಹೀಗಾಗಿ ಎರಡೂ ದೇಶಗಳಿಗೂ ಈಗ ಸಹಕಾರದಿಂದ ಮುಂದುವರಿಯಲು ಒಪ್ಪಿಗೆ ನೀಡಿವೆ.
ದ್ವಿಪಕ್ಷೀಯ ಸಭೆಯಲ್ಲಿ ಏನೇನು ಚರ್ಚೆ ನಡೆದಿದೆ?
ಗಡಿಯಲ್ಲಿ ಶಾಂತಿ:
ವಿವಾದಿತ ಗಡಿ ಪ್ರದೇಶಗಳಲ್ಲಿ ಸಂಪರ್ಕ ಕಡಿತ ಮತ್ತು ಶಾಂತತೆಯನ್ನು ಪುನಃಸ್ಥಾಪಿಸುವಲ್ಲಿ ಆಗಿರುವ ಪ್ರಗತಿಯ ಬಗ್ಗೆ ಪರಸ್ಪರ ಚರ್ಚೆಯಾಗಿದೆ. ಅಸ್ತಿತ್ವದಲ್ಲಿರುವ ರಾಜತಾಂತ್ರಿಕ ಮತ್ತು ಮಿಲಿಟರಿ ಕಾರ್ಯವಿಧಾನಗಳ ಮೂಲಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡವು. ಈ ವೇಳೆ ಪ್ರಧಾನಿ ಮೋದಿ ಅವರು ಗಡಿಯಲ್ಲಿ ಶಾಂತಿಯು ದ್ವಿಪಕ್ಷೀಯ ಸಂಬಂಧಗಳ ಮತ್ತಷ್ಟು ಬೆಳವಣಿಗೆಗೆ ಅತ್ಯಗತ್ಯ ಎಂದು ಒತ್ತಿ ಹೇಳಿದರು.
ಜಾಗತಿಕ ಸಂಸ್ಥೆಗಳಿಗೂ ಗುದ್ದು
ಶೃಂಗಸಭೆಯಲ್ಲಿ, ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಪ್ರಸ್ತುತ ಜಾಗತಿಕ ಸಂಸ್ಥೆಗಳು, ವಿಶೇಷವಾಗಿ ವಿಶ್ವ ವ್ಯಾಪಾರ ಸಂಸ್ಥೆ (WTO) ಮತ್ತು ವಿಶ್ವಸಂಸ್ಥೆ (UN) ಕಾರ್ಯಕ್ಷಮತೆ ಮತ್ತು ಪ್ರಸ್ತುತತೆಯಲ್ಲಿ ಕುಂಠಿತವಾಗುತ್ತಿವೆ ಎಂದು ಒತ್ತಿ ಹೇಳಿದರು.
ಉಭಯ ರಾಷ್ಟ್ರದ ನಾಯಕರು ಏಷ್ಯನ್ ಶತಮಾನ ಎಂಬ ಪರಿಕಲ್ಪನೆಯ ಬಗ್ಗೆ ಮಾತನಾಡಿದರು. ಡ್ರ್ಯಾಗನ್(ಚೀನಾ) ಮತ್ತು ಆನೆ(ಭಾರತ) ಜೊತೆಯಾಗಿ ನೃತ್ಯ ಮಾಡಿದರೆ ಎರಡೂ ದೇಶಗಳಿಗೆ ಲಾಭ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು.
ಏಷ್ಯನ್ ಶತಮಾನ ಪರಿಕಲ್ಪನೆ ಎಂದರೇನು?
ಏಷ್ಯನ್ ಶತಮಾನ ಎಂಬುದು 21ನೇ ಶತಮಾನದಲ್ಲಿ ಚೀನಾ, ಭಾರತ ಮತ್ತು ಇತರ ಏಷ್ಯಾದ ದೇಶಗಳು ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಜಾಗತಿಕ ಮಟ್ಟದಲ್ಲಿ ಪ್ರಬಲ ಪಾತ್ರವಹಿಸುವುದನ್ನು ಸೂಚಿಸುವ ಪರಿಕಲ್ಪನೆಯಾಗಿದೆ.
ಏನಿದು ಪಂಚಶೀಲ ನೀತಿಗೆ ಸಹಿ:
1947ರಲ್ಲಿ ಭಾರತ ಸ್ವತಂತ್ರಗೊಂಡು, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ರೂಪುಗೊಂಡ ಬಳಿಕ, ಉಭಯ ದೇಶಗಳು ಪರಸ್ಪರ ವ್ಯವಹಾರಕ್ಕೆ ಕೆಲವು ನಿಯಮಗಳನ್ನು ರೂಪಿಸುವ ಕುರಿತು ಕಾರ್ಯಾಚರಿಸಲು ಆರಂಭಿಸಿದವು.
ಎಪ್ರಿಲ್ 29, 1954ರಂದು, ಭಾರತ ಮತ್ತು ಚೀನಾಗಳು ಟಿಬೆಟ್ ಜೊತೆಗಿನ ವ್ಯಾಪಾರ ಮತ್ತು ಸಂಬಂಧದ ಕುರಿತು ಒಂದು ಒಪ್ಪಂದಕ್ಕೆ ಸಹಿ ಹಾಕಿದವು. ಇದು ಪಂಚಶೀಲ ಅಂದರೆ, ಶಾಂತಿಯುತ ಸಹಬಾಳ್ವೆಗಾಗಿ ಐದು ನೀತಿಗಳಿಗೆ ಹಾದಿ ಮಾಡಿಕೊಟ್ಟಿತು.
ಪಂಚಶೀಲ ನೀತಿಗಳೇನು?
1.ಪರಸ್ಪರ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಗೌರವ
ಉಭಯ ದೇಶಗಳು ಪರಸ್ಪರರ ಭೂ ಪ್ರದೇಶ ಮತ್ತು ಸ್ವಾತಂತ್ರ್ಯಕ್ಕೆ ಗೌರವ ನೀಡಬೇಕು. ಪರಸ್ಪರ ಭೂ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು, ಅಥವಾ ಗಡಿಗಳನ್ನು ಬದಲಾಯಿಸಲು ಪ್ರಯತ್ನ ನಡೆಸಬಾರದು.
2.ಪರಸ್ಪರರ ಮೇಲೆ ಆಕ್ರಮಣಕಾರಿ ಮನೋಭಾವ ಸಲ್ಲದು
ಎರಡು ದೇಶಗಳ ಪೈಕಿ, ಯಾವುದೇ ರಾಷ್ಟ್ರಗಳು ಒಂದರ ಮೇಲೆ ಒಂದು ದಾಳಿ ಮಾಡುವುದಾಗಲಿ, ಬೆದರಿಸುವುದಾಗಲಿ ಮಾಡಬಾರದು. ಶಾಂತಿಯನ್ನು ಕಾಪಾಡಿ, ಸಾರ್ವಜನಿಕರು ಮತ್ತು ಸ್ಥಿರತೆಗೆ ತೊಂದರೆ ಉಂಟುಮಾಡುವಂತಹ ಯುದ್ಧಗಳನ್ನು ತಪ್ಪಿಸಬೇಕು.
3.ಆಂತರಿಕ ವಿಚಾರಗಳಲ್ಲಿ ಮಧ್ಯ ಪ್ರವೇಶಿಸಬಾರದು
ಭಾರತ ಮತ್ತು ಚೀನಾಗಳು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಬೇಕು. ಒಂದು ದೇಶದ ರಾಜಕೀಯ, ಸಂಸ್ಕೃತಿ ಅಥವಾ ಆಂತರಿಕ ನಿರ್ಧಾರಗಳಲ್ಲಿ ಇನ್ನೊಂದು ದೇಶ ಮಧ್ಯ ಪ್ರವೇಶ ಮಾಡಬಾರದು.
4.ಸಮಾನತೆಯಿಂದ ಪ್ರಯೋಜನ
ಭಾರತ ಮತ್ತು ಚೀನಾಗಳು ಸಮಾನ ರಾಷ್ಟ್ರಗಳು. ಎರಡೂ ದೇಶಗಳು ವ್ಯಾಪಾರ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಿ, ಪರಸ್ಪರ ಪ್ರಯೋಜನಗಳನ್ನು ಹಂಚಿಕೊಂಡು, ಅಭಿವೃದ್ಧಿಗೆ ನೆರವಾಗಬೇಕು.
5.ಶಾಂತಿಯುತ ಸಹಬಾಳ್ವೆ
ಪರಸ್ಪರ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಭಾರತ ಮತ್ತು ಚೀನಾಗಳು ಶಾಂತಿಯುತವಾಗಿ ಬಾಳಬೇಕು. ಪರಸ್ಪರ ರಾಷ್ಟ್ರಗಳ ಕುರಿತು ಗೌರವದ ಭಾವನೆ ಹೊಂದಿ, ಎದುರಾಗುವ ಯಾವುದೇ ಸಮಸ್ಯೆಯನ್ನು ಮಾತುಕತೆಗಳ ಮೂಲಕವೇ ಪರಿಹರಿಸಬೇಕು. ಬದಲಾಗಿ ಯಾವುದೇ ಯುದ್ಧದ ನಿರ್ಧಾರವನ್ನು ಕೈಗೆತ್ತಿಕೊಳ್ಳಬಾರದು.