ಇತ್ತೀಚಿಗೆ ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹೃದಯಾಘಾತ (Heart Attack), ಹೃದಯ ಸ್ತಂಭನಕ್ಕೆ ಬಲಿಯಾಗುವವರ ಸಂಖ್ಯೆಯೂ ದಿನೇ ದಿನೇ ಏರುತ್ತಿದೆ. ಆಧುನಿಕ ಜೀವನಶೈಲಿ, ಒತ್ತಡದ ಬದುಕು, ಹಿಡಿತಕ್ಕೆ ಸಿಗದ ಬಾಯಿಚಪಲ, ಶಿಸ್ತುಕ್ರಮವಿಲ್ಲದ ಜೀವನಶೈಲಿ, ದೇಹದಂಡನೆಗೆ ಸೋಂಬೇರಿತನ, ವ್ಯಾಯಾಮವಿಲ್ಲದ ದಿನಚರಿ ಈ ಹೃದ್ರೋಗಕ್ಕೆ ಪ್ರಮುಖ ಕಾರಣವಾಗಿದೆ. ಕೆಲಸಕ್ಕೆ ಯಂತ್ರಗಳ ಅತಿಯಾದ ಅವಲಂಬನೆಯಿಂದ ದೇಹಕ್ಕೆ ಕಸರತ್ತಿಲ್ಲದಂತಾಗಿದೆ. ಎಣ್ಣೆಯಲ್ಲಿ ಕರಿದ ತಿನಿಸು ಮತ್ತು ಜಂಕ್‌ಫುಡ್‌ಗಳ ಕಡೆಗಿನ ಆಕರ್ಷಣೆ ಜಾಸ್ತಿಯಾಗಿದೆ. ವ್ಯಾಯಾಮವನ್ನೇ ಮಾಡದೇ ಜಿಡ್ಡುಭರಿತ ಆಹಾರ ಸೇವಿಸುತ್ತಾ ಜೀವನ ಸಾಗಿಸುತ್ತಿರುವುದರಿಂದ ಕೊಬ್ಬು ದೇಹದಲ್ಲೇ ಉಳಿದು, ರಕ್ತದ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟ ಮಿತಿಮೀರಿ ಹೆಚ್ಚಾಗುತ್ತದೆ. ಇದರಿಂದ ರಕ್ತನಾಳಗಳಲ್ಲಿ ಕೊಬ್ಬುತುಂಬಿ, ರಕ್ತಸಂಚಾರಕ್ಕೆ ಅಡಚಣೆಯಾಗಿ ಎದೆನೋವು ಹಾಗೂ ಹೃದಯಾಘಾತ ಸಂಭವಿಸಲು ಕಾರಣವಾಗುತ್ತಿದೆ. ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಜೊತೆಜೊತೆಗೆ ಆಸ್ಪತ್ರೆಗಳು, ವೈದ್ಯರೂ ಹೆಚ್ಚುತ್ತಿದ್ದಾರೆ.
ಜನಪ್ರಿಯ ನಟ ಪುನೀತ್ ರಾಜ್‌ಕುಮಾರ್ ಅವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತು. ಅಲ್ಲಿಂದೀಚೆಗೆ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗೃತಿ ಹೆಚ್ಚಾಯಿತು. ಈಗ ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 30 ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಎಲ್ಲರೂ ಯುವಕರು ಎಂಬುದು ಆತಂಕಕಾರಿ ವಿಚಾರ. ನಿಂತಲ್ಲಿ, ಕುಂತಲ್ಲಿ, ನೃತ್ಯ ಮಾಡುತ್ತಲೇ ಕುಸಿದು ಬೀಳುವುದು. ಊಟ ಮಾಡುವಾಗ, ನಡೆಯುವಾಗ, ವಾಹನಗಳಲ್ಲಿ ಪ್ರಯಾಣಿಸುವಾಗ, ಕೆಲಸ ಮಾಡುತ್ತಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಈ ಹೊತ್ತಿನಲ್ಲೇ ಬಾಲಿವುಡ್ ಖ್ಯಾತ ನಟಿಯೊಬ್ಬರ ಹಠಾತ್ ಸಾವು ಕೂಡ ಇನ್ನಷ್ಟು ಆತಂಕ ಮೂಡಿಸಿದೆ. ಯುವಸಮುದಾಯದ ಈಗಿನ ಜೀವನಶೈಲಿ ಬಗ್ಗೆ ವೈದ್ಯರೇ ಕಳವಳ ವ್ಯಕ್ತಪಡಿಸಿದ್ದಾರೆ. ಬಡತನದಲ್ಲಿ ಬದಕೋದು ಕಷ್ಟ ಎಂಬ ಕಾಲವೊಂದಿತ್ತು. ಆದರೆ, ಈಗ ಆರೋಗ್ಯವಂತರಾಗಿ ಜೀವಿಸುವುದೇ ದುಸ್ತರ ಎನ್ನುವಂತಾಗಿದೆ. ಇದನ್ನೂ ಓದಿ: ಹಾಸನ | ಕಳೆದ 24 ಗಂಟೆಯಲ್ಲಿ ಹೃದಯಾಘಾತದಿಂದ ನಾಲ್ವರು ಸಾವು – ಸಾವಿನ ಸಂಖ್ಯೆ 31ಕ್ಕೆ ಏರಿಕೆ
ಹಿಂದೆಲ್ಲ ವಯಸ್ಕರಲ್ಲಿ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಭಾದಿಸುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳು, ಯುವಕರೆನ್ನದೇ ಎಲ್ಲಾ ವಯೋಮಾನದವರನ್ನೂ ಹೃದ್ರೋಗ ಸಮಸ್ಯೆಗಳು ಕಾಡುತ್ತಿರುವುದು ಆತಂಕ ಮೂಡಿಸಿದೆ. ಅಷ್ಟಕ್ಕೂ ಏನಿದು ಹೃದಯ ಸಂಬಂಧಿ ಕಾಯಿಲೆ? ಹೃದ್ರೋಗ ತೀವ್ರವಾಗಿ ಕಾಡುತ್ತಿರೋದ್ಯಾಕೆ? ಅದನ್ನು ನಿಯಂತ್ರಿಸುವುದು ಹೇಗೆ? ಆಹಾರ ಕ್ರಮ ಏನು? ಜೀವನಶೈಲಿ ಹೇಗಿರಬೇಕು? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಮಾಹಿತಿ.
ಹೃದಯದ ಬಗ್ಗೆ ನಿಮಗೆಷ್ಟು ಗೊತ್ತು?
ಮನುಷ್ಯ ಜೀವಿಸುವುದಕ್ಕೆ ಹೃದಯ ತುಂಬಾ ಅವಶ್ಯಕ. ಹೃದಯವು ಎಡ ಮತ್ತು ಬಲ ಹೃತ್ಕರ್ಷ (Right Atrium) ಮತ್ತು ಹೃತ್ಕುಕ್ಷಿಗಳೆಂಬ (Right Ventricle) ನಾಲ್ಕು ಕೋಣೆಗಳನ್ನು ಹೊಂದಿದೆ. ಬಲ ಹೃತ್ಕರ್ಣವು ದೇಹದ ಎಲ್ಲಾ ಭಾಗಗಳಿಂದಲೂ ಮಲಿನ ರಕ್ತ ಪಡೆದು ಕ್ಷಣಕಾಲ ಶೇಖರಿಸಿ ಆನಂತರ ಅದನ್ನು ಬಲ ಹೃತ್ಕುಕ್ಷಿಗೆ ರವಾನಿಸುತ್ತದೆ. ಅಲ್ಲಿಂದ ರಕ್ತವು ಶ್ವಾಸಕೋಶಗಳಿಗೆ ಸಾಗುತ್ತದೆ. ರಕ್ತದಲ್ಲಿನ ಅಂಗಾರಾಮ್ಲ ಶ್ವಾಸಕೋಶದಲ್ಲಿನ ಗಾಳಿಯೊಳಗೆ ಸೇರಿ, ಗಾಳಿಯಲ್ಲಿನ ಆಮ್ಲಜನಕ ರಕ್ತದೊತ್ತಡಕ್ಕೆ ಹೀರಲ್ಪಡುತ್ತದೆ. ಹೀಗೆ ಶುದ್ಧಗೊಂಡ ರಕ್ತ ಎಡ ಹೃತ್ಕರ್ಣಕ್ಕೆ ಆನಂತರ ಎಡ ಹೃತ್ಕುಕ್ಷಿಗೆ ಹೋಗುತ್ತದೆ. ಬಳಿಕ ಎಡ ಹೃತ್ಕುಕ್ಷಿಯು (Left Ventricle) ಬಲವಾಗಿ ಸಂಕುಚಿಸಿ ರಕ್ತವನ್ನು ಅಯೋರ್ಟಾದ ಮೂಲಕ ದೇಹದ ಮೂಲೆಮೂಲೆಗೂ ತಳ್ಳುತ್ತದೆ. ಎರಡೂ ಹೃತ್ಕರ್ಣಗಳು ಏಕಕಾಲದಲ್ಲಿ ಸಂಕುಚಿಸುತ್ತವೆ. ಆಗ ಹೃತ್ಕುಕ್ಷಿಗಳೊಂದಿಗೆ ಸಂಬಂಧ ಕಲ್ಪಿಸುವ ದ್ವಿದಳ ಮತ್ತು ತ್ರಿದಳ ಕವಾಟಗಳು ತೆರೆದುಕೊಂಡು ಅಯಾ ಹೃತ್ಕುಕ್ಷಿಗಳಲ್ಲಿ ರಕ್ತವು ತುಂಬಿಕೊಳ್ಳುತ್ತದೆ. ಅಲ್ಲಿಯ ಒತ್ತಡವು ಏರುತ್ತಿದ್ದಂತೆ ದ್ವಿದಳ ಮತ್ತು ತ್ರಿದಳ ಕವಾಟಗಳು ಒಟ್ಟಿಗೇ ಬಲವಾಗಿ ಮುಚ್ಚಿಕೊಂಡು ಹೃದಯದ ಮೊದಲನೆಯ ‘ಲಬ್’ ಶಬ್ದವನ್ನು ಉಂಟು ಮಾಡುತ್ತದೆ. ಆ ಒಂದು ಶಬ್ದಕ್ಕೆ ದೇಹದಲ್ಲಿ ಇಷ್ಟೆಲ್ಲಾ ಕಾರ್ಯಗಳು ನಡೆಯುತ್ತವೆ.
ಮತ್ತೆ ಅಯೋರ್ಟಾ (ಉಸಿರು-ನೆತ್ತರಗೊಳವೆ or ಮಹಾಪಧಮನಿ) ಮತ್ತು ಶ್ವಾಸಕೋಶದ ಅಪಧಮನಿ ಆರ್ಟರಿಗಳ ಮೂಲಕ ದೇಹದ ವಿವಿಧ ಭಾಗಗಳಿಗೆ ಶುದ್ಧ ರಕ್ತವೂ ಶ್ವಾಸಕೋಶಗಳಿಗೆ ಮಲಿನ ರಕ್ತವೂ ಸಾಗುತ್ತದೆ. ಅಯೋರ್ಟಾ ಮತ್ತು ಶ್ವಾಸಕೋಶದ ರಕ್ತನಾಳಗಳಲ್ಲಿ ತುಂಬಿದ ರಕ್ತವು ಹಿಂತಿರುಗದಂತೆ ಅವುಗಳ ಕವಾಟಗಳು ಏಕಕಾಲದಲ್ಲಿ ಮುಚ್ಚಿದಾಗ ಹೃದಯದ 2ನೇ ಶಬ್ದ ‘ಡಬ್’ ಉಂಟಾಗುತ್ತದೆ. ಇದಿಷ್ಟೂ ಕ್ಷಣಮಾತ್ರದಲ್ಲಿ ಆಗುವಂತಹ ಕೆಲಸಗಳು. ಇದನ್ನೂ ಓದಿ: ಹೃದಯಾಘಾತಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ – ನಾಲ್ವರು ಮೊಮ್ಮಕ್ಕಳಿಗೆ ಬೈಪಾಸ್ ಸರ್ಜರಿ!
‘ಲಬ್ ಡಬ್’ ನಿಮಿಷಕ್ಕೆ ಎಷ್ಟು ಬಾರಿ?
ಆರೋಗ್ಯವಂತರಲ್ಲಿ ‘ಲಬ್ ಡಬ್’ ಪುನರಾವರ್ತನೆಯು ನಿಮಿಷಕ್ಕೆ ಸರಾಸರಿ 72 ಬಾರಿ ಉಂಟಾಗುತ್ತದೆ.
ಹೃದಯ ನಿಮಿಷಕ್ಕೆ ಎಷ್ಟು ರಕ್ತ ತಳ್ಳುತ್ತೆ?
ಹೃದಯವು ಪ್ರತಿ ನಿಮಿಷಕ್ಕೆ ಸುಮಾರು 5 ಲೀಟರ್‌ನಷ್ಟು ರಕ್ತವನ್ನು ತಳ್ಳತ್ತದೆ. 70 ವರ್ಷದ ಜೀವಿತಾವಧಿಯಲ್ಲಿ 70 ಕೋಟಿ ಲೀಟರ್‌ನಷ್ಟು ರಕ್ತವನ್ನು ಎಡಬಿಡದೇ ತಳ್ಳುವಷ್ಟು ಸಾಮರ್ಥ್ಯ ಹೊಂದಿದೆ.
ಹೃದಯಕ್ಕೆ ಬರುವ ರೋಗಗಳು ಯಾವುವು?
* ಹೃದಯದ ಗೋಡೆಗಳಲ್ಲಿ ರಂಧ್ರ, ನಿಶ್ಯಕ್ತ ಕವಾಟಗಳು ಇತ್ಯಾದಿ (ಜನ್ಮದತ್ತ ರೋಗಗಳು).
* ರುಮ್ಯಾಟಿಕ್ ಕಾರ್ಡೈಟಿಸ್ (ಬಾಲ್ಯದಲ್ಲಿನ ಇತರೆ ಕಾಯಿಲೆಗಳಿಂದ ಹೃದಯದ ಮೇಲಾಗುವ ಆಘಾತ).
* ಸಿಫಿಲಿಸ್‌ನಿಂದ ಬರುವ ಅಯೋರ್ಟಾದ ಕವಾಟ ರೋಗ (ಯೌವನದ ಲೈಂಗಿಕ ರೋಗಗಳಿಂದ ಬರುವ ನ್ಯೂನತೆ).
* ವೃದ್ಧರನ್ನು ಕಾಡುವ ಕೊರೊನರಿ ರಕ್ತನಾಳಗಳ ಕಾಯಿಲೆಗಳು.
* ಹೃದಯಸ್ತಂಭನ, ಹೃದಯದಲ್ಲಿ ನೀರುತುಂಬಿಕೊಳ್ಳುವುದು.
ಹೃದಯಾಘಾತ ಎಂದರೇನು?
ರಕ್ತನಾಳದ ಒಳಪದರದ ಅಡಿಯಲ್ಲಿ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು ಶೇಖರಣೆಗೊಳ್ಳುತ್ತಾ ಸಾಗುತ್ತವೆ. ಇವು ಶೇ.70-90ಕ್ಕೆ ಏರಬಹುದು. ಒಳಪದರ ಹಿಗ್ಗುತ್ತಾ ಬಲೂನಿನಂತಾಗಿ ಒಡೆದುಹೋಗುತ್ತದೆ. ಕೊಬ್ಬು ಹೊರಚೆಲ್ಲಿ ರಕ್ತದೊಡನೆ ಸೇರಿಕೊಳ್ಳುತ್ತದೆ. ರಕ್ತವು ಹೆಪ್ಪುಗಟ್ಟಿ ಪರಿಚಲನೆಗೆ ಶೇ.100ಕ್ಕೆ ಅಡಚಣೆ ಉಂಟು ಮಾಡುತ್ತದೆ. ಆಗ ಸ್ನಾಯುವಿನ ಪೋಷಣೆ ಸಂಪೂರ್ಣ ನಿಂತುಹೋಗುತ್ತದೆ. ಪರಿಣಾಮವಾಗಿ ವಿಪರೀತ ನೋವು, ಬೆವರು, ಗಾಬರಿ, ಮಂಕು, ಆತಂಕ ಏಕಕಾಲಕ್ಕೆ ಉದ್ಭವಿಸುತ್ತದೆ. ಈ ಸ್ಥಿತಿಗೆ ಹೃದಯಾಘಾತ ಎನ್ನುವುದು. ಆಗ ತಕ್ಷಣ ಚಿಕಿತ್ಸೆ ಸಿಗದಿದ್ದಲ್ಲಿ ಸಾವು ಸಂಭವಿಸಬಹುದು.
ತೀವ್ರ ಹೃದಯಾಘಾತವಾದ್ರೆ ಏನಾಗುತ್ತೆ?
ಆಘಾತಕ್ಕೆ ಒಳಗಾದ ಹೃದಯದ ಸ್ನಾಯುವಿನ ಪ್ರಮಾಣ ಶೇ.40-50 ಪ್ರಮಾಣದಷ್ಟು ಸಣ್ಣದಾಗಿದ್ದರೆ ತಕ್ಷಣದ ಚಿಕಿತ್ಸೆ ಸಿಕ್ಕರೆ ಬದುಕುಳಿಯಬಹುದು. ಆದರೆ, ಆ ಪ್ರಮಾಣ ಇನ್ನೂ ಹೆಚ್ಚಿದ್ದರೆ ಸಾವು ಸಂಭವಿಸಬಹುದು. ಹೃದಯಾಘಾತದ ಪ್ರಮಾಣ ಕಡಿಮೆಯಿದ್ದು, ಅದು ಎಡ ಹೃತ್ಕುಕ್ಷಿಯ ಸ್ನಾಯುವನ್ನು ಒಳಗೊಂಡಿದ್ದರೆ ಅಥವಾ ನಾಳವೇ ಕಿರಿದಾದರೆ, ಸಾವಿನ ಪ್ರಮಾಣ ಹೆಚ್ಚಿರುತ್ತದೆ. ಈ ಹಂತದಲ್ಲಿ ಮಿದುಳಿಗೆ ರಕ್ತ ಸರಿಯಾಗಿ ತಲುಪದೇ ವ್ಯಕ್ತಿ ಕೋಮಾ ಸ್ಥಿತಿಗೆ ತಲುಪಿ ಕೊನೆಗೆ ಬ್ರೈನ್ ಡೆಡ್ ಆಗಬಹುದು.
ಹೃದಯಾಘಾತದಿಂದ ಯುವಜನರು ಏಕೆ ಸಾಯುತ್ತಿದ್ದಾರೆ?
ಒಂದು ಕಾಲದಲ್ಲಿ 50 ಮತ್ತು 60 ರ ಹರೆಯದವರಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡುಬರುತ್ತಿತ್ತು. ಈಗ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತಿದೆ. ಪ್ರಪಂಚದಾದ್ಯಂತ ಈ ಪ್ರಮಾಣ ಸರಿಸುಮಾರು 6-10% ರಷ್ಟಿದೆ. ಭಾರತದಲ್ಲಿ ಮಾತ್ರ ಈ ಸಂಖ್ಯೆಗಳು ಇನ್ನೂ ಹೆಚ್ಚು ಕಳವಳಕಾರಿಯಾಗಿದೆ. ಯುವಜನರು ಪಾಶ್ಚಿಮಾತ್ಯೀಕರಣಕ್ಕೆ ಹೆಚ್ಚು ಆಕರ್ಷಿತರಾಗಿದ್ದು, ಜೀವನ ಕ್ರಮವೇ ಬದಲಾಗಿದೆ. ಹೊಗೆಸೊಪ್ಪು ಸೇವನೆ, ಸಿಗರೇಟ್ ಚಟ, ಮಧುಮೇಹ ನಿಯಂತ್ರಣದಲ್ಲಿ ಇಡದೇ ಇರುವುದು, ಸ್ಥೂಲ ಶರೀರ, ರಕ್ತದ ಏರೊತ್ತಡ, ಮಾನಸಿಕ ಒತ್ತಡ, ಮೊಬೈಲ್ ಗೀಳಿನಿಂದ ದೈಹಿಕ ಚಟುವಟಿಕೆ ಇಲ್ಲದಿರುವುದು, ನಿತ್ಯ 3 ಗಂಟೆಗಿಂತ ಕಡಿಮೆ ನಿದ್ರೆ ಮಾಡುವುದು (ಇದರಿಂದ ಶೇ.20 ರಷ್ಟು ಹೃದಯಾಘಾತದ ಅಪಾಯವಿರುತ್ತದೆ), ವಾಯುಮಾಲಿನ್ಯ ಇತ್ಯಾದಿಗಳು ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ. ಇದನ್ನೂ ಓದಿ: ವಯಸ್ಕರಲ್ಲಿ ದಿಢೀರ್ ಹೃದಯಾಘಾತಕ್ಕೆ ಕೋವಿಡ್ ವ್ಯಾಕ್ಸಿನ್ ಕಾರಣವಲ್ಲ; ಐಸಿಎಂಆರ್-ಏಮ್ಸ್ ವರದಿಯಲ್ಲಿ ಸ್ಪಷ್ಟನೆ
ಜೀವನಶೈಲಿ
ಈ ಆತಂಕಕಾರಿ ಬದಲಾವಣೆಯ ಹಿಂದಿನ ಪ್ರಮುಖ ಚಾಲಕ ಆಧುನಿಕ ಜೀವನಶೈಲಿ. ಇಂದು ಅನೇಕ ಯುವಕರು ಗಂಟೆಗಳ ಕಾಲ ಮೇಜಿನ ಬಳಿ, ಪರದೆಗಳ ಮುಂದೆ ಅಥವಾ ಪ್ರಯಾಣದಲ್ಲಿ ಕುಳಿತುಕೊಳ್ಳುತ್ತಾರೆ. ಜಡ ಜೀವನ, ಸಂಸ್ಕರಿಸಿದ, ಹೆಚ್ಚಿನ ಸಕ್ಕರೆ ಮತ್ತು ಹೆಚ್ಚಿನ ಕೊಬ್ಬಿನ ಆಹಾರಗಳಿಂದ ತುಂಬಿದ ಆಹಾರದೊಂದಿಗೆ, ಬೊಜ್ಜಿನ ಅಪಾಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಪ್ರತಿಯಾಗಿ, ಬೊಜ್ಜು ಅಧಿಕ ರಕ್ತದೊತ್ತಡ, ಟೈಪ್ 2 ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇವೆಲ್ಲವೂ ಹೃದಯಕ್ಕೆ ಅಪಾಯಕಾರಿ. ಇಂದಿನ ವೇಗದ ಜಗತ್ತಿನಲ್ಲಿ, ಅನೇಕ ಯುವಕರು ಹೆಚ್ಚು ಹೆಚ್ಚು ಜಡ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೃದ್ರೋಗ ತಜ್ಞರು ವಿವರಿಸುತ್ತಾರೆ.
ಮಾನಸಿಕ ಆರೋಗ್ಯ ಮತ್ತು ಒತ್ತಡ
ಮಾನಸಿಕ ಆರೋಗ್ಯವು ಸಹ ಪ್ರಬಲ ಪಾತ್ರವನ್ನು ವಹಿಸುತ್ತದೆ. ದೀರ್ಘಕಾಲದ ಒತ್ತಡ, ಆತಂಕ ಮತ್ತು ಖಿನ್ನತೆಯು ಕಾರ್ಟಿಸೋಲ್‌ನಲ್ಲಿನ ಉಲ್ಬಣಗಳಂತಹ ಹಾರ್ಮೋನುಗಳ ಬದಲಾವಣೆಗಳಿಗೆ ಕಾರಣವಾಗಬಹುದು, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹೃದಯವನ್ನು ಒತ್ತಡಗೊಳಿಸುತ್ತದೆ. ಒತ್ತಡವು ಹೆಚ್ಚಾಗಿ ಜನರನ್ನು ಧೂಮಪಾನ, ವೇಪಿಂಗ್ ಅಥವಾ ಅತಿಯಾದ ಮದ್ಯಪಾನದ ಕಡೆಗೆ ದೂಡುತ್ತದೆ. ಇದು ಹೃದಯದ ಅಪಾಯಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಹೃದ್ರೋಗ ಪತ್ತೆಗೆ ಇರುವ ಪರೀಕ್ಷೆಗಳೇನು?
ಇಸಿಜಿ: ಹೃದ್ರೋಗ ತಜ್ಞರು ಬಳಸುವ ಪ್ರಾಥಮಿಕ ಪರೀಕ್ಷೆ ಇದಾಗಿದೆ. ಈ ಪರೀಕ್ಷೆಯಿಂದ ಹೃದಯದ ಮೇಲೆ ಯಾವುದೇ ಅಡ್ಡಪರಿಣಾಮ ಬೀರಲ್ಲ. ಹೃದಯದ ಕಾರ್ಯವೈಖರಿಯನ್ನು ಈ ಪರೀಕ್ಷೆಯಿಂದ ಪತ್ತೆಹಚ್ಚಲು ಸಾಧ್ಯ. ಹೃದ್ರೋಗಿಗಳಿಗೆ ಅನುಗುಣವಾಗಿ ಇದರ ರೇಖಾಚಿತ್ರದಲ್ಲಿ ಬದಲಾವಣೆಯಾಗುತ್ತದೆ.
ಟ್ರೆಡ್ ಮಿಲ್ ಟೆಸ್ಟ್ (ಟಿಎಂಟಿ): ಕೊರೊನರಿ ರಕ್ತನಾಳಗಳ ಬಗ್ಗೆ ಸೂಕ್ತ ವಿವರಣೆ ನೀಡಲು ಇಸಿಜಿಯಿಂದ ಸಾಧ್ಯವಾಗದಿದ್ದಾಗ ಟಿಎಂಟಿ ಪರೀಕ್ಷೆ ಮಾಡಲಾಗುತ್ತದೆ. ರೋಗಿಯು ವ್ಯಾಯಾಮನಿರತನಾಗಿದ್ದಾಗಲೇ ಹೃದಯದ ವೈಪರಿತ್ಯವನ್ನು ಈ ಪರೀಕ್ಷೆಯಿಂದ ತಿಳಿದುಕೊಳ್ಳಲು ಸಾಧ್ಯ. ಇದನ್ನೂ ಓದಿ: ಹೆಚ್ಚುತ್ತಿರುವ ಹೃದಯಾಘಾತ – ಮೈಸೂರಿನ ಜಯದೇವ ಆಸ್ಪತ್ರೆಗೆ ತಪಾಸಣೆಗೆ ಬರುವವರ ಸಂಖ್ಯೆ ದಿಢೀರ್ ಏರಿಕೆ
ಎಕೊ-ಕಾರ್ಡಿಯೋಗ್ರಫಿ: ಹೃದಯದ ಕೋಣೆಗಳ ಸಂಕುಚನ ಶಕ್ತಿ ಮತ್ತು ಅವುಗಳ ಗೋಡೆಯ ಸ್ಥಿತಿಯನ್ನು ತಿಳಿದುಕೊಳ್ಳಲು ಈ ಪರೀಕ್ಷೆಯಿಂದ ಸಾಧ್ಯ.
ಆ್ಯಂಜಿಯೋಗ್ರಾಮ್: ಕೊರೊನರಿ ರಕ್ತನಾಳದೊಳಕ್ಕೆ ಕ್ಷ-ಕಿರಣ ನಿರೋಧಕ ವಸ್ತುವನ್ನು ತುಂಬಿ ರಕ್ತನಾಳದಲ್ಲಿ ಎಲ್ಲೆಲ್ಲಿ ಅಡಚಣೆ ಇದೆ, ಅವುಗಳ ಪ್ರಮಾಣವೆಷ್ಟು ಎಂಬುದನ್ನು ಈ ಪರೀಕ್ಷೆಯಿಂದ ತಿಳಿದುಕೊಳ್ಳಬಹುದು. ಈ ಪರೀಕ್ಷೆ ಹೆಚ್ಚು ಖರ್ಚಿನದ್ದು, ಸ್ವಲ್ಪ ಅಡ್ಡಪರಿಣಾಮವನ್ನೂ ಹೊಂದಿದೆ. ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗೆ ಮಾತ್ರ ಇದರ ಅವಶ್ಯಕತೆಯಿದೆ.
ಹೃದ್ರೋಗ ತಡೆಗೆ ಏನು ಮಾಡಬೇಕು?
* ನಿಯಮಿತವಾದ ದೈಹಿಕ ವ್ಯಾಯಾಮ.
* ದೇಹದ ತೂಕ ನಿಯಂತ್ರಣದಲ್ಲಿಡುವುದು.
* ಧೂಮಪಾನ ತ್ಯಜಿಸುವುದು.
* ಆತಂಕವಿಲ್ಲದ ಜೀವನ ನಡೆಸುವುದು.
* ಎಣ್ಣೆ, ತುಪ್ಪ, ಕರಿದ ತಿಂಡಿಯನ್ನು ಮುಟ್ಟದಿರುವುದು.
* ತರಕಾರಿಯನ್ನು ಹೆಚ್ಚಾಗಿ ಬಳಸುವುದು.
* ಹಾಲು, ಹಾಲಿನ ಉತ್ಪನ್ನ ಸೇವನೆ ಕಡಿಮೆ ಮಾಡುವುದು.
* ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದು.
* ಮಿತ ಪ್ರಮಾಣದಲ್ಲಿ ಸಸ್ಯಾಹಾರ ಸೇವಿಸುವುದು.
* ಸದಾ ಚಟುವಟಿಕೆಯಿಂದ ಇರಬೇಕು.
* ಕಣ್ತುಂಬ ನಿದ್ರೆ ಮಾಡಬೇಕು.
* ಯೋಗ, ಧ್ಯಾನ ನಿತ್ಯ ಇರಬೇಕು.
ಏನು ಮಾಡಬಾರದು?
* ತಂಬಾಕು ಸೇವನೆ, ಮದ್ಯಪಾನ.
* ಆಲಸ್ಯ ಮನೋಭಾವದವರಾಗಿ ಇರಬಾರದು.
* ನಿದ್ರೆಗೆಡಬಾರದು.
* ಚಿಂತೆ ಮಾಡಬಾರದು.
* ಸಂತೋಷದ ಜೀವನ ನಡೆಸಬೇಕು.
ಹೃದ್ರೋಗಿಗಳ ಆಹಾರ ಏನಿರಬೇಕು?
* ತೈಲಯುಕ್ತ ಆಹಾರಗಳಿಂದ ದೂರ ಇರಬೇಕು.
* ಕೊಲೆಸ್ಟ್ರಾಲ್‌ಯುಕ್ತ ಆಹಾರವನ್ನು ತ್ಯಜಿಸುವುದು.
* ಹಾಲು, ಹಾಲಿನ ಉತ್ಪನ್ನ, ಬೆಣ್ಣೆ, ಮೊಸರು ಎಲ್ಲವನ್ನೂ ಬಿಡುವುದು.
* ಮಾಂಸ, ಮೊಟ್ಟೆಯ ಹಳದಿ ಭಾಗ ಸೇವನೆಯಿಂದ ದೂರ ಇರುವುದು.
* ಸೊಪ್ಪು, ತರಕಾರಿ, ಹಣ್ಣು, ನಾರಿನ ಪದಾರ್ಥಗಳನ್ನು ಹೆಚ್ಚು ಸೇವಿಸುವುದು. ಅತಿ ಸಿಹಿ ಹಣ್ಣುಗಳ ಸೇವನೆ ಕಡಿಮೆ ಮಾಡುವುದು.