PublicTV Explainer: ಬಜೆಟ್‌ ಎಂದರೇನು? ಆಯವ್ಯಯದ ಬಗ್ಗೆ ನಿಮಗೆಷ್ಟು ಗೊತ್ತು?

Public TV
5 Min Read
Budget Thumbnail

– ಭಾರತದ ಮೊದಲ ಬಜೆಟ್‌ ಗಾತ್ರ 197 ಕೋಟಿ
– ದೇಶದಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದ ದಾಖಲೆ ಯಾರದ್ದು ಗೊತ್ತಾ?

ರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಎನ್‌ಡಿಎ (NDA) ಸರ್ಕಾರ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಜೆಟ್ ಮಂಡನೆಗೆ ಸಂಸತ್ ಸಿದ್ಧವಾಗಿದೆ. 2024-25ನೇ ಸಾಲಿನ ಕೇಂದ್ರ ಬಜೆಟ್ (Union Budget 2024) ಇದೇ ಜು.23 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಹಣಕಾಸು ಸಚಿವರಾಗಿ ನಿರಂತರವಾಗಿ 7ನೇ ಬಜೆಟ್ ಮಂಡಿಸಿ ನಿರ್ಮಲಾ ಸೀತಾರಾಮನ್ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಬಜೆಟ್ ಎಂದರೆ ಸಾಮಾನ್ಯವಾಗಿ ನಿರೀಕ್ಷೆ ಹೆಚ್ಚು. ನಮಗೆ ಏನು ಸಿಗಬಹುದು ಎಂಬ ನಿರೀಕ್ಷೆ ದೇಶದ ಜನರಲ್ಲಿ ಇದ್ದೇ ಇರುತ್ತದೆ.

ಬಜೆಟ್ ಎಂದಾಕ್ಷಣ ಜನಸಾಮಾನ್ಯರು ಯೋಚಿಸುವುದು ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ, ಯಾವೆಲ್ಲ ವಸ್ತುಗಳ ಬೆಲೆ ಇಳಿಕೆಯಾಗಿದೆ. ಯಾವ್ಯಾವ ಕ್ಷೇತ್ರಕ್ಕೆ ಏನೇನು ಕೊಡುಗೆ ಸಿಗುತ್ತದೆ. ಯಾವ ವಲಯಕ್ಕೆ ಆರ್ಥಿಕ ಹೊರೆ ಬೀಳುತ್ತದೆ ಎಂದು. ಆದರೆ ಬಜೆಟ್ ಬಗ್ಗೆ ಎಷ್ಟೋ ಜನಕ್ಕೆ ತಿಳಿದಿರುವುದೇ ಇಲ್ಲ. ಬಜೆಟ್ ಎಂದರೇನು? ಭಾರತದಲ್ಲಿ ಅದರ ಇತಿಹಾಸ ಏನು? ಯಾವ್ಯಾವ ವಿಧದ ಬಜೆಟ್‌ಗಳಿವೆ? ಯಾರು ಮಂಡಿಸುತ್ತಾರೆ? ಅದರಲ್ಲಿ ಏನಿರುತ್ತೆ ಎಂಬುದನ್ನು ಸರಳವಾಗಿ ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಜು.23 ರಂದು ʼಮೋದಿ 3.0ʼ ಬಜೆಟ್‌ ಮಂಡನೆ

nirmala sitharaman budget 1

ಬಜೆಟ್ ಎಂದರೇನು?
ಬಜೆಟ್ ಎನ್ನುವುದು ಒಂದು ನಿರ್ದಿಷ್ಟ ಅವಧಿಗೆ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳನ್ನು ವಿವರಿಸುವ ಹಣಕಾಸು ಯೋಜನೆಯಾಗಿದೆ. ವ್ಯಾಪಾರದ ಸಂದರ್ಭದಲ್ಲಿ, ಸಾಂಸ್ಥಿಕ ಗುರಿಗಳು ಮತ್ತು ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಸಾಧಿಸಲು ಸಂಪನ್ಮೂಲ ಹಂಚಿಕೆ ಮಾರ್ಗದರ್ಶಿ ಮಾರ್ಗಸೂಚಿಯೇ ಬಜೆಟ್.

ಉದಾ: ಮನೆಯಲ್ಲಿ ಹಿರಿಯರು ಆದಾಯಕ್ಕೆ ಅನುಗುಣವಾಗಿ ಸಂಸಾರ ತೂಗಿಸಿಕೊಂಡು ಹೋಗುವಂತೆಯೇ, ಆರ್ಥಿಕತೆಗೆ ತಕ್ಕಂತೆ ದೇಶ ಸರಿಯಾಗಿ ನಡೆಸಿಕೊಂಡು ಹೋಗಲು ಮಾಡುವ ಯೋಜನೆ ಬಜೆಟ್ ಎನ್ನಬಹುದು.

ಬಜೆಟ್ ಇತಿಹಾಸವೇನು?
ಬಜೆಟ್ ಪದವು Bougettee ಎಂಬ ಫ್ರೆಂಚ್ ಪದದಿಂದ ಬಂದಿದೆ. ಪೂರ್ವದ ಕಪ್ಪು ಜನರು ತಮ್ಮ ವ್ಯಾಪಾರದ ಪತ್ರಗಳನ್ನು ಇಟ್ಟುಕೊಳ್ಳಲು ಚರ್ಮದ ಚೀಲಗಳನ್ನು ಬಳಸುತ್ತಿದ್ದರು. ಇದನ್ನೂ ಓದಿ: ಮುಂಬರುವ ಬಜೆಟ್‍ನಲ್ಲಿ ಹೆಜ್ಜಾಲ -ಚಾಮರಾಜನಗರ ರೈಲ್ವೆ ಮಾರ್ಗ ಯೋಜನೆ ಸೇರ್ಪಡೆ: ಅಶ್ವಿನಿ ವೈಷ್ಣವ್

Shanmukhan Chetty presented the first Budget

ಬಜೆಟ್ ಯಾರು ಮಂಡಿಸುತ್ತಾರೆ?
ಭಾರತದಲ್ಲಿ ಕೇಂದ್ರ ಹಣಕಾಸು ಸಚಿವರು ಬಜೆಟ್ ಮಂಡಿಸುತ್ತಾರೆ. ಹಣಕಾಸು ಇಲಾಖೆಯ ಸಹಕಾರದೊಂದಿಗೆ ಮುಂಗಡಪತ್ರವನ್ನು ಸಿದ್ಧಪಡಿಸುತ್ತಾರೆ. ಅದೇ ರೀತಿ ರಾಜ್ಯಗಳಲ್ಲಿ ಆಯಾ ರಾಜ್ಯದ ಹಣಕಾಸು ಸಚಿವರು ಬಜೆಟ್ ಮಂಡಿಸುತ್ತಾರೆ. ಕೆಲವು ರಾಜ್ಯಗಳಲ್ಲಿ ಸಾಮಾನ್ಯವಾಗಿ ಮುಖ್ಯಮಂತ್ರಿಗಳೇ ಹಣಕಾಸು ಖಾತೆಯನ್ನು ಹೊಂದಿರುತ್ತಾರೆ. ಹೀಗಾಗಿ ಅವರೇ ಬಜೆಟ್ ಮಂಡನೆ ಮಾಡುತ್ತಾರೆ.

ಆಯವ್ಯಯದಲ್ಲಿ ಏನಿರುತ್ತೆ?
ಹಿಂದಿನ ಹಾಗೂ ಪ್ರಸಕ್ತ ವರ್ಷದ ನೈಜ ಆದಾಯ ವೆಚ್ಚಗಳು, ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜು ಆದಾಯ ವೆಚ್ಚಗಳು, ಮುಂಬರುವ ವರ್ಷದ ಮುಂಗಡ ಅಂದಾಜು ಆದಾಯ ವೆಚ್ಚಗಳು ಎಂಬ ನಾಲ್ಕು ಭಾಗಗಳನ್ನು ಮುಂಗಡ ಪತ್ರವು ಒಳಗೊಂಡಿರುತ್ತದೆ. ಬಜೆಟ್‌ನಲ್ಲಿ ಆದಾಯ, ವೆಚ್ಚ, ಆದಾಯ ಮತ್ತು ವೆಚ್ಚದ ನಡುವಣ ವ್ಯತ್ಯಾಸವನ್ನೂ ನಮೂದಿಸಲಾಗಿರುತ್ತದೆ. ಬಜೆಟ್‌ನಲ್ಲಿ ಆದಾಯ ಮತ್ತು ವೆಚ್ಚಗಳು ಪ್ರಧಾನ ಅಂಶಗಳಾಗಿರುತ್ತವೆ. ಇದನ್ನೂ ಓದಿ: ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲು ಆರಂಭ – ಸಂಸದ ಬ್ರಿಜೇಶ್‌ ಚೌಟ ಮನವಿಗೆ ತಕ್ಷಣವೇ ಸ್ಪಂದಿಸಿದ ರೈಲ್ವೆ ಇಲಾಖೆ

ಬಜೆಟ್‌ಗೆ ಅನುಮೋದನೆ ನೀಡುವುದ್ಯಾರು?
ಭಾರತ ಸಂವಿಧಾನದ 112ನೇ ವಿಧಿಯ ಅಡಿಯಲ್ಲಿ, ಆಯಾ ಹಣಕಾಸು ವರ್ಷ ಮುಗಿಯುವ ಮೊದಲು ಕೇಂದ್ರ ಸರ್ಕಾರ ಮುಂದಿನ ವರ್ಷದ ಬಜೆಟ್‌ ಅನ್ನು ಲೋಕಸಭೆಯಲ್ಲಿ ಮಂಡಿಸುತ್ತದೆ. ಕೇಂದ್ರ ಬಜೆಟ್‌ ಅನ್ನು ರಾಷ್ಟ್ರಪತಿಗಳು ಅನುಮೋದಿಸುತ್ತಾರೆ. ಅಂತೆಯೇ ಸಂವಿಧಾನದ 202ನೇ ವಿಧಿಯ ಪ್ರಕಾರ ರಾಜ್ಯದ ಬಜೆಟ್‌ ತಯಾರಿಸಲಾಗುತ್ತದೆ. ರಾಜ್ಯ ಬಜೆಟ್‌ ಅನ್ನು ರಾಜ್ಯಪಾಲರು ಅನುಮೋದಿಸುತ್ತಾರೆ.

nirmala sitharaman sarees

ಬಜೆಟ್‌ನಲ್ಲಿ ಎಷ್ಟು ವಿಧ?
ಬಜೆಟ್‌ನಲ್ಲಿ ಮೂರು ವಿಧಗಳಿವೆ. ಸಮತೋಲನ ಬಜೆಟ್, ಮಿಗತೆ (ಉಳಿತಾಯ) ಬಜೆಟ್, ಕೊರತೆ ಬಜೆಟ್.

ಸಮತೋಲನ ಬಜೆಟ್ ಎಂದರೇನು?
ಸರ್ಕಾರದ ನಿರೀಕ್ಷಿತ ಆದಾಯವು ನಿರೀಕ್ಷಿತ ವೆಚ್ಚಕ್ಕೆ ಸಮನಾಗಿರುತ್ತದೆ. ಇದನ್ನೇ ಸಮತೋಲನ ಬಜೆಟ್ ಎಂದು ಕರೆಯಲಾಗುತ್ತದೆ.

ಮಿಗತೆ ಬಜೆಟ್ ಎಂದರೇನು?
ಸರ್ಕಾರದ ಅಂದಾಜು ಆದಾಯವು ಅಂದಾಜು ವೆಚ್ಚಕ್ಕಿಂತ ಅಧಿಕಾವಾಗಿರುತ್ತದೆ. ಇದೇ ಮಿಗತೆ ಅಥವಾ ಉಳಿತಾಯದ ಬಜೆಟ್.

ಕೊರತೆ ಬಜೆಟ್ ಎಂದರೇನು?
ಸರ್ಕಾರದ ಅಂದಾಜು ಆದಾಯಕ್ಕಿಂತ ಅಂದಾಜು ವೆಚ್ಚವೇ ಅಧಿಕವಾಗಿರುತ್ತದೆ.

morarji desai

ಬಜೆಟ್‌ನ ಉದ್ದೇಶವೇನು?
ಆರ್ಥಿಕ ಸ್ಥಿರತೆ, ಆರ್ಥಿಕ ಬೆಳವಣಿಗೆ, ಸಾರ್ವಜನಿಕ ವಲಯದ ಉದ್ಯಮಗಳ ನಿರ್ವಹಣೆ, ಸಂಪನ್ಮೂಲಗಳ ಮರುವಿತರಣೆ, ಸಂಪತ್ತಿನ ಅಸಮಾನತೆ ಕಡಿಮೆ ಮಾಡುವ ಉದ್ದೇಶವನ್ನು ಬಜೆಟ್‌ ಹೊಂದಿದೆ.

ಬಜೆಟ್‌ನ ಪ್ರಾಮುಖ್ಯತೆ ಏನು?
ಬಜೆಟ್‌ ವೆಚ್ಚದ ಮೂಲಕ ಸರ್ಕಾರವು ಒಟ್ಟಾರೆ ಬೇಡಿಕೆ ಮತ್ತು ಪೂರೈಕೆಯನ್ನು ಸ್ಥಿರವಾಗಿರಿಸುತ್ತದೆ. ವಿವಿಧ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸಲಾಗಿರುತ್ತದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಸರ್ಕಾರ ತನ್ನ ಉದ್ದೇಶ ಸಾಧಿಸಲು ಬಜೆಟ್‌ಗೆ ನಿರ್ದೇಶನ ನೀಡುತ್ತದೆ.

ಭಾರತದಲ್ಲಿ ಮೊದಲ ಬಜೆಟ್ ಮಂಡನೆಯಾಗಿದ್ದು ಯಾವಾಗ?
ಬ್ರಿಟಿಷರ ಆಳ್ವಿಕೆಯಲ್ಲಿ 1860ರ ಏ.7 ರಂದು ಭಾರತದಲ್ಲಿ ಮೊದಲ ಬಜೆಟ್ ಮಂಡಿಸಲಾಯಿತು. ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ ಬಜೆಟ್ ಮಂಡಿಸಿದ್ದರು. ನಂತರ 1924ರ ಏಪ್ರಿಲ್‌ನಲ್ಲಿ ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ರೈಲ್ವೆಗಾಗಿ ಪ್ರತ್ಯೇಕ ಬಜೆಟ್ ಸಿದ್ಧಪಡಿಸಲಾಯಿತು. 1860 ರಿಂದ ಇಲ್ಲಿವರೆಗೆ ಭಾರತವು 77 ಸಾಮಾನ್ಯ ಅಥವಾ ಪೂರ್ಣ ಬಜೆಟ್ ಹಾಗೂ 15 ಮಧ್ಯಂತರ ಬಜೆಟ್‌ಗಳಿಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿರೋದು ನಿಜ: ಒಪ್ಪಿಕೊಂಡ ಸಿಎಂ

narendra modi session

ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದ್ಯಾರು?
1947ರ ನವೆಂಬರ್ 26 ರಂದು ಸ್ವತಂತ್ರ ಭಾರತದ ಮೊದಲ ಬಜೆಟ್ ಅನ್ನು ಮಂಡಿಸಲಾಯಿತು. ದೇಶದ ಮೊದಲ ಹಣಕಾಸು ಸಚಿವರಾಗಿದ್ದ ಆರ್.ಕೆ.ಷಣ್ಮುಖಂ ಚೆಟ್ಟಿ ಬಜೆಟ್ ಮಂಡಿಸಿದ್ದರು. ಇದು ಕೇವಲ 7 ತಿಂಗಳ ಅವಧಿಗೆ ಮಧ್ಯಂತರ ಬಜೆಟ್ ಆಗಿತ್ತು. ಮೊದಲ ಬಜೆಟ್ ಅಧಿವೇಶನವು ಸಂಜೆ 5 ಗಂಟೆಗೆ ನಡೆದಿತ್ತು. ಆ ಸಂದರ್ಭದಲ್ಲಿ ಭಾರತವು ವಿಭಜನೆಯ ಪ್ರತಿಭಟನೆ ಮತ್ತು ಗಲಭೆಗಳಿಂದ ತತ್ತರಿಸಿಹೋಗಿತ್ತು. ಆದರೂ ಚೆಟ್ಟಿ ಅವರು ಯಶಸ್ವಿಯಾಗಿ ಬಜೆಟ್ ಮಂಡಿಸಿದ್ದರು. 1948ರ ಸೆಪ್ಟೆಂಬರ್ ವರೆಗೆ ಭಾರತ ಮತ್ತು ಪಾಕಿಸ್ತಾನ ಎರಡೂ ಒಂದೇ ಕರೆನ್ಸಿಯಲ್ಲಿ ಕಾರ್ಯನಿರ್ವಹಿಸಲು ಈ ಬಜೆಟ್‌ನಲ್ಲಿ ನಿರ್ಧರಿಸಲಾಗಿತ್ತು.

ಮೊದಲ ಬಜೆಟ್ ಗಾತ್ರ ಎಷ್ಟಿತ್ತು?
ಸ್ವತಂತ್ರ ಭಾರತದ ಮೊದಲ ಬಜೆಟ್ ಗಾತ್ರ 197.39 ಕೋಟಿ. ಅದರಲ್ಲಿ ರಕ್ಷಣಾ ವಲಯಕ್ಕೆ 92.74 ಕೋಟಿ ಮೀಸಲಿಡಲಾಗಿತ್ತು. ಒಟ್ಟು ಆದಾಯ 171.15 ಕೋಟಿ ಮತ್ತು ವಿತ್ತೀಯ ಕೊರತೆ 24.59 ಕೋಟಿ ರೂ. ಒಟ್ಟು ವೆಚ್ಚ 197.29 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು.

ನಿರ್ಮಲಾ ಸೀತಾರಾಮನ್‌ ದಾಖಲೆ!
ಹಣಕಾಸು ಸಚಿವರಾಗಿ ಸತತ 7ನೇ ಬಜೆಟ್‌ ಮಂಡಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಜ್ಜಾಗಿದ್ದಾರೆ. ಇಷ್ಟು ಬಾರಿ ನಿರಂತರವಾಗಿ ಬಜೆಟ್‌ ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ದಾಖಲೆಯನ್ನು ಬರೆಯಲಿದ್ದಾರೆ.

ಮೊರಾರ್ಜಿ ದೇಸಾಯಿ ದಾಖಲೆ
ಸತತ ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆಯನ್ನು ಮೊರಾರ್ಜಿ ದೇಸಾಯಿ (Morarji Desai) ಅವರು ಬರೆದಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್‌ ಮಂಡಿಸಿ ನಿರ್ಮಲಾ ಸೀತಾರಾಮನ್‌ (Nirmala Sitharaman) ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಒಟ್ಟಾರೆ ಅತಿ ಹೆಚ್ಚು ಬಜೆಟ್‌ ಮಂಡಿಸಿದ ದಾಖಲೆ ದೇಸಾಯಿ ಅವರ ಹೆಸರಲ್ಲೇ ಇದೆ. ಹಣಕಾಸು ಸಚಿವರಾಗಿ ಅವರು ಒಟ್ಟು 10 ಬಜೆಟ್‌ ಮಂಡಿಸಿದ್ದಾರೆ.

Share This Article