ಅಭಿವೃದ್ಧಿ ಜೊತೆಗೆ ಸ್ವಾವಲಂಬನೆ ಸಾಧಿಸಲು ಭಾರತವು ಹಲವು ಆರ್ಥಿಕ ಕ್ರಾಂತಿಗಳನ್ನು ಮಾಡಿದೆ. ಭಾರತ ವಿಶ್ವದಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಅತಿ ಹೆಚ್ಚು ಬೆಳವಣಿಗೆಯ ದರವನ್ನು ಸಾಧಿಸುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಹೀಗಾಗಿ ಭಾರತವನ್ನು (India) ಭವಿಷ್ಯದ ‘ಸೂಪರ್ ಪವರ್’ (Super Power) ರಾಷ್ಟ್ರ ಎಂದೂ ಸಹ ಕರೆಯಲಾಗಿದೆ.
ಎಲ್ಲಾ ವಲಯಗಳಲ್ಲೂ ಅಭಿವೃದ್ಧಿಗೆ ಹೆಚ್ಚು ಆದ್ಯತೆ ಕೊಟ್ಟಿರುವ ಭಾರತವು ಮತ್ತೊಂದು ಆರ್ಥಿಕ ಕ್ರಾಂತಿಗೆ ಮುಂದಾಗಿದೆ. ವಿಶ್ವಮಟ್ಟದಲ್ಲಿ ‘ನೀಲಿ ಆರ್ಥಿಕತೆ’ಯನ್ನು (Blue Economy) ಬಲವಾಗಿ ಪ್ರತಿಪಾದಿಸಿದೆ. ಅಷ್ಟೇ ಅಲ್ಲದೇ ದೇಶದಲ್ಲಿ ಅಭಿವೃದ್ಧಿಯ ಹೊಸ ಬೀಜ ಬಿತ್ತಲು ರೆಡಿಯಾಗಿದೆ.
Advertisement
ಜಿ20 ರಾಷ್ಟ್ರಗಳ ಸಭೆಯಲ್ಲಿ ಪ್ರಸ್ತಾಪ
ಕಳೆದ ತಿಂಗಳು ನಡೆದ ಜಿ20 (G20 Nations) ರಾಷ್ಟ್ರಗಳ ಸಭೆಯೊಂದರಲ್ಲಿ ‘ನೀಲಿ ಆರ್ಥಿಕತೆ’ ವಿಚಾರ ಚರ್ಚೆಯಾಯಿತು. ದೇಶದ ಒಳಗೆ ಹಾಗೂ ಹೊರಗೆ ವ್ಯಾಪಾರ ಮತ್ತು ಅಭಿವೃದ್ಧಿಯನ್ನು ಸುಗಮಗೊಳಿಸಲು ಸುಸ್ಥಿರ ಮಾರ್ಗವು ಹೆಚ್ಚು ಅವಶ್ಯಕ ಎಂಬ ಅಂಶವನ್ನು ಪ್ರತಿಪಾದಿಸಲಾಯಿತು. ಇದನ್ನೂ ಓದಿ: PublicTV Explainer: ಇಂಡೋ-ಪಾಕ್ ಕದನ ಯಾಕಿಷ್ಟು ರಣರೋಚಕ – ನೀವು ತಿಳಿಯಲೇಬೇಕಾದ ಸಂಗತಿಗಳಿವು..
Advertisement
ಈ ಹಿನ್ನೆಲೆಯಲ್ಲಿ ‘ನೀಲಿ ಆರ್ಥಿಕತೆ’ಗೆ ಒತ್ತು ನೀಡುವ ಪ್ರಸ್ತಾವನೆಯನ್ನು ಎಸ್‌ಎಐಗಳ (ಸುಪ್ರೀಂ ಆಡಿಟ್ ಇನ್‌ಸ್ಟಿಟ್ಯೂಷನ್) ಸಭೆ ಚರ್ಚಿಸಿದೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಜಿಸಿ ಮುರ್ಮು, ನೀಲಿ ಆರ್ಥಿಕತೆಯು ಆದ್ಯತೆಯ ಕ್ಷೇತ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದರು. ಈ ವಿಷಯ ತಜ್ಞರ ಆಸಕ್ತಿಯನ್ನು ಕೆರಳಿಸಿದೆ. ಆದ್ದರಿಂದ ನೀಲಿ ಆರ್ಥಿಕತೆ ಎಂದರೆ ಏನು? ಅದರ ಅಭಿವೃದ್ಧಿ ವಿಚಾರಕ್ಕೆ ಬಂದಾಗ ಭಾರತವು ಎಲ್ಲಿ ನಿಲ್ಲುತ್ತದೆ ಎಂಬುದನ್ನು ನೋಡೋಣ. ಅದಕ್ಕೂ ಮೊದಲು ಭಾರತದಲ್ಲಾದ ಆರ್ಥಿಕ ಕ್ರಾಂತಿಗಳ ಬಗ್ಗೆ ತಿಳಿಯೋಣ.
Advertisement
Advertisement
ಭಾರತದಲ್ಲಾದ ಆರ್ಥಿಕ ಕ್ರಾಂತಿಗಳು
ಭಾರತ ಕೃಷಿ ಪ್ರಧಾನ ದೇಶ. ಭಾರತದಲ್ಲಿ ಕೃಷಿಯ ಮೇಲೆ ಅವಲಂಬಿತವಾಗಿರುವ ಜನರ ಸಂಖ್ಯೆಯು ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಹೆಚ್ಚಾಗಿದೆ. ಹೀಗಾಗಿ ಭಾರತದಲ್ಲಾದ ಆರ್ಥಿಕ ಕ್ರಾಂತಿಗಳ ಪೈಕಿ ಬಹುಪಾಲು ಕೃಷಿಗೆ ಸಂಬಂಧಿಸಿದ್ದೇ ಆಗಿವೆ. ಹಸಿರು ಕ್ರಾಂತಿ (ಆಹಾರ ಉತ್ಪಾದನೆ), ಶ್ವೇತ ಕ್ರಾಂತಿ (ಹಾಲಿನ ಉತ್ಪಾದನೆ), ಹಳದಿ ಕ್ರಾಂತಿ (ಖಾದ್ಯತೈಲಗಳು/ಎಣ್ಣೆ ಬೀಜಗಳು), ನೀಲಿ ಕ್ರಾಂತಿ (ಮೀನು ಅಥವಾ ಮತ್ಸ್ಯ), ಕಪ್ಪು ಕ್ರಾಂತಿ (ಕಲ್ಲಿದ್ದಲು ಅಥವಾ ಪೆಟ್ರೋಲಿಯಂ).
ಬೂದು ಕ್ರಾಂತಿ (ರಸಗೊಬ್ಬರ), ಕೆಂಪು ಕ್ರಾಂತಿ (ಟೊಮೆಟೊ/ಮಾಂಸ), ವೃತ್ತಕ್ರಾಂತಿ (ಆಲುಗಡ್ಡೆ), ರಜತ ಅಥವಾ ಸಿಲ್ವರ್ ಕ್ರಾಂತಿ (ಮೊಟ್ಟೆ), ರಜತ ನಾರಿನ ಕ್ರಾಂತಿ (ಹತ್ತಿ), ಸುವರ್ಣ ಕ್ರಾಂತಿ (ತೋಟಗಾರಿಕೆ), ಸುವರ್ಣ ನಾರಿನ ಕ್ರಾಂತಿ (ಸೆಣಬು), ಗುಲಾಬಿ ಕ್ರಾಂತಿ (ಔಷಧಿ, ಈರುಳ್ಳಿ), ಪೀತಾಂಬರ ಕ್ರಾಂತಿ (ರೇಷ್ಮೆ), ಕಾಮನಬಿಲ್ಲು ಕ್ರಾಂತಿ (ಕೃಷಿ ಕ್ಷೇತ್ರ), ಕಂದು ಕ್ರಾಂತಿ (ಮಸಾಲೆ ಪದಾರ್ಥ ಮತ್ತು ಚರ್ಮ). ಇದನ್ನೂ ಓದಿ: PublicTV Explainer: ಗೃಹಜ್ಯೋತಿ ಗ್ಯಾರಂಟಿ- ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಭಾರತದಲ್ಲಾದ ಮೊಟ್ಟಮೊದಲ ಮತ್ತು ಇಂದಿಗೂ ಪ್ರಸ್ತುತ ಎನಿಸುವ ಅಗ್ರಮಾನ್ಯ ಕ್ರಾಂತಿಯೇ ‘ಹಸಿರು ಕ್ರಾಂತಿ’. ಸ್ವಾತಂತ್ರ್ಯಾನಂತರ ಹಸಿವಿನಿಂದ ನರಳುತ್ತಿದ್ದ ಭಾರತ ದವಸ-ಧಾನ್ಯಗಳನ್ನು ಆಮದು ಮಾಡಿಕೊಂಡು ಜನರ ಹೊಟ್ಟೆ ತುಂಬಿಸುತ್ತಿತ್ತು. ಕೃಷಿ ಉತ್ಪಾದನೆಯಲ್ಲಿ ಕ್ರಾಂತಿಕಾರಿ ಬೆಳವಣಿಗೆ ಸಾಧಿಸುವುದು ನಿರ್ಣಾಯಕವಾಗಿತ್ತು. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಆಗಿನ ರಾಜಕೀಯ ಮುತ್ಸದ್ಧಿ ಬಾಬು ಜಗಜೀವನ ರಾಮ್, ಸಿ.ಸುಬ್ರಮಣಿಯಂ, ಕೃಷಿ ವಿಜ್ಞಾನಿಗಳಾದ ನಾರ್ಮನ್ ಬೋರ್ಲಾಗ್, ಸ್ವಾಮಿನಾಥನ್ ಅಂಥವರ ಶ್ರಮದಿಂದಾಗಿ ಆಹಾರ ಉತ್ಪಾದನೆಯಲ್ಲಿ ಬೆರಗು ಮೂಡಿಸುವಂತಹ ಪ್ರಗತಿ ಸಾಧಿಸಿತು ಭಾರತ. ಆ ಮೂಲಕ ನಮ್ಮ ಆಹಾರವನ್ನು ನಾವೇ ಬೆಳೆಯುವಂತಾಗಿದ್ದು ಇತಿಹಾಸ. ಇದರ ಯಶಸ್ಸಿನ ಫಲವಾಗಿ ಇತರೆ ಕ್ರಾಂತಿಗಳು ಒಂದೊಂದಾಗಿ ಭಾರತದ ಆರ್ಥಿಕತೆಯ ಯಶಸ್ಸಿನ ಮೆಟ್ಟಿಲಾದವು.
ನೀಲಿ ಆರ್ಥಿಕತೆ ಎಂದರೇನು?
“ಆರ್ಥಿಕ ಬೆಳವಣಿಗೆ, ಸುಧಾರಿತ ಜೀವನೋಪಾಯ ಮತ್ತು ಉದ್ಯೋಗಗಳಿಗಾಗಿ ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆ”ಯೇ ನೀಲಿ ಆರ್ಥಿಕತೆ ಎಂದು ವಿಶ್ವ ಬ್ಯಾಂಕ್ ವ್ಯಾಖ್ಯಾನಿಸಿದೆ. ಒಂದು ರಾಷ್ಟ್ರದ ನೀಲಿ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವುದೆಂದರೆ, ಅದರ ಸಮುದ್ರ ವ್ಯಾಪಾರ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು, ಉದ್ಯೋಗವನ್ನು ಸೃಷ್ಟಿಸುವುದು ಎಂದರ್ಥ. ಆರ್ಥಿಕ ಅಭಿವೃದ್ಧಿ ಜೊತೆ ಜೊತೆಗೆ ಕರಾವಳಿ ಪ್ರದೇಶಗಳು, ಸಾಗರ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ಉಪಕ್ರಮಗಳನ್ನು ತೆಗೆದುಕೊಳ್ಳುವುದು ಅಷ್ಟೇ ಮುಖ್ಯ ಎಂದು ಹೇಳಲಾಗಿದೆ. ಸಮುದ್ರ ಸಾರಿಗೆ, ಪ್ರವಾಸೋದ್ಯಮ, ಮೀನುಗಾರಿಕೆ ಮತ್ತು ಜಲಕೃಷಿ, ಕಡಲಾಳದ ನವೀಕರಿಸಬಹುದಾದ ಶಕ್ತಿ, ಸಾಗರ ಕೈಗಾರಿಕೆ ಚಟುವಟಿಕೆ ನೀಲಿ ಆರ್ಥಿಕತೆಯ ಭಾಗವಾಗಿದೆ.
ನೀಲಿ ಆರ್ಥಿಕತೆ ಪರಿಚಯಿಸಿದ್ದು ಯಾರು?
ಬ್ಲೂ ಎಕಾನಮಿ ಪರಿಕಲ್ಪನೆಯನ್ನು ವಾಣಿಜ್ಯೋದ್ಯಮಿ, ಆರ್ಥಿಕ ತಜ್ಞ ಗುಂಟರ್ ಪೌಲಿ (Gunter Pauli) ಅವರು ಮೊದಲ ಬಾರಿಗೆ ಪರಿಚಯಿಸಿದರು. 2010 ರಲ್ಲಿ ‘ದಿ ಬ್ಲೂ ಎಕಾನಮಿ’ (The Blue Economy) ಪುಸ್ತಕವನ್ನು ಪ್ರಕಟಿಸಿದರು. ಇದರಲ್ಲಿ ನೀಲಿ ಆರ್ಥಿಕತೆ ಬಗ್ಗೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಪುಸ್ತಕದಲ್ಲಿ 10 ವರ್ಷ, 100 ನಾವಿನ್ಯತೆ, 10 ಕೋಟಿ ಉದ್ಯೋಗಗಳು ಎಂಬ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಅಂದಿನಿಂದ ಕಡಲ ವ್ಯಾಪಾರದ ಮೂಲಕ ತಮ್ಮ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಹಲವಾರು ದೇಶಗಳು ಈ ಪರಿಕಲ್ಪನೆಯನ್ನು ಬಳಸಿಕೊಂಡಿವೆ. ಇದನ್ನೂ ಓದಿ: PublicTV Explainer: ಭಾರತೀಯ ವಿಜ್ಞಾನಿಗಳಿಂದ ‘ಏಲಿಯನ್ ಗ್ರಹ’ ಪತ್ತೆ – ಇಲ್ಲಿ ಅನ್ಯಗ್ರಹ ಜೀವಿಗಳು ಇವೆಯೇ?
ವಿಶ್ವಸಂಸ್ಥೆಯಲ್ಲಿ ಮೊದಲ ಪ್ರಸ್ತಾಪವಾಗಿದ್ದು ಯಾವಾಗ?
ಸಮುದ್ರ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗೆ ಒತ್ತು ನೀಡಲು 2012 ರ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯು ಮೊದಲ ಬಾರಿಗೆ ಈ ಪರಿಕಲ್ಪನೆಯನ್ನು ಪರಿಚಯಿಸಿತು. ಸಮುದ್ರ ಪರಿಸರ ವ್ಯವಸ್ಥೆ ಆರೋಗ್ಯಕರವಾಗಿದ್ದರೆ ಹೆಚ್ಚು ಉತ್ಪಾದಕವಾಗಿರುತ್ತವೆ ಎಂದು ವಾದಿಸಲಾಯಿತು. ನೀಲಿ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿತು. ಅದಾದ ಬಳಿಕ ಭಾರತವು ಇತ್ತೀಚಿನ ವರ್ಷಗಳಲ್ಲಿ ಹಲವಾರು ಉಪಕ್ರಮಗಳ ಮೂಲಕ ಸಮುದ್ರ ವಲಯದ ಮೇಲೆ ಕೇಂದ್ರೀಕರಿಸಿದೆ.
ನೀಲಿ ಆರ್ಥಿಕತೆ ಏಕೆ ಮುಖ್ಯ?
ನೀಲಿ ಆರ್ಥಿಕತೆಯು ಒಂದು ಪ್ರಮುಖ ಪರಿಕಲ್ಪನೆ. ಯಾವುದೇ ದೇಶದ ಅಭಿವೃದ್ಧಿ ದೃಷ್ಟಿಯಿಂದ ಸಮುದ್ರ ಸಂಪನ್ಮೂಲಗಳ ಸದ್ಬಳಕೆಗೆ ಈ ಪರಿಕಲ್ಪನೆ ಪೂರಕವಾಗಿದೆ. ಮಾನವ ಅಭಿವೃದ್ಧಿಗಾಗಿ ಸಂಪನ್ಮೂಲಗಳನ್ನು ಬಳಸುವಾಗ ಸಾಗರದ ಸಂರಕ್ಷಣೆಗೆ ನೀಲಿ ಆರ್ಥಿಕತೆಯು ಆದ್ಯತೆ ನೀಡುತ್ತದೆ.
ಯಾವ ದೇಶಗಳಲ್ಲಿ ಇದು ಜಾರಿಯಲ್ಲಿದೆ?
ನೀಲಿ ಆರ್ಥಿಕತೆ ಹೊಂದಿರುವ ದೇಶಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ನಾರ್ವೆ ಮತ್ತು ಡೆನ್ಮಾರ್ಕ್ ದೇಶಗಳು ಈಗಾಗಲೇ ಈ ಆರ್ಥಿಕತೆಯನ್ನು ಅಳವಡಿಸಿಕೊಂಡಿವೆ. ಭಾರತವು 2030 ರ ಹೊತ್ತಿಗೆ ನೀಲಿ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?
ನೀಲಿ ಆರ್ಥಿಕತೆ ಅಭಿವೃದ್ಧಿಗೆ ಭಾರತ ಹೇಗೆ ಕೆಲಸ ಮಾಡುತ್ತಿದೆ?
ಮತ್ಸ್ಯ ಕ್ರಾಂತಿ ಅಥವಾ ನೀಲಿ ಕ್ರಾಂತಿಯು ನೀಲಿ ಆರ್ಥಿಕತೆ ಅಭಿವೃದ್ಧಿಯ ಮೊದಲ ಹೆಜ್ಜೆ. ಆದರೆ ಇದೊಂದು ಸೀಮಿತಿ ಪರಿಕಲ್ಪನೆ. ಕೇಂದ್ರ ಸರ್ಕಾರವು ಪ್ರಾರಂಭಿಸಿದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ಭಾರತದಲ್ಲಿ ಮೀನುಗಾರಿಕೆ ಉದ್ಯಮದ ಅಭಿವೃದ್ಧಿಯ ಗುರಿಯನ್ನಷ್ಟೇ ಹೊಂದಿದೆ. ಇದರ ಹೊರತಾಗಿ ಈಚಿನ ವರ್ಷಗಳಲ್ಲಿ ಭಾರತ ಸರ್ಕಾರವು ನೀಲಿ ಆರ್ಥಿಕತೆ ಅಭಿವೃದ್ಧಿಗೆ ಇತರ ಯೋಜನೆಗಳನ್ನು ಕೈಗೊಂಡಿದೆ.
ನೀಲಿ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಕರಾವಳಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಈಚೆಗಷ್ಟೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕೇಂದ್ರ ಸರ್ಕಾರದ ಅನುದಾನಿತ ಯೋಜನೆಯಡಿ ರಾಜ್ಯದಲ್ಲಿ ನಾಲ್ಕು ಮೀನುಗಾರಿಕಾ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದರು. ಸರ್ಕಾರವು ‘ಮೆರಿಟೈಮ್ ಇಂಡಿಯಾ ವಿಷನ್ 2030’ ಶೀರ್ಷಿಕೆಯಡಿ ವಿಷನ್ ಡಾಕ್ಯುಮೆಂಟನ್ನು ಸಹ ಪ್ರಾರಂಭಿಸಿದೆ. ಬಂದರುಗಳು, ಹಡಗು ಮತ್ತು ಜಲಮಾರ್ಗಗಳಂತಹ ವಿವಿಧ ಕಡಲ ಉಪ-ವಲಯಗಳಲ್ಲಿ ಅಭಿವೃದ್ಧಿ ಕ್ರಮಕೈಗೊಳ್ಳಲು ಯೋಜಿಸಿದೆ.
ದೇಶದ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಕಡಲ ವಲಯವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಗಮನ ಕೇಂದ್ರೀಕರಿಸಿದೆ. ನೀಲಿ ಆರ್ಥಿಕತೆಯ ಪ್ರಮುಖ ತತ್ವವೆಂದರೆ, ಸಮುದ್ರ ಸಂಪನ್ಮೂಲಗಳ ಆರೋಗ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು. ಸುಸ್ಥಿರ ಅಭಿವೃದ್ಧಿಯತ್ತ ಗಮನಹರಿಸುವುದರೊಂದಿಗೆ, ಮುಂದಿನ ವರ್ಷಗಳಲ್ಲಿ ಕಡಲ ವಲಯದ ಸರ್ಕಾರದ ಯೋಜನೆಗಳು ಹೇಗೆ ವಿಕಸನಗೊಳ್ಳುತ್ತವೆ ಎಂಬುದನ್ನು ನೋಡಬೇಕಾಗಿದೆ. ಇದನ್ನೂ ಓದಿ: PublicTV Explainer: ಭೂಮಿ ಆಯ್ತು.. ಇನ್ಮುಂದೆ ಸಮುದ್ರದಾಳದಲ್ಲಿ ಶುರುವಾಗುತ್ತಂತೆ ಗಣಿಗಾರಿಕೆ!
ಕರ್ನಾಟಕ ಕರಾವಳಿಯಲ್ಲಿ ಹೊಸ ನಿರೀಕ್ಷೆ ಏನು?
ಕರ್ನಾಟಕ ಕರಾವಳಿ ಪ್ರದೇಶವನ್ನು ನೀಲಿ ಆರ್ಥಿಕತೆಯಾಗಿ ಅಭಿವೃದ್ಧಿಪಡಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಪ್ರಸ್ತಾಪಿಸಿದ್ದರು. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೊಸ ನಿರೀಕ್ಷೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಉಡುಪಿ ಜಿಲ್ಲೆಯ ಶಿರೂರು ತನಕ ಸುಮಾರು 168 ಕಿಮೀ ಉದ್ದದ ಕರಾವಳಿ ತೀರವಿದೆ. ಅಂತೆಯೇ ಉತ್ತರ ಕನ್ನಡ ಜಿಲ್ಲೆ ಸುಮಾರು 120 ಕಿಮೀ ಸಮುದ್ರ ತೀರ ಹೊಂದಿದೆ.
ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಕರಾವಳಿ ಭಾಗ ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡಿದೆ. ಸಹಸ್ರಾರು ಮಂದಿಗೆ ಬದುಕು ಕಲ್ಪಿಸಿದೆ. ಕಡಲಿನಲ್ಲಿ ಸುಸ್ಥಿರ ಪರಿಸರ ನಿರ್ಮಿಸುವುದರೊಂದಿಗೆ ಸಮುದ್ರ ಸಂಪತ್ತಿನ ಸೂಕ್ತ ಬಳಕೆ, ಜಲ ಸಾರಿಗೆ ಮಾರ್ಗ, ಪ್ರವಾಸೋದ್ಯಮ, ಸಾಗರ ಜೈವಿಕ ತಂತ್ರಜ್ಞಾನ ಅಭಿವೃದ್ಧಿ, ಉಪ್ಪುನೀರು ಸಂಸ್ಕರಣೆ ಪರಿಕಲ್ಪನೆ, ಸಾಗರ ತೈಲ, ಅನಿಲ ಕ್ಷೇತ್ರಗಳ ಸುಸ್ಥಿರ ನಿರ್ವಹಣೆಗೆ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ನೀಲಿ ಆರ್ಥಿಕತೆ ಅಭಿವೃದ್ಧಿಯ ನಿರೀಕ್ಷೆಗಳು ಗರಿಗೆದರಿವೆ.
Web Stories