ವನ್ಯ ಸಂಪತ್ತು ಲೂಟಿ, ವನ್ಯಜೀವಿಗಳ ಮೇಲಿನ ಮನುಷ್ಯನ ದೌರ್ಜನ್ಯ ಇಂದು ನಿನ್ನೆಯದಲ್ಲ. ಇದನ್ನು ತಡೆಗಟ್ಟಲು ಸರ್ಕಾರಗಳು ಕಠಿಣ ಕಾನೂನು ಕ್ರಮಗಳನ್ನು ತರುತ್ತಿದೆ. ಆದರೂ ಮನುಷ್ಯನ ದುರಾಸೆಗೆ ಸಿಲುಕಿ ಅರಣ್ಯ, ಪ್ರಾಣಿಗಳು ನಲುಗಿ ಹೋಗಿವೆ. ಹಿಂದೆಲ್ಲಾ ಹುಲಿ ಚರ್ಮ, ಹುಲಿ ಉಗುರು, ಜಿಂಕೆ ಕೊಂಬು ಇತ್ಯಾದಿ ಉತ್ಪನ್ನಗಳನ್ನು ಮನೆಗಳಲ್ಲಿ ಅಲಂಕಾರಿಕವಾಗಿ ಇಡುತ್ತಿದ್ದ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿದ್ದೇವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾದ ಮೇಲೆ ಆ ಪರಿಪಾಠ ಕಡಿಮೆಯಾಯಿತು. ಆದರೆ ಈಗಲೂ ಅಲ್ಲೊಂದು ಇಲ್ಲೊಂದು ಅಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಅಕ್ರಮವಾಗಿ ವನ್ಯಜೀವಿಗಳ ಉತ್ಪನ್ನಗಳನ್ನು ಇಟ್ಟುಕೊಳ್ಳುವುದು ಅಪರಾಧ ಎನ್ನುವುದು ಬಹುತೇಕರಿಗೆ ತಿಳಿದೇ ಇಲ್ಲ.
ಇದಕ್ಕೆ ಸಾಕ್ಷಿ ಎಂಬಂತೆ ರಾಜ್ಯದಲ್ಲಿ ಪ್ರಕರಣವೊಂದು ಸದ್ದು ಮಾಡುತ್ತಿದೆ. ಹುಲಿ ಉಗುರಿನ ಪೆಂಡೆಂಟ್ (Tiger Claw Pendant) ಅನ್ನು ಧರಿಸಿದ್ದ ಆರೋಪದ ಮೇಲೆ ವರ್ತೂರು ಸಂತೋಷ್ ಎಂಬಾತನನ್ನು ಬಂಧಿಸಲಾಯಿತು. ಅದರ ಪಾಶ ಈಗ ಸ್ಯಾಂಡಲ್‌ವುಡ್‌ನ ಕೆಲ ಖ್ಯಾತ ನಟರಿಗೂ ಸುತ್ತಿಕೊಂಡಿದೆ. ಯಾವುದೇ ಕಾಡು ಪ್ರಾಣಿ ಅಥವಾ ಪಕ್ಷಿಯ ದೇಹದ ಯಾವುದೇ ಭಾಗವನ್ನು ಸಂಗ್ರಹಿಸಿದರೂ ಅದು ಶಿಕ್ಷಾರ್ಹ ಅಪರಾಧ. ಇದನ್ನು ಎಲ್ಲರೂ ತಿಳಿದಿರಲೇಬೇಕಾದ ವಿಚಾರ. ಆದರೆ ಎಷ್ಟೋ ಜನಕ್ಕೆ ಇದರ ಅರಿವೇ ಇಲ್ಲ. ಇದನ್ನೂ ಓದಿ: ಹುಲಿ ಉಗುರು ಪ್ರಕರಣ: ಸಂಕಟ ಬಿಚ್ಚಿಟ್ಟ ನಟ ಜಗ್ಗೇಶ್
Advertisement
Advertisement
ರಾಷ್ಟ್ರ ಪ್ರಾಣಿ ಹುಲಿಯ ಉಗುರನ್ನು ಆಭರಣ ಮಾಡಿಕೊಂಡು ಧರಿಸುವುದು ಕೂಡ ಶಿಕ್ಷಾರ್ಹ ಅಪರಾಧವೇ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯಾಧಿಕಾರಿಗಳು ವರ್ತೂರು ಸಂತೋಷ್‌ನನ್ನು ತಕ್ಷಣ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈ ಕೇಸ್ ಹೆಚ್ಚು ಸದ್ದು ಮಾಡುವುದಕ್ಕೆ ಕಾರಣ ಸ್ಯಾಂಡಲ್‌ವುಡ್ ಖ್ಯಾತ ನಟರು (ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ), ಸ್ವಾಮೀಜಿಗಳು ಮತ್ತು ರಾಜಕಾರಣಿಗಳು. ಅವರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿ ಕಾಣಿಸಿಕೊಂಡಿರುವುದು ಚರ್ಚೆ ಹುಟ್ಟುಹಾಕಿದೆ. ವರ್ತೂರು ಸಂತೋಷ್‌ನನ್ನೇನೊ ಬಂಧಿಸಲಾಯಿತು. ಈ ನಟರನ್ನು ಏನು ಮಾಡ್ತೀರಿ? ಯಾವಾಗ ಬಂಧಿಸುತ್ತೀರಿ? ಉಳ್ಳವರಿಗೆ ಒಂದು, ಇಲ್ಲದವರಿಗೆ ಒಂದು ನ್ಯಾಯಾನಾ ಎಂದು ಜನ ಖಾರವಾಗಿ ಪ್ರಶ್ನಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ನಾವು ವನ್ಯಜೀವಿಗಳ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಆಗ ಇಂತಹ ಅಪರಾಧಗಳು ನಿಯಂತ್ರಣಕ್ಕೆ ಬರಬಹುದು. ಹಾಗಾದರೆ, ಏನಿದು ವನ್ಯಜೀವಿ ಸಂರಕ್ಷಣಾ ಕಾಯ್ದೆ? ಕಾಯ್ದೆಯ ಪ್ರಮುಖಾಂಶಗಳೇನು? ಈ ಕಾಯ್ದೆ ಉಲ್ಲಂಘಿಸಿದವರಿಗೆ ಶಿಕ್ಷೆ ಏನು ಎನ್ನುವುದನ್ನು ತಿಳಿಯೋಣ. ಇದು ಹುಲಿ ಉಗುರಿಗೆ ಸಂಬಂಧಿಸಿದ ಪ್ರಕರಣ ಆಗಿರುವುದರಿಂದ, 2023ರ ಹುಲಿ ಗಣತಿಯಲ್ಲೇನಿದೆ? ದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ? ರಾಜ್ಯದಲ್ಲಿ ಹುಲಿ ಸಂರಕ್ಷಣೆ ಕ್ರಮಗಳೇನು ಎಂಬ ಬಗ್ಗೆಯೂ ತಿಳಿದುಕೊಳ್ಳೋಣ. ಇದನ್ನೂ ಓದಿ: ಹುಲಿ ಉಗುರು: ಬಿಗ್ ಬಾಸ್ ಸ್ಪರ್ಧಿ ಆರ್ಯವರ್ಧನ್ ಗೂ ನೋಟಿಸ್
Advertisement
ವನ್ಯಜೀವಿ ಎಂದರೇನು?
ಸಾಕುಪ್ರಾಣಿಯಲ್ಲದ ಯಾವುದೇ ಪ್ರಾಣಿ ವನ್ಯಜೀವಿ. ಆದರೆ ವನ್ಯಜೀವಿ ಎನ್ನುವುದು ಮನುಷ್ಯರ ನೇರ ನಿಯಂತ್ರಣದಿಂದ ಹೊರಗಿರುವ ಜೀವಿಗಳು. ಸಾಕುಪ್ರಾಣಿಗಳನ್ನು ಮನುಷ್ಯರು ಸ್ವಂತ ಉದ್ದೇಶಗಳಿಗಾಗಿ ಆಹಾರ ಮತ್ತು ಶ್ರಮಕ್ಕಾಗಿ ಬಳಸುತ್ತಾರೆ. ಆದರೆ ವನ್ಯಜೀವಿಗಳು ತಾವು ಬಯಸಿದಂತೆ ಬದುಕಲು ಮುಕ್ತವಾಗಿವೆ. ಅವು ಯಾವುದೇ ರೀತಿಯ ಕೆಲಸ ಮಾಡಬೇಕಾಗಿಲ್ಲ. ಮನುಷ್ಯರಿಗೆ ಸೇವೆ ಸಲ್ಲಿಸಬೇಕಾಗಿಲ್ಲ. ಅವು ಯಾರೊಬ್ಬರ ಒಡೆತನದಲ್ಲಿಲ್ಲ. ಮನುಷ್ಯನಿಗಾಗಿ ಏನನ್ನೂ ಮಾಡಲು ಬಾಧ್ಯತೆ ಹೊಂದಿರುವುದಿಲ್ಲ. ವನ್ಯಜೀವಿಗಳಿಗೆ ಯಾರಿಂದಲೂ ಆಹಾರ ಬೇಕಾಗಿಲ್ಲ. ಅವುಗಳ ಕಾಳಜಿ ವಹಿಸಬೇಕಾಗಿಲ್ಲ. ವನ್ಯಜೀವಿಗಳೆಂದರೆ, ಕೇವಲ ಅರಣ್ಯ ಪ್ರದೇಶದ ಒಳಗಿರುವ ಜೀವಿಗಳು ಮಾತ್ರವಲ್ಲ; ಕಾಡಿನ ಹೊರಗೆ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಸಾಕಾಣಿಕೆಗೆ ಒಳಗಾಗದ ವನ್ಯಸ್ಥಿತಿಯ ಎಲ್ಲಾ ಪ್ರಾಣಿ-ಪಕ್ಷಿಗಳು ಕೂಡ ವನ್ಯಜೀವಿಗಳೇ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972
ಭಾರತೀಯ ಸಂಸತ್ತು 1972 ರಲ್ಲಿ ವನ್ಯಜೀವಿ (ಸಂರಕ್ಷಣೆ) ಕಾಯಿದೆಯನ್ನು ಜಾರಿಗೊಳಿಸಿತು. ಇದು ದೇಶದಲ್ಲಿ ವನ್ಯಜೀವಿಗಳಿಗೆ (ಸಸ್ಯ ಮತ್ತು ಪ್ರಾಣಿಗಳ) ರಕ್ಷಣೆ ಒದಗಿಸುವ ಪ್ರಮುಖ ಶಾಸನವಾಗಿದೆ. ದೇಶದ ಕಾಡು ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯ ಪ್ರಭೇದಗಳಿಗೆ ರಕ್ಷಣೆ ಒದಗಿಸುವುದು ಈ ಕಾಯ್ದೆಯ ಮೂಲ ಉದ್ದೇಶವಾಗಿದೆ. ಈ ಕಾಯಿದೆಯನ್ನು ಕೊನೆಯ ಬಾರಿಗೆ 2006 ರಲ್ಲಿ ತಿದ್ದುಪಡಿ ಮಾಡಲಾಯಿತು. 2013 ರಲ್ಲಿ ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಪರಿಚಯಿಸಲಾಯಿತು. ಆದರೆ ಅದನ್ನು 2015 ರಲ್ಲಿ ಹಿಂಪಡೆಯಲಾಯಿತು. ಇದನ್ನೂ ಓದಿ: ಹುಲಿ ಉಗುರು ಪ್ರಕರಣ: ಹೈಕೋರ್ಟ್ ಮೆಟ್ಟಿಲೇರಿದ ಜಗ್ಗೇಶ್
ವನ್ಯಜೀವಿ ಕಾಯ್ದೆಗೆ ಸಾಂವಿಧಾನಿಕ ನಿಬಂಧನೆಗಳೇನು?
ಭಾರತ ಸಂವಿಧಾನದ 48A ಪರಿಚ್ಛೇದವು ಪರಿಸರ ರಕ್ಷಣೆ, ಸುಧಾರಣೆ, ವನ್ಯಜೀವಿಗಳು ಮತ್ತು ಅರಣ್ಯಗಳನ್ನು ರಕ್ಷಿಸಲು ರಾಜ್ಯಗಳಿಗೆ ನಿರ್ದೇಶನ ನೀಡುತ್ತದೆ. ಇದನ್ನು 1976 ರಲ್ಲಿ 42ನೇ ತಿದ್ದುಪಡಿಯೊಂದಿಗೆ ಸಂವಿಧಾನಕ್ಕೆ ಸೇರಿಸಲಾಯಿತು. ಆರ್ಟಿಕಲ್ 51A ಭಾರತದ ಜನರಿಗೆ ಕೆಲವು ಮೂಲಭೂತ ಕರ್ತವ್ಯಗಳನ್ನು ವಿಧಿಸುತ್ತದೆ. ಕಾಡುಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸಬೇಕು ಮತ್ತು ಸುಧಾರಿಸಬೇಕು. ಜೀವಿಗಳ ಬಗ್ಗೆ ಸಹಾನುಭೂತಿ ಹೊಂದುವುದು ಮುಖ್ಯ.
ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಶಾಸನದ ಇತಿಹಾಸವೇನು?
ವನ್ಯಜೀವಿ ಸಂರಕ್ಷಣೆಗೆ (Wildlife Protection Act) ಸಂಬಂಧಿಸಿದ ಕಾನೂನನ್ನು ಮೊದಲ ಬಾರಿಗೆ 1887 ರಲ್ಲಿ ಬ್ರಿಟಿಷ್ ಭಾರತ ಸರ್ಕಾರವು ವೈಲ್ಡ್ ಬರ್ಡ್ಸ್ ಪ್ರೊಟೆಕ್ಷನ್ ಆಕ್ಟ್-1887 ಎಂದು ಪರಿಚಯಿಸಿತು. ಸಂತಾನವೃದ್ಧಿಯ ಅವಧಿಯಲ್ಲಿ ಕಾಡು ಪಕ್ಷಿಗಳನ್ನು ಹಿಡಿಯುವುದು, ಕೊಲ್ಲುವುದು, ಮಾರಾಟ ಮಾಡುವುದನ್ನು ನಿಷೇಧಿಸುವ ಕಾನೂನು ಇದಾಗಿತ್ತು. ಎರಡನೇ ಕಾನೂನನ್ನು 1912 ರಲ್ಲಿ ವೈಲ್ಡ್ ಬರ್ಡ್ಸ್ ಮತ್ತು ಅನಿಮಲ್ಸ್ ಪ್ರೊಟೆಕ್ಷನ್ ಆಕ್ಟ್ ಎಂದು ಕರೆಯಲಾಯಿತು. 1935 ರಲ್ಲಿ ವೈಲ್ಡ್ ಬರ್ಡ್ಸ್ ಮತ್ತು ಅನಿಮಲ್ಸ್ ಪ್ರೊಟೆಕ್ಷನ್ (ತಿದ್ದುಪಡಿ) ಕಾಯ್ದೆ-1935 ಅನ್ನು ಅಂಗೀಕರಿಸಲಾಯಿತು. ಬ್ರಿಟಿಷರ ಕಾಲದಲ್ಲಿ ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡಿರಲಿಲ್ಲ. 1960 ರಲ್ಲಿ ಮಾತ್ರ ವನ್ಯಜೀವಿಗಳ ರಕ್ಷಣೆ ಮತ್ತು ಕೆಲವು ಪ್ರಭೇದಗಳು ನಾಶವಾಗುವುದನ್ನು ತಡೆಯುವ ವಿಷಯವು ಮುನ್ನೆಲೆಗೆ ಬಂದಿತು.
ಏನಿದು ವನ್ಯಜೀವಿ ಸಂರಕ್ಷಣಾ ಕಾಯ್ದೆ?
ಇಡೀ ದೇಶಕ್ಕೆ ಅನ್ವಯವಾಗುವ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಬಲ ತುಂಬುವ ಅತಿ ಪ್ರಮುಖ ಕಾಯ್ದೆ ಇದಾಗಿದೆ. ಈ ಕಾಯ್ದೆ ಪ್ರಕಾರ, ವನ್ಯಜೀವಿಗಳನ್ನು ಕೊಲ್ಲುವುದಷ್ಟೇಯಲ್ಲ, ಅವುಗಳನ್ನು ಬಂಧಿಸುವುದು, ಬಂಧಿಸಿ ಸಾಕುವುದು, ಸಾಗಾಣಿಕೆ ಮಾಡುವುದು, ಹಿಂಸಿಸುವುದು, ಅವುಗಳ ಯಾವುದೇ ಅಂಗಾಂಗಗಳನ್ನು ಮಾರುವುದು, ಕೊಂಡುಕೊಳ್ಳುವುದು, ಇಟ್ಟುಕೊಳ್ಳುವುದು… ಇತ್ಯಾದಿಗಳು ಕೂಡ ಅಪರಾಧ. ಸಂರಕ್ಷಿತ ಅರಣ್ಯ ಪ್ರದೇಶಗಳ (ವನ್ಯಜೀವಿಧಾಮಗಳು, ಹುಲಿ ಸಂರಕ್ಷಿತ ಪ್ರದೇಶ, ರಾಷ್ಟ್ರೀಯ ಉದ್ಯಾನ ಇತ್ಯಾದಿ) ಒಳಗೆ ಅನಧಿಕೃತವಾಗಿ ಹೋಗುವುದು ಕೂಡ ಅಪರಾಧ. ಇದನ್ನೂ ಓದಿ: ನಕಲಿ ಹುಲಿ ಉಗುರು ಧರಿಸದಂತೆ ಈಶ್ವರ್ ಖಂಡ್ರೆ ಮನವಿ – ಸರ್ಕಾರಕ್ಕೆ ಮರಳಿಸಲು ಅವಕಾಶಕ್ಕೆ ಚಿಂತನೆ
ನಿಯಮ ಉಲ್ಲಂಘಿಸಿದರೆ ಶಿಕ್ಷೆ ಏನು?
ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯ ಗಂಭೀರ ಅಪರಾಧಗಳಿಗೆ ಗರಿಷ್ಟ 7 ವರ್ಷಗಳ ವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ವಿಧಿಸಬಹುದು. ದಂಡವನ್ನೂ ವಿಧಿಸಬಹುದು.
ಯಾವುದೇ ವ್ಯಕ್ತಿಯು ಹುಲಿ ಮೀಸಲು ಪ್ರದೇಶದ ಪ್ರಮುಖ ಪ್ರದೇಶಕ್ಕೆ ಸಂಬಂಧಿಸಿದಂತೆ ಅಪರಾಧ ಮಾಡಿದರೆ, ಬೇಟೆಯಾಡಿದರೆ, ಅಂತಹ ಅಪರಾಧಗಳಿಗೆ 3 ವರ್ಷಗಳಿಗಿಂತ ಮೇಲ್ಪಟ್ಟು 7 ವರ್ಷಗಳ ವರೆಗೆ ಜೈಲು ಶಿಕ್ಷೆ ಇರುತ್ತದೆ. ಇದರ ಜೊತೆ ದಂಡವೂ ಇರಲಿದೆ. ಅಪರಾಧದ ಗಂಭೀರತೆ ಆಧಾರದಲ್ಲಿ ಶಿಕ್ಷೆ ಹಾಗೂ ದಂಡದ ಪ್ರಮಾಣ ವಿಸ್ತರಿಸಲಿದೆ.
ಹುಲಿ ಗಣತಿ 2023
ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯವು ‘ಅಖಿಲ ಭಾರತ ಹುಲಿಗಳ ಅಂದಾಜು-2022’ ಕುರಿತ ವರದಿಯನ್ನು ಜುಲೈನಲ್ಲಿ ಬಿಡುಗಡೆ ಮಾಡಿದೆ. ದೇಶದಲ್ಲಿ ಕಳೆದ 4 ವರ್ಷಗಳಲ್ಲಿ ಹುಲಿಗಳ ಸಂಖ್ಯೆ 700 ರಷ್ಟು ಹೆಚ್ಚಾಗಿದೆ. ಒಟ್ಟು ಹುಲಿಗಳ ಸಂಖ್ಯೆ 3,682 ಕ್ಕೆ ಏರಿದೆ. 785 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. 563 ಹುಲಿಗಳಿರುವ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಇದನ್ನೂ ಓದಿ: ರಾಷ್ಟ್ರಪಕ್ಷಿ ನವಿಲು ಮಾಂಸ ಭಕ್ಷಣೆಗೆ ಮುಂದಾಗಿದ್ದ ಮೂವರ ಬಂಧನ
ಯಾವ ರಾಜ್ಯದಲ್ಲಿ ಎಷ್ಟು ಹುಲಿಗಳಿವೆ?
ಬಿಹಾರದಲ್ಲಿ 54 ಹುಲಿಗಳಿವೆ. ಉತ್ತರಾಖಂಡ – 560, ಉತ್ತರ ಪ್ರದೇಶ – 205, ಆಂಧ್ರಪ್ರದೇಶ – 65, ತೆಲಂಗಾಣ – 21, ಛತ್ತೀಸಗಢ – 17, ಜಾರ್ಖಂಡ್ – 1, ಮಧ್ಯಪ್ರದೇಶ – 785, ಮಹಾರಾಷ್ಟ್ರ – 444, ಒಡಿಶಾ – 20, ರಾಜಸ್ಥಾನ – 88, ಗೋವಾ – 5, ಕರ್ನಾಟಕ – 563, ಕೇರಳ – 213, ತಮಿಳುನಾಡು – 306, ಅರುಣಾಚಲ ಪ್ರದೇಶ – 9, ಅಸ್ಸಾಂ – 227, ಮಿಜೊರಾಂ – 0, ಮೇಘಾಲಯ – 0, ಪಶ್ಚಿಮ ಬಂಗಾಳ – 2, ಈಶಾನ್ಯ ರಾಜ್ಯಗಳು, ಬ್ರಹ್ಮಪುತ್ರ – 236, ಸುಂದರಬನ – 101 ಹುಲಿಗಳಿವೆ.
Web Stories