– ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಸೀ ಪ್ಲೇನ್ ಹಾರಾಟ
ಪ್ರವಾಸೋದ್ಯಮ ಉತ್ತೇಜಿಸಲು ಮತ್ತು ಪ್ರಯಾಣಿಕರಿಗೆ ವಿಶೇಷ ಪ್ರಯಾಣದ ಅನುಭವದ ಜೊತೆಗೆ ಇನ್ನಿತರ ತುರ್ತು ಸಾರಿಗೆ ಸೇವೆಗಳ ಉದ್ದೇಶ ಹೊಂದಿರುವ ‘ಸೀ ಪ್ಲೇನ್ ಯೋಜನೆ’ (Sea Plane) ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಕೇರಳದಲ್ಲಿ ಜಲ ವಿಮಾನ ಸೇವೆಯನ್ನು ಆರಂಭಿಸಲಾಗಿದೆ. ಈ ವಿಶೇಷ ವಿಮಾನದಲ್ಲಿ ಹಾರಾಟ ನಡೆಸಿ ಪ್ರಯಾಣಿಕರು ಖುಷಿಪಟ್ಟಿದ್ದಾರೆ. ನಿಜಕ್ಕೂ ಜನರಿಗೆ ಇದೊಂದು ವಿಶೇಷ ಪ್ರಯಾಣದ ಅನುಭವ ಒದಗಿಸುತ್ತದೆ.
ಆರ್‌ಸಿಎಸ್-ಉಡಾನ್ ಯೋಜನೆಯಡಿಯಲ್ಲಿ ಪ್ರಾದೇಶಿಕ ವಾಯು ಸಂಪರ್ಕ ಹೆಚ್ಚಿಸಿ, ಜಲ-ಆಧಾರಿತ ವಾಯುಯಾನದ ಮೂಲಕ ಪ್ರವಾಸೋದ್ಯಮ ಉತ್ತೇಜಿಸಲು ಕೇಂದ್ರ ಸರ್ಕಾರ ಭಾರತದಲ್ಲಿ ಸೀ ಪ್ಲೇನ್ ಯೋಜನೆ ಜಾರಿಗೆ ತಂದಿತು. 2020ರಲ್ಲಿ ಗುಜರಾತ್‌ನ ನರ್ಮದಾ ಜಿಲ್ಲೆಯ ಸಬರಮತಿ ನದಿಯಲ್ಲಿ ಮೊದಲನೇ ಸೀ ಪ್ಲೇನ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಕೇರಳದಲ್ಲೂ ಈಗ ಯೋಜನೆಯನ್ನು ಯಶಸ್ವಿಯಾಗಿ ಪರಿಚಯಿಸಲಾಗಿದೆ.
ಏನಿದು ಸೀ ಪ್ಲೇನ್? ಇದರ ವಿಶೇಷತೆ ಏನು? ಪ್ರಯಾಣಿಕರಿಗೆ ಇದರಿಂದಾಗುವ ಅನುಕೂಲಗಳೇನು? ಕೇರಳದಂತೆಯೇ ಕರ್ನಾಟಕದಲ್ಲೂ ಯೋಜನೆ ಶೀಘ್ರ ಜಾರಿಯಾಗುತ್ತಾ ಎಂಬ ಅನೇಕ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಕೇರಳದಲ್ಲಿ ಸೀ ಪ್ಲೇನ್ ಟೇಕಾಫ್!
ಕೇರಳದ ಮಹತ್ವಾಕಾಂಕ್ಷೆಯ ಸೀ ಪ್ಲೇನ್ (ಜಲ ವಿಮಾನ) ಯೋಜನೆಯು ಟೇಕಾಫ್ ಆಗಿದೆ. ಮೊದಲ ಸೀಪ್ಲೇನ್ ನ.10 ರಂದು ಮಧ್ಯಾಹ್ನ 2:30ಕ್ಕೆ ಕೊಚ್ಚಿಯ ಬೋಲ್ಗಟ್ಟಿ ಹಿನ್ನೀರಿನಲ್ಲಿ ಇಳಿಯಿತು. ಪ್ರವಾಸೋದ್ಯಮ ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ಅವರು ನ.11 ಬೆಳಗ್ಗೆ 9:30 ಕ್ಕೆ ಬೋಲ್ಗಟ್ಟಿಯಿಂದ ಮುನ್ನಾರ್ ಬಳಿಯ ಮಟ್ಟುಪೆಟ್ಟಿ ಜಲಾಶಯಕ್ಕೆ ಪ್ರಾಯೋಗಿಕ ಸೀ ಪ್ಲೇನ್ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ಸೀ ಪ್ಲೇನ್ ಎಂದರೇನು?
ನೀರಿನ ಮೇಲಿನಿಂದಲೇ ಹಾರಾಟ ನಡೆಸುವ ಮತ್ತು ನೀರಿನ ಮೇಲೆಯೇ ಇಳಿಯುವ ವಿಮಾನ ಸಾರಿಗೆ ವ್ಯವಸ್ಥೆಯೇ ಸೀ ಪ್ಲೇನ್.
ವಿಶೇಷತೆ ಏನು?
ಇದೊಂದು ಉಭಯಚರ ವಿಮಾನ. ಭೂಮಿ ಮತ್ತು ನೀರು ಎರಡರಲ್ಲೂ ಟೇಕಾಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯ ಹೊಂದಿದೆ.
ಉದ್ಘಾಟನೆಯಾಗಿದ್ದೆಲ್ಲಿ?
ಕೇರಳ ರಾಜ್ಯದಲ್ಲಿ ಜಲ ವಿಮಾನಕ್ಕೆ ಪ್ರಾಯೋಗಿಕ ಚಾಲನೆ ನೀಡಲಾಯಿತು.
ಎಷ್ಟು ಜನ ಪ್ರಯಾಣಿಸಬಹುದು?
ವಿಮಾನದಲ್ಲಿ ಒಮ್ಮೆ 9 ಮಂದಿ ಪ್ರಯಾಣಿಸಬಹುದು.
ಕೊಚ್ಚಿಯಿಂದ ಮನ್ನಾರ್‌ಗೆ ಕೇವಲ 25 ನಿಮಿಷ?
* ಕೇವಲ 25 ನಿಮಿಷಗಳಲ್ಲಿ ಕೊಚ್ಚಿಯಿಂದ ಮನ್ನಾರ್‌ಗೆ ಪ್ರಯಾಣಿಸಬಹುದು. (ರಸ್ತೆಯ ಮೂಲಕ ಮನ್ನಾರ್ ತಲುಪಲು ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 3 ಗಂಟೆಗಳು ಮತ್ತು ಎರ್ನಾಕುಲಂ ರೈಲು ನಿಲ್ದಾಣದಿಂದ 3.5 ಗಂಟೆಗಳು ತೆಗೆದುಕೊಳ್ಳುತ್ತದೆ)
* ವೈದ್ಯಕೀಯ ಸಾರಿಗೆ, ತುರ್ತು ಸ್ಥಳಾಂತರಿಸುವಿಕೆ, ವಿಐಪಿ ಟ್ರಾವೆಲ್ಸ್ ವಲಯಗಳನ್ನು ಉತ್ತೇಜಿಸುತ್ತದೆ.
ರಮಣೀಯ ಸ್ಥಳಗಳ ವೀಕ್ಷಣೆ
ಜಲ ವಿಮಾನಗಳು ದೊಡ್ಡ ಕಿಟಕಿಗಳ ಮೂಲಕ ಬೆರಗುಗೊಳಿಸುವ ವೈಮಾನಿಕ ವೀಕ್ಷಣೆಯ ಪ್ರಯೋಜನವನ್ನು ನೀಡುತ್ತವೆ. ಪ್ರಯಾಣಿಕರಿಗೆ ಕೇರಳದ ರಮಣೀಯ ಭೂದೃಶ್ಯಗಳು, ವಿಶೇಷವಾಗಿ ಪಶ್ಚಿಮ ಘಟ್ಟಗಳು ಮತ್ತು ಮುನ್ನಾರ್‌ಗಳ ಮೇಲೆ ಅನನ್ಯ ಅನುಭವವನ್ನು ನೀಡುತ್ತದೆ.
ಮಟ್ಟುಪೆಟ್ಟಿ, ಮಲಂಪುಳ, ವೆಂಬನಾಡು, ಅಷ್ಟಮುಡಿಕ್ಕಯಲ್, ಚಂದ್ರಗಿರಿಪುಳ ಮತ್ತು ಕೋವಲಂ ಸೇರಿದಂತೆ ರಾಜ್ಯದಾದ್ಯಂತ ಪ್ರಮುಖ ಜಲಮೂಲಗಳು ಮತ್ತು ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ ಸೀ ಪ್ಲೇನ್ ಪ್ರವಾಸೋದ್ಯಮ ಸರ್ಕ್ಯೂಟ್ ಅನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ.
ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿದರೆ ಪ್ರವಾಸ ಕಂಪನಿಗಳು ಮನ್ನಾರ್ ಮತ್ತು ಹತ್ತಿರದ ಪ್ರದೇಶಗಳಿಗೆ ಹೆಚ್ಚಿನ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಕರೆತರುತ್ತವೆ. ಅಲ್ಲದೆ, ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸೇವೆಗಾಗಿ ರೋಗಿಗಳನ್ನು ಸಾಗಿಸಬಹುದು. ಕಾಂತಲ್ಲೂರು ಮತ್ತು ಮರಯೂರಿನಲ್ಲಿರುವ ಸಮೀಪದ ಕುಗ್ರಾಮಗಳ ಜನರಿಗೆ ಇದು ಪ್ರಯೋಜನವನ್ನು ನೀಡುತ್ತದೆ.
ಟಿಕೆಟ್ ದರ ಎಷ್ಟು?
ಕೊಚ್ಚಿ-ಮುನ್ನಾರ್ ಸೀ ಪ್ಲೇನ್ ಟಿಕೆಟ್ ಶುಲ್ಕವನ್ನು ಅಧಿಕಾರಿಗಳು ಇನ್ನೂ ಘೋಷಿಸಿಲ್ಲ. ಏಕೆಂದರೆ, ಇದು ಪ್ರಾಯೋಗಿಕ ಹಂತದಲ್ಲಿದೆ. ಆದಾಗ್ಯೂ, ಈ ಹಿಂದೆ ಉಡಾನ್ ಯೋಜನೆಯಡಿಯಲ್ಲಿ ಈಗ ನಿಷ್ಕ್ರಿಯವಾಗಿರುವ ಗುರುಗ್ರಾಮ್‌ನಿಂದ ಸ್ಟ್ಯಾಚ್ಯು ಆಫ್ ಲಿಬರ್ಟಿ ಸೇವೆಗಳಿಗೆ ವಿಧಿಸಲಾದ ಶುಲ್ಕಗಳನ್ನು ಪರಿಗಣಿಸಿದರೆ, ಒಂದು ಮಾರ್ಗದ ದರಗಳು 1,500 ರೂ. ರಿಂದ 5,000 ರೂ. ವರೆಗೆ ವಿಧಿಸುವ ಸಾಧ್ಯತೆ ಇದೆ.
ಯಾವ ಸಮಯದಲ್ಲಿ ಹಾರಾಟ?
ಜಲ ವಿಮಾನಗಳು ಸಾಮಾನ್ಯವಾಗಿ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಹಗಲಿನ ಸಮಯದಲ್ಲಿ ಮಾತ್ರ ಹಾರಾಟ ನಡೆಸುತ್ತವೆ. ವಿಮಾನ ಹಾರಾಟ ನಡೆಸುವ ಮಾರ್ಗದಲ್ಲಿ ಹೆಚ್ಚಿನ ಭಾಗ ಅರಣ್ಯದಿಂದ ಕೂಡಿರುತ್ತದೆ. ಹೀಗಾಗಿ, ರಾತ್ರಿ ಸಮಯದ ಹಾರಾಟ ದುರ್ಗಮವಾಗಿರುತ್ತದೆ.
ಲಗೇಜ್ ಸಾಗಿಸಬಹುದೇ?
ಸೀ ಪ್ಲೇನ್‌ಗಳಲ್ಲಿ 25 ಕೆಜಿ ತೂಕದ ವರೆಗಿನ ಲಗೇಜ್‌ಗಳಿಗೆ ಅನುಮತಿ ಇರುತ್ತದೆ. 20 ಚೆಕ್-ಇನ್ ಬ್ಯಾಗೇಜ್ ಮತ್ತು 5 ಕೆಜಿ ಕ್ಯಾಬಿನ್ ಬ್ಯಾಗೇಜ್ ಸಾಗಿಸಬಹುದು.
ಸೀ ಪ್ಲೇನ್‌ಗಳಿಂದ ಆನೆಗಳ ಸಂಚಾರಕ್ಕೆ ಅಡ್ಡಿ?
ಸೀ ಪ್ಲೇನ್ ಶಬ್ದದಿಂದ ಮಟ್ಟುಪೆಟ್ಟಿಯಲ್ಲಿ ಆನೆಗಳ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಹತ್ತು ಕಾಡಾನೆಗಳಿವೆ. ನೀರು ಕುಡಿಯಲು ಮಟ್ಟುಪೆಟ್ಟಿ ಅಣೆಕಟ್ಟು ಮತ್ತು ಸಮೀಪದ ಪ್ರದೇಶಗಳಿಗೆ ಆಗಾಗ್ಗೆ ಬರುತ್ತಾರೆ. ಸೀ ಪ್ಲೇನ್ ಪ್ರೊಪೆಲ್ಲರ್‌ನ ವಿಝಿಂಗ್ ಶಬ್ದವು ಆನೆಗಳನ್ನು ಹೆದರಿಸಬಹುದು. ಹಾಗಾಗಿ, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಕೆಎಸ್‌ಇಬಿ, ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಟ್ಟುಪೆಟ್ಟಿ ಜಲಾಶಯಕ್ಕೆ ಸೀಪ್ಲೇನ್ ಇಳಿಸುವ ಕ್ರಮವನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಆರಂಭದಲ್ಲಿ ಇಡುಕ್ಕಿ ಅಣೆಕಟ್ಟಿನಲ್ಲಿ ಇಳಿಯಲು ಯೋಜಿಸಲಾಗಿದ್ದ ಸೀ ಪ್ಲೇನ್ ಅರಣ್ಯ ಇಲಾಖೆಯ ಆಕ್ಷೇಪಣೆಯಿಂದಾಗಿ ನಂತರ ಮಟ್ಟುಪೆಟ್ಟಿಗೆ ಸ್ಥಳಾಂತರಿಸಲಾಯಿತು.
ಕರ್ನಾಟಕಕ್ಕೂ ಬರುತ್ತಾ ಸೀ ಪ್ಲೇನ್?
ರಾಜ್ಯದಲ್ಲೂ ಜಲ ವಿಮಾನ ಪ್ರಾಯೋಗಿಕ ಹಾರಾಟ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಯ ಹಿನ್ನೀರಿನ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಸ್ಥಳ ನಿಗದಿಪಡಿಸಲಾಗಿದೆ. 12 ಪ್ರವಾಸಿಗರನ್ನು ಹೊತ್ತು ಸೀ ಪ್ಲೇನ್ ಕೆಆರ್‌ಎಸ್ ಹಿನ್ನೀರಿನಲ್ಲಿ ಹಾರಾಟ ನಡೆಸುವ ಸಾಧ್ಯತೆ ಇದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಸಾರಿಗೆ ಕೇಂದ್ರವಾಗಿ ಬಳಸಲಿವೆ ಎಂಬ ಮಾಹಿತಿ ಇದೆ.