-ಕರ್ನಾಟಕದಲ್ಲೂ ಮುಂಜಾಗ್ರತೆ ಕ್ರಮ; ಏರ್ಪೋರ್ಟ್‌ಗಳಲ್ಲಿ ನಿಗಾ
ಕೊರೊನಾ, ಝಿಕಾ ವೈರಸ್ ಭೀತಿ ಮಧ್ಯೆ ಮತ್ತೊಂದು ವೈರಸ್ ಕಂಟಕ!
ಕೊರೊನಾ, ಡೆಂಗ್ಯೂ ಆಯಿತು.. ಈಗ ಮತ್ತೊಂದು ವೈರಸ್ ಭೀತಿ ಭಾರತಕ್ಕೆ ಆವರಿಸಿದೆ. ಕೋವಿಡ್ ಸಾಂಕ್ರಾಮಿಕ ಪರಿಣಾಮ ಇನ್ನೂ ಮರೆಯಾಗಿಲ್ಲ. ಇದರ ನಡುವೆಯೇ ಎಂಪಾಕ್ಸ್ (Mpox) ಸೋಂಕು ಜಾಗತಿಕವಾಗಿ ಎಚ್ಚರಿಕೆಯ ಕರೆಗಂಟೆಯಾಗಿದೆ. ಮಾರಕ ಸೋಂಕು ಆಫ್ರಿಕಾಗಷ್ಟೇ ಸೀಮಿತವಾಗಿತ್ತು. ಆದರೆ ಈಗ ಏಷ್ಯಾ ಖಂಡಕ್ಕೂ ಕಾಲಿಟ್ಟಿದೆ. ಭಾರತದ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಸೋಂಕು ಪತ್ತೆಯಾಗಿರುವುದು ಭೀತಿ ಹೆಚ್ಚಿಸಿದೆ. ಕೊರೊನಾ ವೈರಸ್‌ಗಿಂತ ಮಂಕಿಪಾಕ್ಸ್ ನಿಧಾನವಾಗಿ ಹರಡುತ್ತದೆ. ಪ್ರಕರಣ ಹೆಚ್ಚಿದಷ್ಟು ಮಾರಕವಾಗಬಹುದು. ಹೀಗಾಗಿ ಭಾರತದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
Advertisement
WHO ಪ್ರಕಾರ, 2022 ರಿಂದ 116 ದೇಶಗಳಲ್ಲಿ ಜಾಗತಿಕವಾಗಿ 99,176 ಮಂಕಿಪಾಕ್ಸ್ (Monkey Pox) ಪ್ರಕರಣಗಳು ದೃಢಪಟ್ಟಿದ್ದು, 208 ಸಾವುಗಳು ವರದಿಯಾಗಿದ್ದವು. ಆದರೆ, ಈ ವರ್ಷ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. 2024 ರಲ್ಲಿ ಇದುವರೆಗೆ 15,600 ಪ್ರಕರಣಗಳು ಪತ್ತೆಯಾಗಿದ್ದು, 537 ಮಂದಿ ಬಲಿಯಾಗಿದ್ದಾರೆ. ಆಫ್ರಿಕಾದ ಹೊರಗೆ ಭಾರತದ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಈ ವೈರಸ್ ಸೋಂಕು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಅದರಲ್ಲೂ ಪಾಕ್ ಆಕ್ರಮಿತ ಕಾಶ್ಮೀರದಲ್ಲೇ 4 ಮಂದಿಗೆ ಸೋಂಕು ದೃಢಪಟ್ಟಿದೆ. ಡೆಡ್ಲಿ ವೈರಸ್ ಭಾರತಕ್ಕೆ ಕಾಲಿಡುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
Advertisement
ಏನಿದು ಮಂಕಿಪಾಕ್ಸ್? ಇದು ಮಾರಕ ಕಾಯಿಲೆಯೇ? ಇದರ ಹಿನ್ನೆಲೆ ಏನು? ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದೇಕೆ? ಭಾರತಕ್ಕೆ ಎಚ್ಚರಿಕೆ ಕರೆಗಂಟೆಯೇ? ಕರ್ನಾಟಕದಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆಯೇ? ಎಂಬೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಮಾಹಿತಿ.
Advertisement
ಮಂಕಿಪಾಕ್ಸ್ ಎಂದರೇನು?
ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಹರಡುವ ರೋಗವೇ ಮಂಕಿಪಾಕ್ಸ್. ಈ ವೈರಸ್ ಸಿಡುಬಿಗೆ ಕಾರಣವಾಗುವ ವೈರಾಣುವಿನ ವರ್ಗಕ್ಕೆ ಸೇರಿದ್ದಾಗಿದೆ.
Advertisement
ಎರಡು ವಿಧ?
ಕ್ಲಾಡ್ ಐ ಮತ್ತು ಕ್ಲಾಡ್ ಐಐ ಎಂಬ ಎರಡು ವಿಧದ ಮಂಕಿಪಾಕ್ಸ್ ಸೋಂಕುಗಳಿವೆ. ಕ್ಲಾಡ್ ಐ ಮಧ್ಯ ಆಫ್ರಿಕಾದಲ್ಲಿ ಕಂಡುಬಂತು. ಕ್ಲಾಡ್ ಐಐ ಪಶ್ಚಿಮ ಆಫ್ರಿಕಾದಲ್ಲಿ ಪತ್ತೆಯಾಗಿದೆ. ಐಬಿ ಎಂದು ಕರೆಯಲ್ಪಡುವ ಕ್ಲಾಡ್ ಐನ ಹೊಸ ರೂಪಾಂತರ ಬಹುಬೇಗ ಹರಡುತ್ತದೆ.
ಮೊದಲು ಪತ್ತೆಯಾಗಿದ್ದೆಲ್ಲಿ?
ಆಫ್ರಿಕಾ ಖಂಡದ ದೇಶಗಳು. (1958ರಲ್ಲಿ ಮಂಕಿಪಾಕ್ಸ್ ಮೊದಲ ಬಾರಿಗೆ ಪತ್ತೆಯಾಯಿತು. ಈ ವೈರಾಣುವಿನ ಮೂಲ ಯಾವುದು ಎಂದು ಈವರೆಗೆ ಪತ್ತೆಯಾಗಿಲ್ಲ).
ತಜ್ಞರು ಹೇಳೋದೇನು?
ಆಫ್ರಿಕಾದಲ್ಲಿನ ಬಾಚಿ ಹಲ್ಲು ಇರುವ ಪ್ರಾಣಿಗಳು (ಮೊಲ, ಇಲಿ, ಅಳಿಲು) ಮತ್ತು ಮಂಗಗಳಲ್ಲಿ ಈ ವೈರಾಣು ಇರಬಹುದು. ಅವುಗಳಿಂದ ಮನುಷ್ಯರಿಗೆ ಸೋಂಕು ತಗಲಬಹುದು ಎಂದು ಅಂದಾಜಿಸಲಾಗಿದೆ.
ಮನುಷ್ಯರಲ್ಲಿ ರೋಗ ಕಂಡುಬಂದಿದ್ದು ಯಾವಾಗ?
1970ರಲ್ಲಿ ಮನುಷ್ಯರಲ್ಲಿ ಮೊದಲಿಗೆ ಮಂಕಿಪಾಕ್ಸ್ ಕಾಣಿಸಿಕೊಂಡಿತು. 2022ರಲ್ಲಿ ಮಂಕಿಪಾಕ್ಸ್ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವು ದೇಶಗಳಲ್ಲಿ ಈ ರೋಗ ಕಾಣಿಸಿಕೊಂಡಿತ್ತು. 2022ರ ವರೆಗೆ ಪತ್ತೆಯಾದ ಮಂಕಿಪಾಕ್ಸ್ನ ಎಲ್ಲ ಪ್ರಕರಣಗಳು ಆಫ್ರಿಕಾದಿಂದ ಬಂದವರಲ್ಲಿಯೇ ಕಾಣಿಸಿಕೊಂಡಿದ್ದವು.
ಸೋಂಕಿನ ಲಕ್ಷಣಗಳೇನು?
ಸೋಂಕು ತಗುಲಿದ ನಂತರ 6ರಿಂದ 13 ದಿನಗಳಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ 5ರಿಂದ 21 ದಿನಗಳ ಅವಧಿಯಲ್ಲೂ ಕಾಣಿಸಿಕೊಳ್ಳಬಹುದು.
* ಜ್ವರ
* ತೀವ್ರವಾದ ತಲೆನೋವು
* ದುಗ್ಧರಸ ಗ್ರಂಥಿಗಳಲ್ಲಿ ಊತ
* ಬೆನ್ನು ನೋವು
* ಸ್ನಾಯು ನೋವು
* ತೀವ್ರತರ ನಿತ್ರಾಣ
* ಮುಖ, ಕೈ, ಕಾಲುಗಳು, ಹಸ್ತ, ಪಾದಗಳಲ್ಲಿ ದುದ್ದುಗಳು
* 95% ಪ್ರಕರಣಗಳಲ್ಲಿ ಮುಖದಲ್ಲಿಯೇ ಹೆಚ್ಚು ದುದ್ದುಗಳು ಕಾಣಿಸಿಕೊಳ್ಳುತ್ತವೆ
ಹರಡುವುದು ಹೇಗೆ?
ಸೋಂಕು ಪೀಡಿತ ಪ್ರಾಣಿಯಿಂದ ಮನುಷ್ಯರಿಗೆ, ವ್ಯಕ್ತಿಯಿಂದ ವ್ಯಕ್ತಿಗೆ ಮಂಕಿಪಾಕ್ಸ್ ವೈರಸ್ ಹರಡುತ್ತದೆ.
* ಸೋಂಕು ತಗುಲಿದ ಪ್ರಾಣಿಗಳ ಜೊತೆ ನೇರ ಸಂಪರ್ಕ ಹೊಂದುವ ಮನುಷ್ಯರಿಗೆ ರೋಗ ಹರಡುತ್ತದೆ.
* ರೋಗಕಾರಕ ಪ್ರಾಣಿಗಳ ರಕ್ತ, ಚರ್ಮ, ಗಾಯದಿಂದ.
* ರೋಗ ತಗುಲಿರುವ ಪ್ರಾಣಿಗಳ ಮಾಂಸ ಸೇವನೆ.
* ಸೋಂಕಿತ ವ್ಯಕ್ತಿಯ ಉಸಿರಾಟದಿಂದ ಹೊರಬೀಳುವ ಕಣಗಳಿಂದ.
* ಸೋಂಕಿತನ ಚರ್ಮದ ಗಾಯದಲ್ಲಿನ ಕೀವಿನಿಂದ.
* ಹೊಕ್ಕುಳಬಳ್ಳಿಯ ಮೂಲಕ ತಾಯಿಯಿಂದ ಭ್ರೂಣಕ್ಕೆ ಸೋಂಕು ಪ್ರಸರಣ.
* ಪ್ರಸವದ ವೇಳೆ ಅಥವಾ ಪ್ರಸವಾನಂತರ ನಿಕಟ ಸಂಪರ್ಕದಿಂದ.
ತಡೆ ಹೇಗೆ?
* ಚರ್ಮದಲ್ಲಿ ದುದ್ದು ಕಾಣಿಸಿಕೊಂಡವರಿಂದ ದೂರ ಇರುವುದು, ದುದ್ದು ಮುಟ್ಟದಿರುವುದು.
* ಸೋಂಕಿತರನ್ನು ಆಲಂಗಿಸಿಕೊಳ್ಳಬೇಡಿ, ಲೈಂಗಿಕ ಸಂಪರ್ಕ ಮಾಡಬೇಡಿ.
* ಸೋಂಕಿತರೊಂದಿಗೆ ಆಹಾರ ಸೇವನೆ, ಬಟ್ಟಲು, ಲೋಟ ಇತ್ಯಾದಿ ವಸ್ತುಗಳನ್ನು ಹಂಚಿಕೊಳ್ಳದಿರುವುದು.
* ಸೋಂಕಿತರು ಬಳಿಸಿದ ಬಟ್ಟೆ, ಟವಲ್, ಹೊದಿಕೆ ಮುಟ್ಟದಿರುವುದು.
* ಸೋಂಕಿತ ಪ್ರಾಣಿಗಳನ್ನು ಮುಟ್ಟದಿರುವುದು.
* ಸೋಂಕಿತರಿಂದ ಪ್ರತ್ಯೇಕವಾಗಿ ಇರಬೇಕು.
ಲಸಿಕೆ ಇದೆಯೇ?
ಮಂಕಿಪಾಕ್ಸ್ ನಿಯಂತ್ರಿಸುವ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಜೆವೈಎನ್‌ಎನ್‌ಇಒಎಸ್ (ಇಮ್ವಾನೆಕ್ಸ್), ಎಸಿಎಎಂ-2000 ಹೆಸರಿನ ಎರಡು ಲಸಿಕೆಗಳಿವೆ. (ವಿಶೇಷ ಸೂಚನೆ: ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇರುವವರು, ಚರ್ಮದ ಕಾಯಿಲೆ ಇರುವವರು ಈ ಲಸಿಕೆ ತೆಗೆದುಕೊಳ್ಳಬಾರದು.)
ಚಿಕಿತ್ಸೆ ಇದೆಯೇ?
ಮಂಕಿಪಾಕ್ಸ್‌ಗೆಂದೇ ಪ್ರತ್ಯೇಕವಾಗಿ ಚಿಕಿತ್ಸಾ ವಿಧಾನ ಇಲ್ಲ. ಮಂಕಿಪಾಕ್ಸ್ ಮತ್ತು ಸಿಡುಬು ಅನುವಂಶೀಯವಾಗಿ ಒಂದೇ ಎಂದು ಪರಿಗಣಿಸಲಾಗಿದೆ. ಹೀಗಾಗಿ ಸಿಡುಬು ನಿಯಂತ್ರಣಕ್ಕೆ ಬಳಸುವ ವೈರಸ್ ನಿಯಂತ್ರಣ ಔಷಧಿಯನ್ನೇ ಇದಕ್ಕೂ ಬಳಸಬಹುದು.
ಆರಂಭದಲ್ಲಿ ಆಫ್ರಿಕಾ ಖಂಡದ ದೇಶಗಳಲ್ಲಿ ಮಾತ್ರ ಮಂಕಿಪಾಕ್ಸ್ ಇತ್ತು. ಆದರೆ ಈಗ ಅದು ಜಗತ್ತಿನ ವಿವಿಧ ಭಾಗಗಳಿಗೆ ಹರಡಿದೆ. ಆದ್ದರಿಂದ ಇದನ್ನು ಜಾಗತಿಕ ಆರೋಗ್ಯ ಎಂದೇ ಪರಿಗಣಿಸಲಾಗುತ್ತಿದೆ. ಆಫ್ರಿಕಾದ ಹೊರಗೆ ಮಂಕಿಪಾಕ್ಸ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 2003ರಲ್ಲಿ. ಅಮೆರಿಕದಲ್ಲಿ ಈ ಪ್ರಕರಣ ಪತ್ತೆಯಾಯಿತು. ಘಾನಾದಿಂದ ತರಿಸಿಕೊಂಡಿದ್ದ ನಾಯಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅದರ ಬೆನ್ನಲ್ಲೇ ಅಮೆರಿಕದಲ್ಲಿ 70 ಪ್ರಕರಣಗಳು ವರದಿಯಾದವು. 2018ರಲ್ಲಿ ನೈಜೀರಿಯಾ ಮತ್ತು ಇಸ್ರೇಲ್‌ನಿಂದ ಬಂದ ಪ್ರಯಾಣಿಕರಲ್ಲಿ ಸೋಂಕು ಕಾಣಿಸಿಕೊಂಡಿತ್ತು. 2022ರ ಮೇಯಲ್ಲಿ ಆವರೆಗೆ ಸೋಂಕು ಇಲ್ಲದ ದೇಶಗಳಲ್ಲಿಯೂ ರೋಗ ಕಾಣಿಸಿಕೊಂಡಿದೆ.
ಪಾಕ್, ಸ್ವೀಡನ್‌ನಲ್ಲೂ ಸೋಂಕು ಪತ್ತೆ
ಆಫ್ರಿಕಾದಿಂದ ಹಿಂತಿರುಗಿದ ವ್ಯಕ್ತಿಯೊಬ್ಬನಲ್ಲಿ ಮಂಕಿಪಾಕ್ಸ್ ಇರುವುದು ದೃಢಪಟ್ಟಿದೆ ಎಂದು ಸ್ವೀಡನ್ ಹೇಳಿದೆ. ಪಾಕಿಸ್ತಾನದಲ್ಲೂ ಸೋಂಕು ದೃಢಪಟ್ಟಿದ್ದು, ಆಫ್ರಿಕಾದ ಹೊರಗೆ ಪ್ರಕರಣವನ್ನು ವರದಿ ಮಾಡಿದ ಎರಡನೇ ದೇಶವಾಗಿದೆ. ಗಲ್ಫ್ ದೇಶದಿಂದ ವಾಪಸ್ ಆಗಿದ್ದ ವ್ಯಕ್ತಿಯಲ್ಲಿ ರೋಗ ಪತ್ತೆಯಾಗಿದೆ.
600 ಮಂದಿ ಬಲಿ
ಮಂಕಿಪಾಕ್ಸ್ ರೋಗಕ್ಕೆ ಈವರೆಗೆ ಆಫ್ರಿಕಾದ ಕಾಂಗೋದಲ್ಲಿ 600 ಮಂದಿ ಬಲಿಯಾಗಿದ್ದಾರೆ. ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 16,000 ದಿಂದ 16,700 ಕ್ಕೆ ಏರಿಕೆಯಾಗಿದೆ.
ತೀವ್ರವಾಗಿ ಕಾಡಿತ್ತು ರೂಪಾಂತರಿ!
ಇತ್ತೀಚಿಗೆ ‘ಕ್ಲಾಡ್ ಐಬಿ’ ಎಂಬ ಹೊಸ ರೂಪಾಂತರ ಜಗತ್ತಿಗೆ ಆತಂಕ ಮೂಡಿಸಿತ್ತು. ಇದು ಆಫ್ರಿಕನ್ ಕಾಂಗೋಗೆ ಸ್ಥಳೀಯವಾಗಿರುವ ಕ್ಲಾಡ್ ಐನ ಒಂದು ಭಾಗ. ಕ್ಲೇಡ್ ಐಬಿ ಪ್ರಾಥಮಿಕವಾಗಿ ಮನೆಯವರ ಸಂಪರ್ಕಗಳ ಮೂಲಕ ಹರಡುತ್ತದೆ. ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಕಂಡುಬರುತ್ತದೆ. 2022 ರಲ್ಲಿ ಡಬ್ಲ್ಯೂಹೆಚ್‌ಒ ಜಾಗತಿಕ ಎಚ್ಚರಿಕೆ ನೀಡಿತು. ಕ್ಲಾಡ್ ಐಐಬಿ ಮುಖ್ಯವಾಗಿ ಲೈಂಗಿಕ ಸಂಪರ್ಕದ ಮೂಲಕ ಹರಡುತ್ತದೆ. ಜುಲೈ 2022 ರ ಹೊತ್ತಿಗೆ ಏಕಾಏಕಿ 116 ದೇಶಗಳಲ್ಲಿ ಸುಮಾರು 1,00,000 ಜನರಿಗೆ ಈ ಸೋಂಕು ಹರಡಿತು. ಪ್ರಾಥಮಿಕವಾಗಿ ಸಲಿಂಗಕಾಮಿ ಮತ್ತು ದ್ವಿಲಿಂಗಿ ಪುರುಷರ ಮೇಲೆ (ಮಹಿಳೆಯರು ಮತ್ತು ಪುರುಷರ ಜೊತೆ ಲೈಂಗಿಕ ಸಂಪರ್ಕ) ಇದು ಪರಿಣಾಮ ಬೀರಿತು. ಸುಮಾರು 200 ಜನರು ಬಲಿಯಾದರು. ಭಾರತದಲ್ಲಿ 27 ಸೋಂಕು ಪ್ರಕರಣಗಳು ಮತ್ತು ಒಂದು ಸಾವು ವರದಿಯಾಗಿತ್ತು.
ಕ್ಲಾಡ್ ಐಐಬಿಗೆ ಹೋಲಿಸಿದರೆ ಕ್ಲಾಡ್ ಐಬಿ ಕೂಡ ಒಂದೇ ರೀತಿಯ ಅನಾರೋಗ್ಯ ಉಂಟು ಮಾಡುತ್ತದೆ. ಆದರೆ ಇದು ವೇಗವಾಗಿ ಹರಡುತ್ತದೆ. ಹೆಚ್ಚಿನ ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ. ಪಶ್ಚಿಮ ಆಫ್ರಿಕಾದಲ್ಲಿ ಕ್ಲಾಡ್ 1ಬಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಇದು 1% ಸಾವಿನ ಪ್ರಮಾಣ ಹೊಂದಿದೆ (100 ರಲ್ಲಿ ಒಬ್ಬರ ಸಾವು ಆಗುತ್ತದೆ). 10% ರವರೆಗೆ ಸಾವಿನ ಪ್ರಮಾಣ ಹೆಚ್ಚಾಗುವಷ್ಟು ಪರಿಣಾಮ ಬೀರಬಲ್ಲದು ಎಂದು ತಜ್ಞರು ತಿಳಿಸಿದ್ದಾರೆ.
ಆರೋಗ್ಯ ತುರ್ತು ಸ್ಥಿತಿ ಘೋಷಣೆ
ಎಂಪಾಕ್ಸ್ ಜಾಗತಿಕವಾಗಿ ಮತ್ತೆ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಘೋಷಿಸಿದೆ. 2022ರಲ್ಲೂ ಇದೇ ರೀತಿ ತುರ್ತು ಸ್ಥಿತಿ ಘೋಷಿಸಿತ್ತು.
ಭಾರತದ ಏರ್‌ಪೋರ್ಟ್‌ಗಳಲ್ಲಿ ತೀವ್ರ ನಿಗಾ
ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಮುಖ್ಯವಾಗಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಜಾಗರೂಕತೆ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದೆ. ವಿದೇಶಗಳಿಂದ ಬರುವವರಿಗೆ ಸೋಂಕಿನ ಲಕ್ಷಣಗಳಿವೆಯೇ ಎಂಬ ಬಗ್ಗೆ ನಿಗಾ ವಹಿಸಲಾಗಿದೆ.
ಕರ್ನಾಟಕದಲ್ಲೂ ಹೈ ಅಲರ್ಟ್
ಹೊರದೇಶಗಳಲ್ಲಿ ಮಂಕಿಪಾಕ್ಸ್ ವೈರಸ್ ಕಂಡಬಂದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈಚೆಗೆ ಆರೋಗ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂಜಾಗೃತೆ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ. ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಪ್ರಾದೇಶಿಕ ನಿರ್ದೇಶಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಕುರಿತು ಚರ್ಚೆ ನಡೆಸಿದ ಸಚಿವರು, ಏರ್ಪೋರ್ಟ್ ಗಳಲ್ಲಿ ಮಂಕಿಪಾಕ್ಸ್ ವೈರಸ್ ಗುಣಲಕ್ಷಣಗಳು ಕಂಡುಬಂದರೆ ಎಚ್ಚರಿಕೆ ವಹಿಸುವಂತೆ ರಾಜ್ಯದ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಒಂದು ವೇಳೆ ಮಂಕಿಪಾಕ್ಸ್ ವೈರಸ್ ಪತ್ತೆಯಾದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಎಲ್ಲ ಜಿಲ್ಲಾಸ್ಪತ್ರೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳಲ್ಲಿ ವೈದ್ಯರಿಗೆ ತರಬೇತಿ ನೀಡಬೇಕು. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಇಲ್ಲಿಯ ವರೆಗೆ ಮಂಕಿಪಾಕ್ಸ್ ಬಂದಿಲ್ಲ. ಮೆಡಿಕಲ್ ಏಮರ್ಜನ್ಸಿ ಘೋಷಿಸುವ ಪರಿಸ್ಥಿತಿ ಇಲ್ಲ. ಆದರೆ ಹೊರದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಹಿನ್ನೆಲೆಯಲ್ಲಿ ವಿಶ್ವಾರೋಗ್ಯ ಸಂಸ್ಥೆ ಮೆಡಿಕಲ್ ಏಮರ್ಜೆನ್ಸಿ ಘೋಷಿಸಿದೆ. ಇದನ್ನ ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿ ಈಗಿನಿಂದಲೇ ಮುಂಜಾಗೃತೆ ವಹಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ತಯಾರಿಗಳನ್ನ ಮಾಡಿಕೊಳ್ಳಿ ಎಂದು ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.