ಯಾವುದೇ ದಂಪತಿಗೆ ತಮ್ಮದೇ ಮಗು ಇರಬೇಕು, ಲಾಲನೆ-ಪಾಲನೆ ಮಾಡಬೇಕು, ತುಂಟಾಟ ಆಡಬೇಕು, ವಂಶವನ್ನು ಮುಂದುವರಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ, ಕೆಲವು ದಂಪತಿಗೆ ಪರಿಸ್ಥಿತಿ ಹಾಗೂ ಕಾರಣಾಂತರಗಳಿಂದ ಸ್ವಂತ ಮಕ್ಕಳನ್ನು ಹೊಂದುವ ಭಾಗ್ಯವೇ ಇರಲ್ಲ. ಅಂಥವರ ಆಸೆ ಪೂರೈಸಲೆಂದೇ ಇರುವುದು ‘ಮಕ್ಕಳ ದತ್ತು’ ಸ್ವೀಕಾರ ಪದ್ಧತಿ. ಇದು ದತ್ತು ಪಡೆಯುವ ದಂಪತಿಗಷ್ಟೇ ಅಲ್ಲ, ಅನಾಥ ಮಗುವೊಂದಕ್ಕೆ ಅಪ್ಪ-ಅಮ್ಮನ ಸಾಂಗತ್ಯ ಕಲ್ಪಿಸಲು ಈ ಪದ್ಧತಿ ಸಹಕಾರಿ. ದತ್ತು ಸ್ವೀಕಾರ ಎಂಬುದು ಪೌರಾಣಿಕ ಭಾರತದಿಂದಲೂ ಚಾಲ್ತಿಯಲ್ಲಿದೆ. ಮಗ ಮಾತ್ರವೇ ತಂದೆಗೆ ಮೋಕ್ಷ ದೊರಕಿಸಿಕೊಡಬಲ್ಲ ಎಂಬ ನಂಬಿಕೆ ಆಗ ಇತ್ತು. ಹೀಗಾಗಿ, ಗಂಡುಮಕ್ಕಳು ಇಲ್ಲದವರು ದತ್ತು ತೆಗೆದುಕೊಳ್ಳುವ ಪರಿಪಾಠ ಆಗ ಇತ್ತು. ಹಿಂದೂ ಧಾರ್ಮಿಕ ಗ್ರಂಥಗಳಲ್ಲೂ ಇದನ್ನು ಉಲ್ಲೇಖಿಸಲಾಗಿದೆ.
ಅನಾಥ, ನಿರ್ಗತಿಕ ಮಕ್ಕಳಿಗೆ ಒಳ್ಳೆ ಕೌಟುಂಬಿಕ ವಾತಾವರಣ ಕಲ್ಪಿಸಿ, ತಂದೆ-ತಾಯಿ ಪ್ರೀತಿ, ವಾತ್ಸಲ್ಯ, ರಕ್ಷಣೆ ಒದಗಿಸಿ ಅವರ ಮುಂದಿನ ಭವಿಷ್ಯ ರೂಪಿಸುವುದು. ಹಾಗೆಯೇ, ಸ್ವಂತ ಮಕ್ಕಳನ್ನು ಹೊಂದಿಲ್ಲದ ಪೋಷಕರಿಗೆ ಮಕ್ಕಳಿಲ್ಲ ಎಂಬ ಕೊರಗನ್ನು ನೀಗಿಸಿ, ಜೀವನದಲ್ಲಿ ಉತ್ಸಾಹ ತುಂಬಲು ಮತ್ತು ಪೋಷಕರ ಜವಾಬ್ದಾರಿ ಸಿಗುವಂತೆ ಮಾಡುವುದು ದತ್ತು ಸ್ವೀಕಾರ ಕಾರ್ಯಕ್ರಮದ ಮುಖ್ಯ ಉದ್ದೇಶ. ದತ್ತು ಸ್ವೀಕಾರ ಪದ್ಧತಿಯನ್ನು ಸರ್ಕಾರಗಳು ಕಾನೂನು ವ್ಯಾಪ್ತಿಗೆ ತಂದು ನಿಯಮಗಳನ್ನು ರೂಪಿಸಿವೆ. ಕಾಲಕಾಲಕ್ಕೆ ನಿಯಮಗಳಿಗೆ ತಿದ್ದುಪಡಿಗಳನ್ನು ಸಹ ತರಲಾಗಿದೆ. ಆದರೆ, ಎಷ್ಟೋ ಮಂದಿಗೆ ಮಕ್ಕಳನ್ನು ದತ್ತು ಪಡೆಯುವುದು ಹೇಗೆ? ದತ್ತು ಸ್ವೀಕಾರಕ್ಕೆ ಇರುವ ಕಾನೂನು ನಿಯಮಗಳೇನು? ಪ್ರಕ್ರಿಯೆ ಹೇಗೆ ಎಂಬ ಬಗ್ಗೆ ಮಾಹಿತಿ ಇರಲ್ಲ.
Advertisement
ಏನಿದು ದತ್ತು ಸ್ವೀಕಾರ?
ಮಕ್ಕಳಿಲ್ಲದ ದಂಪತಿ ಅಥವಾ ಮಕ್ಕಳನ್ನು ಸಲಹುವ ಇಚ್ಛೆ ಹೊಂದಿರುವವರು ಅನಾಥ ಮಕ್ಕಳನ್ನು ಕಾನೂನುಬದ್ಧವಾಗಿ ಮತ್ತು ಸಾಮಾಜಿಕವಾಗಿ ದತ್ತು ಪಡೆಯುವ ಒಂದು ಪ್ರಕ್ರಿಯೆ. ದತ್ತು ಸ್ವೀಕಾರವು ಮಗುವಿನ ಮತ್ತು ದತ್ತು ಪೋಷಕರ ನಡುವೆ ಪರಸ್ಪರ ಹಕ್ಕು ಮತ್ತು ಬಾಧ್ಯತೆಯನ್ನು ಸ್ಥಾಪಿಸುತ್ತದೆ. ಆ ಮೂಲಕ ನೈಜ ತಂದೆ-ತಾಯಿ ಮತ್ತು ಮಗುವಿನ ನಡುವೆ ಇರುವ ಪರಸ್ಪರ ಹಕ್ಕು, ರಕ್ಷಣೆ ನೀಡುವುದಾಗಿದೆ. ದತ್ತು ಪ್ರಕ್ರಿಯೆಯು ಅನಾಥ, ಪರಿತ್ಯಕ್ತ ಮತ್ತು ನಿರ್ಗತಿಕ ಮಕ್ಕಳಿಗೆ ಪುನರ್ವಸತಿಗೆ ಸಹಾಯ ಮಾಡುವ ಕಾನೂನುಬದ್ಧ ಕಾರ್ಯಕ್ರಮವಾಗಿದೆ. ದತ್ತು ಸ್ವೀಕಾರ ಕಾರ್ಯಕ್ರಮವು ಮಕ್ಕಳಿಗೆ ಶಾಶ್ವತ ಕುಟುಂಬ ವ್ಯವಸ್ಥೆಯನ್ನು ಒದಗಿಸಲು ಸಹಾಯ ಮಾಡುತ್ತದೆ.
Advertisement
ಅನಾಥ ಮಕ್ಕಳಿಗೆ ಆಸರೆ
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕುಟುಂಬದ ಪ್ರೀತಿ ಮತ್ತು ವಾತ್ಸಲ್ಯವು ಅತ್ಯಂತ ಮಹತ್ವವಾದದ್ದು. ಮಕ್ಕಳ ಕುಟುಂಬದಲ್ಲಿ ಎಲ್ಲಾ ಸದಸ್ಯರೊಂದಿಗೆ ಭಾಂದವ್ಯ ಬೆಸೆಯಲು ಅವಕಾಶವಿರುತ್ತದೆ. ಆದರೆ, ಕೆಲವೊಮ್ಮೆ ದುರುದೃಷ್ಟಕರ ಘಟನೆಗಳಿಂದ ಮಕ್ಕಳು ಆನಾಥರಾಗುತ್ತಾರೆ. ಪೋಷಕರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ತಮ್ಮದಲ್ಲದ ತಪ್ಪಿಗೆ ಅವರಿಗೆ ಸೂಕ್ತ ಬೆಂಬಲ ಹಾಗೂ ಮಾರ್ಗದರ್ಶನವಿಲ್ಲದೇ ಕುಟುಂಬದಿಂದ ದೂರ ಉಳಿದು ಅನೇಕ ರೀತಿಯ ತೊಂದರೆ ದೌರ್ಜನ್ಯಕ್ಕೆ ಒಳಗಾಗಿ ಅವರ ಬಾಲ್ಯಾವಸ್ಥೆಯನ್ನು ಮತ್ತು ಮಕ್ಕಳ ಹಕ್ಕುಗಳನ್ನು ಅನುಭವಿಸದೇ ಕಮರಿಹೋಗುತ್ತಿವೆ. ಈ ನಿಟ್ಟಿನಲ್ಲಿ ಜೈವಿಕ ಪೋಷಕರಿಂದ ದೂರ ಉಳಿದ ಮಕ್ಕಳು, ಅನಾಥ ಹಾಗೂ ಪರಿತ್ಯಕ್ತ ಮಕ್ಕಳಿಗೆ ದತ್ತು ಇರಿಸುವುದರ ಮೂಲಕ ಮಕ್ಕಳ ಬೆಳವಣಿಗೆಗೆ ಚಿಕ್ಕಂದಿನಿಂದಲೇ ಸುಭದ್ರತೆಯನ್ನೊದಗಿಸುವುದಾಗಿದೆ.
Advertisement
ಕಾನೂನುಗಳಲ್ಲಿ ಏನಿದೆ?
ಭಾರತದ ವೈಯಕ್ತಿಕ ಕಾನೂನುಗಳಲ್ಲಿ ದತ್ತು ಸ್ವೀಕಾರದ ಅವಕಾಶ, ಪ್ರಕ್ರಿಯೆಗಳು, ದತ್ತು ಪಡೆದ ಮಕ್ಕಳ ಹಕ್ಕುಗಳು, ದತ್ತು ಪಡೆದವರ ಹಕ್ಕು ಮತ್ತು ಕರ್ತವ್ಯಗಳು, ದತ್ತು ನೀಡಿದವರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ. ಆರಂಭದ ಕಾಯ್ದೆಯಲ್ಲಿ ಹಲವು ಕೊರತೆಗಳಿದ್ದವು. ಕಾನೂನು ಆಯೋಗವು ನೀಡಿದ ಶಿಫಾರಸುಗಳ ಆಧಾರದಲ್ಲಿ ಈ ಕಾಯ್ದೆಗೆ ಹಲವು ಬಾರಿ ತಿದ್ದುಪಡಿ ತರಲಾಗಿದೆ. ದತ್ತು ಸ್ವೀಕಾರದಲ್ಲಿ ಉಪಯೋಗಿಸುವ ಎರಡು ಪ್ರಮುಖ ಕಾಯ್ದೆಗಳಿವೆ. 1) ದಿ ಹಿಂದೂ ಅಡಾಪ್ಷನ್ ಆ್ಯಂಡ್ ಮೇಂಟೆನೆನ್ಸ್ ಆ್ಯಕ್ಟ್ 1956 (ಹಿಂದೂ ದತ್ತಕ ಕಾಯ್ದೆ), 2) ಜೂವನೈಲ್ ಜಸ್ಟಿಸ್ ಕಾಯ್ದೆ 2015.
Advertisement
ಹಿಂದೂ ದತ್ತಕ ಕಾಯ್ದೆ
ಈ ಕಾಯ್ದೆ ಪ್ರಕಾರ, ಕೇವಲ ಹಿಂದೂಗಳು ಮಾತ್ರ ದತ್ತು ತೆಗೆದುಕೊಳ್ಳಬಹುದಾಗಿದೆ. ಸ್ವಂತ ಮಗುವಿದ್ದರೆ ದೊರಕಬಹುದಾದಂತಹ ಎಲ್ಲಾ ಹಕ್ಕು ಮತ್ತು ಸೌಲಭ್ಯಗಳನ್ನು ದತ್ತು ತೆಗೆದುಕೊಂಡ ಮಕ್ಕಳು ಹೊಂದಲು ಅವಕಾಶ ಇರುತ್ತದೆ. ಈ ಕಾಯ್ದೆಯಡಿ ನೀಡಿದ ದತ್ತಕವನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಈ ಕಾಯ್ದೆ ರೂಪಿಸಿದಾಗ ಹಿಂದೂ ಪುರುಷ ಮಾತ್ರ ದತ್ತು ಸ್ವೀಕರಿಸಲು ಅರ್ಹ ಎಂಬ ಷರತ್ತಿತ್ತು. ಹಿಂದೂ ಮಹಿಳೆ ದತ್ತು ಸ್ವೀಕರಿಸಲು ಅವಕಾಶ ಇರಲಿಲ್ಲ. ಜೊತೆಗೆ, ಪುರುಷನೊಬ್ಬ ದತ್ತು ಸ್ವೀಕರಿಸುವಾಗ ತನ್ನ ಪತ್ನಿಯ ಒಪ್ಪಿಗೆ ಪಡೆಯಬೇಕು ಎಂದಷ್ಟೇ ಮೂಲ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, 2010 ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ಹಿಂದೂ ವಿವಾಹಿತ ಮಹಿಳೆಯೂ ದತ್ತು ಸ್ವೀಕರಿಸಲು ‘ವೈಯಕ್ತಿಕ ಕಾನೂನುಗಳ ತಿದ್ದುಪಡಿ ಕಾಯ್ದೆ-2010’ರಲ್ಲಿ ಅವಕಾಶ ಮಾಡಿಕೊಡಲಾಯಿತು. ಇದು ಹಿಂದೂ, ಬೌದ್ಧ, ಸಿಖ್ ಧರ್ಮದವರಿಗೂ ಅನ್ವಯವಾಗುತ್ತದೆ.
ಜೂವನೈಲ್ ಜಸ್ಟಿಸ್ ಕಾಯ್ದೆ
ಮುಸ್ಲಿಮರಲ್ಲಿ ದತ್ತು ಸ್ವೀಕಾರಕ್ಕೆ ಅವಕಾಶವಿಲ್ಲ. ಆದ್ದರಿಂದ ದತ್ತು ಸ್ವೀಕಾರದ ಸಂಬಂಧ ಯಾವುದೇ ಕಾನೂನು ಇಲ್ಲ. ಆದರೂ ಮುಸ್ಲಿಂ ದಂಪತಿ, ಮುಸ್ಲಿಂ ವ್ಯಕ್ತಿಗಳು ದತ್ತು ಸ್ವೀಕರಿಸಲು ಅವಕಾಶ ಮಾಡಿಕೊಡುವ ಕಾನೂನು ಭಾರತದಲ್ಲಿ ಜಾರಿಯಲ್ಲಿದೆ. ಜೂವನೈಲ್ ಜಸ್ಟಿಸ್ ಕಾಯ್ದೆಯು ದೇಶದ ಪ್ರತಿಯೊಬ್ಬ ನಾಗರಿಕರೂ ದತ್ತು ಪಡೆಯಲು ಅವಕಾಶ ನೀಡಿದೆ.
ದತ್ತು ಮಗುವನ್ನು ಪಡೆಯಲು ಬೇಕಾಗುವ ದಾಖಲೆಗಳೇನು?
* ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ
* ವಾಸಸ್ಥಳ ದೃಢೀಕರಣಕ್ಕೆ ಪೂರಕವಾದ ದಾಖಲೆಗಳು
* ವೈದ್ಯಕೀಯ ತಪಾಸಣಾ ದಾಖಲೆಗಳು
* ವಿವಾಹ ಪತ್ರ ದೃಢೀಕರಣ
* ಆದಾಯ ದೃಢೀಕರಣಕ್ಕೆ ಸಂಬಂಧಿಸಿದ ದಾಖಲೆಗಳು
* ಒಬ್ಬರೇ ಪೋಷಕರಾಗಿದ್ದಲ್ಲಿ ಸಂಬಂಧಿಸಿದ ದಾಖಲೆಗಳು ಪಾನ್ ಕಾರ್ಡ್, ಪೋಸ್ಟ್ ಕಾರ್ಡ್ ಭಾವಚಿತ್ರ ಜೊತೆಗೆ http://cara.wcd.nic.in ಎಂಬ ಕೇರಿಂಗ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
ಶುಲ್ಕ ಏನು?
ದತ್ತು ಪಡೆಯಲು ಭರಿಸುವ ಶುಲ್ಕ ಕೇರಿಂಗ್‌ನಲ್ಲಿ ನೋಂದಣಿಯಾದ ನಂತರ ಗೃಹ ಅಧ್ಯಯನ ವರದಿ ತಯಾರಿಸುವ ಸಂದರ್ಭದಲ್ಲಿ 6,000 ರೂ.ಗಳನ್ನು ಹಾಗೂ ಮಗುವನ್ನು ಸ್ವೀಕರಿಸುವ ಸಂದರ್ಭದಲ್ಲಿ 50,000 ರೂ.ಗಳನ್ನು ಪಾವತಿಸಬೇಕು.
ದತ್ತು ಪಡೆಯಲು ಇರಬೇಕಾದ ಅರ್ಹತೆಗಳೇನು?
* ದತ್ತು ಪಡೆಯಲಿರುವ ಪೋಷಕರು ಯಾವುದೇ ಜೀವಕ್ಕೆ ಮಾರಕವಾಗಿರುವ ಖಾಯಿಲೆಯನ್ನು ಹೊಂದಿರಬಾರದು.
* ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಬಾರದು.
* ವೈವಾಹಿಕ ಸ್ಥಿತಿಯನ್ನು ಲೆಕ್ಕಸದೇ ಮತ್ತು ಜೈವಿಕ ಮಕ್ಕಳನ್ನು ಹೊಂದಿದ್ದರೂ ಸಹ ಈ ಅಂಶಗಳಿಗೊಳಪಟ್ಟು ದತ್ತು ಪಡೆಯಬಹುದಾಗಿದೆ. ವಿವಾಹಿತರಾಗಿದ್ದಲ್ಲಿ ದಂಪತಿಗಳಿಬ್ಬರಿಂದಲೂ ಒಪ್ಪಿಗೆ ಅಗತ್ಯ. ಅವಿವಾಹಿತ/ವಿಚ್ಛೇದಿತ/ವಿಧವೆಯರಾಗಿದ್ದಲ್ಲಿ ಯಾವುದೇ ಲಿಂಗದ ಮಗುವನ್ನು ಪಡೆದುಕೊಳ್ಳಬಹುದು. ವಿವಾಹಿತ/ವಿಚ್ಛೇದಿತ/ವಿಧವಾ ಪುರುಷರಿಗೆ ಹೆಣ್ಣು ಮಗುವನ್ನು ದತ್ತು ನೀಡಲಾಗುವುದಿಲ್ಲ.
* ದತ್ತು ಪಡೆಯಲು ಬಯಸುವವರು ಕನಿಷ್ಠ 2 ವರ್ಷಗಳ ಸ್ಥಿರ/ಉತ್ತಮ ಸಾಂಸಾರಿಕ ಜೀವನವನ್ನು ನಡೆಸಿರಬೇಕು.
* ದತ್ತು ಪಡೆಯುವವರು ನೋಂದಣಿ ಮಾಡಿದ ದಿನದಿಂದ ಅನ್ವಯಿಸುವಂತೆ ಅವರ ವಯಸ್ಸಿಗನುಗುಣವಾಗಿ ವಿವಿಧ ವಯೋಮಾನದ ಮಕ್ಕಳನ್ನು ದತ್ತು ಪಡೆಯಲು ಅರ್ಹರಾಗಿರುತ್ತಾರೆ.
ವಯಸ್ಸಿಗೆ ಸಂಬಂಧಿಸಿದ ನಿಯಮಗಳೇನು?
ದತ್ತು ಪಡೆಯಲು ಇಚ್ಛಿಸುವ ದಂಪತಿಗೆ ಗರಿಷ್ಠ ಸಂಯೋಜಿತ ವಯಸ್ಸು 85 ವರ್ಷ ಮತ್ತು ಏಕ ಪೋಷಕರು ಗರಿಷ್ಠ 40 ವರ್ಷಗಳಾಗಿದ್ದಲ್ಲಿ 0 ಯಿಂದ 2 ವರ್ಷಗಳವರೆಗಿನ ಮಕ್ಕಳನ್ನು ದತ್ತು ಪಡೆಯಬಹುದು.
* 90 ವರ್ಷ ವಯಸ್ಸಿನ ಪೋಷಕರು ಮತ್ತು 45 ವರ್ಷ ವಯಸ್ಸಿನ ಏಕ ಪೋಷಕರು 2 ವರ್ಷ ಮೇಲ್ಪಟ್ಟು ಮತ್ತು 4 ವರ್ಷಗಳವರೆಗಿನ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು.
* 100 ವರ್ಷ ವಯಸ್ಸಿನ ಪೋಷಕರು ಮತ್ತು 50 ವರ್ಷ ವಯಸ್ಸಿನ ಏಕ ಪೋಷಕರು 4 ವರ್ಷ ಮೇಲ್ಪಟ್ಟು ಮತ್ತು 8 ವರ್ಷಗಳವರೆಗಿನ ಮಕ್ಕಳನ್ನು ದತ್ತು ಸ್ವೀಕರಿಸಬಹುದು.
* 110 ವರ್ಷ ವಯಸ್ಸಿನ ಪೋಷಕರು ಮತ್ತು 55 ವರ್ಷ ವಯಸ್ಸಿನ ಏಕ ಪೋಷಕರು 8 ವರ್ಷ ಮೇಲ್ಪಟ್ಟು ಮತ್ತು 18 ವರ್ಷಗಳವರೆಗಿನ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಲು ಅರ್ಹರಾಗಿರುತ್ತಾರೆ.
ಕಾನೂನುಬಾಹಿರ, ಶಿಕ್ಷಾರ್ಹ ಅಪರಾಧಗಳೇನು?
ದತ್ತು ಪಡೆಯುವ ಪೋಷಕರು ಹಾಗೂ ಮಗುವಿನ ವಯಸ್ಸಿನ ಅಂತರ 25 ವರ್ಷಗಳಿಗಿಂತ ಕಡಿಮೆ ಇರಬಾರದು. ಜಾತ್ರೆ, ಸಂತೆ, ದೇವಸ್ಥಾನ, ರಸ್ತೆಯ ಬೀದಿಗಳಲ್ಲಿ ಅಥವಾ ಇತ್ಯಾದಿ ಸ್ಥಳಗಳಲ್ಲಿ ದೊರೆತ ಮಕ್ಕಳನ್ನು ತಂದು ಸಾಕುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧ. ಕಾನೂನು ಸಮ್ಮತವಿಲ್ಲದೆ ಯಾವುದೇ ಮಗುವನ್ನು ಸಾಕಿಕೊಳ್ಳುವ ವಿಧಾನ ಸರಿಯಲ್ಲ. ಇಂಥಹ ಮಗು ಎಲ್ಲಾ ರೀತಿಯ ಸೌಲಭ್ಯ ಮತ್ತು ಹಕ್ಕಿನಿಂದ ವಂಚಿತವಾಗುವ ಸಂಭವವಿರುತ್ತದೆ. ಅಲ್ಲದೇ, ಮಗುವು ಶೋಷಣೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ಅಂತಹ ಮಕ್ಕಳನ್ನು ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಅಥವಾ ಆಶಾ ಕಾರ್ಯಕರ್ತೆಯರಿಗೆ ಅಥವಾ ದತ್ತು ಕೇಂದ್ರಗಳಿಗೆ ಒಪ್ಪಿಸುವುದು ಸೂಕ್ತ. ವಿವಿಧ ರೀತಿಯ ಕಾರಣಗಳಿಂದಾಗಿ ಜೈವಿಕ ಪೋಷಕರಿಗೆ ಬೇಡವಾದ ಮಗುವನ್ನು ಕಡ್ಡಾಯವಾಗಿ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಬೇಕು. ಅಂತಹ ಮಗುವನ್ನು ಕೂಡಲೇ ಸಂಬಂಧಪಟ್ಟ ಆಸ್ಪತ್ರೆಯವರು ಮಕ್ಕಳ ಕಲ್ಯಾಣ ಸಮಿತಿಗೆ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿ ಅವರು ಮುಂದಿನ ಪುನರ್ವಸತಿಯನ್ನು ಕಲ್ಪಿಸಲು ಸಹಾಯವಾಗುತ್ತದೆ.
ಎಷ್ಟು ದತ್ತು ಕೇಂದ್ರಗಳಿವೆ?
ಕರ್ನಾಟಕದಲ್ಲಿ 42 ವಿಶೇಷ ದತ್ತು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಂಗಳೂರು ನಗರ ಜಿಲ್ಲೆಯಲ್ಲಿ 6 ದತ್ತು ಕೇಂದ್ರಗಳಿವೆ. 2024ರ ಏಪ್ರಿಲ್‌ನಿಂದ ಇದುವರೆಗೂ 59 ಮಕ್ಕಳನ್ನು ದತ್ತು ನೀಡಲಾಗಿದೆ. ದತ್ತು ಮಾರ್ಗಸೂಚಿ ಅನ್ವಯ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಂದ ದತ್ತು ಪೋಷಕರಿಗೆ ದತ್ತು ಆದೇಶವನ್ನು ನೀಡುವ ಮೂಲಕ ಮಕ್ಕಳಿಗೆ ಕುಟುಂಬ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮಕ್ಕಳನ್ನು ಮಾರಾಟ ಮಾಡಿದ್ರೆ ಶಿಕ್ಷೆ ಏನು?
ಬೇಡವಾದ ಮಕ್ಕಳನ್ನು ಇತರರಿಗೆ ಮಾರಾಟ ಮಾಡಿದರೆ ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪಾಲನೆ) ಕಾಯ್ದೆ-2015 ಸೆಕ್ಷನ್ 81 ಅನ್ವಯ ಶಿಕ್ಷೆ ವಿಧಿಸಲಾಗುತ್ತದೆ. ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಮಕ್ಕಳನ್ನು ಕೊಂಡವರಿಗೆ 5 ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಬಹುದು. ಒಂದು ವೇಳೆ ಇಂತಹ ಪ್ರಕರಣಗಳಲ್ಲಿ ಆಸ್ಪತ್ರೆಯ ಸಿಬ್ಬಂದಿ ಒಳಗೊಂಡಿದ್ದಲ್ಲಿ ಅಂತಹವರಿಗೆ 7 ವರ್ಷಗಳವರೆಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿರುತ್ತದೆ.
ಮಗುವನ್ನು ದತ್ತು ಪಡೆಯುವುದು ಹೇಗೆ?
ಮಗುವನ್ನು ದತ್ತು ಪಡೆಯುವ ಸಂಬಂಧ ವೆಬ್‌ಸೈಟ್ www.cara.nic.in ನಲ್ಲಿ ಮಾಹಿತಿ ಲಭ್ಯವಿದೆ. ಮಗುವನ್ನು ದತ್ತು ಪಡೆಯಲು CARINGS ನಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸುವುದು ಕಡ್ಡಾಯವಾಗಿದೆ. ನೀವು ಆನ್‌ಲೈನ್‌ನಲ್ಲಿ ನೋಂದಾಯಿಸಲು ಸಾಧ್ಯವಾಗದಿದ್ದರೆ, ಜಿಲ್ಲೆಯ ಜಿಲ್ಲಾ ರಕ್ಷಣಾಧಿಕಾರಿಯನ್ನು ಸಂಪರ್ಕಿಸಬಹುದು.