ಹಾವೇರಿ: ಅವರದ್ದು ಕಡುಬಡತನದ ಕುಟುಂಬ. ಮಗಳು ಹುಟ್ಟುತ್ತಾ ಅಂಧೆ, ತಂದೆ ಸ್ವಲ್ಪ ದಿನದಲ್ಲಿಯೇ ನಿಧನ ಹೊಂದಿದ್ದಾರೆ. ತಾಯಿ ಕೂಲಿ ಮಾಡಿಯೇ ಮಗಳನ್ನ ಬೆಳೆಸಿದ್ದಾರೆ. ಅಲ್ಲದೆ ಮಗಳಿಗೆ ಬರೋ ತಿಂಗಳ ಅಂಗವಿಕಲ ವೇತನದಲ್ಲಿ ಬಳೆ ಹಾಗೂ ಸೀರೆ, ಜಾಕೆಟ್‍ಗಳ ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದಾರೆ. ಆದ್ರೆ ಇದೀಗ ಕಡುಬಡತನದಲ್ಲಿರೋ ಈ ಕುಟುಂಬ ವ್ಯಾಪಾರ ಹಾಗೂ ಅಂಗಡಿ ಮಾಡಲು ದಾನಿಗಳ ಮೊರೆ ಹೋಗಿದೆ.
Advertisement
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಪುಟ್ಟದೊಂದು ಮನೆಯಲ್ಲಿ ಬಳೆಯ ವ್ಯಾಪಾರ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಮಗಳ ಕೈಹಿಡಿದುಕೊಂಡು ತಲೆಯ ಮೇಲೆ ಬುಟ್ಟಿಯನ್ನ ಹೊತ್ತು ತಾಯಿ ವ್ಯಾಪಾರಕ್ಕೆ ಹೋಗುತ್ತಿದ್ದಾರೆ. ಮಗಳು ಫಜಲುನಿಸ್ಸ್ ಬಡೇಮಿಯ್ಯಾ ಹುಟ್ಟುತ್ತಾ ಅಂಧೆ. ತಾಯಿ ಶಕುಂದಿ ಬಡೇಮಿಯ್ಯಾ ಆಶ್ರಯದಲ್ಲಿಯೇ ಬೆಳೆದಿದ್ದಾಳೆ. ತಂದೆ ಬೇಗ ನಿಧನ ಹೊಂದಿದ್ದರಿಂದ ಮಗಳಿಗೆ ತಾಯಿಯೇ ಆಸರೆ. ಆದ್ರೆ ಈಗ ತಾಯಿಗೆ ಸುಮಾರು 70 ವರ್ಷ. ಕಳೆದ 20 ವರ್ಷಗಳಿಂದ ತಾಯಿ ಮತ್ತು ಮಗಳು ಬಳೆ ವ್ಯಾಪಾರ ಹಾಗೂ ಜಾಕೆಟ್ ಪೀಸ್ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಪ್ರತಿ ತಿಂಗಳು ಸರ್ಕಾರದಿಂದ ಬರುವ ಅಂಗವಿಕಲ ವೇತನ 1200 ರೂಪಾಯಿ ತೆಗೆದುಕೊಂಡು ತಮ್ಮ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಆದ್ರೆ ಇದೀಗ ನಮಗೆ ವ್ಯಾಪಾರಕ್ಕಾಗಿ ಒಂದಿಷ್ಟು ಹಣ ಮತ್ತು ಗ್ರಾಮದಲ್ಲಿಯೇ ಸಣ್ಣ ಅಂಗಡಿಯನ್ನ ಹಾಕಿಕೊಟ್ಟರೇ ನಮ್ಮ ಜೀವನ ನಡೆಸುತ್ತಿವೆ ಅಂತಿದ್ದಾರೆ ಈ ತಾಯಿ ಮಗಳು.
Advertisement
Advertisement
ಮೊದಲು ತಾಯಿ ಗ್ರಾಮದ ಬೇರೆ ಜಮೀನುಗಳಿಗೆ ಹೋಗಿ ಕೂಲಿ ಕೆಲಸ ಮಾಡಿ ತನ್ನ ಮಗಳನ್ನ ಸಾಕುತ್ತಿದ್ದರು. ಆದ್ರೆ ಇದೀಗ ತಾಯಿಗೆ ವಯಸ್ಸಾಗಿದ್ದರಿಂದ ಜಮೀನಿಗೆ ಹೋಗಿ ಕೆಲಸ ಮಾಡುವ ಶಕ್ತಿ ಇಲ್ಲ. ಹಾಗಾಗಿ ಪ್ರತಿ ತಿಂಗಳು ಬರೋ ಮಗಳ ಅಂಗವಿಕಲ ವೇತನದಲ್ಲಿ ಬಳೆಗಳು ಹಾಗೂ ಸೀರೆಯ ಜಾಕೆಟ್ ತಂದು ಮಾರಾಟ ಮಾಡ್ತಿದ್ದಾರೆ. ಅದರಲ್ಲಿ ಬಂದ ಹಣದಲ್ಲಿಯೇ ತಾಯಿ ಮತ್ತು ಮಗಳು ಜೀವನ ನಡೆಸುತ್ತಿದ್ದಾರೆ.
Advertisement
ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಲು ಆರಂಭಿಸಿ ಎರಡು ವರ್ಷ ಆಗಿದೆ. ಆದ್ರೆ ಇನ್ನೂ ಮನೆ ಪೂರ್ಣವಾಗಿಲ್ಲ. ಈ ಕುಟುಂಬದ ಬಳೆ ಹಾಗೂ ಸೀರೆ ವ್ಯಾಪಾರಕ್ಕಾಗಿ ದಾನಿಗಳ ಸಹಾಯಬೇಕಿದೆ ಅಂತಾರೆ ಸ್ಥಳೀಯರು. ಮಗಳಿಗೆ ಸ್ಪಲ್ಪ ದೊಡ್ಡ ಪ್ರಮಾಣದಲ್ಲಿ ಬಳೆ ಹಾಗೂ ಸೀರೆ ವ್ಯಾಪಾರ ಮಾಡಿಕೊಡುವ ಆಸೆಯನ್ನು ತಾಯಿ ಹೊಂದಿದ್ದಾರೆ. ದಾನಿಗಳು ಸಹಾಯ ಮಾಡಿ ಈ ಕುಟುಂಬಕ್ಕೆ ದಾರಿದೀಪವಾಗಬೇಕಿದೆ.