BELAKU

ಪ್ರತಿದಿನ ತರಕಾರಿ ಮಾರಿ ಶಾಲೆಗೆ ಹೋಗೋ ಗದಗದ ಈ ಬಾಲಕಿಯ ಶಿಕ್ಷಣಕ್ಕೆ ಬೇಕಿದೆ ಸಹಾಯ

Published

on

Share this

ಗದಗ: ಜಿಲ್ಲೆಯ ಮುಂಡರಗಿ ಪಟ್ಟಣದ ಮೀನಾಜ್ ಎಂಬ ಬಾಲಕಿ ಪ್ರತಿದಿನ ತರಕಾರಿ ಬುಟ್ಟಿ ಹೊತ್ತು ತಿರುಗಾಡುತ್ತಿರುತ್ತಾಳೆ. ಯಾಕಂದ್ರೆ ಈ ಬಾಲೆ ತರಕಾರಿ ಮಾರಿದ್ರಷ್ಟೆ ಈ ಕುಟುಂಬಕ್ಕೆ ತುತ್ತು ಅನ್ನ ಸಿಗೋದು.

9 ವರ್ಷದ ಹಿಂದೆಯೇ ತಂದೆಯನ್ನು ಕಳೆದುಕೊಂಡ ಮೀನಾಜ್, ತಾಯಿ ಆರೈಕೆಯಲ್ಲಿ ತೀರಾ ಸಂಕಷ್ಟದಲ್ಲಿ ಬೆಳೆದವಳು. ತಾಯಿ ಬಿಬಿಜಾನ್ ತರಕಾರಿ ಮಾರಿಯೇ ತನ್ನ ಮಕ್ಕಳನ್ನು ಬೆಳೆಸಿದ್ದಾರೆ. ಇರೋದಿಕ್ಕೆ ಸ್ವಂತ ಮನೆಯೂ ಇಲ್ಲ. ಆಶ್ರಯ ಮನೆಯಲ್ಲಿ ಬಾಡಿಗೆ ಇದ್ದಾರೆ. ಇನ್ನು ತಾಯಿ ಕಷ್ಟ ನೋಡಲಾರದೇ ಸ್ವತ: ಬಾಲಕಿ ಮೀನಾಜ್ ತರಕಾರಿ ಬುಟ್ಟಿ ತನ್ನ ತಲೆಮೇಲಿಟ್ಟುಕೊಂಡಳು. 5ನೇ ತರಗತಿಯಿಂದಲೇ ತರಕಾರಿ ಮಾರಲಾಂಭಿಸಿದಳು. ಮೂರು ವರ್ಷದ ಹಿಂದೆ ತರಕಾರಿ ಮಾರಲು ಆರಂಭಿಸಿದ ಮೀನಾಜ್ ಅದನ್ನ ಇನ್ನೂ ನಿಲ್ಲಿಸಿಲ್ಲ.

ನಿತ್ಯ ಬೆಳಿಗ್ಗೆ 6 ಗಂಟೆಯಿಂದ 8:30 ರವರೆಗೆ ತರಕಾರಿ ಮಾರಿ ಬಂದ ಹಣವನ್ನು ತಾಯಿಯ ಕೈಗಿಡುತ್ತಾಳೆ. ನಿತ್ಯ ಮಾರುಕಟ್ಟೆಯಲ್ಲಿ ಬಗೆಬಗೆಯ ಸೊಪ್ಪು, ತರಕಾರಿಯನ್ನು ಖರೀದಿಸುತ್ತಾಳೆ. ಅದೇ ತರಕಾರಿಯನ್ನು ವಿವಿಧ ಓಣಿಯಲ್ಲಿ ತಿರುಗಿ ಮಾರಾಟ ಮಾಡ್ತಾಳೆ. ಬಂದ ಹಣದಿಂದಲೇ ತನ್ನ ವಿದ್ಯಾಭ್ಯಾಸದ ಖರ್ಚು ನಿಭಾಯಿಸೋ ಜೊತೆಗೆ ಕುಟುಂಬವನ್ನು ಸಲಹುತ್ತಿದ್ದಾಳೆ. ಹೀಗಾಗಿ ಬೆಳ್ಳಂಬೆಳಿಗ್ಗೆ ಎದ್ದು ಅಕ್ಷರಾಭ್ಯಾಸ ಮಾಡಬೇಕಾದ ಬಾಯಲ್ಲಿ ತರಕಾರಿ ಬೇಕನ್ರಿ…. ತರಕಾರಿ….. ಅನ್ನೋ ಶಬ್ದ ಕೇಳುತ್ತಿರುವುದು ವಿಪರ್ಯಾಸ. ಇದೀಗ ತಾಯಿ ಬಿಬಿಜಾನ್, ನನ್ನ ಮಗಳಿಗೆ ಶಿಕ್ಷಣ ಕೊಡಿಸಿ ಪುಣ್ಯಕಟ್ಟಿಕೊಳ್ಳಿ ಅಂತಾ ಅಂಗಲಾಚುತ್ತಿದ್ದಾರೆ.

ಮೀನಾಜ್ ತನ್ನ ನಿತ್ಯದ ಕಾಯಕ ಮುಗಿಸಿ ತಪ್ಪದೇ ಶಾಲೆಗೂ ಹೋಗ್ತಾಳೆ. ಪಾಠದಲ್ಲಿ ಹೆಚ್ಚಿನ ಆಸಕ್ತಿ ತೋರೋದ್ರಿಂದ ಶಿಕ್ಷಕರಿಗೆ ಈಕೆ ನೆಚ್ಚಿನ ವಿದ್ಯಾರ್ಥಿನಿ. ಮೀನಾಜ್ ಪಟ್ಟಣದ ಜೆ.ಟಿ.ಪ್ರೌಢಶಾಲೆಯಲ್ಲಿ ಸದ್ಯ 8ನೇ ತರಗತಿ ಓದುತ್ತಿದ್ದಾಳೆ. ಓದಿನಲ್ಲೂ ಮುಂದಿರೋ ಮೀನಾಜ್ ಮುಂದೊಂದು ದಿನ ಮಿನುಗೋ ನಕ್ಷತ್ರದಂತಾಗಲಿ ಅಂತಾ ಜನ ಬಾಯಿತುಂಬ ಹಾರೈಸುತ್ತಿದ್ದಾರೆ. ಬಡತನ ಈ ಬಾಲೆಯ ಓದಿಗೆ ಎಂದೂ ಅಡ್ಡಿಯಾಗಿಲ್ಲ. ಎಂಥ ಕಷ್ಟದ ಪರಿಸ್ಥಿತಿಯಲ್ಲೂ ಪುಸ್ತಕ ಖರೀದಿಸಿ ಅಭ್ಯಾಸ ಮಾಡ್ತಿದ್ದಾಳೆ. 10 ವರ್ಷದವಳಿದ್ದಾಗಲೇ ಮೀನಾಜ್‍ಳಲ್ಲಿ ಹುಟ್ಟಿದ ಛಲ ಇಂದೂ ಕೂಡ ಕುಂದಿಲ್ಲ. ಕುಟುಂಬಕ್ಕಂಟಿದ ಬಡತನವೇ ಆಕೆಗೆ ಬಹುದೊಡ್ಡ ಪಾಠವಾಗಿದೆ. ಈಕೆ ವಯಸ್ಸಿಗಿಂತ ಹಿರಿದಾದ ಜ್ಞಾನ ಹೊಂದಿದ್ದಾಳೆ. ತಾನು ಚೆನ್ನಾಗಿ ಓದಿ ತಾಯಿಯನ್ನು ಸುಖವಾಗಿಡಬೇಕು, ಭವಿಷ್ಯದಲ್ಲಿ ಡಾಕ್ಟರ್ ಆಗಿ ಬಡವರ ಸೇವೆ ಮಾಡಬೇಕು ಅನ್ನೋದು ಮೀನಾಜ್ ಬಯಕೆ.

ಸೌಲಭ್ಯದ ಸುಪ್ಪತ್ತಿಗೆಯಲ್ಲಿರೋ ಅದೆಷ್ಟೋ ಮಕ್ಕಳು ಕಲಿಯಲು ಹಿಂದೇಟು ಹಾಕ್ತಾರೆ. ಆದ್ರೆ ಮೀನಾಜ್ ಮಾತ್ರ ಬಡತನದಲ್ಲೂ ವಿದ್ಯಾದೇವತೆಯನ್ನು ಆರಿಸಿದ್ದಾಳೆ. ಮೀನಾಜ್ ಳ ಬಡತನದ ಬವಣೆಗೆ ಸಂಘ, ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳ ಸಹಾಯ ಬೇಕಿದೆ. ಒಳ್ಳೆಮನಸ್ಸುಗಳ ಸ್ಪಂದನೆ ಸಿಕ್ಕರೆ ಈಕೆ ಬಡತನದಲ್ಲರಳಿದ ಗುಲಾಬಿಯಾಗಬಲ್ಲಳು.

https://www.youtube.com/watch?v=ZR7ZO1xg72k

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications