ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬಳಿಯ ಸಣ್ಣದೊಂದು ಮನೆಯಲ್ಲಿ ಕರುಣಾಕರ್ ಎಂಬವರು ತನ್ನ ಹೆಂಡತಿ ಹಾಗೂ ಮೂವರು ಹೆಣ್ಣುಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇವರು ಕೂಲಿ ಕೆಲಸ ಮಾಡಿ ಮೂವರು ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಜೊತೆಗೆ ಮೂವರು ಹೆಣ್ಣುಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕೆಂದು ಕನಸ್ಸು ಕಂಡಿದ್ದರು. ಆದರೆ ವಿಧಿಯಾಟವೇ ಬೇರೆ ಇತ್ತು. ಆರು ವರ್ಷದ ಹಿಂದೆ ಬಾವಿಯ ಕಸ ತೆಗೆಯುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ 64 ಅಡಿ ಆಳದ ಬಾವಿಗೆ ಬಿದ್ದು ಸೊಂಟದ ಮೂಳೆ ಮುರಿದುಕೊಂಡರು. ಈಗ ಸೊಂಟದಿಂದ ಕೆಳಗೆ ಸ್ವಾಧೀನವಿಲ್ಲ. ಇದೀಗ ಆರು ವರ್ಷದಿಂದ ಚಿಕಿತ್ಸೆ ಪಡೆದರೂ ಏನೂ ಪ್ರಯೋಜನವಾಗದೆ ಹಾಸಿಗೆಯಲ್ಲೇ ನರಳಾಡುತ್ತಿದ್ದಾರೆ.
Advertisement
ಮನೆಯ ಆಧಾರ ಸ್ತಂಭವಾಗಿದ್ದ ಕರುಣಾಕರ್ ಅವರಿಗಾದ ಈ ಸ್ಥಿತಿಯಿಂದ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳು ದಿಕ್ಕು ತೋಚದಂತಾದರು. ಪತ್ನಿ ಪದ್ಮಲತಾ ಬೀಡಿ ಕಟ್ಟಿ ಅದರಿಂದ ಪತಿ ಹಾಗೂ ಮೂವರು ಹೆಣ್ಣು ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ನಡುವೆ ದೊಡ್ಡ ಮಗಳು ಕಾವ್ಯಶ್ರೀ ಪ್ರಥಮ ಪಿಯುಸಿಯಲ್ಲಿ, ಎರಡನೆಯವಳು ದೀಕ್ಷಾ ಒಂಬತ್ತನೇ ತರಗತಿಯಲ್ಲಿ ಹಾಗೂ ಕೊನೆಯ ಮಗಳು ಹರ್ಷ ಕಲ್ಪನಾ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಮೂವರಿಗೂ ಒಳ್ಳೆಯ ಅಂಕಗಳಿದ್ದು ಕಾವ್ಯಶ್ರೀ ಎಸ್‍ಎಸ್‍ಎಲ್‍ಸಿಯಲ್ಲಿ 568 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಳು. ಮೂವರೂ ಮುಂದೆ ಹೆಚ್ಚು ಹೆಚ್ಚು ಕಲಿಯಬೇಕೆಂಬ ಆಸೆಯಲ್ಲಿದ್ದಾರೆ. ಆದರೆ ಶಾಲಾ ಶುಲ್ಕ ಕಟ್ಟಲು ಬೇಕಾದ ಹಣಕ್ಕೂ ಸಮಸ್ಯೆ ಇದೆ. ಹೀಗಾಗಿ ಯಾರಾದರೂ ಸಹಾಯ ಮಾಡಿದರೆ ಮುಂದೆ ಚೆನ್ನಾಗಿ ಓದಿ ಶಿಕ್ಷಕಿ, ಲಾಯರ್ ಆಗಬೇಕೆಂಬ ಆಸೆಯಲ್ಲಿದ್ದಾರೆ ಈ ಮಕ್ಕಳು.
Advertisement
ಮೂವರೂ ಹೆಣ್ಣು ಮಕ್ಕಳು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು ಸಣ್ಣ ಸಣ್ಣ ಮೊತ್ತದ ಹಣವನ್ನು ಶಿಕ್ಷಕರು, ಸ್ಥಳೀಯ ದಾನಿಗಳು ನೀಡಿ ಪ್ರೋತ್ಸಾಹಿಸಿದ್ದಾರೆ. ಆದರೆ ದೊಡ್ಡವಳಾದ ಕಾವ್ಯಶ್ರೀಗೆ ಕಳೆದ ಬಾರಿ ಪ್ರಥಮ ಪಿಯುಸಿಯ ಪ್ರವೇಶ ಶುಲ್ಕ, ಪುಸ್ತಕ ಸೇರಿದಂತೆ ಇತರೆ ಖರ್ಚಿಗೆ ತೊಂದರೆಯಾಗಿದೆ. ಹೀಗಾಗಿ ಮುಂದಿನ ವರ್ಷದಿಂದ ಕಲಿಯೋದನ್ನೇ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಒಟ್ಟಿನಲ್ಲಿ ಮನೆಗೆ ಆಧಾರಸ್ತಂಭವಾಗಿದ್ದ ಯಜಮಾನ ಹಾಸಿಗೆ ಹಿಡಿದಿದ್ದು, ಅವರ ಆರೈಕೆ ಜೊತೆಗೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಈ ಕುಟುಂಬದ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕಾದರೂ ಪ್ರೋತ್ಸಾಹ ಸಿಗುತ್ತಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ.