– ಉಡುಪಿಯಲ್ಲಿ ಹೋಟೆಲ್ ಮಾಲೀಕ ಗರಂ
ಉಡುಪಿ: ಎರಡು ದಿನಗಳ ಭಾರತ್ ಬಂದ್ ಗೆ ಉಡುಪಿಯಲ್ಲಿ ಸಾರ್ವಜನಿಕರು ಅಸಮಾಧಾನ ವ್ಯಕ್ತ ಮಾಡಿದ್ದಾರೆ. ಬಂದ್ ಮಾಡಿ ಅಂತ ಯಾರೂ ಹೇಳಿಲ್ಲ. ಇಷ್ಟಕ್ಕೂ ಬಂದ್ ಯಾಕೆ ಮಾಡ್ಬೇಕು ಅಂತ ಪ್ರಶ್ನೆ ಮಾಡಿದ್ದಾರೆ.
ಬ್ರಹ್ಮಗಿರಿಯ ದುರ್ಗಾ ಹೋಟೆಲ್ ಮಾಲೀಕ ದೇವು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ದಿನಾ ಬಂದ್ ಮಾಡಿದ್ರೆ ಖರ್ಚಿಗೆ ಹಣ ಯಾರು ಇವರು ಕೊಡ್ತಾರಾ? ಜನಕ್ಕೆ ಇದ್ರಿಂದ ಕಷ್ಟ ಅಲ್ವಾ? ಹೋಟೆಲ್ ಬಂದ್ ಆದ್ರೆ ಎಲ್ಲರೂ ಮನೆಯಿಂದ ಬುತ್ತಿ ತರೋಕೆ ಆಗುತ್ತಾ? ನಾವು ನಾಳೆಗೆ ಉದ್ದು ಅಕ್ಕಿ ನೆನೆಸಿಯಾಗಿದೆ. ಬನ್ಸ್ ಗೆ ಹಿಟ್ಟು ಕಲಸಿಯಾಗಿದೆ. ಇದನ್ನು ಏನ್ ಮಾಡೋದು ಎಂದು ಕೇಳಿದ್ದಾರೆ. ಒತ್ತಾಯಪೂರ್ವಕ ಬಂದ್ ಮಾಡೋಕೆ ಹೋಟೆಲ್ ಇವರ ಅಪ್ಪನದ್ದಾ ಎಂದು ಅವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಆಟೋ ರಿಕ್ಷಾ ಚಾಲಕರು, ದಿನಸಿ- ತರಕಾರಿ ಅಂಗಡಿ ಮಾಲೀಕರು ಎರಡು ದಿನ ಬಂದ್ ಎಂದು ಹೇಳಿದ ಕೂಡಲೇ ಮೂಗು ಮುರಿಯುತ್ತಿದ್ದಾರೆ. ಬಂದ್ ಮಾಡಿ ಅಂತ ನಮಗೆ ಯಾರೂ ಹೇಳಿಲ್ಲ. ಬಸ್ಸಲ್ಲಿ ಬೋರ್ಡ್ ಅಂಟಿಸಿರೋದನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ.
Advertisement
ಆಟೋ, ಟೆಂಪೋ ಮಾಲಕರು, ಚಾಲಕರು ಬಂದ್ ಮಾಡ್ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿದ್ದಾರೆ. ಶಾಲೆಯಿಂದ ಮನೆಗೆ ಹೋಗುವ ವಿದ್ಯಾರ್ಥಿಗಳು ನಾಳೆ ಮನೆಯಿಂದ ಹೊರಗೆ ಬರ್ಬೇಕಾ ಬೇಡ್ವಾ ಅನ್ನುವ ಆತಂಕದಲ್ಲಿದ್ದಾರೆ.
Advertisement
ಬಸ್‍ಗಳು ರಸ್ತೆಗಿಳಿಯಲ್ಲ:
ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್‍ಗೆ ಉಡುಪಿ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಐದು ಬಿಜೆಪಿ ಶಾಸಕರಿದ್ದರೂ, ಕೇಂದ್ರದ ಕಾರ್ಮಿಕ ನೀತಿ ವಿಚಾರದಲ್ಲಿ ಕಾರ್ಮಿಕರು ಬಂದ್ ಮಾಡಲಿದ್ದಾರೆ. ಖಾಸಗಿ ಬಸ್ ಚಾಲಕರು, ನಿರ್ವಾಹಕರು ಬಂದ್‍ಗೆ ಬೆಂಬಲ ಕೊಟ್ಟಿದ್ದಾರೆ. ಖಾಸಗಿ ಬಸ್ ಮಾಲಕರು ಬಂದ್ ಮಾಡಬಾರದೆಂದು ಮನವೊಲಿಸುತ್ತಿದ್ದರೂ, ಬಸ್ ಗಳು ರಸ್ತೆಗೆ ಇಳಿಯಲ್ಲ. ಸರ್ಕಾರಿ ಶಾಲಾ ಕಾಲೇಜು ರಜೆ ಬಗ್ಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಈವರೆಗೆ ನಿರ್ಧಾರ ತೆಗೆದುಕೊಂಡಿಲ್ಲ.
ಟ್ಯಾಕ್ಸಿಮೆನ್ ಅಸೋಸಿಯೇಷನ್ ಬಂದ್ ಮಾಡದಿರಲು ಸದ್ಯ ನಿರ್ಧರಿಸಿದ್ದಾರೆ. ಉಡುಪಿ ಜಿಲ್ಲೆಯ ಹೋಟೆಲ್-ಬಾರ್ ಅಸೋಸಿಯೇಶನ್ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಮಾಡಿದ್ದಾರೆ. ಆದ್ರೆ ಬಂದ್ ಮಾಡಲ್ಲ ಅಂತ ಹೇಳಿದ್ದಾರೆ. ರಾಜ್ಯ ಸಂಘ ಬೆಂಗಳೂರಲ್ಲಿ ನಿರ್ಧಾರ ಮಾಡಿದ್ದನ್ನು ಇಲ್ಲಿ ಅನುಸರಿಸುತ್ತಾರಂತೆ ಹೋಟೆಲ್ ಮಾಲೀಕರು ಹೇಳುತ್ತಾರೆ.
ಕೆಎಸ್‍ಆರ್‍ಟಿಸಿ ಬಸ್‍ಗಳು ಸ್ವಯಂಪ್ರೇರಿತ ಬಂದ್ ಇಲ್ಲ ಅನ್ನೋ ಮಾಹಿತಿ ಇದೆ. ಖಾಸಗಿ ಬಸ್ ಕಾರ್ಮಿಕರು ಬಂದ್ ಒತ್ತಾಯ ಮಾಡಿ ಬಸ್ ಅಡ್ಡ ಹಾಕಿ ಗಲಾಟೆ ಮಾಡಿದರೆ ಬಂದ್ ಆಗುತ್ತದೆ. ಕೆಎಸ್‍ಆರ್‍ಟಿಸಿ ಚಾಲಕ ನಿರ್ವಾಹಕರು ಸೇವೆಗೆ ಬರದಿದ್ದರೆ ಬಸ್ ಓಡಲ್ಲ.
ಮೆಡಿಕಲ್ ಆಸ್ಪತ್ರೆ ಓಪನ್ ಇರುತ್ತದೆ. ಉಡುಪಿಯಲ್ಲಿ ಚಿತ್ರಮಂದಿರ ಬಂದ್ ಇರುವುದಿಲ್ಲ. ಕಮ್ಯೂನಿಸ್ಟ್ ಬೆಂಬಲಿತ ಆಟೋರಿಕ್ಷಾಗಳು ಓಡಲ್ಲ. ಬಿಜೆಪಿ ಬೆಂಬಲಿತ ಯೂನಿಯನ್ ಆಟೋಗಳು ಬಾಡಿಗೆ ಮಾಡುತ್ತದೆ. ಮಂಗಳವಾರ ಶುಭ ಕಾರ್ಯ ಇಲ್ಲ. ಮದುವೆಗಳು ಇರುವುದಿಲ್ಲ.
ಒಟ್ಟಿನಲ್ಲಿ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಜನರು ಮತ್ತು ವ್ಯಾಪಾರಸ್ಥರು, ವಾಹನ ಚಾಲಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv