AIಯೇ ಅಂತಿಮ ಅಲ್ಲ: ಹೆಚ್‌.ಆರ್‌.ರಂಗನಾಥ್‌

Public TV
2 Min Read
h.r.ranganath public tv education

– ಭವಿಷ್ಯ ಇರುವುದು ವಿಶ್ವವಿದ್ಯಾಲಯಗಳಲ್ಲಿ

ಬೆಂಗಳೂರು: ಎಐ ಬಂದಾಗ ಬಹಳಷ್ಟು ಜನ ಗಾಬರಿಯಲ್ಲಿದ್ದಾರೆ. ಗಾಬರಿ ಪಡದೇ ಅದಕ್ಕೆ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು ಎಂದು ‘ಪಬ್ಲಿಕ್‌ ಟಿವಿ’ಯ ಮುಖ್ಯಸ್ಥ ಹೆಚ್‌.ಆರ್‌.ರಂಗನಾಥ್‌ (H.R.Ranganath) ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ‘ಪಬ್ಲಿಕ್‌ ಟಿವಿ’ ವಿದ್ಯಾಪೀಠ ಶೈಕ್ಷಣಿಕ ಮೇಳ (PublicTV Vidhyapeeta Education Expo) ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ರಾಜ್ಯ, ಜಿಲ್ಲೆಗಳಲ್ಲಿ ಸಣ್ಣ ಸಣ್ಣ ಪತ್ರಿಕೆಗಳು ಇದ್ದವು. ನಿಧಾನಕ್ಕೆ 4-6 ಪೇಜ್‌ನ ದೊಡ್ಡ ಪೇಪರ್‌ಗಳು ಕಾಲಿಟ್ಟವು. ಆಗ ಸಣ್ಣ ಪೇಪರ್‌ಗಳು ಸತ್ತವು ಎಂದುಕೊಂಡರು. ಪೇಪರ್‌ ಹೋದ್ಮೇಲೆ ರೇಡಿಯೋ ಬಂತು. ಆಗ ಪೇಪರ್‌ ಸತ್ತೋಗುತ್ತೆ ಅಂತ ಬಹಳಷ್ಟು ಜನ ಅಂದುಕೊಂಡರು. ಆದರೆ, ಪೇಪರ್‌ ಉಳಿದುಕೊಂಡಿತು. ರೇಡಿಯೋ ಕೂಡ ಉಳಿಯಿತು. ಆಮೇಲೆ ಟಿವಿ ಬಂತು. ಆಗ ರೇಡಿಯೋ ಸಾಯುತ್ತೆ ಎಂದಿದ್ದರು. ಈಗ ರೇಡಿಯೋ ಬದುಕಿದೆ. ಟಿವಿಯೂ ಇದೆ. ಇಂಟರ್ನೆಟ್‌ ಬಂದಾಗ ಟಿವಿ ಕಥೆ ಮುಗಿಯಿತು ಎಂಬ ಲೆಕ್ಕಾಚಾರ ಬಂತು. 4ಜಿ, 5ಜಿ ಇಂಟರ್ನೆಟ್‌ ಬಳಿ ಮೊಬೈಲ್‌ಗಳೇ ಟಿವಿಗಳಾದವು. ಆದರೆ, ಟಿವಿ, ಮೊಬೈಲ್‌ ಎಲ್ಲವೂ ಉಳಿದಿವೆ ಎಂದರು. ಇದನ್ನೂ ಓದಿ: ಇಂದಿನಿಂದ `ಪಬ್ಲಿಕ್ ಟಿವಿ ವಿದ್ಯಾಪೀಠʼ – ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ತಪ್ಪದೇ ಬನ್ನಿ!

public tv vidhyapeeta education

ಕಂಪ್ಯೂಟರ್‌ ಬಂದಾಗ ನಿಮ್ಮ ಜರ್ನಲಿಸ್ಟ್‌ಗಳ ಕಥೆ ಮುಗಿಯಿತು ಅಂತ ಅನೇಕರು ನನಗೆ ಹೇಳಿದ್ದರು. ಮುಗಿದಿಲ್ಲ, ಕಂಪ್ಯೂಟರ್‌ಗಳು ಇವೆ. ನಾವು ಜರ್ನಲಿಸ್ಟ್‌ಗಳು ಇದ್ದೀವಿ. ಎಐ ಬಂದಾಗ ಬಹಳಷ್ಟು ಜನ ಗಾಬರಿಯಲ್ಲಿದ್ದಾರೆ. ಎಲ್ಲರೂ ಹೋಗಿಬಿಡುತ್ತಾರೆ ಎಂದುಕೊಂಡಿದ್ದಾರೆ. ಯಾರೂ ಎಲ್ಲೂ ಹೋಗಲ್ಲ. ಆದರೆ, ಬದಲಾಗುತ್ತದೆ. ಅದಕ್ಕೆ ನಾವು ಹೊಂದಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಸ್ವರ್ಗ ಎಂದರೆ ಸಾಫ್ಟ್‌ವೇರ್‌ ಅನ್ನೋ ಲೆವೆಲ್‌ನಲ್ಲಿ ಇದ್ದೆವು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಸಾಫ್ಟ್‌ವೇರ್‌ ಮೀರಿಸಬಲ್ಲ ಶಿಕ್ಷಣ ಬಂದುಬಿಟ್ಟಿದೆ. ಅದನ್ನು ಮೀರಿಸಬಹುದಾಗಿ ಕೋರ್ಸ್‌ಗಳು ಬಂದುಬಿಟ್ಟಿವೆ. ಹಿಂದೆಲ್ಲ ಪೋಷಕರಿಗೆ ನಿಮ್ಮ ಮಗ ಏನು ಅಂತಾ ಪ್ರಶ್ನೆ ಕೇಳಿದರೆ, ಸಾಫ್ಟ್‌ವೇರ್‌ ಎಂಜಿನಿಯರ್‌ ಅನ್ನುತ್ತಿದ್ದರು. ಇನ್ನು ಸ್ವಲ್ಪ ದಿನ ಬಿಟ್ಟರೆ ನಮ್ಮ ಮಗ ಎಐ ಎಂಜಿಯಯರ್‌ ಅನ್ನಬಹುದು. ಆದರೆ, ಅದೇ ಅಂತಿಮ ಅಲ್ಲ. ಮಾನವ ಸಾಮರ್ಥ್ಯ ವಿಕಸನಗೊಂಡಿದೆ. ಮಾನವ ವಿಕಸನ ಆಗಿದ್ದೂ ಹೀಗೆ. ಎಐಗೆ ಹೆದರಿಕೊಂಡು ಪ್ರಪಂಚ ಮುಗಿದುಹೋಯಿತು ಎಂದುಕೊಳ್ಳಬೇಡಿ. ಹಾಗಾಗಲ್ಲ ಅನ್ನೋದು ನಮ್ಮ ಭಾವನೆ ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್‌ ಟಿವಿಯ ‘ವಿದ್ಯಾಪೀಠ’ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ

h.r.ranganath

ನಮ್ಮಲ್ಲಿ ಈಗಿನ ಖಾಸಗಿ ವಿವಿಗಳಲ್ಲಿ ಉನ್ನತ ಮಟ್ಟದ ಶಿಕ್ಷಣ ಇದೆ. ಅದನ್ನು ಹೆಚ್ಚಾಗಿ ಗುರುತಿಸುವ ಕೆಲಸ ಆಗಬೇಕು. ಆಗ ಹೊರದೇಶಗಳಿಗೆ ಉನ್ನತ ಶಿಕ್ಷಣಕ್ಕೆ ಹೋಗುವ ವಿದ್ಯಾರ್ಥಿಗಳನ್ನು ಆದಷ್ಟು ಕಡಿಮೆಯಾಗುವಂತೆ ನೋಡಿಕೊಳ್ಳಬಹುದು. ಅದನ್ನು ಅರ್ಥ ಮಾಡಿಕೊಳ್ಳಲು ಪೋಷಕರಿಗೆ ಇಂತಹ ಮೇಳಗಳು ಸಹಕಾರಿ ಎಂದರು.

ಭಾರತದ ಭವಿಷ್ಯ ಇರುವುದು ವಿಶ್ವವಿದ್ಯಾಲಯಗಳಲ್ಲಿ. ಡಿಗ್ರಿ ಕಥೆ ಮುಗಿಯಿತು. ಇನ್ಮುಂದೆ ಸ್ನಾತಕೋತ್ತರ ಪದವಿ ಸ್ಟ್ಯಾಂಡರ್ಡ್‌. ಹಳೆ ಕಾಲದಲ್ಲಿ ಪೋಸ್ಟಲ್‌ ಡಿಪಾರ್ಟ್‌ಮೆಂಟ್‌ಗೆ ಸೇರಬೇಕು ಅಂದ್ರೆ ಎಸ್‌ಎಸ್‌ಎಲ್‌ಸಿ ಸಾಕಪ್ಪ ಎನ್ನುತ್ತಿದ್ದರು. ಬಳಿಕ ಪಿಯುಸಿ, ಡಿಗ್ರಿ ಆಯ್ತು. ಮುಂದೆ ಮಾಸ್ಟರ್ಸ್‌ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಶಿಕ್ಷಣ ಬೆಳವಣಿಗೆ ಹಂತದಲ್ಲಿದೆ. ಎಲ್ಲರೂ ಬೆಳವಣಿಗೆ ಬಯಸುತ್ತಿದ್ದಾರೆ. ಭವಿಷ್ಯದಲ್ಲಿ ಶಿಕ್ಷಣಕ್ಕೆ ಏನಾಗುತ್ತೆ ಅನ್ನೋದರ ಬಗ್ಗೆ ಬಹಳಷ್ಟು ಚಿಂತೆ, ಮಾತುಗಳು ನಡೆಯುತ್ತಿವೆ ಎಂದು ತಿಳಿಸಿದರು.

Share This Article