ಪಬ್ಲಿಕ್ ಟಿವಿ ವತಿಯಿಂದ 10 ಸಾಧಕಿಯರಿಗೆ ನಾರಿ ನಾರಾಯಣಿ ಪಬ್ಲಿಕ್ ಹೀರೋ ವಿಶೇಷ ಪ್ರಶಸ್ತಿ ಪ್ರದಾನ

Public TV
10 Min Read
International Womens Day Public TV To Present Nari Narayani Award

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಪಬ್ಲಿಕ್ ಟಿವಿ 10 ಮಂದಿ ಸಾಧಕಿಯರಿಗೆ ನಾರಿ ನಾರಾಯಣಿ ಪಬ್ಲಿಕ್ ಹೀರೋ ವಿಶೇಷ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಿದೆ.

ಯವನಿಕಾ ಸಭಾಂಗಣದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಹಾಗೂ ಜಿಜೆಎಂ ಪ್ರೊಜೆಕ್ಟ್ ಮುಖ್ಯಸ್ಥ ಗುರುಜಲ ಜಗನ್ಮೋಹನ್ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

International Womens Day Public TV To Present Nari Narayani Award 1

ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಮಾತನಾಡಿ, ಈ ವರ್ಷದಿಂದ ಪಬ್ಲಿಕ್ ಟಿವಿಯಿಂದ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಗುತ್ತದೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವವರ ಜೊತೆ ನಾವು ಎಂದಿಗೂ ಇರುತ್ತೇವೆ. ಜನರಿಗೆ ಒಳ್ಳೆಯದನ್ನು ಮಾಡಲು ನೀವು ನಮ್ಮನ್ನು ಬಳಸಿಕೊಳ್ಳಿ ಎಂದು ಹೇಳಿದರು.  ಇದನ್ನೂ ಓದಿ:  ಜನಮನ ಸೆಳೆದ ಡರ್ಟ್ ಟ್ರ್ಯಾಕ್ ಮೋಟಾರ್ ಸೈಕಲ್ ರೇಸ್

ಜಿಜೆಎಂ ಪೊಜೆಕ್ಟ್ ಮುಖ್ಯಸ್ಥ ಗುರುಜಲ ಜಗನ್ಮೋಹನ್ ಮಾತನಾಡಿ, ಮಹಿಳೆಯರು ನಮ್ಮ ಜೀವನದಲ್ಲಿ ತಾಯಿ, ಮಡದಿ, ಮಗಳಾಗಿ ಮುಖ್ಯಪಾತ್ರವನ್ನು ವಹಿಸುತ್ತಾರೆ. ಇಂದಿನ ದಿನಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನರಾಗಿದ್ದಾರೆ ಎಂದರು.

ತೇಜಸ್ವಿನಿ ಅನಂತ್‍ಕುಮಾರ್:
ಹಸಿರಿನ ಪ್ರೀತಿ ಜೊತೆಗೆ ಹಸಿದವರಿಗೆ ಅನ್ನ ನೀಡುವುದನ್ನೇ ಬದುಕಿಡೀ ಕಾಯಕ ಮಾಡಿಕೊಂಡು, ಅರೇ ಹೀಗೂ ನಿಸ್ವಾರ್ಥವಾಗಿ ಜನಸೇವೆ ಮಾಡಬಹುದಾ ಎಂಬ ಅಚ್ಚರಿಯ ವ್ಯಕ್ತಿತ್ವದವರು ತೇಜಸ್ವಿನಿ ಅನಂತ್‍ಕುಮಾರ್. ಕೇಂದ್ರ ಮಾಜಿ ಸಚಿವ ದಿವಂಗತ ಅನಂತ್‍ಕುಮಾರ್ ಅವರ ಪ್ರೀತಿಯ ಅದಮ್ಯ ಚೇತನ ಕನಸಿಗೆ ಜೀವ ತುಂಬಿ ಕರುನಾಡಿನ ಹೆಮ್ಮೆಯ ಮಗಳಾಗಿದ್ದಾರೆ. ತೇಜಸ್ವಿನಿ ಅವರದ್ದು ಬಹುಮಖ ವ್ಯಕ್ತಿತ್ವ. ಶಿಕ್ಷಣದಿಂದ ಇಂಜಿನಿಯರ್. ಕೆಲಕಾಲ ವಿಜ್ಞಾನಿಯಾಗಿದ್ದವರು. 1993 – 1997ರ ನಡುವೆ ತೇಜಸ್ ಲಘು ಯುದ್ಧ ವಿಮಾನದ ಯೋಜನೆಯಲ್ಲಿ ಡಾ ಎಪಿಜಿ ಅಬ್ದುಲ್ ಕಲಾಂ ಅವರ ನೇತೃತ್ವದ ತಂಡದಲ್ಲಿ ತೇಜಸ್ವಿನಿಯವರು ವಿಜ್ಞಾನಿಯಾಗಿ ಸೇವೆಸಲ್ಲಿದ್ದರು. ಆನಂತರ ಸೇವೆಯೇ ಪರಮ ಧರ್ಮ ಎಂಬ ತತ್ವಾದರ್ಶದತ್ತ ವಾಲಿದ ಇವರು, 1998ರಲ್ಲಿ ಅನಂತ ಕುಮಾರ್ ಅವರ ತಾಯಿಯ ಸ್ಮರಣಾರ್ಥ ಅದಮ್ಯ ಚೇತನ ಸಂಸ್ಥೆ ಪ್ರಾರಂಭಿಸಿದರು.

International Womens Day Public TV To Present Nari Narayani Award To Tejaswini Ananth Kumar

ಲಕ್ಷಾಂತರ ಹಸಿದ ಮಕ್ಕಳ ಹೊಟ್ಟೆ ತುಂಬಿಸಿ ನಿತ್ಯವೂ ಪೌಷ್ಟಿಕ ಭೋಜನ ಉಣಬಡಿಸುತ್ತಿದ್ದಾರೆ. ಅನ್ನ, ಅಕ್ಷರ, ಆರೋಗ್ಯದ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಮಸ್ಯೆಗಳ ಕುರಿತು ತೇಜಸ್ವಿನಿ ಒಂದಿಲ್ಲೊಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಸಸಿ ನೆಟ್ಟು, ಅದರ ಲಾಲನೆ ಪಾಲನೆ ವಿಚಾರದಲ್ಲಿ ತೇಜಸ್ವಿನಿ ಹಸಿರ ಕ್ರಾಂತಿಯನ್ನೇ ಮಾಡಿದ್ದಾರೆ. ಪ್ರತಿ ವಾರಾಂತ್ಯ ಹಸಿರು ಭಾರತದಡಿಯಲ್ಲಿ ಒಂದಿಷ್ಟು ಯುವಪಡೆಗಳ ಸಹಾಯದೊಂದಿಗೆ ಇದುವರೆಗೆ ಮೂರರಿಂದ ನಾಲ್ಕು ಲಕ್ಷ ಗಿಡಿ ನೆಟ್ಟಿದ್ದಾರೆ. ಬೆಂಗಳೂರಿನ ಜೊತೆಗೆ ಹುಬ್ಬಳ್ಳಿ, ರಾಯಚೂರು, ಬಳ್ಳಾರಿ, ಗುಲ್ಬರ್ಗದಲ್ಲೂ ಹಸಿರ ಕ್ರಾಂತಿ ಮುಂದುವರೆದಿದೆ. ಇದನ್ನೂ ಓದಿ:  ಸಾಂಸ್ಕೃತಿಕ ನಗರಿ ಬೆಳಗಾವಿಗೆ ಭೇಟಿ ನೀಡಿದ ರಾಜ್ಯಪಾಲರು

ಡಾ. ಸಬಿತಾ ರಾಮಮೂರ್ತಿ:
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅಂತಾರೆ. ಈ ಹೆಣ್ಮಗಳು ಶೈಕ್ಷಣಿಕ ಜಗತ್ತಿನಲ್ಲಿ ಮೂಡಿಸಿರುವ ಛಾಪು ಎಲ್ಲರೂ ತಲೆದೂಗುವಂಥದ್ದು. ಸಿಎಂಆರ್ ಯುನಿವರ್ಸಿಟಿ ಇಂದು ಬೆಂಗಳೂರಿನಲ್ಲಿ ಇಷ್ಟು ಪ್ರಸಿದ್ಧಿ ಗಳಿಸುವುದರ ಹಿಂದಿರುವ ಅಗಾಧ ಶಕ್ತಿಯೇ ಸಿಎಂಆರ್ ವಿವಿಯ ಕುಲಪತಿ ಮತ್ತು ಸಿಎಂಆರ್ ಜ್ಞಾನಧಾರ ಟ್ರಸ್ಟಿನ ಅಧ್ಯಕ್ಷೆಯಾದ ಡಾ.ಸಬಿತಾ ರಾಮಮೂರ್ತಿ.

ಐಪಿಎಸ್ ಅಧಿಕಾರಿಯ ಮಡದಿಯಾಗಿ, ಸೊಗಸಾದ ಆರಾಮದ ಜೀವನ ನಡೆಸುವ ಅವಕಾಶವಿದ್ದರೂ, ಶಿಕ್ಷಣ ಜಗತ್ತಿನತ್ತ ಇದ್ದ ಸೆಳೆತ ಸಬಿತಾರನ್ನು ಸೆಳೆಯದೆ ಬಿಡಲಿಲ್ಲ. 1990ರಲ್ಲಿ ಸಿಬಿಎಸ್ಸಿಗೆ ಸಂಯೋಜಿತವಾದ ಶಾಲೆಯಿಂದ ಶಿಕ್ಷಣ ಕ್ಷೇತ್ರದ ಮಹಾಸಾಗರಕ್ಕೆ ಧುಮುಕಿದ ಡಾ.ಸಬಿತಾ ರಾಮಮೂರ್ತಿ ಅವರು, ಇವತ್ತಿಗೆ ಸಿಎಂಆರ್ ಎಂಬ ಬೃಹತ್ ವಿದ್ಯಾನೌಕೆಯನ್ನು ಅದ್ಭುತವಾಗಿ ಸಾಗಿಸುತ್ತಿರುವ ಚತುರ ನಾವಿಕರೆನಿಸಿದ್ದಾರೆ.

International Womens Day Public TV To Present Nari Narayani Award To Dr Sabitha Ramamurthy

ಸಿಎಂಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್‍ನ ರಚನೆಯಿಂದ ಶುರುವಾಗಿ ಒಟ್ಟು ಬರೋಬ್ಬರಿ 18 ಶಿಕ್ಷಣ ಸಂಸ್ಥೆಗಳು ಸಬಿತಾ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಸಿಎಂಆರ್ ವಿವಿ ಬಗ್ಗೆ ಅಸಂಖ್ಯ ಪೋಷಕರು ಹಾಗೂ ವಿದ್ಯಾರ್ಥಿಗಳ ಹೊಂದಿರುವ ಮೆಚ್ಚುಗೆ ಭಾವವೇ ಇದಕ್ಕೆ ಸಾಕ್ಷಿ.

ಉನ್ನತ ವ್ಯಾಸಂಗದ ಜೊತೆಗೆ ಅತ್ಯುನ್ನತ ತರಬೇತಿ, ಸಂಶೋಧನೆ ಮತ್ತು ಸಲಹಾ ಕೇಂದ್ರಗಳ ಮೂಲಕ ಅಗಣಿತ ವಿದ್ಯಾರ್ಥಿಗಳ ಮನ ಗೆದ್ದ ಸಂಸ್ಥೆಯಿದು. ಸಿಎಂಆರ್ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಕಲಿಯುತ್ತಿರುವ 20 ಸಾವಿರ ವಿದ್ಯಾರ್ಥಿಗಳಲ್ಲಿ ಬರೀ ಭಾರತೀಯರಷ್ಟೇ ಅಲ್ಲದೆ, ವಿಶ್ವದ ಸುಮಾರು 60 ದೇಶಗಳಿಂದ ಬಂದಿರುವ ವಿದ್ಯಾರ್ಥಿಗಳೂ ಇದ್ದಾರೆ.

ಸಫಲ ನಾಗರತ್ನ:
ವೈದ್ಯಕೀಯ ಜಗತ್ತಿಗೆ ಸವಾಲಾಗಿರುವ ಸೋಂಕೊಂದರ ಪೀಡಿತರಾಗಿದ್ದರೂ, ಅನಾರೋಗ್ಯ ಕಾಡುತ್ತಿದ್ದರೂ, ನೂರಾರು ಯುವತಿಯರ ಬಾಳಿಗೆ ಭರವಸೆಯ ಬದುಕು ಕಟ್ಟಿಕೊಡುತ್ತಿರುವ ಗಟ್ಟಿ ಮಹಿಳೆ ಇವರು. ನೊಂದು ಬೆಂದ ಮಹಿಳೆಯರ ಅಂಧಕಾರಕ್ಕೆ ಬೆಳಕು ಚೆಲ್ಲುತ್ತಿರುವ ನಿಜವಾದ ರತ್ನ ಸಫಲ ನಾಗರತ್ನ.

ತಾವೇ ಸ್ಥಾಪಿಸಿದ ಆಶ್ರಯ ಫೌಂಡೇಶನ್ ಮೂಲಕ ನೂರಾರು ಹೆಚ್‍ಐವಿ ಭಾದಿತರ ಪಾಲಿಗೆ ಇವರೇ ತಾಯಿ, ತಂದೆ, ಅಕ್ಕ, ತಂಗಿ, ಬಂಧು, ಬಳಗ. ಹೆಚ್‍ಐವಿ ಪೀಡಿತರು ಹಾಗೂ ಅವರ ಮಕ್ಕಳಿಗೆ ಅನ್ನದಾತೆಯಾಗಿ, ಆಶ್ರಯದಾತೆಯಾಗಿ, ಮಾರ್ಗದರ್ಶಿಯಾಗಿ, ಅವರೆಲ್ಲರಿಗೂ ಆತ್ಮಸ್ಥೈರ್ಯ ತುಂಬುತ್ತಾ ಬದುಕಿಗೆ ದಾರಿದೀಪವಾಗಿದ್ದಾರೆ ನಾಗರತ್ನ.

International Womens Day Public TV To Present Nari Narayani Award To Safala Nagaratna

ಹೆಚ್‍ಐವಿಯಿಂದ ತಂದೆ – ತಾಯಿ ಕಳೆದುಕೊಂಡವರು ಹಾಗೂ ಪೋಷಕರಿಂದ ಹೆಚ್‍ಐವಿಗೆ ತುತ್ತಾದವರಿಗೆ ಬದುಕುವ ಭರವಸೆ ತುಂಬುತ್ತಾರೆ. ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ ಎಂಬುದನ್ನು ಮನದಟ್ಟು ಮಾಡಿಕೊಡುತ್ತಿದ್ದಾರೆ. ಸ್ವಾವಲಂಬಿಯಾಗುವಂತೆ ಪ್ರೇರೆಪಿಸುತ್ತಾರೆ. ಇಂಥ ಅದೆಷ್ಟೋ ಹೆಣ್ಣು ಮಕ್ಕಳ ಕಣ್ಣೀರು ಒರೆಸಿದ ಕರುಣಾಮಾಯಿಯಾಗಿದ್ದಾರೆ.

ಡಾ. ಅಂಜಲಿ ನಿಂಬಾಳ್ಕರ್:
ಖಾನಾಪುರ ಶಾಸಕಿ ಆಗುವುದಕ್ಕಿಂತ ಮೊದಲು ಡಾ.ಅಂಜಲಿ ನಿಂಬಾಳ್ಕರ್ ವೈದ್ಯ ವೃತ್ತಿಯಲ್ಲಿದ್ದವರು. ಜನಸೇವೆಯ ಗುರಿಯೊಂದಿಗೆ ರಾಜಕೀಯ ಕಣಕ್ಕೆ ಧುಮುಕಿದ ಇವರನ್ನು ಮತದಾರರು ಕೈಬಿಡಲಿಲ್ಲ. ಶಾಸಕಿಯಾಗಿ ರಾಜಕೀಯದ ಸವಾಲಿನ ಹಾದಿಯನ್ನು ಸಮರ್ಥವಾಗಿ ನಿಭಾಯಿಸಿ, ಜನಮನ್ನಣೆ ಗಳಿಸಿದ್ದಾರೆ. ರಾಜಕೀಯಕ್ಕೆ ಬರಬೇಕು ಅಂತಾ ತುಡಿತವಿರುವ ಪ್ರತಿ ಮಹಿಳೆಗೂ ಸ್ಫೂರ್ತಿಯಾಗಿ ನಿಲ್ಲಬಲ್ಲ ಹೆಣ್ಣುಮಗಳು ಇವರು. ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ಸದನದಲ್ಲಿ ಕಣ್ಣಲ್ಲಿ ನೀರು ತುಂಬಿಕೊಂಡೇ ಮಾತಾನಾಡಿದ ಅಂಜಲಿ, ಅತ್ಯಾಚಾರದ ವಿರುದ್ಧ ಕಠಿಣ ಕಾನೂನಿಗಾಗಿ ಧ್ವನಿಯೆತ್ತಿದ್ದರು.

International Womens Day Public TV To Present Nari Narayani Award To Dr.Anjali Nimbalkar

ಇಡೀ ದೇಶಕ್ಕೆ ದೇಶವೇ ಕೊರೊನಾದ ಕಾರ್ಮೋಡದಲ್ಲಿ ಇರುವಾಗ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಅಂಜಲಿ ತಮ್ಮ ಕ್ಷೇತ್ರದಲ್ಲಿ ಓಡಾಡಿದ್ರು. ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಕೊಟ್ರು. ಅಷ್ಟೇ ಅಲ್ಲ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುವಾಗ ಸ್ವತಃ ತಾವೇ ಮುಂದೆ ನಿಂತು ಗರ್ಭಿಣಿ ಮಹಿಳೆಯರಿಗೆ ಧೈರ್ಯ ತುಂಬಿ ಲಸಿಕೆ ಹಾಕುತ್ತಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ನೀಡಲು ಸರ್ಕಾರ ಹಿಂದೇಟು ಹಾಕಿದಾಗ ಸಂಘರ್ಷದ ಪಾದಯಾತ್ರೆ ಮಾಡಿದರು.

ಡಾ. ಸ್ವಾತಿ ಪ್ರದೀಪ್:
ಜೀವನದಲ್ಲಿ ಮಹತ್ತರ ಸಾಧನೆಗೈಯ್ಯಬೇಕಂದರೆ ಹಳ್ಳಿ ಬಿಟ್ಟು ಸಿಟಿ ಕಡೆ ಮುಖ ಮಾಡ ಬೇಕು ಎನ್ನುವ ಧ್ಯೇಯದಲ್ಲಿ ಬದುಕುತ್ತಿರುವವರು ಹಲವರು. ಆದರೆ ಗ್ರಾಮೀಣ ಪ್ರದೇಶದಲ್ಲೇ ಇದ್ದು, ಗ್ರಾಮೋದ್ಯಮದಲ್ಲೇ ಉದ್ಧಾರವಾಗಿ, ಹಳ್ಳಿಮಂದಿಯ ಮೊಗದಲ್ಲಿ ನಗು ಹಾಗೂ ಲಾಭದ ಸೊಬಗು ಕಂಡವರು ಅಪರೂಪದ ಸಾಧಕಿ ಡಾ.ಸ್ವಾತಿ ಪ್ರದೀಪ್.

ಪತಿಯ ನೆರವಿನೊಂದಿಗೆ ಹೊಸದುರ್ಗದಲ್ಲಿ ಶುರುಮಾಡಿದ ಸದ್ಗುರು ಆಯುರ್ವೇದ ಉತ್ಪನ್ನಗಳು ಮತ್ತು ವಾಸವಿ ಹೆಲ್ತ್ ಕೇರ್ ಪ್ರಾಡಕ್ಟುಗಳು ಇಂದು ಬಹಳ ಹೆಸರುವಾಸಿ. ವೈದ್ಯೆಯಾಗಿ ಕೈತುಂಬಾ ಕಾಸು ಕಾಣುತ್ತಾ ಬದುಕುವ ಮಾದರಿಗೆ ಬೆನ್ನುತೋರಿ, ನೂರಾರು ಮಂದಿ ಗ್ರಾಮೀಣ ಮಹಿಳೆಯರಿಗೆ ಬೆನ್ನೆಲುಬಾಗಬೇಕೆನ್ನೋ ಅವ್ರ ನಿರ್ಧಾರ ಇವತ್ತು ಸತ್ಫಲ ಕೊಡುತ್ತಿದೆ.

International Womens Day Public TV To Present Nari Narayani Award To Dr Swathi Pradeep

ವೈದ್ಯೆಯಾಗಿ, ಉದ್ಯಮಿಯಾಗಿ ನೂರಾರು ಮನೆಬೆಳಗಿದ ಈ ಛಲವಂತೆಗೆ ಹೊಸದುರ್ಗ ನಗರದ ಪುರಸಭಾ ಸದಸ್ಯ ಸ್ಥಾನ ಸಲೀಸಾಗಿ ದಕ್ಕಿತು. ಅಧಿಕಾರ ಸಿಕ್ಕಿತೆಂದು ಸುಮ್ಮನೆ ಕೂರುವ ಜಾಯಮಾನ ಇವರದ್ದಲ್ಲ. ಈಗಾಗಲೇ ನಾಲ್ಕೈದು ಕಡೆ ಸ್ವಂತ ಖರ್ಚಿನಲ್ಲೇ ಶುದ್ಧ ನೀರಿನ ಘಟಕಗಳನ್ನು ಪ್ರಾರಂಭಿಸಿದ್ದಾರೆ. ಅಲ್ಲದೇ ಕೆಲ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ ಡಾ.ಸ್ವಾತಿ ಪ್ರದೀಪ್.

ಏಷ್ಯಾ ಖಂಡದಲ್ಲಿಯೇ ಪ್ರಪ್ರಥಮವಾಗಿ ವಿದ್ಯುತ್ ಇಲ್ಲದಿದ್ದರೂ ಯುಪಿಎಸ್ ಮೂಲಕ ರಾತ್ರಿಯೆಲ್ಲ ಬೆಳಗುವ ಬೀದಿ ದೀಪಗಳನ್ನು ಅಳವಡಿಸಿದ ಸಾಧನೆಯ ಗರಿ ಡಾ.ಸ್ವಾತಿಯವರ ಮುಡಿಗೇರಿದೆ. ಒಟ್ಟಿನಲ್ಲಿ ಸ್ಟೆಥಾಸ್ಕೋಪ್ ಹಿಡಿದು ರೋಗಿಯ ಎದೆಬಡಿತ ಕೇಳಿ ಮದ್ದು ಕೊಡಬೇಕಿದ್ದ ಕೈಗಳು, ಇಂದು ಅದೆಷ್ಟೋ ಮನೆಯ ದೀಪ ಬೆಳಗಲು ಕಾರಣವಾಗಿವೆ.

ಮಂಗಳ ಮರಕಲೆ:
ಅಂಗವೈಕಲ್ಯ ಶಾಪವಲ್ಲ. ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ ಎಂಬ ಮಾತಿಗೆ ಸಾಧಕಿ ಮಂಗಲಾ ಮರಕಲೆ ಅತ್ಯುತ್ತಮ ಸಾಕ್ಷಿ. ಬೀದರ್ ತಾಲೂಕು ಅಲಿಯಂಬರ್ ಗ್ರಾಮದ ಮಂಗಲಾ ಮರಕಲೆ ಎಂಬ ವಿಶೇಷಚೇತನ ಮಹಿಳೆಯ ಯೋಶೋಗಾಥೆ ಇದು. ತನ್ನಂತೆ ಯಾವ ಮಹಿಳೆಯೂ ಸಮಾಜದಲ್ಲಿ ಸಂಕಷ್ಟ ಅನುಭವಿಸಬಾರದು. ನೊಂದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಇವರು ಹಗಲಿರುಳು ಶ್ರಮಿಸುತ್ತಿದ್ದಾರೆ.

International Womens Day Public TV To Present Nari Narayani Award To Mangala Marakale

ವಿಶೇಷಚೇತನ ಮಹಿಳೆಯರು, ವಿಧವೆಯರು, ಶೋಷಿತ ಮಹಿಳೆಯರು ಹಾಗೂ ಬಡ ವಿದ್ಯಾರ್ಥಿನಿಯರಿಗೆ ಟೈಲರಿಂಗ್, ಕಂಪ್ಯೂಟರ್, ಬ್ಯೂಟಿ ಪಾರ್ಲರ್ ಬಗ್ಗೆ ಉಚಿತ ತರಬೇತಿ ನೀಡುತ್ತಿದ್ದಾರೆ. ಈವರೆಗೆ ಅಂದಾಜು 5 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ತರಬೇತಿ ನೀಡಿದ್ದಾರೆ. ಯಾವುದೇ ಫಲಾಪೇಕ್ಷೆ ಬಯಸದೇ 10 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿದ್ದಾರೆ.

ನೊಂದ ಮಹಿಳೆಯರಿಗಾಗಿಯೇ ಇವರು ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಮಹಿಳೆಯರಲ್ಲಿ ಆರ್ಥಿಕ ಬಲ ತುಂಬಿ, ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ.

ಆಶಾ:
ಸಾಧನೆಗೆ ವಯಸ್ಸು ಅಥವಾ ಗಂಡು ಹೆಣ್ಣೆಂಬ ಬೇಧ ಇಲ್ಲವೇ ಇಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಸಾಹಸಿ ಉದ್ಯಮಿ. ಇಂದು ಕರ್ನಾಟಕದೊಳಗಷ್ಟೇ ಅಲ್ಲದೇ, ಹೊರರಾಜ್ಯಗಳ ಮನೆಗಳಲ್ಲೂ ಸ್ವಚ್ಛತೆ ಮತ್ತು ತಾಜಾತನದ ಪರಿಮಳ ಬೀರುವಂತೆ ಮಾಡಿ ಯಶಸ್ವಿ ಮಹಿಳಾ ಉದ್ಯಮಿ ಎನಿಸಿಕೊಂಡಿದ್ದಾರೆ. ಆಶಾ ಎನ್.ಆರ್. ವಿಜ್ಞಾನ ಪದವೀಧರೆಯಾದ ಅವರು, 1994ರಲ್ಲಿ ದೊಡ್ಡ ಸಾಹಸಕ್ಕೆ ಕೈ ಹಾಕೇಬಿಟ್ರು. ಆಗ ಶುರುವಾಗಿದ್ದೇ. ಆಶಾ ಕೆಮಿಕಲ್ಸ್ ಫಾರ್ ಮ್ಯಾನು ಫ್ಯಾಕ್ಚರಿಂಗ್ ಆಫ್ ಹೌಸ್ ಹೋಲ್ಡ್ ಕ್ಲೀನಿಂಗ್ ಪ್ರಾಡಕ್ಟ್ಸ್ ಸಂಸ್ಥೆ.

ರಾಜ್ಯದಲ್ಲಿ ಮನೆ ಸ್ವಚ್ಛತಾ ಉತ್ಪನ್ನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ತಮ್ಮ ಸಂಸ್ಥೆಯಿಂದ ಸದ್ಯ 16 ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, 60 ಮಂದಿ ಸಿಬ್ಬಂದಿಯಿದ್ದಾರೆ. ದಕ್ಷಿಣ ಭಾರತಾದ್ಯಂತ ಸರಿಸುಮಾರು 200 ಮಂದಿ ಹಂಚಿಕೆದಾರರ ನೆರವಿಂದ ಸಂಸ್ಥೆಯ ಉತ್ಪನ್ನಗಳು ಮನೆ ಮಾತಾಗಿವೆ. ಇಷ್ಟೆಲ್ಲಾ ಸಾಧನಗೈದಿರೋ ಆಶಾ ಅವರು ತಮ್ಮ ಯಶೋಗಾಥೆಯಿಂದ ಪ್ರೇರಿತರಾದ ಮಹಿಳೆಯರಿಗೆ ಪ್ರೋತ್ಸಾಹಿಸಲು ತರಬೇತಿ ಮತ್ತು ಸಮಾಲೋಚನೆ ನಡೆಸುತ್ತಾರೆ.

International Womens Day Public TV To Present Nari Narayani Award To ASHA

ಸಾಲದ್ದಕ್ಕೆ ಕಾಲೇಜು ಮಟ್ಟದಲ್ಲೇ ವಿದ್ಯಾರ್ಥಿನಿಯರಲ್ಲಿ ಉದ್ಯಮಗಳಲ್ಲಿ ಮಹಿಳೆಯರು ಮುನ್ನುಗ್ಗಬೇಕೆಂಬ ಪ್ರೇರಣೆ ಹುಟ್ಟಿಸಲು ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿ ಭಾಗವಹಿಸುತ್ತಾರೆ. ತಮ್ಮ ಅನುಭವದ ಬುತ್ತಿ ಬಿಚ್ಚಿ, ಮುಂದಿನ ಪೀಳಿಗೆಗೂ ಉದ್ಯಮ ಜಗತ್ತಿನ ಅವಲೋಕನ ಮಾಡಿಸುತ್ತಾರೆ.

ಗಂಗಾ ಲಕ್ಷ್ಮಮ್ಮ:
ಗೌರಿಬಿದನೂರು ತಾಲೂಕು ಕಲ್ಲೂಡಿ ಗ್ರಾಮದ ಗಂಗಲಕ್ಷ್ಮಮ್ಮ ಹೆಚ್ಚು ಓದಿದವರಲ್ಲ. ಹಾಗಂತ ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ರಾಜಕೀಯದಲ್ಲೂ ಸೈ ಎನಿಸಿಕೊಂಡ ಇವರು, 1989ರಲ್ಲೇ ಮಂಡಲ ಪಂಚಾಯಿತಿ ಸದಸ್ಯರಾಗಿದ್ದರು. ಬಳಿಕ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯೂ ಆದರು. ಗ್ರಾಮೀಣ ಮಹಿಳೆಯರು ಹಣಕಾಸು ವಿಚಾರದಲ್ಲಿ ಸಬಲರಾಗಬೇಕು ಎನ್ನುವುದು ಇವರ ಕನಸಾಗಿತ್ತು. ಅಂದು ಕಂಡ ಸ್ವಾವಲಂಬಿ ಕನಸನ್ನು ಇಂದು ನನಸು ಮಾಡಿದ್ದಾರೆ ಗಂಗಲಕ್ಷ್ಮಮ್ಮ. ಕೆಲ ವರ್ಷಗಳ ಹಿಂದೆ ವಿಶ್ವ ಯೋಜನೆಯಡಿ ತರಬೇತಿ ಪಡೆದ ಗಂಗಲಕ್ಷ್ಮಮ್ಮ. ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಹಾಗೂ ಮಸಾಲೆ ಪದಾರ್ಥ ಸಿದ್ಧಪಡಿಸಿ ಮಾರಾಟದಲ್ಲಿ ತೊಡಗಿಸಿಕೊಂಡರು. ಈ ಜೀವನೋಪಾಯ ಕಾಯಕವನ್ನು ಗ್ರಾಮದ ಮಹಿಳೆಯರಿಗೂ ಕಲಿಸಿಕೊಟ್ಟರು.

International Womens Day Public TV To Present Nari Narayani Award To Gangalakshmamma

ಇದರ ಫಲವಾಗಿ ಇಂದು ಕಲ್ಲೂಡಿ ಗ್ರಾಮದ 400ಕ್ಕೂ ಹೆಚ್ಚು ಕುಟುಂಬದ ಮಹಿಳೆಯರು ಇದೆ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಇವರೆಲ್ಲರಿಗೂ ಬೆನ್ನೆಲುಬಾಗಿ ಗಂಗಲಕ್ಷ್ಮಮ್ಮ ನಿಂತಿದ್ದಾರೆ. ಇವರು ತಯಾರಿಸುವ ಹಪ್ಪಳವು ಕಲ್ಲೂಡಿ ಹಪ್ಪಳ ಎಂದೇ ಖ್ಯಾತಿ ಪಡೆದಿದೆ. ಅಲ್ಲದೇ, ಸಮೃದ್ಧಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ಸಂಘವನ್ನೂ ಪ್ರಾರಂಭಿಸಿದ್ದಾರೆ. ಈ ಸಂಘದಲ್ಲಿ ಕೋಟ್ಯಂತರ ರೂಪಾಯಿಯಷ್ಟು ವ್ಯವಹಾರ ನಡೆಯುತ್ತಿದೆ. ಸೇವಾ ಸಾಧಕಿ ಗಂಗಲಕ್ಷ್ಮಮ್ಮ ಈವರೆಗೆ ಅನೇಕ ಗೌರವ ಸನ್ಮಾನಗಳಿಗೆ ಭಾಜನರಾಗಿದ್ದಾರೆ.

ಮಂಗಳಾಂಬಿಕೆ:
ರೇಷ್ಮೆ ನಗರಿಯ ರೇಷ್ಮೆಯಂಥ ನುಣುಪಾದ ವ್ಯಕ್ತಿತ್ವದ ಹೆಣ್ಮಗಳು ಛಲವಂತೆ, ಹಠಮಾರಿ, ಬಂಡೆಕಲ್ಲಿನಂತ ಗಟ್ಟಿಗಿತ್ತಿಯೂ ಆಗಿರ್ತಾಳೆ ಅನ್ನೋದು ರಾಮನಗರದ ಮಂಗಳಾಂಬಿಕೆಯವ್ರನ್ನು ನೋಡಿಯೇ ತಿಳೀಬೇಕು.

ದಿನ ಬೆಳಗಾದರೆ ನಿಮ್ಮ ಮತ್ತು ಮನೆಯ ಹಿರಿಯರ ಆರೋಗ್ಯದ ಗುಟ್ಟಾಗಿ ಮನೆಮಾತಾಗಿರುವ ಅಮೃತ್ ನೋನಿ ಬಗ್ಗೆ ಕೇಳದವರಿಲ್ಲ. ಅಮೃತ್ ನೋನಿಯನ್ನು ಆರ್ಡರ್ ಮಾಡಿದಾಕ್ಷಣ ತ್ವರಿತವಾಗಿ ನಿಮ್ಮ ಮನೆ ತಲುಪಿಸೋ ಪವಾಡಗಿತ್ತಿಯೇ ಈ ಮಂಗಳಾಂಬಿಕೆಯವರು. ತಮ್ಮ ಚಾಣಾಕ್ಷ ವ್ಯವಹಾರಿಕೆಯಿಂದ ಅಮೃತ್ ನೋನಿ ಉತ್ಪನ್ನಗಳ ಮಾರ್ಕೆಟಿಂಗ್ ಮತ್ತು ಡಿಸ್ಟ್ರಿಬ್ಯೂಷನ್ ಅನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ.

International Womens Day Public TV To Present Nari Narayani Award To MANGALAMBIKE

2017ರಲ್ಲಿ ರಾಮನಗರದಲ್ಲಿ ಓಂ ಶ್ರೀ ಎಂಟರ್ ಪ್ರೈಸಸ್ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ಅಮೃತ್ ನೋನಿಯ ವಿತರಣೆ ಶುರುಮಾಡಿದರು. ಇವತ್ತು ಹಳ್ಳಿ ಹಳ್ಳಿಗಳಲ್ಲೂ ಅಮೃತ್ ನೋನಿ ಸಿಗುತ್ತೆ. ಈ ಮ್ಯಾಜಿಕಲ್ ವಿತರಣೆಯ ಹಿಂದೆ ಮಂಗಳಾಂಬಿಕೆ ಅಂಡ್ ಟೀಮಿನ ಅಪರಿಮಿತ ಶ್ರಮವಿದೆ.

ಪುಟ್ಟ ಸಂಸ್ಥೆಯೊಂದು ಇಂದು ನೂರೈವತ್ತು ಮಂದಿಗೆ ಉದ್ಯೋಗ ಕೊಟ್ಟಿದೆ. ಅವರಲ್ಲಿ ಹೆಂಗಳೆಯರೇ 105 ಮಂದಿ. ದಿನೇ ದಿನೇ ವ್ಯವಹಾರ ವಿಸ್ತರಿಸುತ್ತಿರುವಂತೇ ಮಂಗಳಾಂಬಿಕೆಯವರ ಹೃದಯವಂತಿಕೆಯೂ ವಿಶಾಲವಾಗುತ್ತಿದೆ. ತಮ್ಮ ಗಳಿಕೆಯಲ್ಲಿ ಶ್ರೀಗುರು ಯತೀಂದ್ರ ಚಾರಿಟಬಲ್ ಟ್ರಸ್ಟನ್ನು ಸ್ಥಾಪಿಸಿದ್ದು ಅಸ್ವಸ್ಥ ಮಕ್ಕಳ ಶಸ್ತ್ರಚಿಕಿತ್ಸೆ, ಬಡಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಹೊಂಗಿರಣ ಚಾರಿಟಬಲ್ ಟ್ರಸ್ಟಿನ ಮೂಲಕ ಬಡಮಕ್ಕಳಿಗೆ ಊಟಕ್ಕೆ ನೆರವು, ಪ್ರೇರಣ ರಿಸೋರ್ಟ್ ಟ್ರಸ್ಟಿಗೆ ಅಗತ್ಯ ಔಷಧಗಳ ಪೂರೈಕೆಗೂ ಹೆಗಲಾಗಿದ್ದಾರೆ. ತನ್ನ ಯಶಸ್ಸಿನ ಜೊತೆಗೆ ನೂರಾರು ಮಹಿಳೆಯರಿಗೂ ದುಡಿಮೆಗೊಂದು ಮೂಲ ಕಂಡುಕೊಟ್ಟ ಸಂತೃಪ್ತಿ ಮಂಗಳಾಂಬಿಕೆ ಅವರದ್ದು.

ರಾಮಕ್ಕ:
ಇವರು ಒಂದಕ್ಷರವೂ ಕಲಿತಿಲ್ಲ, ಆದರೆ ಅಂಧಕಾರದಲ್ಲಿದ್ದ ನೂರಾರು ಮಕ್ಕಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ. ಇವರಿಗೆ ಓದು ಬರಹ ಗೊತ್ತಿಲ್ಲ ನಿಜ. ಆದರೆ ಸರ್ಕಾರಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ನೆರವಾಗುತ್ತಿದ್ದಾರೆ. ತುಮಕೂರು ಭಾಗದಲ್ಲಿ ಇವರ ಹೆಸರು ಮನೆಮಾತು. ಇವರೇ ಅಪರೂಪದ ಸಾಧಕಿ ರಾಮಕ್ಕ.

ರಾಮಕ್ಕ ತುಮಕೂರು ನಗರದ ಹಂದಿಜೋಗರ ಕಾಲೋನಿಯ ನಿವಾಸಿ. ಇಂದು ರಾಮಕ್ಕ ಸಮಾಜ ಸೇವೆಯಿಂದ ದೀನ ದಲಿತರ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಶಾಲೆಯ ಮುಖವನ್ನೇ ಕಾಣದ ಅಲೆಮಾರಿ ಸಮುದಾಯದ ಮಕ್ಕಳಿಗಾಗಿ ಟೆಂಟ್ ಶಾಲೆ ತೆರೆದು ಅವರ ವಿದ್ಯಾರ್ಜನೆಗೆ ನೆರವಾಗಿದ್ದಾರೆ. ಇವರ ಸಹಾಯದಿಂದ ಶಿಕ್ಷಣ ಪಡೆದ ನೂರಾರು ಮಕ್ಕಳು ಉನ್ನತ ವ್ಯಾಸಂಗ ಮಾಡಿ ಅನೇಕ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

International Womens Day Public TV To Present Nari Narayani Award To Ramakka

ಅಲೆಮಾರಿ ಸಮುದಾಯದ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿದ ಹಿರಿಮೆ ರಾಮಕ್ಕ ಅವರಿಗೆ ಸಲ್ಲಲೇಬೇಕು. ಇನ್ನು ಅಲೆಮಾರಿ ಸಮುದಾಯದವರಲ್ಲಿ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ರೇಷನ್ ಕಾರ್ಡ್, ಮಾಸಾಶನ, ಹೆಲ್ತ್ ಕಾರ್ಡ್ ಮುಂತಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಅಲ್ಲದೇ ಖುದ್ದು ಫಲಾನುಭವಿಗಳ ಜೊತೆ ಹೋಗಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಡುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *