ಬೆಂಗಳೂರು: ಅನರ್ಹರ ರಾಜೀನಾಮೆಯಿಂದ 15 ಕ್ಷೇತ್ರದಲ್ಲಿ ಉಪಚುನಾವಣೆ ಕಾವು ಏರುತ್ತಿದೆ. ಮತದಾರ ಪ್ರಭುಗಳ ಗಮನ ಸೆಳೆಯಲು ಖೆಡ್ಡಾ ರೆಡಿಯಾಗಿದೆ. ಅದರಲ್ಲೂ ಮಂಗಳಾರಾತಿ ಎತ್ತದಂತೆ ಮಹಿಳಾಮಣಿಗಳಿಗೆ ಒಲೈಸಲು ಭರ್ಜರಿ ಕಸರತ್ತು ಶುರುವಾಗಿದೆ. ಈ ಎಲೆಕ್ಷನ್ ಸೀರೆ ಆಫರ್ ಏನು ಅಂತ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿ ಬಟಾಬಯಲು ಮಾಡಿದೆ.
ಚಿಕ್ಕಪೇಟೆಗೂ ಮಹಿಳೆಯರಿಗೂ ಅದೇನ್ ನಂಟು ಅಂತಾ ಭಗವಂತನಿಗೆ ಗೊತ್ತಿರೋದಕ್ಕೆ ಸಾಧ್ಯವಿಲ್ಲ. ಹಬ್ಬ, ಹರಿದಿನ, ವೀಕೆಂಡ್ ಹೀಗೆ ಯಾವಾಗ ಹೋದರೂ ಚಿಕ್ಕಪೇಟೆ ಮಹಿಳೆಯರಿಂದ ಫುಲ್ ಬ್ಯುಸಿ ಇರುತ್ತೆ. ಈಗಂತೂ ಎಲೆಕ್ಷನ್ ಸಮಯ ಬೇರೆ, ಸೀರೆ ವ್ಯಾಪಾರವಂತೂ ಇನ್ನೂ ಸಖತ್ ಆಗಿ ನಡೀತಿದೆ. ವೋಟಿಗೊಂದು ಕಲರ್‌ಫುಲ್ ಸೀರೆ ಎನ್ನುವಂತೆ ಮಹಿಳೆಯರಿಗೆ ಎಲೆಕ್ಷನ್ ಗಿಫ್ಟ್‌ಗಾಗಿ ಅಂಗಡಿ ಮಾಲೀಕರು ಭರ್ಜರಿ ಆಫರ್ ಬಿಟ್ಟಿದ್ದಾರೆ.
Advertisement
Advertisement
ನಮ್ಮಲ್ಲಿ ಹಾಫ್ ರೇಟ್, ಚೀಫ್ ರೇಟ್ ಸೀರೆ. ಸಿಲ್ಕ್ ಸೀರೆ, ಸಿಂಥೆಟಿಕ್, ಕಾಟನ್ ಯಾವುದ್ ಬೇಕು ಹೇಳಿ ಎಂದು ಚಿಕ್ಕಪೇಟೆಯಲ್ಲಿ ಮಾಮೂಲಿ ಕೇಳಿಬರುವ ಧ್ವನಿ. ಆದರೆ ಈಗ ಎಲೆಕ್ಷನ್ ವ್ಯಾಪಾರದ ಸಮಯವಾಗಿದ್ದು, ಹಾಫ್ ರೇಟ್, ಚೀಪ್ ರೇಟ್ ಎಲೆಕ್ಷನ್ ಸೀರೆಗಳ ಜೊತೆ ವ್ಯಾಪಾರಿಗಳು ಮೈಕೊಡವಿಕೊಂಡು ಜೈ ಎಂದು ಸೀರೆ ವ್ಯಾಪಾರಕ್ಕೆ ಪಟ್ಟಾಗಿ ಕುಂತುಬಿಟ್ಟಿದ್ದಾರೆ. ಥೇಟು ರಾಜಕೀಯ ನಾಯಕರಂತೆ ಇಲ್ಲಿನ ವ್ಯಾಪಾರಿಗಳು ಎಲೆಕ್ಷನ್ ಸೀರೆ ಸೇಲ್ ಮಾಡೋಕೆ ಸಿಕ್ಕಾಪಟ್ಟೆ ಸುಳ್ಳು, ಪೂಸಿ ಹೊಡೆಯುತ್ತಾರೆ. ಇದಕ್ಕೆ ಕಳ್ಳಬಿಲ್ ಲೆಕ್ಕಾನೂ ತೋರಿಸುತ್ತಾರೆ.
Advertisement
Advertisement
ಎಲೆಕ್ಷನ್‍ಗೆ ಸೀರೆ ಬೇಕು ಅಂದ್ರೆ ಸಾಕು ವ್ಯಾಪಾರಿಗಳ ಕಣ್ಣರಳುತ್ತೆ. ಅಯ್ಯೋ ಬಿಡಿ ಸಾಬ್ ಎಲ್ಲಾ ಆರೇಂಜ್‍ಮೆಂಟ್ ನಮ್ಮದೇ, ನಿಮಗೆ ಎಷ್ಟು ಅಗ್ಗದ ಸೀರೆ ಬೇಕು ಅಷ್ಟು ಸಿಗುತ್ತೆ. ಕಲರ್ ಗಿಲರ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಪಟ್ಟಾಗಿ ಕುಂತು ಉಳಿದ ಕಸ್ಟಮರ್ ನತ್ತ ಕಣ್ಣುಹಾಯಿಸದೇ ವ್ಯಾಪಾರಕ್ಕೆ ನಿಂತುಬಿಡುತ್ತಾರೆ. ಕಳೆದ ವಾರವಷ್ಟೇ ಎಲೆಕ್ಷನ್ ಸೀರೆ ಸಖತ್ ವ್ಯಾಪಾರ ಆಗಿದೆ ಎಂದು ಸ್ವತಃ ಅಂಗಡಿ ಅವರೇ ಹೇಳುತ್ತಾರೆ. ಇನ್ನೂ ಕೆಲವು ಅಂಗಡಿಗಳಲ್ಲಿ, ನೀವು ಹೇಳಿದಷ್ಟು ಬಿಲ್ ಹಾಕಿಕೊಡ್ತೀವಿ ತಲೆಕೆಡಿಸಿಕೊಳ್ಳಬೇಡಿ, ನೀವು ಸೀರೆ ಕೊಡುವಾಗ ಎಷ್ಟು ಬೇಕಾದರೂ ದುಡ್ಡು ತಗೊಳ್ಳಿ ಎಂದು ಸ್ಪೆಷಲ್ ಐಡಿಯಾ ಕೂಡ ಕೊಡುತ್ತಾರೆ.
ಪ್ರಚಾರ ಮಾಡುವಾಗ ರಾಜಕಾರಣಿಗಳು ಎಷ್ಟು ಹಣ ಬೇಕಾದರೂ ಸುರಿಯಲು ಸಿದ್ಧರಾಗುತ್ತಾರೆ. ಇದನ್ನೆ ಲಾಭ ಮಾಡಿಕೊಳ್ಳುವ ಮಧ್ಯವರ್ತಿಗಳು 200 ರೂ. ಬೆಲೆಯ ಸೀರೆಯನ್ನ 350 ಬೇಕಾದರೂ ಹ್ಯಾಂಡ್ ಬಿಲ್ ಮಾಡಿಸಿಕೊಳ್ಳುತ್ತಾರೆ. ಇದರಿಂದ ಮಳಿಗೆಗಳು ಜಿಎಸ್‍ಟಿ ಬೀಳಲ್ಲ. ಇತ್ತ ತಗೊಳ್ಳೊ ಮಧ್ಯವರ್ತಿಗಳು ದುಪ್ಪಟ್ಟು ಲೆಕ್ಕ ತೋರಿಸಿ ಹಣ ಪೀಕಬಹುದು ಎಂಬ ಪ್ಲಾನ್ ಮಾಡಲಾಗುತ್ತೆ.
ಎಷ್ಟು ಸೀರೆ ಕೊಡಿಸಿದರೂ ಮಹಿಳೆಯರ ಬಾಯಲ್ಲಿ ಸಾಕು ಅನ್ನೋ ಮಾತೇ ಬರಲ್ಲ. ಇದನ್ನು ಅಭ್ಯರ್ಥಿಗಳು ಕೂಡ ಬಂಡವಾಳ ಮಾಡ್ಕೊಂಡಿದ್ದಾರೆ. ಎಲೆಕ್ಷನ್ ಸೀರೆ ಮಾರಾಟ ಮಾಡಲು ಎಲ್ಲದಕ್ಕೂ ವ್ಯಾಪಾರಿಗಳು ಸಿದ್ಧರಾಗಿದ್ದಾರೆ. ಹಲವು ಮಳಿಗೆಗಳು ಭರ್ಜರಿ ಸೀರೆ ಸೇಲ್‍ಗಾಗಿ ಖೆಡ್ಡಾ ಸಿದ್ಧಪಡಿಸಿದೆ. ಮತದಾರರ ಅಮೂಲ್ಯ ಮತ ಸೆಳೆಯಲು ಏನೆಲ್ಲಾ ಮಾಡುತ್ತಾರೆ. ಇಂತಹ ಆಮಿಷಕ್ಕೆ ಬಲಿಯಾಗದೇ ನೀವು ನಿಮ್ಮ ಕ್ಷೇತ್ರ ಅಭಿವೃದ್ಧಿ ಮಾಡುವ ಅಭ್ಯರ್ಥಿಗೆ ಮತದಾನ ಮಾಡಿ ಎನ್ನುವುದೇ ನಮ್ಮ ಆಶಯವಾಗಿದೆ.