ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರಿಂದ ರಾತ್ರಿ ವೇಳೆ ಭರ್ಜರಿಯಾಗಿ ವಸೂಲಿ ದಂಧೆ ನಡೆಯುತ್ತಿದೆ. ಯಾರ ಭಯವಿಲ್ಲದೇ ರಾಜಾರೋಷವಾಗಿ ನಾನು ಸಿಎಂ ಸಂಬಂಧಿ ಅಂತ ಹೇಳ್ಕೊಂಡು ರೋಲ್‍ಕಾಲ್ ಮಾಡುತ್ತಾರೆ. ಕೊಡದಿದ್ದರೆ ಬೀದಿಬದಿಯ ವ್ಯಾಪಾರಿಗಳಿಗೆ ಸರಿಯಾಗಿ ಗುನ್ನಾ ಕೊಡುತ್ತಾರೆ. ಪೊಲೀಸರ ರೋಲ್ ಕಾಲ್ ದಂಧೆ ಪಬ್ಲಿಕ್ ಟಿವಿಯ ಸ್ಟಿಂಗ್ ಆಪರೇಷನ್‍ನಲ್ಲಿ ಬಯಲಾಗಿದೆ.
ಬೆಂಗಳೂರಿನ ಪೊಲೀಸರು ಅಂದರೆ ಬೇರೆ ರಾಜ್ಯದ ಜನರು ಕೂಡ ತಲೆ ಎತ್ತಿ ಸೆಲ್ಯೂಟ್ ಹೊಡೆಯುತ್ತಿದ್ದರು. ಆದರೆ ಕೆಲ ಪೊಲೀಸರು ಮಾಡಿದ ನಾಲಾಯಕ್ ಕೆಲಸದಿಂದಾಗಿ ಇತರರೂ ತಲೆತಗ್ಗಿಸುವಂತಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ರಾಜರೋಷವಾಗಿ ಬೀದಿ ಬದಿಯ ವ್ಯಾಪಾರಿಗಳ ಜೊತೆ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್‍ಗಳಲ್ಲಿ ವಸೂಲಿ ದಂಧೆಗೆ ಇಳಿದಿದ್ದಾರೆ. ಫುಟ್‍ಪಾತ್ ಮೇಲಿನ ಎಗ್ ರೈಸ್ ಅಂಗಡಿ, ತರಕಾರಿ ಅಂಗಡಿ, ಬಾರ್ ಆ್ಯಂಡ್ ರೆಸ್ಟೋರೆಂಟ್‍ಗಳಲ್ಲಿ ಇಳಿ ಸಂಜೆಯಾದರೆ ಸಾಕು ಭರ್ಜರಿ ರೋಲ್‍ಕಾಲ್ ದಂಧೆಗೆ ಇಳಿಯುತ್ತಾರೆ.
Advertisement
Advertisement
ಸ್ಥಳ: ರಾಜಾಜಿನಗರ ಮೆಟ್ರೋ ನಿಲ್ದಾಣ
ಸಮಯ: ರಾತ್ರಿ 8 ಘಂಟೆ
ರಾಜಾಜಿನಗರದ ಬ್ರಿಡ್ಜ್ ಮೇಲೆ ಪೊಲೀಸ್ ಆಸಾಮಿಯೊಬ್ಬ ಸೈಲೆಂಟ್ ಆಗಿ ಹಣಕ್ಕಾಗಿ ಬಂದು ನಿಲ್ಲುತ್ತಾನೆ. ಇವರು ಬಂದ ಕೂಡಲೇ ಎಗ್‍ರೈಸ್ ವ್ಯಾಪಾರಿ ಹಣ ಕೊಡುತ್ತಾನೆ. ಹಣ ತಗೊಂಡ ಆ ವಸೂಲಿ ವೀರ ಅಲ್ಲಿಂದ ನಿಧಾನಕ್ಕೆ ಕಾಲ್ಕೀಳುತ್ತಾನೆ. ಎಷ್ಟು ಕೊಟ್ರಿ ಸರ್ ಅಂತ ಹಣಕೊಟ್ಟ ವ್ಯಾಪಾರಿನ ಕೇಳಿದರೆ ದಿನಾ ನಾಲ್ಕು ಪೊಲೀಸ್ ಸ್ಟೇಷನ್ ಅವರಿಗೆ ಕೊಡ್ತೇನೆ ಸರ್ ಅಂತ ಹೇಳುತ್ತಾರೆ.
Advertisement
ಪ್ರತಿನಿಧಿ: ಎಷ್ಟು ಕೊಟ್ರಿ..?
ವ್ಯಾಪಾರಿ: ನಲವತ್ತು..
ಪ್ರತಿನಿಧಿ: ಇನ್ನೂ ಬೇರೆಯವರು ಬರ್ತಾರಾ ಮತ್ತೆ
ವ್ಯಾಪಾರಿ: ಇನ್ನೂ ಬರ್ತಾರೆ ಅಣ್ಣ. ನಿನ್ಗೆ ಹುಟ್ಟಿರೋರು ಜಯಶೀಲರು ಇಲ್ಲಿ
ಪ್ರತಿನಿಧಿ: ಅಂದ್ರೆ
ವ್ಯಾಪಾರಿ: ಇವರು ಒಬ್ಬರೇ ಅಲ್ಲ. ನಾಲ್ಕೈದು ಸ್ಟೇಷನ್ ಅವರು ಬರ್ತಾರೆ
ಪ್ರತಿನಿಧಿ: ಯಾವ ಯಾವ ಸ್ಟೇಷನ್ ಅವ್ರು.
ವ್ಯಾಪಾರಿ: ಬಸವೇಶ್ವರ, ರಾಜಾಜಿನಗರ, ಸುಬ್ರಹ್ಮಣ್ಯ ನಗರ, ಈ ಕಡೆ ಸ್ಟೇಷನ್
Advertisement
ಪ್ರತಿನಿಧಿ: ನಾಲ್ಕು ಸ್ಟೇಷನ್ ಅವ್ರಿಗು..
ವ್ಯಾಪಾರಿ: ಇದು ನಾಲ್ಕು ಸ್ಟೇಷನ್ ಬ್ರಿಡ್ಜ್ ಗೆ ಸೇರ್ಬೇಕಲ್ಲಣ್ಣ ಇದು
ಪ್ರತಿನಿಧಿ: ನಾಲ್ಕು ಸ್ಟೇಷನ್ ಅವ್ರಿಗೆ ಎಷ್ಟೆಷ್ಟು ಕೊಡ್ತೀರಿ
ವ್ಯಾಪಾರಿ: ಇವ್ರಿಗೆ 40, ಈ ಸ್ಟೇಷನ್‍ಗೆ 20, ಆ ಸ್ಟೇಷನ್‍ಗೆ ಇಪ್ಪತ್ತೇನು
ಪ್ರತಿನಿಧಿ: ದಿನ ಒಂದು ಇನ್ನೂರಾ…?
ವ್ಯಾಪಾರಿ: 150 ಆಗುತ್ತೆ ಅಣ್ಣ
ಹೀಗೆ ರಾಜಾಜಿನಗರದಿಂದ ಪಬ್ಲಿಕ್ ಟಿವಿ ತಂಡ ಮತ್ತೊಂದು ಸ್ಥಳಕ್ಕೆ ಹೋದಾಗ ಅಲ್ಲಿ ಕೂಡ ಪೊಲೀಸಪ್ಪ ಭರ್ಜರಿಯಾಗಿ ರೋಲ್ ಕಾಲ್‍ಗೆ ನಿಂತಿದ್ದನು. ಕಳ್ಳನ ತರ ಎಗ್ ರೈಸ್ ವ್ಯಾಪಾರಿಯ ಪಕ್ಕಕ್ಕೆ ಬಂದು ಹಣ ತಗೊಳುತ್ತಿದ್ದನು.
ಸ್ಥಳ 2: ಮಂಜುನಾಥ ನಗರ
ಸಮಯ: ರಾತ್ರಿ 8: 40
ಮಂಜುನಾಥ ನಗರದ ಎಗ್ ರೈಸ್ ಅಂಗಡಿಗಳಿಗೆ ರಾತ್ರಿ 8:40ರ ಸುಮಾರಿಗೆ ಕೆಎ 42, ವಿ- 3292 ನಂಬರ್‍ನ ಟೂ ವ್ಹೀಲರ್ ನಲ್ಲಿ ಬಂದ ಪೊಲೀಸರೊಬ್ಬರು, ಮೂರ್ನಾಲ್ಕು ಅಂಗಡಿಗಳಲ್ಲಿ ವಸೂಲಿ ಮಾಡುತ್ತಿದ್ದನು. ಖಾಕಿ ವಸೂಲಿ ಮಾಡೋ ಕಡೆಯೆಲ್ಲಾ ಪಬ್ಲಿಕ್ ಕ್ಯಾಮರಾ ಫಾಲೋ ಮಾಡುತ್ತಿತ್ತು. ಕುರುಡು ಕಾಂಚಾಣ ವಸೂಲಿ ಮಾಡುವಾಗ ಖಾಕಿ ಕಿಲ-ಕಿಲ ಅಂತಿತ್ತು. ಇದೆಲ್ಲಾ ನಮ್ಮ ಕ್ಯಾಮೆರಾದಲ್ಲಿ ರೆಕಾರ್ಡ್ ಆಗುತ್ತಿತ್ತು. ಆದರೆ ಆ ಪೊಲೀಸಪ್ಪ ಯಾವುದಕ್ಕೂ ಡೋಂಟ್ ಕೇರ್ ಎಂಬಂತೆ ಒಂದು ಅಂಗಡಿಯಿಂದ, ಮತ್ತೊಂದು ಅಂಗಡಿಗೆ ಹೋಗಿ ಹಣ ಪೀಕ್ತಿದ್ದನು.
ಸ್ಥಳ 3: ಬಸವೇಶ್ವರ ನಗರ
ಸಮಯ: 9 ಘಂಟೆ
ಏರಿಯಾಗೊಬ್ಬರಂತೆ ಒಬ್ಬೊಬ್ಬ ಪೊಲೀಸ್ ಹಣ ವಸೂಲಿ ಮಾಡಿಕೊಂಡು ಮತ್ತೆ ಮುಂದಕ್ಕೆ ಮೂವ್ ಆಗುತ್ತಾರೆ. ನಮ್ಮ ತಂಡ ಪೊಲೀಸ್ ಹಿಂದೆನೇ ಫಾಲೋ ಮಾಡಿತು. ನೇರ ಬಾರ್ ಆ್ಯಂಡ್ ರೆಸ್ಟೋರೆಂಟ್‍ಗೆ ನುಗ್ಗುತ್ತಾನೆ. ಅಲ್ಲಿ 100 ರೂಪಾಯಿ ಕೇಳ್ತಾರೆ. ಬಾರ್ ಮಾಲೀಕ ಕೊಡಲು ನಿರಾಕರಿಸಿದಾಗ ನಾನು ಸಿಎಂ ಬಿಎಸ್ ವೈ ಸಂಬಂಧಿ ಅಂತ ಬಾರ್ ಮಾಲೀಕನಿಗೆ ಅವಾಜ್ ಬೇರೆ ಹಾಕ್ತಾನೆ ಅಂತ ಬಾರ್ ಮಾಲೀಕನೇ ಹೇಳ್ತಾನೆ.
ಪೊಲೀಸ್: ಕೊಡಿ ಹಣ
ಬಾರ್ ಮಾಲೀಕ: ಆಗ್ಲೇ 100 ರೂಪಾಯಿ ಜೇಬೊಳಗೆ ಇಟ್ಟಿದ್ದೆ. ತಿರುಗಾ ಬಂದು ಇದು ಮಾಡಿದ್ರಲ್ಲ. ಕೊಟ್ರಲ್ಲ ಅವಾಗ
ಪೊಲೀಸ್: ನಾನು ನೋಡಿಲ್ಲ. ನಾನು ಇಸ್ಕೊಳ್ಳೋದು ಬಿಟ್ಟು ಅವನಿಗೆ ಕೊಟ್ಟಿದ್ದಾ..ಬೀಡು ಅವನಿಗೆ ಕೆಲ್ಸ ಕೊಟ್ಟಲ್ಲ
ಗ್ರಾಹಕ: ಯಾಕೆ ತಲೆ ಕೆಡಿಸಿಕೊಳ್ತಿ ಬಿಡು. ಹೋದಾ..
ಬಾರ್ ಮಾಲೀಕ: ಯಡಿಯೂರಪ್ಪ ರಿಲೇಷನ್ ಅಂತ ಹೇಳ್ತಾನೆ.
ಗ್ರಾಹಕ: ಯಾರು..?
ಬಾರ್ ಮಾಲೀಕ: ರಾತ್ರಿ ಗಲಾಟೆಯಾಯ್ತು ಕಣ್ರಿ. ಎರಡೂವರೆಗೆ. ಅವ್ನು ಹರೀಶ್ ನ ಹೊಡೆದು ಬಿಟ್ಟ
ಗ್ರಾಹಕ: ಯಾರು
ಬಾರ್ ಮಾಲೀಕ: ಪೊಲೀಸ್
ಹೀಗೆ ಪ್ರತಿನಿತ್ಯ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲೂ ಬೀದಿ ವ್ಯಾಪಾರಿಗಳ ಹೊಟ್ಟೆ ಮೇಲೆ ಖಾಕಿ ಘರ್ಜಿಸುತ್ತಿದೆ. ಏನಿಲ್ಲ ಅಂದರೂ ಬಿಬಿಎಂಪಿಯಿಂದ ಪರವಾನಿಗೆ ಪಡೆದ ಬೀದಿಬದಿ ವ್ಯಾಪಾರಿಗಳ ಸಂಖ್ಯೆ 2 ಸಾವಿರಕ್ಕೂ ಅಧಿಕವಿದೆ. ಪ್ರತಿನಿತ್ಯ ಕನಿಷ್ಟ 2,500 ಅಂಗಡಿಗಳಲ್ಲಿ ವಸೂಲಿ ಮಾಡಿದ್ರೆ ತಿಂಗಳಿಗೆ ಎಷ್ಟು ಆಗುತ್ತೆ ಅನ್ನೋದನ್ನ ಲೆಕ್ಕ ಹಾಕಿದ್ರೆ, ದಿನಕ್ಕೆ 2,500 ಅಂಗಡಿಗಳಲ್ಲಿ ಹಣ ವಸೂಲಿ ಮಾಡುತ್ತಾರೆ. ದಿನಕ್ಕೆ 1 ಅಂಗಡಿಯಿಂದ 150 ರೂಪಾಯಿ ವಸೂಲಿ, ತಿಂಗಳಿಗೆ 1 ಕೋಟಿ, 12 ಲಕ್ಷದ 50 ಸಾವಿರ ಆಗುತ್ತದೆ.
ಜಸ್ಟ್ ಇದು ಅಂದಾಜು ಲೆಕ್ಕವಷ್ಟೆ. ಇದು ದುಪ್ಪುಟ್ಟು ಆಗಬಹುದು. ಮೂರು ಪಟ್ಟುನೂ ಆಗಬಹುದು. ಕೋಟಿ-ಕೋಟಿ ಹಣ ರಾಜಾರೋಷವಾಗಿ ವಸೂಲಿ ಮಾಡುವ ಪೊಲೀಸರ ಹಿಂದೆ ಯಾರ ಶ್ರೀ ರಕ್ಷೆ ಇದೆ? ಈ ಹಣ ಎಲ್ಲಿಗೆ, ಯಾರಿಗೆ ಹೋಗುತ್ತೆ? ಇದರ ಕಿಂಗ್ ಪಿನ್ ಯಾರು..? ಇದು ಇವತ್ತು, ನಿನ್ನೆಯ ಕಥೆಯಲ್ಲ. ಬಹು ಸಮಯಗಳಿಂದ ಈ ಕಳ್ಳಾಟ ನಡೆಯುತ್ತಿದ್ರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಸುಮ್ಮನಿರೋದು ವಿಪರ್ಯಾಸವಾಗಿದೆ.