ಯಾವುದೇ ಒತ್ತಡಗಳಿಗೆ ಜಗ್ಗದೆ, ಯಾವ ರಾಜಕೀಯ ಪಕ್ಷವನ್ನು ಪ್ರತಿನಿಧಿಸದೇ, ನೊಂದವರಿಗೆ ನೆರವಾಗಿ, ಅನ್ಯಾಯವನ್ನು ಖಂಡಿಸಿ ಸುದ್ದಿ ಬಿತ್ತರಿಸೋ ಪಬ್ಲಿಕ್ ಟಿವಿಗೆ ಈಗ 6ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. `ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ’ ಎಂಬ ಘೋಷ ವಾಕ್ಯದೊಂದಿಗೆ 2012ರ ಫೆಬ್ರವರಿ 12ರಂದು ಲೋಕಾರ್ಪಣೆಗೊಂಡ ನಿಮ್ಮ ಪಬ್ಲಿಕ್ ಟಿವಿ ಇಂದು ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂಭ್ರಮವನ್ನು ಮತ್ತಷ್ಟು ಸುಮಧುರವಾಗಿಸಲು ನಾವು ಫೆಬ್ರವರಿ 12ರಂದೇ ‘ಪಬ್ಲಿಕ್ ಮೂವೀಸ್’ ಚಾನೆಲ್‍ಗೆ ಚಾಲನೆ ನೀಡುತ್ತಿದ್ದೇವೆ.
ಹಿಂದೆ ನ್ಯೂಸ್ ಕೆಲವರ ಆಸಕ್ತಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಸುದ್ದಿ ಪ್ರಪಂಚ, ಎಲ್ಲರ ಅಗತ್ಯವಸ್ತು. ನಿಷ್ಪಕ್ಷಪಾತ ಸುದ್ದಿ ಬಿತ್ತರ, ವಸ್ತುನಿಷ್ಠ ವಿಶ್ಲೇಷಣೆ, ಮತ್ತು ಸ್ಪಷ್ಟ ಮಾಹಿತಿ ನೀಡುವುದು ಸವಾಲಿನ ಕೆಲಸ. ಸುದ್ದಿಲೋಕ ಈಗ ಮೊದಲಿನಂತಿಲ್ಲ. ಮನರಂಜನಾ ಚಾನೆಲ್ ಗಳಿಗೂ ಮಿಗಿಲಾದ ಸಂಖ್ಯೆಯಲ್ಲಿ ಕನ್ನಡದ ಸುದ್ದಿವಾಹಿನಿಗಳಿವೆ. ಆದರೆ ನಿಖರ ಮತ್ತು ಪ್ರಖರ ಸುದ್ದಿಯನ್ನು ನೋಡಲು, ಪುಟ್ಟ ಟಿವಿ ಪರದೆ ಮುಂದೆ ಕೂರುವ ಈಗಿನ ವೀಕ್ಷಕರು ದಡ್ಡರಲ್ಲ. ಚಾನೆಲ್ ಹಾಕಿ ಕುಳಿತ ಜನ ಸುದ್ದಿಯ ಗುಣಮಟ್ಟವನ್ನು ಅಳೆಯುವಲ್ಲಿ ಚಾಣಾಕ್ಷರು. ಅಂತಹ ಕೋಟ್ಯಂತರ ಪ್ರಜ್ಞಾವಂತರ ಅಚ್ಚುಮೆಚ್ಚಿನ ಚಾನೆಲ್ಲಾಗಿ ಹೊರಹೊಮ್ಮಿದ ಹಾದಿ, ಪಬ್ಲಿಕ್ ಟಿವಿ ಪಾಲಿಗೆ ಸುಲಭದ್ದಾಗಿರಲಿಲ್ಲ. ಆ ಕಠಿಣ ಲಕ್ಷ್ಯವನ್ನು ತಲುಪಿಯೇ ಸಿದ್ಧ ಅಂತ ನಿರ್ಧರಿಸಿದ್ದು ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್.
Advertisement
ಓರ್ವ ನುರಿತ, ಪಾರಂಗತ ನಾಯಕನಿಲ್ಲದೆ ಲಕ್ಷ್ಯ ತಲುಪುವ ಪಯಣ, ಚುಕ್ಕಾಣಿಯಿಲ್ಲದ ಹಡಗಿನ ಪ್ರಯಾಣಕ್ಕೆ ಸಮ. ಪಬ್ಲಿಕ್ ಟಿವಿಯ ಸುದ್ದಿ ಜಗತ್ತಿನ ಯಾನ 6 ಸಂವತ್ಸರ ಪೂರೈಸಿ 7ನೇ ವಸಂತದತ್ತ ಅಬಾಧಿತವಾಗಿ ಸಾಗಿದೆ ಎಂದರೆ ಅದಕ್ಕೆ ಕಾರಣ, ಅಂಥ ಸಮರ್ಥ ಮತ್ತು ಅರ್ಹ ನಾಯಕನ ಸಾರಥ್ಯದಲ್ಲಿ ಹೊರಟದ್ದೇ ಹೊರತು ಬೇರೇನೂ ಅಲ್ಲ. ದಕ್ಷ ಮತ್ತು ದೃಢವಾದ ತಂಡ ಕಟ್ಟಿಕೊಂಡು, ಹೊಸ ಪ್ರತಿಭೆಗಳನ್ನು ಹೆಕ್ಕಿ, ತಿಂಗಳುಗಟ್ಟಲೆ ಸಾಣೆ ಹಿಡಿದು, ಸಶಕ್ತ ತಂಡವನ್ನು ಕಟ್ಟಿದ ಕೀರ್ತಿ ರಂಗನಾಥ್ ಅವರಿಗೇ ಸಲ್ಲಬೇಕು.
Advertisement
ಟಿಆರ್ ಪಿ ಸಮರದಲ್ಲಿ ಬೇರುಮಟ್ಟದಿಂದ ಶುರುಮಾಡಿ ಅಲ್ಪಕಾಲದಲ್ಲೇ ಕನ್ನಡಿಗರ ಮನೆ – ಮನ ಎರಡರ ಮೇಲೂ ಆಧಿಪತ್ಯ ಸ್ಥಾಪಿಸಿದ ಹೆಮ್ಮೆ ನಮ್ಮದು. ಅದಕ್ಕೆ ಕಾರಣ ಇಲ್ಲದಿಲ್ಲ. ದಿನನಿತ್ಯದ ಆಗುಹೋಗುಗಳನ್ನು ಕಾಟಾಚಾರದ ಸುದ್ದಿಯಾಗಿಸದೆ ಸಮಾಚಾರಕ್ಕೊಂದು ಸದಾಚಾರದ ಚೌಕಟ್ಟು ಹಾಕಿ, ವೃತ್ತಾಂತಕ್ಕೆ ವೃತ್ತಿಪರತೆಯ ವಿಶ್ಲೇಷಣೆ ನೀಡುವುದು ಪಬ್ಲಿಕ್ ಟಿವಿಯ ಸತ್ವ ಹಾಗೂ ತತ್ವ. ನಾವು ಯಾವ ಪಟ್ಟಭದ್ರರ ಗುಲಾಮರೂ ಅಲ್ಲ. ನಮಗೆ ಯಾರ ಮುಲಾಜೂ ಇಲ್ಲ.
Advertisement
ಸಮಾಜಕ್ಕೆ ಸತ್ಯ, ಸ್ಪಷ್ಟ, ಸದುದ್ದೇಶಭರಿತ ಕಾರ್ಯಕ್ರಮಗಳನ್ನು ಕೊಡುವುದರಲ್ಲಿ ಪಬ್ಲಿಕ್ ಟಿವಿಗೆ ಸಾಟಿ ಮತ್ತೊಂದಿಲ್ಲ. ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್, ಕನ್ನಡ ಸುದ್ದಿವಾಹಿನಿ ಇತಿಹಾಸದಲ್ಲೇ ಹೊಸ ಮೈಲಿಗಲ್ಲು. ಎಲ್ಲಾ ಚಾನೆಲ್ ಗಳಲ್ಲೂ ರಾತ್ರಿ 9ರ ಸಮಯ ಪ್ರೈಮ್ ಬುಲೆಟಿನ್ ಗೆ ಮೀಸಲು. ಆದ್ರೆ ಪಬ್ಲಿಕ್ ಟಿವಿಯ ರಾತ್ರಿ 9ರ ಬಿಗ್ ಬುಲೆಟಿನ್ ವೈಶಿಷ್ಟ್ಯತೆ ಮತ್ತು ಆಕರ್ಷಣೆಯ ಕೇಂದ್ರಬಿಂದು, ವಾಹಿನಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್. ಸುದ್ದಿಗೆ ತಮ್ಮ ಮೊನಚು ಮಾತುಗಳ ಹೊಳಪು ಕೊಟ್ಟು, ದರ್ಶಕರಿಗೆ ಸುದ್ದಿಯನ್ನು ಅರ್ಥೈಸುವ ಪರಿಗೆ, ಕನ್ನಡಿಗರು ಮಾರು ಹೋಗಿದ್ದರಲ್ಲಿ ವಿಶೇಷವೇನಿಲ್ಲ. ಎಚ್.ಆರ್.ರಂಗನಾಥ್ ಸಾರಥ್ಯದ ಬಿಗ್ ಬುಲೆಟಿನ್ ಇಂದು ಕರ್ನಾಟಕದ ಮನೆ ಮಾತು.
Advertisement
ಬಿಗ್ ಬುಲೆಟಿನ್ನಿನ ಭಾಗವಾದ ಪಬ್ಲಿಕ್ ಹೀರೋ, ಸಮಾಜದಲ್ಲಿ ಎಲೆಮರೆ ಕಾಯಿಗಳಂತಿದ್ದೂ, ಸಮಾಜಮುಖಿ ಕಾರ್ಯಗಳನ್ನು ಮಾಡುವ ಅಸಲಿ ಹೀರೋಗಳನ್ನು ಗುರುತಿಸಿ, ಅಭಿನಂದಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಬೆಳಕು ಪಬ್ಲಿಕ್ ಟಿವಿಯ ಮತ್ತೊಂದು ಹೆಬ್ಬಯಕೆ ಸಾಕಾರವಾಗಿಸಿದ ಕಾರ್ಯಕ್ರಮ. ನೊಂದವರ ಕಣ್ಣೀರನ್ನು ಒರೆಸುವುದು ಮಾತ್ರವಲ್ಲ, ಅವರಿಗೆ ವಾಸ್ತವದಲ್ಲಿ ನೆರವಾಗುವ ನೆಂಟನ ಪಾತ್ರ ವಹಿಸುವ ಅರ್ಥಪೂರ್ಣ ಕಾರ್ಯಕ್ರಮವಿದು. ಕಳೆದ 6 ವರ್ಷಗಳಲ್ಲಿ ಇಂಥ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಪಬ್ಲಿಕ್ ಟಿವಿ ಯಶಸ್ವಿಯಾಗಿ ಪ್ರಸಾರ ಮಾಡಿದೆ. ತನ್ಮೂಲಕ ವೀಕ್ಷಕ ಪ್ರಭುಗಳ ಹೃದಯವನ್ನೂ ಗೆದ್ದಿದೆ. ಇದರ ಜೊತೆಗೆ ಸ್ಪೆಷಲ್ ಟೈಮ್, ಜಿಂದಗಿ, ಫಸ್ಟ್ ನ್ಯೂಸ್, ನ್ಯೂಸ್ ಕೆಫೆ, ನಿತ್ಯಪೂಜೆ, ರಾಶಿ ಭವಿಷ್ಯ, ಮಿರರ್, ಬೆಂಗಳೂರು ಟುಡೇ ಎಂಬಿತ್ಯಾದಿ ಅನೇಕ ಕಾರ್ಯಕ್ರಮಗಳ ಮೂಲಕ ನಿಮ್ಮ ಮನೆ ತಲುಪಿದ್ದೇವೆ.
ಸುದ್ದಿ ವಲಯದಲ್ಲಿ ಗೆದ್ದು, ಲೋಕ ಪ್ರಸಿದ್ಧವಾಗಲು ಸಹಕರಿಸಿದ ಕನ್ನಡಿಗರಿಗೆ ಪಬ್ಲಿಕ್ ಟಿವಿ ಕೊಟ್ಟ ಮತ್ತೊಂದು ಉಡುಗೊರೆ ಪಬ್ಲಿಕ್ ಮ್ಯೂಸಿಕ್. 2014ರ ಸೆಪ್ಟೆಂಬರ್ 28ರಂದು ಲೋಕಾರ್ಪಣೆಯಾದ ವಾಹಿನಿ ಕನ್ನಡಿಗರ ಸಂಗೀತ ದಾಹ ತೀರಿಸುತ್ತಾ ನಮ್ಮ ಸಂಗೀತ ವಾಹಿನಿಯೂ ಯಶಸ್ವಿಯಾಗಿ ಸಾಗುತ್ತಿದೆ. ಇದರೊಂದಿಗೆ ಪಬ್ಲಿಕ್ ಟಿವಿಯ ವೆಬ್‍ಸೈಟ್ ಹಾಗೂ ಸೋಷಿಯಲ್ ಮೀಡಿಯಾದಲ್ಲೂ ನೀವು ನಮ್ಮ ಬೆನ್ನಿಗೆ ನಿಂತಿದ್ದೀರಿ.
ರೈಟ್ ಮೆನ್ ಮೀಡಿಯಾ ಸಮೂಹದ ಮೂರನೇಯ ವಾಹಿನಿಯಾಗಿ ಈಗ ಪಬ್ಲಿಕ್ ಕಾಮಿಡಿ/ಮೂವೀಸ್ ಲೋಕಾರ್ಪಣೆಯಾಗಿದೆ. ಪಬ್ಲಿಕ್ ಟಿವಿ ಮತ್ತು ಪಬ್ಲಿಕ್ ಮ್ಯೂಸಿಕ್ ಗೆ ಹೇಗೆ ಸಹಕಾರ ನೀಡಿದ್ದೀರೋ ಅದೇ ರೀತಿಯಾಗಿ ಪಬ್ಲಿಕ್ ಮೂವೀಸ್‍ಗೆ ಸಹಕಾರ ನೀಡುತ್ತೀರಿ ಎನ್ನುವ ಆಶಾವಾದ ನಮ್ಮದು. ನಿಮ್ಮ ಪ್ರೀತಿ, ಸಹಕಾರ ಹೀಗೇ ಮುಂದುವರಿಯಲಿ ಎಂಬ ವಿನಮ್ರ ಆಶಯ ನಮ್ಮದು.