ಕೋಲಾರ: ಆ ತಾಯಿಗೆ ಕಷ್ಟ-ಸುಖದಲ್ಲಿ ಜೊತೆಯಾಗಿರಬೇಕಾದ ಕೈ ಹಿಡಿದ ಗಂಡನಿಲ್ಲ. ಇರುವ ಮಕ್ಕಳನ್ನ ಮಡಿಲಿಗೆ ಹಾಕಿಕೊಂಡು ಅವರನ್ನ ಪೋಷಣೆ ಮಾಡಲು ಬೇಕಾದ ಮನೆಯೂ ಇಲ್ಲ. ನೆರವಾಗಬೇಕಾದ ಸರ್ಕಾರ ಪಡಿತರ ಚೀಟಿ ಕೊಟ್ಟಿಲ್ಲ. ಸೂರಿನ ಭಾಗ್ಯವೂ ಈಕೆಗೆ ಸಿಕ್ಕಿಲ್ಲ. ಈ ನತದೃಷ್ಟ ತಾಯಿ ಜೀವನದ ಕಷ್ಟಕ್ಕೆ ಈಗ ಬೆಳಕು ಬೇಕಾಗಿದೆ.
ಸರ್ಕಾರಿ ಕಚೇರಿಯಲ್ಲಿ ಸರ್ಕಾರದ ಸೌಲಭ್ಯ ಕಲ್ಪಿಸುವಂತೆ ತನ್ನ ಅಂಗವಿಕಲ ಮಗನೊಂದಿಗೆ ಬೇಡಿಕೊಳ್ಳತ್ತಿರುವ ತಾಯಿ ಹೆಸರು ವಸಂತಮ್ಮ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮೋಪರಹಳ್ಳಿ ಗ್ರಾಮದ ನಿವಾಸಿ ವಸಂತಮ್ಮ ಅವರ 16 ವರ್ಷದ ಮಗ ಬುದ್ಧಿಮಾಂದ್ಯನಾಗಿದ್ದು, 20 ವರ್ಷಗಳಿಂದ ಕೂಲಿ ಕೆಲಸ ಮಾಡಿ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ.
7 ವರ್ಷಗಳ ಹಿಂದೆಯೇ ಸರ್ಕಾರ ಸ್ಪೀಡ್ ಹೈವೇ ನಿರ್ಮಾಣಕ್ಕೆ ಇದ್ದ ಸ್ವಂತ ಮನೆಯನ್ನು ವಶಕ್ಕೆ ಪಡೆದು ಮನೆಯನ್ನು ಕೆಡವಿ ಹಾಕಿದೆ. ಆದರೆ ಸರ್ಕಾರದಿಂದ ಪರಿಹಾರ ಮಾತ್ರ ಶೂನ್ಯ. ಕೆಡವಿದ ಮನೆ ಪಕ್ಕದಲ್ಲಿ ಆಗೋ ಹೀಗೋ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ವಸಂತಮ್ಮ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಆದರೆ ಮಕ್ಕಳ ಪೋಷಣೆ ಹಾಗೂ ಜೀವನ ಕಷ್ಟವಾಗಿದೆ.
ಕಳೆದ ಹಲವು ವರ್ಷಗಳಿಂದ ಅಂಗವಿಕಲ ಮಗನನ್ನು ಹೊತ್ತುಕೊಂಡು ಒಂದು ನಿರ್ದಿಷ್ಟ ಸೂರು ಹಾಗೂ ಪಡಿತರ ಚೀಟಿಗಾಗಿ ಶಾಸಕರು, ಹಾಗೂ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಇದುವರೆಗೂ ಬಡ ಜೀವಕ್ಕೆ ಬೇಕಾದ ವಸತಿ ಹಾಗೂ ಪಡಿತರ ಚೀಟಿ ಸಿಗದೇ ಕಂಗಾಲಾಗಿದೆ.
ಮಗ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಬೆರಳು ಮುದ್ರೆ ಕೊಡಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಪಡಿತರ ಚೀಟಿಯಲ್ಲಿ ಮಗನ ಹೆಸರು ನೊಂದಾಯಿಸಲು ಸಾಧ್ಯವಾಗಿಲ್ಲ. ಪಡಿತರ ಅನ್ನಭಾಗ್ಯ ಅಕ್ಕಿಯೂ ಸಿಗಲಿಲ್ಲವೆಂದು ತಾಯಿ ಕಣ್ಣೀರಿಡುತ್ತಿದ್ದಾರೆ. ದಯಮಾಡಿ ತನ ಪರಿಸ್ಥಿತಿ ನೋಡಿ ಇರಲು ಒಂದು ಸಣ್ಣ ಸೂರು, ಪಡಿತರ ಚೀಟಿ ಸೌಲಭ್ಯ ಕಲ್ಪಿಸಿ ಕೊಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=cYlTGMsx9hU