Connect with us

Bagalkot

ಆಟವಾಡಲು ಕಷ್ಟ, ಕೈ ಕಾಲುಗಳು ಊದಿಕೊಳ್ತಿವೆ: ಕ್ಲಾಸ್‍ನಲ್ಲಿ ಫಸ್ಟ್ ಆದ್ರೂ ಮಗನ ಚಿಕಿತ್ಸೆಗೆ ದುಡಿಲ್ಲ!

Published

on

ಬಾಗಲಕೋಟೆ: ಆತ 12 ವರ್ಷದ ವಯಸ್ಸಿನ ಬಾಲಕ. ಚೆನ್ನಾಗಿ ಓದಿ ಮುಂದೆ ಪೋಷಕರನ್ನ ಸುಖದಿಂದ ನೋಡಿಕೊಳ್ಳಬೇಕೆಂಬ ಕನಸು ಕಂಡುಕೊಂಡಿದ್ದ. ಅಷ್ಟೆ ಅಲ್ಲದೇ ಶಾಲೆಯಲ್ಲಿ ತರಗತಿಗೆ ಈತನೇ ಫಸ್ಟ್. ಆದರೆ ದುರಂತ ಅಂದ್ರೆ ಸದ್ಯ ಪೋಷಕರೇ ಆ ಪುಟ್ಟ ಬಾಲಕನನ್ನ ನೋಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಹೌದು. ಈ ಪುಟ್ಟ ಬಾಲಕನ ಹೆಸರು ಪುಟ್ಟರಾಜು ಹೊರಕೇರಿ. ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ನಿವಾಸಿಯಾಗಿರುವ ಈತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈತನ ತಂದೆ ಹನುಮಪ್ಪ, ತಾಯಿ ಸುಮಿತ್ರಾ. ತಂದೆ ಹನುಮಪ್ಪ ಕೂಲಿ ಕೆಲಸ ಮಾಡುತ್ತಾರೆ. ತಾಯಿ ಸುಮಿತ್ರಾ ಮನೆಕೆಲಸ ಮಾಡ್ತಾ, ಈ ಪುಟ್ಟರಾಜುವನ್ನ ನೋಡಿಕೊಳ್ತಾರೆ.

ಈ ದಂಪತಿಗೆ ಇಬ್ಬರು ಮಕ್ಕಳು, ಮೊದಲನೇ ಮಗನೇ ಈ ಪುಟ್ಟರಾಜು. ಹುಟ್ಟಿದ ಕೆಲ ವರ್ಷಗಳ ವರೆಗೆ ಪುಟ್ಟರಾಜು ಎಲ್ಲರಂತೆ ಆರೋಗ್ಯವಾಗಿದ್ದ. ಆತನ ದೇಹದ ಭಾರವೂ ಸಹಜವಾಗಿಯೇ ಇತ್ತು. ಆದರೆ ಕಳೆದ 5 ವರ್ಷಗಳಿಂದ ಪುಟ್ಟರಾಜು ದಿನದಿಂದ ದಿನಕ್ಕೆ ಊದಿಕೊಳ್ಳುತ್ತಿದ್ದಾನೆ. ಅಲ್ಲದೇ ಮೈ ಭಾರ ಹೆಚಾಗ್ತಿದೆ. ಸದ್ಯ 48 ಕೆಜಿ ತೂಕ ಭಾರವಿರುವ ಪುಟ್ಟರಾಜು, ತನ್ನ ಕೆಲಸವನ್ನ ತಾನು ಮಾಡಿಕೊಳ್ಳಲಾಗದೇ ಇರೋ ಸ್ಥಿತಿ ತಲುಪಿದ್ದಾನೆ. ಇದನ್ನ ಕಂಡು ಪೋಷಕರು ಸಾಲ ಮಾಡಿ ಕೈಲಾದ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಏನೂ ಪ್ರಯೋಜನವಾಗಿಲ್ಲ. ಹೆಚ್ಚಿನ ಚಿಕಿತ್ಸೆಗೆ ಪುಟ್ಟರಾಜು ಪೋಷಕರ ಬಳಿ ಈಗ ದುಡ್ಡಿಲ್ಲ.

ಕಲಬುರಗಿ, ಬೆಳಗಾವಿ ಹಾಗೂ ಹುಬ್ಬಳ್ಳಿ ಹೀಗೆ ಸಾಕಷ್ಟು ನುರಿತ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಪುಟ್ಟರಾಜು ಮೈ ಭಾರ ಮಾತ್ರ ಕಮ್ಮಿಯಾಗಿಲ್ಲ, ದಿನದಿಂದ ದಿನಕ್ಕೆ ಉಬ್ಬುತ್ತಿದ್ದಾನೆ. ಈತ ಕ್ಲಾಸ್‍ಗೆ ಫಸ್ಟ್ ಇದ್ರೂ, ಆತನಿಗೆ ನಡೆಯಲು ಆಗ್ತಿಲ್ಲ. ಎಲ್ಲರಂತೆ ಆಟವಾಡಲು ಕಷ್ಟವಾಗ್ತಿದೆ. ಕೈ ಕಾಲುಗಳು ಊದಿಕೊಳ್ತಿವೆ. ಊಟ ಮಾಡಲು ತಾಯಿಯನ್ನ ಅವಲಂಬಿಸುವಂತಾಗಿದೆ. ಹೀಗಾಗಿ ಮೊದಲೇ ಕೂಲಿ ಮಾಡಿ ಜೀವನ ಸಾಗಿಸ್ತಿರೋ ಈ ಪುಟ್ಟರಾಜು ತಂದೆ ಹನಮಪ್ಪ, ನನ್ನ ಮಗನಿಗೆ ಚಿಕಿತ್ಸೆ ಕೊಡಿಸಿ. ಆತನ ಮೈಭಾರ ಇಳಿಯುವಂತೆ ಮಾಡಿ ಎಲ್ಲ ಮಕ್ಕಳಂತೆ ಓಡಾಡುವಂತೆ ಮಾಡಿಸಿ ಎಂದು ಎಲ್ಲರ ಬಳಿ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಯಾರಾದ್ರೂ ಸಹಾಯಹಸ್ತ ಚಾಚಬೇಕಿದೆ. ಎಲ್ಲ ಮಕ್ಕಳಂತೆ ಪುಟ್ಟರಾಜು ಹಾಯಾಗಿ ಕಾಲ ಕಳೆಯುವಂತಾಗಲಿ ಅನ್ನೋದು ಗ್ರಾಮಸ್ಥರ ಹೆಬ್ಬಯಕೆಯಾಗಿದೆ.

 

 

 

Click to comment

Leave a Reply

Your email address will not be published. Required fields are marked *

www.publictv.in