‘ಪಬ್ಲಿಕ್‌ ಟಿವಿ’ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್‌ ನಿಧನ

Public TV
1 Min Read
shashidhar publictv

ಶಿವಮೊಗ್ಗ: ‘ಪಬ್ಲಿಕ್ ಟಿವಿ’ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಶಶಿಧರ್ ಇಂದು (ಶನಿವಾರ) ಸಂಜೆ ಅಕಾಲಿಕ ನಿಧನ ಹೊಂದಿದ್ದಾರೆ.

shashidhar public tv 1

ಪಬ್ಲಿಕ್ ಟಿವಿಯಲ್ಲಿ ಕಳೆದ 6 ವರ್ಷಗಳಿಂದ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಶಶಿಧರ್ ಮೂಲತಃ ಅರಸೀಕೆರೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದವರಾಗಿದ್ದು, 40 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ತಂದೆ-ತಾಯಿಯನ್ನು ಅಗಲಿದ್ದಾರೆ. ಶಶಿಧರ್ ಕಳೆದ 16 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಪಬ್ಲಿಕ್ ಟಿವಿ ಬಳಗ ಶಶಿಧರ್ ನಿಧನಕ್ಕೆ ಸಂತಾಪ ಸೂಚಿಸಿದೆ.

WhatsApp Image 2025 01 11 at 6.22.02 PM

ಶಶಿಧರ್‌ ಅವರು ಶಿವಮೊಗ್ಗದ ಆಕ್ಟಿವ್ ಜರ್ನಲಿಸ್ಟ್ ಎಂದೇ ಬಿಂಬಿತರಾಗಿದ್ದರು. ಇವರು ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆ ತಾಲೂಕಿನ ಕಡೂರಿಗೆ ಸನಿಹವಿರುವ ಕಲ್ಲಳ್ಳಿ ಗ್ರಾಮದವರು. ತಂದೆ ಹೊಸಂತಪ್ಪ ಹಾಗೂ ತಾಯಿ ಸಾವಿತ್ರಮ್ಮನ ಹಿರಿಯ ಪುತ್ರನಾಗಿ ಜನಿಸಿದ ಇವರು ಸ್ವಗ್ರಾಮದಲ್ಲಿ ಪ್ರಾಥಮಿಕ, ನಂತರ ಅರಸೀಕೆರೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದರು.

ಪತ್ರಿಕೋದ್ಯಮಕ್ಕೆ ಬರುವ ಆಶಯದೊಂದಿಗೆ ಮೈಸೂರಿನಲ್ಲಿ 2006 ರಲ್ಲಿ ಎಂಎ ಜರ್ನಲಿಸಂಗೆ ಸೇರ್ಪಡೆಗೊಂಡರು. ಸ್ನಾತಕೋತ್ತರ ಪದವಿಯ ನಂತರ ಈಟಿವಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದರು. ನಂತರ ಚಾಮರಾಜನಗರದಲ್ಲಿ ಸುವರ್ಣ ಟಿವಿಯ ವರದಿಗಾರರಾಗಿ ಸೇವೆ ಸಲ್ಲಿಸಿದರು. ಇದಾದ ಬಳಿಕ ಶಿವಮೊಗ್ಗದಲ್ಲಿ ಕಳೆದ ಆರು ವರ್ಷಗಳಿಂದ ‘ಪಬ್ಲಿಕ್ ಟಿವಿ’ಯಲ್ಲಿ ವರದಿಗಾರಗಾಗಿ ಸೇವೆ ಸಲ್ಲಿಸುತ್ತಾ ಬಂದರು.

ಶಶಿಧರ್ ಅವರ ಅಕಾಲಿಕ ಮರಣ ಶಿವಮೊಗ್ಗ ಮಾತ್ರವಲ್ಲ ರಾಜ್ಯದ ಪತ್ರಕರ್ತರ ಪಾಲಿಗೆ ನುಂಗಲಾರದ ತುತ್ತಾಗಿದೆ. ನಾಳೆ ಹುಟ್ಟೂರಿನಲ್ಲಿ ಶಶಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಶಶಿ ಅವರ ಸಾವಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಶಾಖೆ ಕಂಬನಿ ಮಿಡಿದಿದೆ.

Share This Article