ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ರಾಂತಿಗೆ ತೆರಳಿದ್ದ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯ ಶಾಂತಿವನ ಕಳೆದ ಒಂದು ವಾರದಿಂದ ಸಾಕಷ್ಟು ಚರ್ಚೆಯಲ್ಲಿದೆ. ರಾಜಕೀಯದ ಜಂಜಾಟದಿಂದ ದೂರ ಉಳಿದು ಸಿದ್ದರಾಮಯ್ಯ ವಿಶ್ರಾಂತಿಯಲ್ಲಿದ್ದಾರೆಂದು ಅಂತಾ ಹೇಳಲಾಗುತ್ತಿದ್ರೂ ರಾಜಕಾರಣದಲ್ಲಿ ದಿನಕ್ಕೊಂದು ಸಿಡಿಗುಂಡುಗಳನ್ನು ಸಿಡಿಸುತ್ತಿದ್ದರು.
ರಾಜ್ಯದಲ್ಲಿ ಹಲವು ಕಡೆ ಪ್ರಕೃತಿ ಚಿಕಿತ್ಸಾಲಯಗಳಿವೆ. ಆದ್ರೂ ಸಿದ್ದರಾಮಯ್ಯನವರು ಶಾಂತಿವನವನ್ನೇ ಆರಿಸಿಕೊಂಡಿದ್ದರ ರಹಸ್ಯ ರಿವೀಲ್ ಆಗಿದೆ. ಈ ಹಿಂದೆ ಸಿಎಂ ಆಗಿದ್ದಾಗ ಮೀನೂಟ ಸೇವಿಸಿ ಶ್ರೀ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದಿದ್ದರು. ಮಂಜುನಾಥನ ಅವಕೃಪೆಯೇ ಸಿದ್ದರಾಮಯ್ಯರ ರಾಜಕೀಯ ಹಿನ್ನಡೆಗೆ ಕಾರಣವೆಂದು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿತ್ತು.
ಮಂಜುನಾಥ ಸ್ವಾಮಿಯ ಅವಕೃಪೆಗೆ ಒಳಗಾಗಿದ್ದು, ಅದೇ ಪರಿಸರದಲ್ಲಿ ಇದ್ದು, ದೇವರ ಸೇವೆ ಮಾಡಿ ಬನ್ನಿ. ರಾಜಕೀಯವಾಗಿಯೂ ನೀವು ಬಲಿಷ್ಠರಾಗುವೀರಿ ಎಂದು ಜ್ಯೋತಿಷಿಯೊಬ್ಬರು ಸಿದ್ದರಾಮಯ್ಯರ ಆಪ್ತರಿಗೆ ಹೇಳಿ ಕಳುಹಿಸಿದ್ದರಂತೆ. ಈ ಆಪ್ತರು ಜ್ಯೋತಿಷಿಯ ಸಲಹೆಯನ್ನು ಸಿದ್ದರಾಮಯ್ಯನವರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಶಾಂತಿವನಕ್ಕೆ ತೆರಳಿದ್ದರು ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ. ಈ ಸಲಹೆ ನೀಡಿದ ಜ್ಯೋತಿಷಿ ಯಾರು ಎನ್ನುವುದು ತಿಳಿದು ಬಂದಿಲ್ಲ.
ಜ್ಯೋತಿಷಿಯ ಸೂಚನೆಯ ಮೇರೆಗೆ ಸಿದ್ದರಾಮಯ್ಯನವರು ಶತರುದ್ರಾಭಿಷೇಕದಲ್ಲಿ ಭಾಗಿಯಾಗಿದ್ರು. ಗುರುವಾರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ಕೂಡ ಶತರುದ್ರಾಭಿಷೇಕದಲ್ಲಿ ಭಾಗಿಯಾಗಿದ್ದರು.