ಯಾದಗಿರಿ:“ಕಾನೂನ್ ಕೆ ಘರ್ ಮೆ ದೇರ್ ಹೈ, ಲೇಕಿನ್ ಅಂಧೇರ್ ನಹೀಂ?”(ನ್ಯಾಯ ಸಿಗೋದು ತಡವಾಗಬಹುದು, ಅದ್ರೆ, ಸತ್ಯವೇ ಗೆಲ್ಲೋದು, ಕತ್ತಲು ಆವರಿಸೋಲ್ಲ) ಇಂತಹುದ್ದೊಂದು ಪ್ರಕರಣಕ್ಕೆ ಸಾಕ್ಷಿಯಾಗಿದ್ದು ಯಾದಗಿರಿ ಜಿಲ್ಲೆಯ ಬಡ ಯುವಕನೊಬ್ಬನ ಸತತ ಹೋರಾಟ.
ನ್ಯಾಯಯುತವಾಗಿ ತನಗೆ ಸಿಗಬೇಕಾಗಿದ್ದ ಸರ್ಕಾರಿ ಶಿಕ್ಷಕ ಹುದ್ದೆಗೆ ಬರೋಬ್ಬರಿ ಹತ್ತು ವರ್ಷಗಳ ಕಾಲ ಅವಿರತ ಹೋರಾಟ ನಡೆಸಿ, ಕೊನೆಗೂ ಯಶಸ್ವಿಯಾದ. ಯಾದಗಿರಿಯ ವಡ್ನಳ್ಳಿ ಗ್ರಾಮದ ಶಿವಯೋಗಿ ಬಿನ್ ಚಂದ್ರಾಮ ಛಲಬಿಡದ ತ್ರಿವಿಕ್ರಮ.? ಏನಿದು ಒಂಬತ್ತು ವರ್ಷಗಳ ಹೋರಾಟ.? ಇಲ್ಲಿದೆ ಶಿವಯೋಗಿಯ ಹೋರಾಟದ ಕತೆ.
Advertisement
ಯಾದಗಿರಿ ನಗರದಿಂದ 14 ಕಿ.ಮೀ. ದೂರದ ವಡ್ನಳ್ಳಿ ಗ್ರಾಮದ ಬಡ ರೈತ ಕುಟುಂಬದ ಶಿವಯೋಗಿಯ ಹೋರಾಟ 2008-09ರಿಂದ ಆರಂಭಗೊಂಡಿದೆ. ಆಗ ಸರ್ಕಾರಿ ಪ್ರೌಢಶಾಲೆಗೆ ದೈಹಿಕ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಶಿವಯೋಗಿ, ನೇಮಕಾತಿಗೆ ಅರ್ಹರಾಗಿದ್ದರೂ, ಇವರ ಬದಲು ಸರ್ಕಾರಕ್ಕೇ ವಂಚಿಸಿ, ಒಂದೇ ವರ್ಷದಲ್ಲಿ ಎರಡೆರಡು ಪದವಿಗಳನ್ನು ಪೂರೈಸಿದ್ದ ಸಂಗನಸಬಸವ ಅನ್ನೋವ್ರಿಗೆ ನೌಕರಿ ಸಿಕ್ಕಿತ್ತು.
Advertisement
ಶಿಕ್ಷಣ ಇಲಾಖೆಯಲ್ಲಿನ ಮಧ್ಯವರ್ತಿಗಳ ಹಾವಳಿಯಿಂದ ಶಿವಯೋಗಿ ನೌಕರಿಯಿಂದ ವಂಚಿತಗೊಂಡಿದ್ದರು. ವಂಚನೆಯಾದ ಹಿನ್ನೆಲೆಯಲ್ಲಿ ನಿಮ್ಮ ಪಬ್ಲಿಕ್ ಟಿವಿಯಲ್ಲಿ 2012 ಏಪ್ರಿಲ್ 25 ರಂದು ಶಿವಯೋಗಿ ವರದಿಯೂ ಪ್ರಸಾರವಾಗಿತ್ತು. ನಿರಂತರವಾಗಿ ಹೋರಾಡಿದ ಶಿವಯೋಗಿಗೆ ಕೊನೆಗೂ ಈಗ ಜಯ ಸಿಕ್ಕಿದೆ.
Advertisement
ವಂಚನೆಯನ್ನು ಪ್ರಶ್ನಿಸಿ ಶಿವಯೋಗಿ ಕಾನೂನು ಇಲಾಖೆಯ ಮೊರೆ ಹೋಗಿದ್ದರು. ಆಗ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್ ಅವರ ಎದುರು ಅಳಲು ತೋಡಿಕೊಂಡಿದ್ದರು. ರಾಜಭವನದಲ್ಲೂ ಇವರ ಹೋರಾಟ ಮಾರ್ದನಿಸಿತ್ತು. ರಾಜಕೀಯ ಹಾಗೂ ಆರ್ಥಿಕವಾಗಿ ಸಬಲರಾಗಿದ್ದ ಎದುರಾಳಿ, ಇವರ ಹೋರಾಟವನ್ನು ಹಿಮ್ಮೆಟ್ಟಿಸಿದ್ದರು.
Advertisement
ಯಾದಗಿರಿ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳು ಹಾಗೂ ಕೆಲವು ಸಿಬ್ಬಂದಿಗಳ ಷಡ್ಯಂತ್ರವೂ ಸಹ ಇವರ ಹೋರಾಟಕ್ಕೆ ಅಡ್ಡಿಯಾಗತೊಡಗಿತ್ತು. ಈ ಹೋರಾಟದಿಂದ ಹಿಂದೆ ಸರಿಯುವಂತೆ ಅನೇಕ ಬಾರಿ ಇವರ ಮೇಲೆ ಹಲ್ಲೆ ಯತ್ನ ಹಾಗೂ ಬೆದರಿಕೆ ಒಡ್ಡುವ ಪ್ರಯತ್ನಗಳೂ ನಡೆದವು. ದಶಕದ ಈ ಹೋರಾಟದಲ್ಲಿ ಮನೆ-ಹೊಲ, ಆಸ್ತಿಪಾಸ್ತಿಯೆಲ್ಲವನ್ನೂ ಮಾರಾಟ ಮಾಡಿದ್ದ ಶಿವಯೋಗಿ ಕುಟುಂಬವೂ ಹತಾಶರಾಗಿತ್ತು.
ಕೊನೆಗೆ, ಎಲ್ಲ ವಿಚಾರಣೆಗಳ ನಂತರ, ಶಿಕ್ಷಣ ಇಲಾಖೆಯ ಶ್ರೀಮತಿ ಶಾಲಿನಿ ರಜನೀಶ್ ಗೋಯೆಲ್ ಅವರು ನೀಡಿದ ಅದೇಶವನ್ನೂ ಸ್ಥಳೀಯ ಅಧಿಕಾರಿಗಳು ಮುಚ್ಚಿಟ್ಟಾಗ, ಪಬ್ಲಿಕ್ ಟವಿಯ ವರದಿಯನ್ನು ಗಮನಿಸಿದ ಯಾದಗಿರಿ ಜಿಲ್ಲಾಧಿಕಾರಿ ಮಂಜುನಾಥ್ ಜೆ, ಎಲ್ಲವನ್ನೂ ಪರಿಶೀಲಿಸಿ, ಇದಕ್ಕೆ ತೊಡರುಗಾಲಾಗುತ್ತಿದ್ದ ಯಾದಗಿರಿ ಡಿಡಿಪಿಐ ಹಾಗೂ ಸಿಬ್ಬಂದಿಗೆ ಪಾಠ ಕಲಿಸಿದ ಜಿಲ್ಲಾಧಿಕಾರಿ, ಕೇವಲ ಒಂದೇ ದಿನದಲ್ಲಿ ಆದೇಶ ಕೈಸೇರುವಂತೆ ಮಾಡಿದರು.
ಯಾದಗಿರಿಯ ಶಿವಯೋಗಿಯ ಈ ಹೋರಾಟ ಅನೇಕರಿಗೆ ಸ್ಫೂರ್ತಿ. ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಅನ್ನೋ ಹಾಗೆ, ಛಲಬಿಡದ ತ್ರಿವಿಕ್ರಮನಂತೆ ಅಲೆದಾಡಿ ಕೊನೆಗೂ ನ್ಯಾಯ ಪಡೆಯುವಲ್ಲಿ ಗೆದ್ದ ಶಿವಯೋಗಿಯ ಹಠ ಇಡೀ ಶಿಕ್ಷಣ ಇಲಾಖೆಯಲ್ಲೇ ಸಂಚಲನ ಮೂಡಿಸಿದೆ. ಕಾನೂನು ರೀತ್ಯ ಹಾಗೂ ನಿಯಮಾನುಸಾರ ನೇಮಕಾತಿಗೆ ಅರ್ಹನಿದ್ದೂ, ಹತ್ತು ವರ್ಷಗಳಿಂದಲೂ ನೌಕರಿಯಿಂದ ವಂಚಿತಗೊಂಡಿದ್ದ ಶಿವಯೋಗಿ ಹೋರಾಟ ನಿಜಕ್ಕೂ ಶ್ಲಾಘನೀಯ.