ಸಮಾಜದ ಕಣ್ಣಲ್ಲಿ ಇಂದಿಗೂ ತೃತೀಯ ಲಿಂಗಿಗಳ ಬಗ್ಗೆ ಅದೊಂಥರ ಅಸಹನೆ. ಅವರನ್ನು ಕಂಡ ಕ್ಷಣವೇ ಅಪಹಾಸ್ಯದ ನಗವಿನ ಜೊತೆಗೆ ತಿರಸ್ಕಾರ ಭಾವ. ಗಂಡಾಗಿ ಹುಟ್ಟಿ, ಬೆಳೆಯುತ್ತಾ ಬೆಳೆಯುತ್ತಾ ದೈಹಿಕ ಬದಲಾವಣೆಗೆ ಒಳಪಟ್ಟು, ಹೆಣ್ತನವನ್ನು ಕಂಡುಕೊಂಡು ಕೊನೆಗೆ ಮಂಗಳಮುಖಿಯಾಗಿ ಅವಮಾನಗಳನ್ನೇ ಹೊದ್ದು ಬದುಕಿ ಕಲಾಕ್ಷೇತ್ರದಲ್ಲಿ ಸಾಧನೆಗೈದ ಧೀಮಂತೆ ಮಂಜಮ್ಮ ಜೋಗತಿ (Manjamma Jogathi).
ದೇಶದ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಮೊದಲ ತೃತೀಯ ಲಿಂಗಿ ಈ ಮಂಜಮ್ಮ ಜೋಗತಿ. ಅಂತರಾತ್ಮಕ್ಕೆ ಗಂಡು ಹೆಣ್ಣೆಂಬ ಹಂಗಿಲ್ಲ ಎಂಬುದಕ್ಕೆ ಇವರ ಜೀವನ ಕ್ರಮವೇ ಪೂರಕ. ಮಂಜಮ್ಮ ಜೋಗತಿ ಮಂಜುನಾಥ ಶೆಟ್ಟಿಯಾಗಿ ಜನಿಸಿದ್ದು 1957ರಲ್ಲಿ ಬಳ್ಳಾರಿ ಜಿಲ್ಲೆಯ ಕಲ್ಲಕಂಬ ಗ್ರಾಮದಲ್ಲಿ. ತಂದೆ ಹನುಮಂತಪ್ಪ ಶೆಟ್ಟಿ, ತಾಯಿ ಜಯಲಕ್ಷ್ಮಿ. ತಾಯಿ ಹೆತ್ತಿದ್ದು 21 ಮಕ್ಕಳು. 21ರಲ್ಲಿ ಬದುಕಿದ್ದು ಐವರು ಮಾತ್ರ. ಇದನ್ನೂ ಓದಿ: ಆಕಾರ್ ಅಡ್ವರ್ಟೈಸಿಂಗ್ ಎಂಡಿ ಮಾಲಾ ಮಖೀಜಾಗೆ ನಾರಿ ನಾರಾಯಣಿ ಗೌರವ

12 ವರ್ಷವಿದ್ದಾಗ ಮಂಜುನಾಥ ಶೆಟ್ಟಿಯಲ್ಲಿ ಹೆಣ್ಣಿನಲ್ಲಾಗುವ ದೈಹಿಕ ಬದಲಾವಣೆಗಳಾಗುತ್ತವೆ. ಹೆಣ್ಣಿನಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ಹೆಣ್ಣಿನ ಭಾವನೆಗಳು ಮೂಡುತ್ತವೆ. ಮಾನ ಮರ್ಯಾದೆಗೆ ಅಂಜಿ ಮನೆಯವರೇ ತಿರಸ್ಕಾರದಿಂದ ನೋಡುತ್ತಾರೆ. ಕೊನೆಗೆ ತಂದೆಯೇ ಮುಂದೆ ನಿಂತು ಜೋಗತಿ ಮಾಡುತ್ತಾರೆ. ಆದರೆ ಮಂಗಳಮುಖಿಯಾಗಿ ಎಲ್ಲರನ್ನೂ ಎದುರಿಸಿ ಒಂಟಿಯಾಗಿ ಬದುಕಲಾರೆ ಅನಿಸುತ್ತದೆ. ಸಾಯಲು ನಿರ್ಧರಿಸಿ ವಿಷ ಕುಡಿಯುತ್ತಾರೆ. ಆಸ್ಪತ್ರೆಯಲ್ಲಿ 45 ದಿನ ಸಾವು-ಬದುಕಿನ ಮಧ್ಯ ಹೋರಾಟ ಮಾಡುತ್ತಾರೆ. ಅಮ್ಮ, ತಮ್ಮ, ತಂಗಿ ಯಾರ ಸುಳಿವೂ ಇಲ್ಲ. ದಟ್ಟ ದರಿದ್ರ ಹಸಿವು. ಹೊಟ್ಟೆ ಕೇಳುವುದಿಲ್ಲ. ಆಗಲೇ ತಲೆ ಮೇಲೆ ತಂಬಗಿ ಇಟ್ಟು ಕುಣಿಯಲು ಶುರು ಮಾಡುತ್ತಾರೆ. ಜೋಗತಿ ನೃತ್ಯದ ಮೊದಲ ಹೆಜ್ಜೆ ಆಸ್ಪತ್ರೆ ವಾರ್ಡಿನಿಂದಲೇ ಶುರುವಾಗುತ್ತದೆ. ಕಾಲಿಗೆ ಗೆಜ್ಜೆ ಕಟ್ಟುತ್ತಾರೆ. ಅಂದು ಕಟ್ಟಿದ ಗೆಜ್ಜೆ ಇಂದು ಇವರನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ.
ಇವರಿಗೆ ಹೆಸರು ತಂದುಕೊಟ್ಟದ್ದು `ಜೋಗತಿ ನೃತ್ಯ’ ಮತ್ತು `ಚೌಡಕಿ ಪದ’. ಜೋಗತಿ ನೃತ್ಯವನ್ನು ಪ್ರಪ್ರಥಮ ಬಾರಿಗೆ ವೇದಿಕೆಗೆ ತಂದದ್ದೇ ಇವರು. ಇದಕ್ಕೂ ಮೊದಲು ಯಾರೂ ವೇದಿಕೆಗಳಲ್ಲಿ ಜೋಗತಿ ನೃತ್ಯ ಪ್ರದರ್ಶನ ಮಾಡಿದ್ದ ಉದಾಹರಣೆ ಇಲ್ಲ. ತಲೆ ಮೇಲೆ ಎಲ್ಲಮ್ಮನ ಕೊಡ ಹೊತ್ತು, ಕೈಬಿಟ್ಟು ಒಂಟಿ ಕಾಲಿನಿಂದ ಮಾಡುವ ನೃತ್ಯ ಮಾಮೂಲಿನದ್ದಲ್ಲ. ನೋಡುಗರ ಕಣ್ಣು ಸೋಲಬೇಕೆ ವಿನಃ ಹೆಜ್ಜೆಗಳು ಸೋಲುವುದಿಲ್ಲ. ಜೋಗತಿ ನೃತ್ಯದಿಂದಲೇ ಇವರಿಗೆ ಮಂಜಮ್ಮ ಜೋಗತಿ ಎಂಬ ಕೀರ್ತಿ ಬಂತು. ಇದನ್ನೂ ಓದಿ: ಕೃಪಾನಿಧಿ ಗ್ರೂಫ್ ಆಫ್ ಇನ್ಸ್ಟಿಟ್ಯೂಷನ್ಸ್ ಸಂಸ್ಥಾಪಕಿ ಗೀತಾ ಪ್ರಿಯಗೆ ನಾರಿ ನಾರಾಯಣಿ ಪ್ರಶಸ್ತಿ
ಮಂಜಮ್ಮ ಜೋಗತಿ ಅವರ ಬದುಕು ಬರೀ ಬದುಕಲ್ಲ. ಅದು ಬೆಂಕಿಯಲ್ಲಿ ಬೆಂದು ಅರಳಿದ ಅನುಭವದ ಸಾರ. ಇಂಥ ಮಹಾನ್ ಸಾಧಕಿ ಪಬ್ಲಿಕ್ ಟಿವಿಯ ನಾರಿ ನಾರಾಯಣಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬಂದಿರುವುದು ನಮ್ಮ ಸೌಭಾಗ್ಯ. ಮಂಜಮ್ಮ ಜೋಗತಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಪಬ್ಲಿಕ್ ಟಿವಿ (Public TV) ಸಹಯೋಗದಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಪ್ರಸ್ತುತ ಪಡಿಸುವ ‘ನಾರಿ ನಾರಾಯಣಿ-2026’ (Nari Narayani 2026 Award) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಸಾಧಕಿಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಮಾತನಾಡಿ, ‘ನಾರಿ ನಾರಾಯಣಿ’ ರೂಪುಗೊಂಡ ಉದ್ದೇಶವೇ ನಮ್ಮ ಮಹಿಳೆಯರ ಯಶಸ್ಸನ್ನು ಗುರುತಿಸಬೇಕೆಂದು. ಐದು ವರ್ಷದಿಂದ ಬಹಳ ಅದ್ಭುತವಾಗಿ ನಡೆದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

