ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ವೃತ್ತಿ. ಆದರೆ ಬಡ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದು ಇವರ ಪ್ರವೃತ್ತಿ. ನಿರಂತರ ಕೆಲಸದ ಒತ್ತಡದ ಮಧ್ಯೆಯೂ ತನಗೆ ಸಿಕ್ಕ ಸಮಯದಲ್ಲಿ ನಿತ್ಯವೂ ಶಿಕ್ಷಣ ವಂಚಿತ ಮಕ್ಕಳಿಗೆ ಜ್ಞಾನದ ಧಾರೆಯನ್ನು ಎರೆಯುತ್ತಿದ್ದಾರೆ ಬೆಂಗಳೂರಿನ ಪೂರ್ಣಿಮಾ ನಾಗೇಶ್ .
ಎಲ್ಲಕ್ಕಿಂತಲೂ ಶ್ರೇಷ್ಠದಾನ ವಿದ್ಯಾದಾನ ಎನ್ನುವ ಮಾತಿದೆ. ಪೂರ್ಣಿಮಾ ನಾಗೇಶ್ ಬಾರಿಮನಿ ಖಾಸಗಿ ಕಂಪನಿಯಲ್ಲಿ ಕೆಲಸ ಮುಗಿದ ತಕ್ಷಣ ಕಟ್ಟಡ ಕಾರ್ಮಿಕ ಮಕ್ಕಳು, ಬೀದಿಯಲ್ಲಿ ಗೊಂಬೆ ಮಾರುವ ಮಕ್ಕಳು, ಶಿಕ್ಷಣ ವಂಚಿತ ಸ್ಲಂ ಮಕ್ಕಳು ಸೇರಿದಂತೆ ಕೂಲಿಗಾಗಿ ಬೆಂಗಳೂರಿನಲ್ಲಿ ಅಲೆದಾಡುತ್ತಿರುವ ಮಕ್ಕಳನ್ನು ಒಗ್ಗೂಡಿಸಿ ನಿತ್ಯವೂ ಅವರಿಗೆ ಪಾಠ ಹೇಳಿಕೊಡುತ್ತಿದ್ದಾರೆ.
ಕಳೆದ 5 ವರ್ಷದಿಂದ ಈ ಕಾರ್ಯ ಮಾಡುತ್ತಿದ್ದು 2 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಕೂಡ ಬೆಂಗಳೂರಿನಲ್ಲಿ ಮಾಡುತ್ತಿದ್ದಾರೆ.
ಶಿಕ್ಷಣ ಜಾಗೃತಿಯ ಮೂಲಕ ಅಪರೂಪದ ಸಾಧನೆಗೈದ ಪೂರ್ಣಿಮಾ ಬಾರಿಮನಿಯವರಿಗೆ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹೆಮ್ಮೆಪಡುತ್ತಿದೆ.