ಬೆಂಗಳೂರು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿ ಘೋಷಣೆಯಾಗಿದ್ದು, ಪಬ್ಲಿಕ್ ಟಿವಿಯ (PUBLiC TV) ಹಿರಿಯ ಪತ್ರಕರ್ತ ಬದ್ರುದ್ದೀನ್ ಮಾಣಿ (Badruddin Mani) ಸೇರಿದಂತೆ 12 ಮಂದಿ ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೆ.ವಿ. ಆರ್. ಠ್ಯಾಗೋರ್ ಸ್ಮರಣಾರ್ಥ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡ ಹಾಗೂ ಡಾ. ವೆಂಕಟೇಶ್ ತುಪ್ಪಿಲ್ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿಗೆ ಬದ್ರುದ್ದೀನ್ ಕೆ. ಮಾಣಿ ಆಯ್ಕೆ ಆಗಿದ್ದಾರೆ. 2014ರಿಂದ ಪಬ್ಲಿಕ್ ಟಿವಿಯ ಹಿರಿಯ ರಾಜಕೀಯ ವರದಿಗಾರ ಬದ್ರುದ್ದೀನ್ ಮಾಣಿ ಅವರು ಕಾರ್ಯ ನಿರ್ವಹಿಸುತ್ತಿದ್ದು ಮಾಧ್ಯಮದಲ್ಲಿ ಸರಿ ಸುಮಾರು 3 ದಶಕಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅವರು ಪ್ರಶಸ್ತಿಗಳನ್ನು ಪ್ರಕಟಿಸಿದರು. ಪ್ರಶಸ್ತಿಯು ತಲಾ 10 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಗೌರವಾಧಾರಗಳನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು. ಕೇರಳದ ಏರ್ನಾಕುಲಂನಲ್ಲಿ ಏಪ್ರಿಲ್ 30ಕ್ಕೆ ಕಾರ್ಯಕ್ರಮ ನಡೆಯಲಿದೆ.
ಪ್ರಶಸ್ತಿಗಳ ವಿವರ:
ಮಂಗಳೂರಿನ ಹಿರಿಯ ಪತ್ರಕರ್ತರಾದ ಮನೋಹರ್ ಪ್ರಸಾದ್ (ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿಯವರ ನೆನಪಿಗಾಗಿ ಶ್ರೀ ಮಠವು ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿ), ಮಂಗಳೂರಿನ ಯು.ಕೆ. ಕುಮಾರನಾಥ್ (ಅವ್ವ ಸೇವಾ ಟ್ರಸ್ಟ್ ಹುಬ್ಬಳ್ಳಿ ಇದರ ಸಂಸ್ಥಾಪಕರ ಹಾಗೂ ರಾಜ್ಯ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿ), ಬೆಳಗಾವಿ ಜಿಲ್ಲೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಕೀರ್ತಿಶೇಖರ್ ಕಾಸರಗೋಡು (ಹವ್ವಾ ಹಸನ್ ಫೌಂಡೇಶನ್ ಕುದ್ಕೋಳಿ ಸಂಸ್ಥಾಪಕ ಹಾಗೂ ಹಿರಿಯ ಆರ್ಥಿಕ ತಜ್ಞ ಅಬ್ದುಲ್ಲ ಮಾದುಮೂಲೆ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿ), ಪ್ರಜಾವಾಣಿ ವರದಿಗಾರ ರಾಜೇಶ್ ರೈ ಚಟ್ಲ (ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಸ್ಥಾಪಿಸಿರುವ ದತ್ತಿ ಪ್ರಶಸ್ತಿ), ವಿಕ್ರಂ ಕಾಂತಿಕೆರೆ (ಹೇರಂಭ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿ), ಹಂಝ ಮಲಾರ್ (ಪತ್ರಕರ್ತ ಜೆ.ಆರ್. ಕೆಂಚೇಗೌಡ ಹಾಸನ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿ), ಮುಂಬಯಿ ರೋನ್ಸ್ ಬಂಟ್ವಾಳ್ (ನ್ಯಾಯವಾದಿ ಮೊಹಮ್ಮದ್ ಇಬ್ರಾಹಿಂ ಪಾರ ಸ್ಮರರ್ಣಾಥ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲ ದುಬೈ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿ), ಕೊಡಗು ಜಿಲ್ಲೆಯ ಅಜ್ಜಮಾಡ ರಮೇಶ್ ಕುಟ್ಟಪ್ಪ (ಸಾಹಿತಿ ಸಂಘಟಕ ಪ್ರಭಾಕರ ಕಲ್ಲೂರಾಯ ಬನದಗದ್ದೆ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿ), ದಯಾಸಾಗರ್ ಚೌಟ (ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ಹರ್ಷ ಮೇಲಾಂಟ ಹಾಗೂ ಕುಟುಂಬ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿ) ಭಾಜನರಾಗಿದ್ದಾರೆ. ಇದನ್ನೂ ಓದಿ: ‘ನಾಟು ನಾಟು’ ಹಾಡಿಗೆ ಸಾವಿರಾರು ಟೆಸ್ಲಾ ಕಾರು ಡಾನ್ಸ್
ಇದೇ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಕಾಸರಗೋಡಿನ ಪ್ರದೀಪ್ ಕುಮಾರ್ ಬೇಕಲ್ ಮತ್ತು ದೇವದಾಸ ಪಾರೆಕಟ್ಟೆ ಆಯ್ಕೆಯಾಗಿದ್ದಾರೆ.
ಮೀನುಗಾರಿಕಾ ದತ್ತಿ ಪ್ರಶಸ್ತಿ:
ದೈವ ನರ್ತಕ ಕೀರ್ತಿಶೇಷ ಶ್ರೀ ದೇವಯ್ಯ ಖಾರ್ವಿ ಗಂಗೊಳ್ಳಿ ಅವರ ಹೆಸರಿನಲ್ಲಿ ಹಿರಿಯ ಪತ್ರಕರ್ತ ವಿನಾಯಕ ಗಂಗೊಳ್ಳಿ ಅವರು ಸ್ಥಾಪಿಸಲು ಉದ್ದೇಶಿಸಿರುವ ಮೀನುಗಾರಿಕಾ ದತ್ತಿ ಪ್ರಶಸ್ತಿಗೂ ಚಾಲನೆ ನೀಡಲಾಗುವುದು ಎಂದು ಕೆಯುಡಬ್ಲೂೃಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಸರಗೋಡು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್, ಕೋಶಾಧಿಕಾರಿ ಪುರುಷೋತ್ತಮ ಪೆರ್ಲ ಅವರು ಹಾಜರಿದ್ದರು.