– ವ್ಯಾಗಾನ್‌ಗಳನ್ನ ಟಿಪ್ಲರ್‌ಗಳ ಮೂಲಕ ಖಾಲಿ ಮಾಡುವ ಕೆಲಸದಲ್ಲಿ ವಂಚನೆ
– ಕಾನೂನು ಹೋರಾಟಕ್ಕೆ ಮುಂದಾದ ವೈಟಿಪಿಎಸ್
ರಾಯಚೂರು: ಜಿಲ್ಲೆಯ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಸೇರಬೇಕಿದ್ದ ಕೋಟ್ಯಾಂತರ ರೂ. ಕಲ್ಲಿದ್ದಲು ಗುತ್ತಿಗೆಗಾರರ ಪಾಲಾಗುತ್ತಿರುವ ಬಗ್ಗೆ `ಪಬ್ಲಿಕ್ ಟಿವಿ’ ವರದಿಯ ಬೆನ್ನಲ್ಲೇ ಎಚ್ಚೆತ್ತಿರುವ ವೈಟಿಪಿಎಸ್ (YTPS) ಅಧಿಕಾರಿಗಳು ರಾಯಚೂರು (Raichuru) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಪ್ರಕರಣ ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದ ಅಧಿಕಾರಿಗಳು ಈಗ ಪವರ್ ಮೇಕ್ ಕಂಪನಿ ಉಪಾಧ್ಯಕ್ಷ ಅಜಯ್ ಕುಮಾರ್ ಕೆ ಹಾಗೂ ಕಂಪನಿ ಉಸ್ತುವಾರಿ ಸುರೇಂದ್ರನಾಥ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ವೈಟಿಪಿಎಸ್‌ನ ಇಂಧನ ನಿರ್ವಹಣೆ ವಿಭಾಗದ ಚೀಫ್ ಇಂಜಿನಿಯರ್ ಚಂದ್ರಶೇಖರ ಶೆಟ್ಟಿ ದೂರು ನೀಡಿ, ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಕ್ಲೀನಿಂಗ್ ಹೆಸರಲ್ಲಿ ಕಲ್ಲಿದ್ದಲು ಲೂಟಿ – ಪ್ರತಿನಿತ್ಯ 150 ಟನ್ ಸಾಗಾಟ
ತೆಲಂಗಾಣದ ಸಿಂಗರೇಣಿಯಿಂದ ವೈಟಿಪಿಎಸ್‌ಗೆ ನಿತ್ಯ ಬರುವ 3 ರಿಂದ 4 ರೇಕ್‌ನ 180 ರಿಂದ 240 ವ್ಯಾಗಾನ್‌ಗಳಲ್ಲಿನ ಕಲ್ಲಿದ್ದಲಿನಲ್ಲಿ ಕಳ್ಳತನ ನಡೆದಿದೆ. ನಿತ್ಯ ಬರುವ 12 ಸಾವಿರದಿಂದ 16 ಸಾವಿರ ಟನ್ ಕಲ್ಲಿದ್ದಲಿನಲ್ಲಿ ಒಂದಷ್ಟು ಪ್ರಮಾಣದ ಕಲ್ಲಿದ್ದಲು ಕಳ್ಳತನ ನಡೆದಿದೆ. ಕಲ್ಲಿದ್ದಲು ವ್ಯಾಗಾನ್‌ಗಳನ್ನ ಟಿಪ್ಲರ್‌ಗಳ ಮೂಲಕ ಖಾಲಿ ಮಾಡುವ ಕೆಲಸದಲ್ಲಿ ವಂಚನೆ ಮಾಡಲಾಗಿದೆ.
ವೈಟಿಪಿಎಸ್ ಘಟಕಗಳ ನಿರ್ವಹಣೆ ಮತ್ತು ಚಾಲನೆ ಜವಾಬ್ದಾರಿ ಹೊತ್ತಿರುವ ಪವರ್ ಮೇಕ್ ಕಂಪನಿ ನಿಯಮ ಉಲ್ಲಂಘಿಸಿ 10 ಲಕ್ಷ ರೂ. ಮೌಲ್ಯದ 200 ಟನ್ ಕಲ್ಲಿದ್ದಲು ಹೊರಗಡೆ ಸಾಗಣೆ ಮಾಡಿದೆ. ವ್ಯಾಗಾನ್‌ಗಳನ್ನ ಸಂಪೂರ್ಣ ಖಾಲಿ ಮಾಡದೆ ಕಲ್ಲಿದ್ದಲನ್ನ ಹಾಗೆಯೇ ಉಳಿಸಿ ವಂಚನೆ ಮಾಡಲಾಗಿದೆ. ಅಲ್ಲದೆ ಸರ್ಕಾರದ ಘನತೆಗೂ ಧಕ್ಕೆ ಮಾಡಿದೆ ಅಂತ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಇದನ್ನೂ ಓದಿ: ಮೆಸ್ಸಿ ಕಾರ್ಯಕ್ರಮದಲ್ಲಿ ಅವ್ಯವಸ್ಥೆ – ಪಶ್ಚಿಮ ಬಂಗಾಳ ಕ್ರೀಡಾ ಸಚಿವ ರಾಜೀನಾಮೆ



